2+2 ಸಚಿವರ ಸಂವಾದಕ್ಕೂ ಪೂರ್ವ ಇಂದು ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಜೋ ಬೈಡನ್​ ವರ್ಚ್ಯುವಲ್​ ಮಾತುಕತೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 11, 2022 | 12:00 PM

ರಷ್ಯಾ-ಉಕ್ರೇನ್​ ಯುದ್ಧ ಶುರುವಾದ ಮೇಲೆ ಭಾರತ ಮತ್ತು ಅಮೇರಿಕದ ನಡುವೆ ಸಣ್ಣ ಮಟ್ಟದ ಭಿನ್ನಾಭಿಪ್ರಾಯ ಮೂಡಿದೆ. ಅಮೆರಿಕ ರಷ್ಯಾವನ್ನು ವಿರೋಧಿಸುತ್ತಿದೆ. ಉಕ್ರೇನ್​ ಮೇಲೆ ಯುದ್ಧ ಮಾಡಿದ್ದಕ್ಕೆ ರಷ್ಯಾ ವಿರುದ್ಧ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸಿದೆ. ಆದರೆ ಭಾರತ ಈ ವಿಚಾರದಲ್ಲಿ ತಟಸ್ಥ ಧೋರಣೆ ಅನುಸರಿಸಿದೆ.

2+2 ಸಚಿವರ ಸಂವಾದಕ್ಕೂ ಪೂರ್ವ ಇಂದು ಪ್ರಧಾನಿ ಮೋದಿ-ಅಮೆರಿಕ ಅಧ್ಯಕ್ಷ ಜೋ ಬೈಡನ್​ ವರ್ಚ್ಯುವಲ್​ ಮಾತುಕತೆ
ಪ್ರಧಾನಿ ಮೋದಿ ಮತ್ತು ಜೋ ಬೈಡನ್​
Follow us on

ಭಾರತ-ಯುಎಸ್​ ನಡುವೆ ಇಂದಿನಿಂದ 2+2 ಸಚಿವರ ಚರ್ಚೆ ಪ್ರಾರಂಭವಾಗಲಿದ್ದು, ಅದಕ್ಕೂ ಪೂರ್ವದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಯುಎಸ್​ ಅಧ್ಯಕ್ಷ ಜೋ ಬೈಡನ್​ ವರ್ಚ್ಯುವಲ್​ ಆಗಿ ಮಾತುಕತೆ ನಡೆಸಲಿದ್ದಾರೆ. ಯುಎಸ್​-ಭಾರತ ಸಂಬಂಧವನ್ನು ಇನ್ನಷ್ಟು ಗಟ್ಟಿಗೊಳಿಸುವುದು, ಇಂಡೋ ಫೆಸಿಪಿಕ್​ ಮತ್ತು ಉಕ್ರೇನ್​​ನಲ್ಲಿ ಉಂಟಾಗಿರುವ ಬಿಕ್ಕಟ್ಟಿನ ಪರಿಸ್ಥಿತಿಯ ಬಗ್ಗೆ ಇವರಿಬ್ಬರೂ ಚರ್ಚೆ ನಡೆಸಲಿದ್ದಾರೆ. ಅಷ್ಟೇ ಅಲ್ಲ, ಕೊವಿಡ್​ 19 ಸಾಂಕ್ರಾಮಿಕ, ಜಾಗತಿಕವಾಗಿ ಆರ್ಥಿಕತೆ ಉತ್ತೇಜನ, ಹವಾಮಾನ ವೈಪರೀತ್ಯ ವಿಷಯ ಸೇರಿ ಅನೇಕ ವಿಚಾರಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾಗಿ ಹಿಂದುಸ್ಥಾನ್​ ಟೈಮ್ಸ್ ವರದಿ ಮಾಡಿದೆ.  

2+2 ಸಚಿವರ ಮಟ್ಟದ ಸಭೆ ಯುಎಸ್​​ನಲ್ಲಿ ಇಂದಿನಿಂದ ಪ್ರಾರಂಭವಾಗಲಿದ್ದು, ಭಾರತದ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಮತ್ತು ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್​.ಜೈಶಂಕರ್ ನಿನ್ನೆಯೇ ವಾಷಿಂಗ್ಟನ್​ ತಲುಪಿದ್ದಾರೆ. ಯುಎಸ್​ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೆ ಆಸ್ಟಿನ್ ಎ ಮತ್ತು ರಾಜ್ಯ ಕಾರ್ಯದರ್ಶಿ ಆಂಟೋನಿ ಜೆ ಬ್ಲಿಂಕೆನ್ ಈ ಸಂವಾದದಲ್ಲಿ ಪಾಲ್ಗೊಳ್ಳುವರು. 2+2 ಸಚಿವರ ಸಂವಾದ ಶುರುವಾದ ಮೇಲೆ ಇದು ನಾಲ್ಕನೇಯ ಆವೃತ್ತಿ. ಆದರೆ ಯುಎಸ್​​ನಲ್ಲಿ ಜೋ ಬೈಡನ್​ ಅಧ್ಯಕ್ಷರಾದ ಬಳಿಕ ನಡೆಯುತ್ತಿರುವ ಮೊದಲ 2+2 ಸಚಿವರ ಸಂವಾದ ಇದಾಗಿದೆ.

ರಷ್ಯಾ-ಉಕ್ರೇನ್​ ಯುದ್ಧ ಶುರುವಾದ ಮೇಲೆ ಭಾರತ ಮತ್ತು ಅಮೇರಿಕದ ನಡುವೆ ಸಣ್ಣ ಮಟ್ಟದ ಭಿನ್ನಾಭಿಪ್ರಾಯ ಮೂಡಿದೆ. ಅಮೆರಿಕ ರಷ್ಯಾವನ್ನು ವಿರೋಧಿಸುತ್ತಿದೆ. ಉಕ್ರೇನ್​ ಮೇಲೆ ಯುದ್ಧ ಮಾಡಿದ್ದಕ್ಕೆ ರಷ್ಯಾ ವಿರುದ್ಧ ಹಲವು ರೀತಿಯ ನಿರ್ಬಂಧಗಳನ್ನು ವಿಧಿಸಿದೆ. ಆದರೆ ಭಾರತ ಈ ವಿಚಾರದಲ್ಲಿ ತಟಸ್ಥ ಧೋರಣೆ ಅನುಸರಿಸಿದೆ. ಯಾರ ಪರ-ವಿರೋಧವಾಗಿಯೂ ಮಾತನಾಡುತ್ತಿಲ್ಲ. ಅದರ ಬದಲು ಕುಳಿತು ಮಾತನಾಡಿ, ಶಾಂತಿಯಿಂದ ಸಮಸ್ಯೆ ಪರಿಹರಿಸಿಕೊಳ್ಳಿ ಎಂಬ ಸಂದೇಶವನ್ನು ಕೊಡುತ್ತಿದೆ.  ರಷ್ಯಾ-ಉಕ್ರೇನ್​ ವಿಚಾರದಲ್ಲಿ ಭಾರತ ಗಟ್ಟಿ ನಿಲುವನ್ನು ತಳೆಯುತ್ತಿಲ್ಲ ಎಂಬ ಬಗ್ಗೆ ಈಗಾಗಲೇ ಜೋ ಬೈಡನ್​ ತುಸು ಬೇಸರ ವ್ಯಕ್ತಪಡಿಸಿದ್ದಾರೆ. ಈ ನಿಟ್ಟಿನಲ್ಲಿ ಇಂದು ನಡೆಯಲಿರುವ ವರ್ಚ್ಯುವಲ್​ ಸಭೆ ತುಂಬ ಮಹತ್ವದ್ದಾಗಿದೆ. ಉಳಿದೆಲ್ಲ ವಿಚಾರಗಳ ಬಗ್ಗೆ ಚರ್ಚೆ, ಸಂವಾದ ನಡೆದರೂ ಅತ್ಯಂತ ಮುಖ್ಯವಾಗಿ ಉಕ್ರೇನ್​-ರಷ್ಯಾ ವಿಷಯದ ಮೇಲೆಯೇ ಸಮಗ್ರ ಚರ್ಚೆ ನಡೆಯಲಿದೆ ಎಂದೂ ವೈಟ್ ಹೌಸ್​ ತಿಳಿಸಿದೆ.

ಸಭೆಯ ಟೈಮ್​ಲೈನ್ ಹೀಗಿದೆ…

ಸಂಜೆ 6.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜೈಶಂಕರ್ ಮತ್ತು ಅಮೆರಿಕದ ವಿದೇಶಾಂಗ ವ್ಯವಹಾರಗಳ ಇಲಾಖೆ ಕಾರ್ಯದರ್ಶಿ ಆಂಟೋನಿ ಬ್ಲಿಂಕೆನ್ ನಡುವೆ ಸಭೆ ನಡೆಯಲಿದೆ. ರಾತ್ರಿ 8.30ಕ್ಕೆ ಅಮೆರಿಕ ಅಧ್ಯಕ್ಷ ಜೋ ಬೈಡೆನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಮಾತುಕತೆ ನಡೆಸಲಿದ್ದಾರೆ. ರಾತ್ರಿ 11.30ಕ್ಕೆ ಭಾರತ, ಅಮೆರಿಕದ 2+2 ಸಚಿವರ ಸಭೆ ನಡೆಯಲಿದೆ. ಸಭೆಯಲ್ಲಿ ಉಭಯ ದೇಶಗಳ ವಿದೇಶಾಂಗ, ರಕ್ಷಣಾ ಇಲಾಖೆ ಸಚಿವರು ಪಾಲ್ಗೊಳ್ಳಲಿದ್ದಾರೆ. ರಾತ್ರಿ 1.45ಕ್ಕೆ ಬಾಹ್ಯಾಕಾಶಕ್ಕೆ ಸಂಬಂಧಿಸಿದ ಒಪ್ಪಂದಕ್ಕೆ ಸಹಿ ಹಾಕುತ್ತಾರೆ. ರಾತ್ರಿ 2.15ಕ್ಕೆ ರಕ್ಷಣಾ ಮತ್ತು ವಿದೇಶಾಂಗ ಸಚಿವರ ಜಂಟಿ ಸುದ್ದಿಗೋಷ್ಠಿ ನಡೆಯಲಿದೆ.

ಇದನ್ನೂ ಓದಿ: ಚೌಕಿದಾರ್ ಚೋರ್ ಹೇ ಘೋಷಣೆ ಮೊಳಗಿಸಿ ಸೇನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನ

Published On - 8:02 am, Mon, 11 April 22