ಸ್ವಾತಂತ್ರ್ಯ ಬಂದು 75 ವರ್ಷಗಳಾದ ಸಂಭ್ರಮದಲ್ಲಿ ಭಾರತೀಯರೆಲ್ಲರೂ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವವನ್ನು ಆಚರಿಸುತ್ತಿದ್ದಾರೆ. 75 ವರ್ಷ ಎನ್ನುವುದನ್ನು ಸಾಧಾರಣವಾಗಿ ಒಬ್ಬ ಆರೋಗ್ಯವಂತ ಮನುಷ್ಯನ ಜೀವಿತಾವಧಿಯ ಮುಕ್ಕಾಲು ಭಾಗ ಎನ್ನಬಹುದು. ಇದು ಸಣ್ಣ ಅವಧಿ ಅಲ್ಲವೇ ಅಲ್ಲ. ಸುಮ್ಮನೇ ಹಿಂತಿರುಗಿ ಇತಿಹಾಸದ ಪುಟಗಳನ್ನು ನೋಡಿದರೂ 1947ರಲ್ಲಿ ಭಾರತ ಹೇಗಿತ್ತು, ಈಗ ಹೇಗಿದೆ ಎನ್ನುವುದಕ್ಕೆ ಅಗಾಧ ಬದಲಾವಣೆಗಳು ಗೋಚರಿಸುತ್ತವೆ.
ಅದರಲ್ಲೂ ಕಳೆದ ಒಂದೂವರೆ ವರ್ಷದಿಂದ ಕೊರೊನಾ ಭಾದಿಸುತ್ತಿರುವುದರಿಂದ ಈ 75 ವರ್ಷಗಳ ಪುಟದಲ್ಲಿ 2020 ಹಾಗೂ 2021 ಕೂಡಾ ಸಾಕಷ್ಟು ಬದಲಾವಣೆಗಳಿಗೆ ಒಳಪಟ್ಟಿವೆ. ಅಂಥದ್ದರಲ್ಲಿ ಈಗ ಹೆಚ್ಚು ಪ್ರಚಲಿತದಲ್ಲಿರುವ ಪೆಟ್ರೋಲ್ ಬೆಲೆ ಹಾಗೂ ಚಿನ್ನದ ದರವನ್ನು 1947ರ ಸಂದರ್ಭಕ್ಕೆ ಹೋಲಿಸಿ ನೋಡಿದರೆ ಎಷ್ಟು ವ್ಯತ್ಯಾಸ ಕಾಣಬಹುದು ಎನ್ನುವುದನ್ನು ಇಲ್ಲಿ ಸಂಕ್ಷಿಪ್ತವಾಗಿ ಕಟ್ಟಿಕೊಡಲಾಗಿದೆ.
1947ರಲ್ಲಿ ಪೆಟ್ರೋಲ್ ಬೆಲೆ ಎಷ್ಟಿತ್ತು?
ಇತ್ತೀಚಿನ ದಿನಗಳಲ್ಲಿ ಬೆಲೆಯೇರಿಕೆ ಸರ್ವೇಸಾಮಾನ್ಯ ಬೆಳವಣಿಗೆ ಎನ್ನುವಂತಾಗಿದೆ. ಅದರಲ್ಲೂ ನಿತ್ಯ ಬಳಕೆಯ ವಸ್ತುಗಳ ಬೆಲೆಯ ಮೇಲೆ, ಜನರ ಜೀವನದ ಮೇಲೆ ನೇರ ಪರಿಣಾಮ ಬೀರುವ ಇಂಧನ ದರ ಏರಿಕೆ 75ನೇ ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ಭಾರತೀಯರನ್ನು ಹಿಂದೆಂದಿಗಿಂತಲೂ ಬಿಗುವಾಗಿ ಕಾಡುತ್ತಿದೆ. ಕೆಲವೇ ತಿಂಗಳ ಹಿಂದೆಯಷ್ಟೇ ಪ್ರತಿ ಲೀಟರ್ಗೆ 85 ರೂಪಾಯಿ ಆಸುಪಾಸಿನಲ್ಲಿದ್ದ ಪೆಟ್ರೋಲ್ ಬೆಲೆ ಶತಕದ ಹೊಸ್ತಿಲು ದಾಟಿ ಕೆಲ ದಿನಗಳೇ ಕಳೆದಿವೆ. ಇದೀಗ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ಗೆ 105 ರೂಪಾಯಿ ತೆರಬೇಕು. ಆದರೆ, 1947ರಲ್ಲಿ ಅಂದರೆ ನಮಗೆ ಸ್ವತಂತ್ರ ಲಭಿಸಿದ ವರ್ಷ ಪ್ರತಿ ಲೀಟರ್ ಪೆಟ್ರೋಲ್ಗೆ ದೆಹಲಿಯಲ್ಲಿ 27 ಪೈಸೆ ಇತ್ತು!
ಸ್ವತಂತ್ರ ಸಿಕ್ಕ ವರ್ಷ ಚಿನ್ನದ ಬೆಲೆ ಹೇಗಿತ್ತು?
ಭಾರತೀಯರಿಗೆ ಅದರಲ್ಲೂ ಭಾರತದ ಮಹಿಳೆಯರಿಗೆ ಚಿನ್ನವೆಂದರೆ ವಿಶೇಷ ಪ್ರೀತಿ. ಮಹಿಳೆಯರನ್ನು ಕನಸಿನಲ್ಲೂ ಆಕರ್ಷಿಸಬಲ್ಲ ಬಂಗಾರ ಈಗ ಕನಸಿನ ಮಾತೇ ಸರಿ ಎನ್ನುವಷ್ಟು ದುಬಾರಿ. ನೋಡನೋಡುತ್ತಲೇ ಗಗನಮುಖಿಯಾಗಿ ಸಾಗಿದ ಚಿನ್ನದ ಬೆಲೆ ಆಭರಣ ಪ್ರಿಯರ ಅದೆಷ್ಟೋ ಬಯಕೆಗಳನ್ನು ಮಟ್ಟಹಾಕಿದೆ. ಬಡ, ಮಧ್ಯಮ ವರ್ಗದ ಜನರಂತೂ ಈಗ ಬಂಗಾರ ಕೊಳ್ಳುವ ಆಲೋಚನೆ ಮಾಡುವುದೂ ಕಷ್ಟ. ಪ್ರಸ್ತುತ ಬಂಗಾರದ ಬೆಲೆ ಪ್ರತೀ 10 ಗ್ರಾಂಗೆ ಸುಮಾರು 47,750ರೂಪಾಯಿ ಆಸುಪಾಸಿನಲ್ಲಿದೆ. ಆದರೆ, ಇದೇ ಬಂಗಾರವನ್ನು 1947ರಲ್ಲಿ ಕೊಳ್ಳುವುದಾಗಿದ್ದರೆ ಎಷ್ಟು ಹಣ ಕೊಡಬೇಕಿತ್ತು ಎಂದು ತಿಳಿದುಕೊಂಡರೆ ಛೇ! ಆಗ ನಮ್ಮ ಅಜ್ಜನೋ, ಮುತ್ತಜ್ಜನೋ ಬಂಗಾರ ಕೊಂಡು ಕೂಡಿಸಬಾರದಿತ್ತಾ ಎಂದು ನಿಮಗೆ ಹೊಟ್ಟೆ ಉರಿಯಬಹುದು. ಏಕೆಂದರೆ, ಭಾರತಕ್ಕೆ ಸ್ವತಂತ್ರ ಲಭಿಸಿದ ವರ್ಷ ಪ್ರತೀ 10 ಗ್ರಾಂ ಬಂಗಾರಕ್ಕೆ ಇದ್ದಿದ್ದು ಕೇವಲ 89 ರೂಪಾಯಿ.
(Petrol Price and Gold Rate in 1947 vs 2021 know the difference)
1896ರ ಒಲಿಂಪಿಕ್ಸ್ನಲ್ಲೇ ಚಿನ್ನ ಗೆದ್ದಿದ್ದ ಭಾರತೀಯ: ಆದರೆ ಅದು ಭಾರತಕ್ಕೆ ಸೇರಿದ್ದಲ್ಲ, ಯಾಕೆ ಗೊತ್ತೇ?