ಚೌಕಿದಾರ್ ಚೋರ್ ಹೇ ಘೋಷಣೆ ಮೊಳಗಿಸಿ ಸೇನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನ

ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅಧಿಕಾರ ಕಳೆದುಕೊಳ್ಳಲು ಸೇನೆಯೇ ಮುಖ್ಯ ಕಾರಣ ಎಂದು ಅಲ್ಲಿನ ಜನರು ನಂಬಿದ್ದಾರೆ.

ಚೌಕಿದಾರ್ ಚೋರ್ ಹೇ ಘೋಷಣೆ ಮೊಳಗಿಸಿ ಸೇನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಜನ
ಪಾಕಿಸ್ತಾನದಲ್ಲಿ ಸೇನೆಯ ವಿರುದ್ಧ ಪ್ರತಿಭಟನಾ ಮೆರವಣಿಗೆ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Apr 11, 2022 | 7:45 AM

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಭಾನುವಾರ ತೆಹ್ರೀಕ್-ಎ-ಇನ್​ಸಾಫ್ (ಪಿಟಿಐ) ಪಕ್ಷ ನಡೆದ ಪ್ರತಿಭಟನಾ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನರು ‘ಚೌಕಿದಾರ್ ಚೋರ್ ಹೇ’ ಘೋಷಣೆ ಮೊಳಗಿಸಿ ಸೇನೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಈ ಘೋಷಣೆಯನ್ನು ಮೊದಲ ಬಾರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಬಳಕೆ ಮಾಡಿದ್ದರು. ಪಾಕಿಸ್ತಾನದ ಪ್ರಧಾನಿಯಾಗಿದ್ದ ಇಮ್ರಾನ್ ಖಾನ್ ಅಧಿಕಾರ ಕಳೆದುಕೊಳ್ಳಲು ಸೇನೆಯೇ ಮುಖ್ಯ ಕಾರಣ ಎಂದು ಅಲ್ಲಿನ ಜನರು ನಂಬಿದ್ದಾರೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಲಾಲ್ ಹವೇಲಿಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದ ಜನಜಂಗುಳಿಯು ಪಾಕಿಸ್ತಾನದ ಸೇನೆಯನ್ನು ಚೌಕಿದಾರ (ದ್ವಾರಪಾಲಕ) ಎಂದು ಹೋಲಿಸಿ, ಅವನು ಚೋರ್ (ಕಳ್ಳ) ಎಂದು ಆರೋಪಿಸಿತು. ಸಮಾವೇಶದಲ್ಲಿ ಮಾತನಾಡಿದ ಪಾಕಿಸ್ತಾನದ ಅಂತರಿಕ ವ್ಯವಹಾರಗಳ ಇಲಾಖೆಯ ಮಾಜಿ ಸಚಿವ ಶೇಖ್ ರಶೀದ್, ‘ಸಶಸ್ತ್ರ ಪಡೆಗಳ ವಿರುದ್ಧ ಘೋಷಣೆ ಕೂಗಬೇಡಿ’ ಎಂದು ವಿನಂತಿಸಿದರು. ‘ಘೋಷಣೆ ಕೂಗಬೇಡಿ, ನಾವು ಶಾಂತಿಯುತವಾಗಿ ಹೋರಾಡೋಣ’ ಎಂದು ಮನವಿ ಮಾಡಿದರು.

ಪಾಕಿಸ್ತಾನ ಸಂಸತ್ತಿನಲ್ಲಿ ವಿಶ್ವಾಸಮತ ಸಾಬೀತುಪಡಿಸಲು ವಿಫಲರಾದ ಇಮ್ರಾನ್ ಖಾನ್ ಪ್ರಧಾನಿ ಹುದ್ದೆ ಕಳೆದುಕೊಂಡಿದ್ದರು. ಈ ರಾಜಕೀಯ ಪಲ್ಲಟಕ್ಕೆ ಸೇನೆಯೇ ಮುಖ್ಯ ಕಾರಣ ಎಂದು ಪಾಕಿಸ್ತಾನದ ಹಲವು ರಾಜಕಾರಿಣಿಗಳು ನೇರ ಆರೋಪ ಮಾಡಿದ್ದರು. ಏಪ್ರಿಲ್ 29ರಂದು ಈದ್ ಹಬ್ಬವಿದೆ. ಅಂದಿನಿಂದಲೇ ನಾವೆಲ್ಲರೂ ಪ್ರತಿದಿನ ಜೈಲ್ ಭರೋ ಚಳವಳಿ ನಡೆಸುತ್ತೇವೆ. ನಾನು ಸ್ವತಃ ಕರಾಚಿಯಿಂದ ಚಳವಳಿಯಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಶೇಖ್ ರಶೀದ್ ಘೋಷಿಸಿದರು. ಪಾಕಿಸ್ತಾನದ ಇಸ್ಲಾಮಾಬಾದ್, ಕರಾಚಿ, ಪೇಷಾವರ, ಲಾಹೋರ್ ಮತ್ತು ಇತರ ಕೆಲ ನಗರಗಳಲ್ಲಿ ಪ್ರತಿಭಟನಾಕಾರರು ಬೀದಿಗಿಳಿದು ಘೋಷಣೆಗಳನ್ನು ಕೂಗಿದ್ದರು.

ರಾಜೀನಾಮೆಯ ನಂತರ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಇದು ಸರ್ಕಾರವನ್ನು ಪದಚ್ಯುತಗೊಳಿಸಿದ ವಿದೇಶಿ ಸಂಚಿನ ವಿರುದ್ಧ ಸ್ವಾತಂತ್ರ್ಯ ಹೋರಾಟದ ಆರಂಭ. ಪಾಕಿಸ್ತಾನದ ಜನತೆಯು ಪ್ರಜಾಪ್ರಭುತ್ವ ಮತ್ತು ಸಾರ್ವಭೌಮತೆ ಕಾಪಾಡಿಕೊಳ್ಳಲು ಸದಾ ಹೋರಾಡುತ್ತಾರೆ ಎಂದು ಹೇಳಿದರು. ‘ಪಾಕಿಸ್ತಾನವು 1947ರಲ್ಲಿ ಮೊದಲ ಬಾರಿಗೆ ಸ್ವಾತಂತ್ರ್ಯ ಪಡೆಯಿತು. ಆದರೆ ನಿಜವಾದ ಸ್ವಾತಂತ್ರ್ಯ ಹೋರಾಟ ಇಂದಿನಿಂದ ಆರಂಭವಾಗುತ್ತದೆ. ಸರ್ಕಾರ ಬದಲಿಸುವ ವಿದೇಶಿ ಸಂಚಿನ ವಿರುದ್ಧ ಸುದೀರ್ಘ ಹೋರಾಟ ಮಾಡುತ್ತೇವೆ’ ಎಂದು ಇಮ್ರಾನ್ ಖಾನ್ ಟ್ವೀಟ್ ಮಾಡಿದ್ದಾರೆ.

ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲು ಪಾಕಿಸ್ತಾನದ ಸಂಸತ್ತು ಸೋಮವಾರ (ಏಪ್ರಿಲ್ 11) ಮಧ್ಯಾಹ್ನ 2 ಗಂಟೆಗೆ ಸಭೆ ಸೇರಲಿದೆ. ಈಗಾಗಲೇ ವಿರೋಧ ಪಕ್ಷಗಳ ಮೈತ್ರಿಕೂಟದ ಅಭ್ಯರ್ಥಿ ಶೆಹಬಾಜ್ ಷರೀಫ್ ಮತ್ತು ಪಿಟಿಐನ ಶಾ ಮೆಹ್​ಮೂದ್ ಖುರೇಶಿ ಪ್ರಧಾನಿ ಹುದ್ದೆಗೆ ನಾಮಪತ್ರಗಳನ್ನು ಸಲ್ಲಿಸಿದ್ದಾರೆ. ಶೆಹಬಾಜ್ ಷರೀಫ್ ಅವರೇ ಪ್ರಧಾನಿಯಾಗುವ ಸಾಧ್ಯತೆಯಿದೆ ಎಂದು ವಿಶ್ಲೇಷಿಸಲಾಗಿದೆ.

ಇದನ್ನೂ ಓದಿ: ಯಾರಾಗ್ತಾರೆ ಪಾಕಿಸ್ತಾನದ ಮುಂದಿನ ಪ್ರಧಾನಿ?- ರೇಸ್​​ನಲ್ಲಿದ್ದಾರೆ ಶೆಹಬಾಜ್​ ಷರೀಫ್​- ಶಾ ಮೊಹಮ್ಮದ್​ ಖುರೇಶಿ

ಇದನ್ನೂ ಓದಿ: Srinagar Encounter: ಶ್ರೀನಗರದಲ್ಲಿ ಸಿಆರ್​​ಪಿಎಫ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದ ಇಬ್ಬರು ಪಾಕಿಸ್ತಾನಿ ಉಗ್ರರ ಎನ್​ಕೌಂಟರ್​