ಮಂಡನೆಗೂ 60 ದಿನ ಮೊದಲೇ ಕರಡು ಮಸೂದೆ ಸಾರ್ವಜನಿಕರಿಗೆ ಸಿಗಬೇಕೆಂದು ಪಿಐಎಲ್ ಸಲ್ಲಿಕೆ
ಸಂಸತ್ ಸಭೆಗಳಲ್ಲಿ ಮಂಡನೆಯಾಗುವ 60 ದಿನಗಳ ಮುನ್ನವೇ ಸಾರ್ವಜನಿಕರಿಗೆ ಕರಡು ಮಸೂದೆಯನ್ನು ಲಭ್ಯವಾಗಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಬಿಜೆಪಿ ಮುಖಂಡ,ವಕೀಲ ಅಶ್ವಿನಿ ಕುಮಾರ್ ಸರ್ವೋಚ್ಛ ನ್ಯಾಯಾಲಯಕ್ಕೆ ಸಲ್ಲಸಿದ್ದಾರೆ.
ದೆಹಲಿ: ಮಸೂದೆಗಳು ಮಂಡನೆಯಾಗುವ 60 ದಿನಗಳ ಮುನ್ನವೇ ಕರಡು ಪ್ರತಿಯನ್ನು ಸರ್ಕಾರಿ ವೆಬ್ಸೈಟ್ನಲ್ಲಿ ಪ್ರಕಟಿಸಬೇಕು ಎಂದು ಕೋರಿ ಸರ್ವೋಚ್ಛ ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.
ಬಿಜೆಪಿ ಮುಖಂಡ ಮತ್ತು ವಕೀಲ ಅಶ್ವಿನಿ ಕುಮಾರ್ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಶಾಸನ ಸಭೆಗಳಲ್ಲಿ ಮಂಡನೆಯಾಗುವ 60 ದಿನಗಳ ಮುನ್ನವೇ ಪ್ರಾದೇಶಿಕ ಭಾಷೆಗಳಲ್ಲಿ ಸರ್ಕಾರ ಸಾರ್ವಜನಿಕರಿಗೆ ಕರಡು ಮತ್ತು ಅಂತಿಮ ಮಸೂದೆಯ ಪ್ರತಿಯನ್ನು ಲಭ್ಯವಾಗಿಸಬೇಕು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಸೂದೆಗಳು ಮಂಡನೆಯಾಗುವ ಮುನ್ನವೇ ಸಾರ್ವಜನಿಕರಿಗೆ ಲಭ್ಯವಾಗುವುದು ಈ ಕಾಲದಲ್ಲಿ ಸಮಂಜಸವಾಗಿದೆ. ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಸಾರ್ವಜನಿಕ ಚರ್ಚೆಗೆ ಅವಕಾಶ ನೀಡದೇ, ತಜ್ಞರ ಸಲಹೆ ಪಡೆಯದೇ ರಾತ್ರೋರಾತ್ರಿ ಮಸೂದೆ ಮಂಡಿಸುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಶೋಭೆಯಲ್ಲ. ವಿಸ್ತ್ರತ ಚರ್ಚೆಯ ನಂತರವೇ ಮಸೂದೆಗಳು ಮಂಡನೆಯಾಗಬೇಕು ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ದೇಶದ ಭದ್ರತೆಗೆ ಸಂಬಂಧಿಸಿದ ಮಸೂದೆಗಳನ್ನು ಹೊರತುಪಡಿಸಿ ಮಿಕ್ಕ ಎಲ್ಲ ಮಸೂದೆಗಳ ಕರಡನ್ನು ಸಾರ್ವಜನಿಕರ ಲಭ್ಯತೆಗೆ ಒದಗಿಸಬೇಕು ಎಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಸಲ್ಲಿಸಲಾಗಿದೆ. 2020ರ ಸೆಪ್ಟೆಂಬರ್ನಲ್ಲಿ ಕೇಂದ್ರ ಸರ್ಕಾರ ನೂತನ ಕೃಷಿ ಕಾಯ್ದೆಗಳನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೆ ತಂದಿತ್ತು. ಈ ಹಿನ್ನೆಲೆಯಲ್ಲಿ ಅಶ್ವಿನಿ ಕುಮಾರ್ ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮಹತ್ವ ಪಡೆದಿದೆ. ಮೊದಲೇ ಸಾರ್ವಜನಿಕರಿಗೆ ಕರಡು ಮಸೂದೆ ಓದುವ ಅವಕಾಶ ಲಭ್ಯವಾದರೆ ಕೃಷಿ ಕಾಯ್ದೆಗಳಿಗೆ ಉಂಟಾದಂತೆ ಆಕ್ಷೇಪ ಹುಟ್ಟದು ಎಂದು ಅರ್ಜಿದಾರರು ತಿಳಿಸಿದ್ದಾರೆ.
Delhi Chalo | 42 ರೈತ ಸಂಘಟನೆಗಳು ಈಗ ಸುಪ್ರೀಂಕೋರ್ಟ್ನಲ್ಲಿ ಪ್ರತಿವಾದಿಗಳು: ಇಲ್ಲಿದೆ ಪಟ್ಟಿ..
Published On - 7:30 pm, Sat, 2 January 21