ದೆಹಲಿ: ತೆಂಕುತಿಟ್ಟು ಯಕ್ಷರಂಗದ ಭೀಷ್ಮರೆಂದೇ (Tenkuthittu Yakshagana) ಖ್ಯಾತರಾದ ಭಾಗವತರಾದ ಬಲಿಪ ನಾರಾಯಣ ಭಾಗವತರು (Balipa Narayana Bhagavatha) ಇಂದು ಸಂಜೆ ನಿಧನ ಹೊಂದಿದ್ದು, ಯಕ್ಷ ಲೋಕ ಮತ್ತು ಅಭಿಮಾನಿಗಳು, ಕುಟುಂಬಸ್ಥರು ಕಂಬನಿ ಮಿಡಿಯುತ್ತಿದ್ದಾರೆ. ಇದೀಗ ಯಕ್ಷರಂಗದ ಭೀಷ್ಮ ಬಲಿಪ ನಾರಾಯಣರಿಗೆ ದೇಶದ ಪ್ರಧಾನಿ ಮೋದಿ ಸಂತಾಪ ವ್ಯಕ್ತಪಡಿಸಿದ್ದಾರೆ. ಬಲಿಪ ನಾರಾಯಣ ಭಾಗವತರು ಸಾಂಸ್ಕೃತಿಕ ಲೋಕದಲ್ಲಿ ಛಾಪು ಮೂಡಿಸಿದ್ದಾರೆ. ಅವರು ಯಕ್ಷಗಾನ ಹಿನ್ನೆಲೆ ಗಾಯನಕ್ಕಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟರು ಮತ್ತು ಅವರ ಅನುಕರಣೀಯ ಶೈಲಿಯಿಂದ ಮೆಚ್ಚುಗೆ ಪಡೆದರು. ಅವರ ಕೃತಿಗಳನ್ನು ಮುಂದಿನ ಪೀಳಿಗೆಯವರು ಮೆಚ್ಚುತ್ತಾರೆ. ಅವರ ನಿಧನದಿಂದ ನೋವಾಗಿದೆ ಎಂದು ಟ್ವೀಟ್ ಮಾಡಿದ್ದಾರೆ.
Shri Balipa Narayana Bhagawatha made a mark in the world of culture. He devoted his life towards Yakshagana playback singing and was admired for his exemplary style. His works will be admired by the coming generations. Pained by his demise. Condolences to his family. Om Shanti.
— Narendra Modi (@narendramodi) February 17, 2023
ತೆಂಕುತಿಟ್ಟು ಯಕ್ಷರಂಗದ ಭೀಷ್ಮ ರೆಂದೇ ಖ್ಯಾತರಾದ ಭಾಗವತರಾದ ಬಲಿಪ ನಾರಾಯಣ ಭಾಗವತರು ಗುರುವಾರ ಸಂಜೆ 6.30 ಸುಮಾರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಸಮೀಪದ ನೂಯಿ ಎಂಬಲ್ಲಿರುವ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದು, ಯಕ್ಷ ಲೋಕ ಮತ್ತು ಅಭಿಮಾನಿಗಳು, ಕುಟುಂಬಸ್ಥರು ಕಂಬನಿ ಮಿಡಿಯುತ್ತಿದ್ದಾರೆ. ಅಂತಿಮ ವಿಧಿ ವಿಧಾನಗಳು ಇಂದು ರಾತ್ರಿ 1.30 ಗಂಟೆಯ ಸುಮಾರಿಗೆ ಅವರ ಸ್ವಗ್ರಹದಲ್ಲಿ ನಡೆಯಲಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಕಾಸರಗೋಡಿನ ಪಡ್ರೆ ಗ್ರಾಮದಲ್ಲಿ 1938ರ ಮಾರ್ಚ್ 13ರಂದು ಜನಿಸಿದ ಬಲಿಪರು, 7ನೇ ತರಗತಿಯವರೆಗೆ ವಿದ್ಯಾಭ್ಯಾಸ ಮಾಡಿದ್ದಾರೆ. ತಮ್ಮ ಅಜ್ಜ ದಿ.ಬಲಿಪ ನಾರಾಯಣ ಭಾಗವತರಿಂದ ಭಾಗವತಿಕೆ ಕಲಿತು 13ನೇ ವರ್ಷದಲ್ಲಿ ರಂಗ ಪ್ರವೇಶ ಮಾಡಿದ್ದರು. ಹೀಗೆ ಆರಂಭವಾದ ಯಕ್ಷ ಪ್ರಯಾಣ ಸುಮಾರು 60 ವರ್ಷಗಳ ಕಾಲ ಯಕ್ಷಗಾನ ಕಲಾ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಪಡ್ರೆ ಜಠಾಧಾರಿ ಮೇಳವನ್ನು ಇವರು ಮೊದಲಿಗೆ ಆರಂಭಿಸಿದರು. ಯಕ್ಷಗಾನದ 50ಕ್ಕೂ ಹೆಚ್ಚು ಪ್ರಸಂಗಗಳ ಕಂಠಪಾಠ ಇವರಿಗಿದೆ. 30 ಪ್ರಕಟಿತ ಮತ್ತು 15 ಅಪ್ರಕಟಿತ ಯಕ್ಷಗಾನ ಪ್ರಸಂಗಗಳನ್ನು ರಚಿಸಿದ್ದಾರೆ. ಕಪ್ಪು ಮೂರು, ಬಿಳಿ ಐದರ ಸ್ವರದಲ್ಲಿ ಬಲಿಪರು ಹಾಡುತ್ತಾರೆ. ಇವರ ಯಕ್ಷಗಾನದ ಸುದೀರ್ಘ ಸೇವೆಗಾಗಿ ಯಕ್ಷಾಭಿಮಾನಿಗಳು ಬಲಿಪ ಅಮೃತ ಭವನವನ್ನು ಕಟ್ಟಿಸಿಕೊಟ್ಟಿದ್ದಾರೆ. ಬಲಿಪ ನಾರಾಯಣ ಭಾಗವತರು ಐದು ದಿನದ ದೇವೀ ಮಹಾತ್ಮೆ ಎಂಬ ಮಹಾಪ್ರಸಂಗವನ್ನು ರಚಿಸಿದ್ದು ವೇಣೂರಿನ ಕಜೆ ಸುಬ್ರಹ್ಮಣ್ಯ ಭಟ್ ಮತ್ತು ಅವರ ಸ್ನೇಹಿತರು ಇದನ್ನು ಪ್ರಕಟಿಸಿದ್ದಾರೆ.
Published On - 10:22 am, Fri, 17 February 23