ದೆಹಲಿ: ನೂತನ ಕೃಷಿ ಸುಧಾರಣಾ ಕಾಯ್ದೆಗಳಿಂದ ರೈತರಿಗೆ ಹೆಚ್ಚೆಚ್ಚು ಅವಕಾಶ ಮತ್ತು ನೂತನ ಮಾರುಕಟ್ಟೆ ಸೃಷ್ಟಿಯಾಗಿದೆ.. ಅಲ್ಲದೇ ಈಗ ಕೃಷಿಕರು ತಂತ್ರಜ್ಞಾನದ ಮೂಲಕವೂ ಸಂಪಾದನೆ ಮಾಡಬಹುದು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಸುಧಾರಿತ ಕೃಷಿ ಕಾಯ್ದೆಗಳ ವಿರುದ್ಧ ರೈತರು ಸಿಡಿದೆದ್ದಿದ್ದಾರೆ. ವಾಪಸ್ ಪಡೆಯುವಂತೆ ಪಟ್ಟು ಹಿಡಿದಿದ್ದಾರೆ. ಆದರೆ ಪ್ರಧಾನಿ ಮೋದಿ ಎಲ್ಲ ಸಂದರ್ಭಗಳಲ್ಲೂ ಈ ಕಾಯ್ದೆಗಳನ್ನು ಸಮರ್ಥಿಸಿಕೊಳ್ಳುತ್ತಲೇ ಇದ್ದಾರೆ. ಇಂದು ಫೆಡರೇಶನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರಿ (Federation of Indian Chambers of Commerce & Industry –FICCI)ಯ 93ನೇ ವಾರ್ಷಿಕ ಸಾಮಾನ್ಯ ಸಭೆ ಉದ್ದೇಶಿಸಿ ಮಾತನಾಡುವಾಗಲೂ ಸಹ ನೂತನ ಕೃಷಿ ಕಾಯ್ದೆಗಳಿಂದಾಗುವ ಒಳಿತುಗಳ ಬಗ್ಗೆಯೇ ತಿಳಿಸಿದ್ದಾರೆ.
ಪ್ರಸ್ತುತ ಕಾಯ್ದೆಗಳಿಂದ ಕೃಷಿ ಕ್ಷೇತ್ರದಲ್ಲಿ ಹೂಡಿಕೆ ಹೆಚ್ಚಾಗಲಿದ್ದು, ರೈತರಿಗೆ ಲಾಭ ತಂದುಕೊಡಲಿದೆ. ಅದರಲ್ಲೂ ಸಣ್ಣ ರೈತರಿಗೆ ಅನುಕೂಲ ಹೆಚ್ಚು. ಈಗ ರೈತರು ತಮ್ಮ ಉತ್ಪನ್ನಗಳನ್ನು ಸ್ಥಳೀಯ ಮಂಡಿಯಲ್ಲೂ ಮಾರಾಟ ಮಾಡಬಹುದು. ಹೊರಗಿನ ಮಾರುಕಟ್ಟೆಯಲ್ಲೂ ಮಾರಬಹುದು. ಅಷ್ಟೇ ಏಕೆ, ಡಿಜಿಟಲ್ ವೇದಿಕೆಯಲ್ಲೂ ಮಾರುವ ಅವಕಾಶ ಪಡೆದಿದ್ದಾರೆ. ಕೃಷಿಕರ ಆದಾಯ ಹೆಚ್ಚಳ ಮತ್ತು ಅವರ ಉಜ್ವಲ ಭವಿಷ್ಯಕ್ಕಾಗಿ ನಾವು ಈ ಕ್ರಮ ಕೈಗೊಂಡಿದ್ದೇವೆ ಎಂದು ಹೇಳಿದ್ದಾರೆ.
ಕೃಷಿ ಕ್ಷೇತ್ರ ಮತ್ತು ಅದಕ್ಕೆ ಸಂಬಂಧಿಸಿದ ಪೂರಕ ವಲಯಗಳ ನಡುವೆ.. ಅಂದರೆ ಕೃಷಿಯ ಮೂಲಸೌಕರ್ಯಗಳು, ಆಹಾರ ಸಂಸ್ಕರಣೆ, ಶೇಖರಣೆ ಮತ್ತು ಶೀತಲೀಕರಣ ವ್ಯವಸ್ಥೆಗಳ ನಡುವೆ ಗೋಡೆ ಇತ್ತು. ಇದೀಗ ಅಂಥ ಅಡೆತಡೆಗಳನ್ನೆಲ್ಲ ತೊಡೆದುಹಾಕಲಾಗಿದೆ. ಹಾಗೇ, ಭಾರತದಲ್ಲಿ ಸ್ಪರ್ಧಾತ್ಮಕ ಅನುಕೂಲತೆಯುಳ್ಳ ಕ್ಷೇತ್ರದಲ್ಲಿ ತಂತ್ರಜ್ಞಾನ ಆಧಾರಿತ ಕೈಗಾರಿಕೆಗಳನ್ನು ಇನ್ನಷ್ಟು ಬಲಗೊಳಿಸಲು ಒತ್ತು ನೀಡಲಾಗುತ್ತಿದೆ ಎಂದು ಪ್ರಧಾನಿ ತಿಳಿಸಿದರು.
20-20ಯಿಂದ 2020ರವರೆಗೆ
ಕ್ರಿಕೆಟ್ನ 20-20 ಪಂದ್ಯದಲ್ಲಿ ಎಲ್ಲವೂ ವೇಗವಾಗಿ ಬದಲಾಗುವುದನ್ನು ನಾವು ನೋಡಿದ್ದೆವು. ಆದರೆ 2020ರಲ್ಲಿ ಅಡ್ಡಿಯೇ ಜಾಸ್ತಿಯಾಯಿತು. ನಮ್ಮ ದೇಶವಷ್ಟೇ ಅಲ್ಲ, ಇಡೀ ಜಗತ್ತು ಅನೇಕ ಏರಿಳಿತಗಳನ್ನು ಕಂಡಿತು. ಆದರೆ ಈಗ ಪರಿಸ್ಥಿತಿ ವೇಗವಾಗಿ ಸುಧಾರಿಸುತ್ತಿರುವುದು ಸಮಾಧಾನಕರ ಸಂಗತಿ ಎಂದು ನರೇಂದ್ರ ಮೋದಿ ಹೇಳಿದರು.