ಸಂಸತ್​​ನಲ್ಲಿ ಭದ್ರತಾ ಲೋಪ: ನ್ಯಾಯಾಂಗ ತನಿಖೆಗಾಗಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಬಂಗಾಳದ ವಕೀಲ

|

Updated on: Dec 18, 2023 | 8:51 PM

ಪಶ್ಚಿಮ ಬಂಗಾಳ ಮೂಲದ ವಕೀಲ ಅಬು ಸೊಹೆಲ್ ಸೋಮವಾರ ಸಲ್ಲಿಸಿದ ಅರ್ಜಿಯಲ್ಲಿ,ಇದು ದೊಡ್ಡ ಭದ್ರತಾ ಲೋಪವಾಗಿದೆ. ಏಕೆಂದರೆ ಹೊಗೆ ವಿಷಕಾರಿಯಾಗಿರಬಹುದು ಅಥವಾ ಹೊಗೆ ಡಬ್ಬಿಗಳ ಬದಲಿಗೆ ಮಾರಕ ಮದ್ದುಗುಂಡುಗಳೊಂದಿಗೆ ಪ್ರವೇಶಿಸಬಹುದಾಗಿತ್ತು, ಇದು ತುಂಬಾ ಆಘಾತಕಾರಿಯಾಗಿದೆ ಎಂದು ಹೇಳಿದ್ದಾರೆ.

ಸಂಸತ್​​ನಲ್ಲಿ ಭದ್ರತಾ ಲೋಪ: ನ್ಯಾಯಾಂಗ ತನಿಖೆಗಾಗಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಬಂಗಾಳದ ವಕೀಲ
ಸಂಸತ್​​ನಲ್ಲಿ ಭದ್ರತಾ ಲೋಪ
Follow us on

ದೆಹಲಿ ಡಿಸೆಂಬರ್ 18: ಡಿಸೆಂಬರ್ 13 ರಂದು ಸಂಸತ್ತಿನಲ್ಲಿ ಶೂನ್ಯ ವೇಳೆಯಲ್ಲಿ ಇಬ್ಬರು ವ್ಯಕ್ತಿಗಳು ಹೊಗೆ ಡಬ್ಬಿಗಳೊಂದಿಗೆ ಸದನದ ಕೊಠಡಿಗೆ ಜಿಗಿದು ಭದ್ರತಾ ಉಲ್ಲಂಘನೆ (Parliament security breach) ನಡೆಸಿದ ಘಟನೆಯ ಕುರಿತು ನ್ಯಾಯಾಂಗ ತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್‌ನಲ್ಲಿ (Supreme Court) ಅರ್ಜಿ ಸಲ್ಲಿಸಲಾಗಿದೆ. ಪಶ್ಚಿಮ ಬಂಗಾಳ ಮೂಲದ ವಕೀಲ ಅಬು ಸೊಹೆಲ್ ಸೋಮವಾರ ಸಲ್ಲಿಸಿದ ಅರ್ಜಿಯಲ್ಲಿ,ಇದು ದೊಡ್ಡ ಭದ್ರತಾ ಲೋಪವಾಗಿದೆ ಏಕೆಂದರೆ ಹೊಗೆ ವಿಷಕಾರಿಯಾಗಿರಬಹುದು ಅಥವಾ ಹೊಗೆ ಡಬ್ಬಿಗಳ ಬದಲಿಗೆ ಮಾರಕ ಮದ್ದುಗುಂಡುಗಳೊಂದಿಗೆ ಪ್ರವೇಶಿಸಬಹುದಾಗಿತ್ತು, ಇದು ತುಂಬಾ ಆಘಾತಕಾರಿಯಾಗಿದೆ ಎಂದಿದ್ದಾರೆ.

ಚಳಿಗಾಲದ ವಿರಾಮಕ್ಕಾಗಿ ಪ್ರಸ್ತುತ ಉನ್ನತ ನ್ಯಾಯಾಲಯ ಮುಚ್ಚಿದ್ದು, ಜನವರಿ 2 ರಂದು ಮತ್ತೆ ತೆರೆಯಲಾಗುತ್ತದೆ.

ಡಿಸೆಂಬರ್ 13 ರಂದು, ಇಬ್ಬರು ವ್ಯಕ್ತಿಗಳು ಲೋಕಸಭೆಯ ವಿಸಿಟರ್ ಗ್ಯಾಲರಿಯಿಂದ ಸದನದ ಕೊಠಡಿಗೆ ಹಾರಿ, ಘೋಷಣೆಗಳನ್ನು ಕೂಗುತ್ತಾ ಸದನದ ಕಲಾಪಕ್ಕೆ ಅಡ್ಡಿಪಡಿಸಿದರು. ಅವರು ತಮ್ಮ ಕೈಯಲ್ಲಿದ್ದ ಹೊಗೆ ಬಾಂಬ್ ಗಳನ್ನು ಎಸೆದಿದ್ದರು. ಈ ವ್ಯಕ್ತಿಗಳನ್ನು ಸಾಗರ್ ಶರ್ಮಾ ಮತ್ತು ಮನೋರಂಜನ್ ಡಿ ಎಂದು ಗುರುತಿಸಲಾಗಿದೆ.

ಸಂಸತ್ತಿನ ಹೊರಗೆ ಹಳದಿ ಬಣ್ಣದ ಅನಿಲವನ್ನು ಸಿಂಪಡಿಸಿದ ಮತ್ತು ಘೋಷಣೆಗಳನ್ನು ಕೂಗಿದ ಮಹಿಳೆ ಸೇರಿದಂತೆ ಇತರ ಇಬ್ಬರು ವ್ಯಕ್ತಿಗಳು ಅವರೊಂದಿಗೆ ಇದ್ದರು. ಸಂಸತ್ ಹೊರಗೆ ಪ್ರತಿಭಟನೆ ನಡೆಸಿದವರನ್ನು ಅಮೋಲ್ ಶಿಂಧೆ ಮತ್ತು ನೀಲಂ ದೇವಿ ಎಂದು ಗುರುತಿಸಲಾಗಿದೆ.

ಎಲ್ಲಾ ನಾಲ್ವರು ವ್ಯಕ್ತಿಗಳನ್ನು ಬಂಧಿಸಿ ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಕೃತ್ಯದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಆರೋಪ ಹೊರಿಸಲಾಗಿದೆ. ರಾಷ್ಟ್ರದ ಭವಿಷ್ಯವನ್ನು ನಿರ್ಧರಿಸುವ ರಾಷ್ಟ್ರದ ಅತ್ಯುನ್ನತ ಸದನದ ಭದ್ರತೆಯಲ್ಲಿಯೂ ಲೋಪ ನಡೆದಿದ್ದರೆ, ನಾಗರಿಕರ ಪ್ರಾಣ ಮತ್ತು ಆಸ್ತಿಯೂ ಅಪಾಯದಲ್ಲಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ವಕೀಲೆ ಶ್ರುತಿ ಬಿಷ್ತ್ ಮೂಲಕ ಸಲ್ಲಿಸಲಾದ ಅರ್ಜಿಯು “ಸಂಸತ್ತಿನ ಕೆಳಮನೆಯಲ್ಲಿನ ಪ್ರಮುಖ ಭದ್ರತಾ ಉಲ್ಲಂಘನೆಯ” ತನಿಖೆಗಾಗಿ “ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ಸ್ವತಂತ್ರ, ವಿಶ್ವಾಸಾರ್ಹ ಮತ್ತು ನಿಷ್ಪಕ್ಷಪಾತ ನ್ಯಾಯಾಂಗ ತನಿಖೆ” ಯನ್ನು ಒತ್ತಾಯಿಸಿದೆ.

ಡಿಸೆಂಬರ್ 13, 2001 ರಂದು ಸಂಸತ್ ನಲ್ಲಿ ಭದ್ರತಾ ಲೋಪ ನಡೆದಿದೆ.

ಇದನ್ನೂ ಓದಿ:  ಪ್ರಶ್ನೆಗಾಗಿ ನಗದು ಪ್ರಕರಣ: ಲೋಕಸಭೆಯಿಂದ ತನ್ನ ಉಚ್ಚಾಟನೆಯನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಿದ ಮಹುವಾ ಮೊಯಿತ್ರಾ

ಈ ಘಟನೆ ಬಗ್ಗೆ ದೆಹಲಿ ಪೊಲೀಸರ ತನಿಖೆ ನಡೆಸಿದ್ದು ಇದರ ಮಾಸ್ಟರ್ ಮೈಂಡ್ ಲಲಿತ್ ಝಾ ಎಂದು ಪತ್ತೆ ಹಚ್ಚಿದ್ದು ಘಟನೆಯ ಐದು ದಿನಗಳ ನಂತರ ಝಾ ಶರಣಾಗಿದ್ದರು. ಈ ಪಿತೂರಿಯೊಂದಿಗೆ ಸಂಬಂಧ ಹೊಂದಿರುವ ಮತ್ತೊಬ್ಬ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಸಂಸತ್ತಿಗೆ ಪ್ರವೇಶಿಸಿದ ಇಬ್ಬರು ಆರೋಪಿಗಳು ಯೋಜನೆಯನ್ನು ಕಾರ್ಯಗತಗೊಳಿಸಲು ಕಸ್ಟಮೈಸ್ ಮಾಡಿದ ಶೂಗಳಲ್ಲಿ ಹೊಗೆ ಡಬ್ಬಿಗಳನ್ನು ಬಚ್ಚಿಟ್ಟಿದ್ದರು ಎಂದು ತನಿಖೆ ನಂತರ ತಿಳಿದುಬಂದಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ