ವಿಶ್ವ ಆರೋಗ್ಯ ದಿನ (World Health Day)ವಾದ ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಆರೋಗ್ಯ ಕ್ಷೇತ್ರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಆರೋಗ್ಯ ವಲಯದ ಸಿಬ್ಬಂದಿಯ ಕಠಿಣ ಪರಿಶ್ರಮ ಇಡೀ ಜಗತ್ತನ್ನು ರಕ್ಷಿಸುತ್ತಿದೆ ಎಂದು ಹೇಳಿದ್ದಾರೆ. ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತದ ಆರೋಗ್ಯ ಕ್ಷೇತ್ರದ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ. ನಮ್ಮ ನಾಗರಿಕರಿಗೆ ಕೈಗೆಟಕುವ ಬೆಲೆಯಲ್ಲಿ ಸಕಲ ಆರೋಗ್ಯ ಸೇವೆ, ಚಿಕಿತ್ಸೆಗಳು ಲಭಿಸುವಂತೆ ಮಾಡುವುದು ನಮ್ಮ ಉದ್ದೇಶ ಎಂದು ಹೇಳಿದ್ದಾರೆ.
ದೇಶದ ಆರೋಗ್ಯ ಯೋಜನೆಗಳನ್ನು ಹೊಗಳಿದ ಪ್ರಧಾನಿ ನರೇಂದ್ರ ಮೋದಿ, ಜಗತ್ತಿನಲ್ಲೇ ಅತ್ಯಂತ ದೊಡ್ಡದಾದ ಆರೋಗ್ಯ ಯೋಜನೆ ಆಯುಷ್ಮಾನ್ ಭಾರತ್ದ ತವರು ನಮ್ಮ ರಾಷ್ಟ್ರ ಎಂದು ಹೇಳಿಕೊಳ್ಳಲು ತುಂಬ ಹೆಮ್ಮೆಯಾಗುತ್ತದೆ. ಈ ಯೋಜನೆಯ ಫಲಾನುಭವಿಗಳ ಜತೆ ಸಂವಾದ ನಡೆಸುವುದು, ಅವರಿಂದ ಪ್ರತಿಕ್ರಿಯೆ ಪಡೆಯುವುದು ತುಂಬ ಸಂತೋಷ ಕೊಡುತ್ತದೆ. ಬಡವರು ಮತ್ತು ಮಧ್ಯಮವರ್ಗದ ಜನರಿಗೆ ಎಲ್ಲ ರೀತಿಯ, ಅತ್ಯುತ್ತಮ ಆರೋಗ್ಯ ಸೇವೆಗಳು, ಕಡಿಮೆ ಬೆಲೆಯಲ್ಲಿ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ನಾವು ಜಾಸ್ತಿ ಗಮನಹರಿಸುತ್ತಿದ್ದೇವೆ. ಹಾಗೇ, ಇನ್ನೊಂದೆಡೆ ಎಲ್ಲರ ಯೋಗಕ್ಷೇಮಕ್ಕಾಗಿ ಆಯುಷ್ ಜಾಲವನ್ನೂ ಉತ್ತೇಜಿಸುತ್ತಿದ್ದೇವೆ ಎಂದೂ ಪ್ರಧಾನಿ ಮೋದಿ ಹೇಳಿದ್ದಾರೆ.
ಕಳೆದ ಎಂಟು ವರ್ಷಗಳಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಪಾರ ಪರಿವರ್ತನೆಗಳನ್ನು ಮಾಡಲಾಗಿದೆ ಎಂದು ಹೇಳಿದ ಪ್ರಧಾನಮಂತ್ರಿ ನರೇಂದ್ರ ಮೋದಿ, ಹಲವು ಹೊಸ ವೈದ್ಯಕೀಯ ಕಾಲೇಜುಗಳನ್ನು ನಿರ್ಮಿಸಲಾಗಿದೆ. ಆಯಾ ಪ್ರದೇಶಗಳ ಸ್ಥಳೀಯ ಭಾಷೆಗಳಲ್ಲಿ ವೈದ್ಯಕೀಯ ಶಿಕ್ಷಣ ಅಭ್ಯಾಸ ಮಾಡಲು ಅವಕಾಶ ಮಾಡಿಕೊಟ್ಟಿದ್ದು, ಅದೆಷ್ಟೇ ಅಸಂಖ್ಯಾತ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಟ್ಟಿದೆ ಎಂದು ಹೇಳಿದರು. ಹಾಗೇ, ಆರೋಗ್ಯ ಕ್ಷೇತ್ರದ ಪ್ರತಿಯೊಬ್ಬ ಸಿಬ್ಬಂದಿಗೂ ವಿಶ್ವ ಆರೋಗ್ಯ ದಿನದ ಶುಭಾಶಯಗಳನ್ನು ತಿಳಿಸಿದ್ದಾರೆ.
आरोग्यं परमं भाग्यं स्वास्थ्यं सर्वार्थसाधनम्॥
Greetings on World Health Day. May everyone be blessed with good health and wellness. Today is also a day to express gratitude to all those associated with the health sector. It is their hardwork that has kept our planet protected.
— Narendra Modi (@narendramodi) April 7, 2022
ಅಂದಹಾಗೇ, ಈ ವಿಶ್ವ ಆರೋಗ್ಯ ದಿನವನ್ನು ಮೊಟ್ಟಮೊದಲು ಪ್ರಾರಂಭ ಮಾಡಿದ್ದು ವಿಶ್ವ ಆರೋಗ್ಯ ಸಂಸ್ಥೆ. 1948ರಲ್ಲಿ ಈ ಆಚರಣೆಗೆ ನಾಂದಿಯಾಯಿತು. ಅದಾದ ಮೇಲೆ 1950ರಿಂದ ಪ್ರತಿವರ್ಷ ಏಪ್ರಿಲ್ 7ರಂದು ಜಗತ್ತಿನಾದ್ಯಂತ ವಿಶ್ವ ಆರೋಗ್ಯ ದಿನ ಆಚರಣೆ ಮಾಡಿ, ತನ್ನಿಮಿತ್ತ ವಿವಿಧ ವೈದ್ಯಕೀಯ ಕಾರ್ಯಕ್ರಮಗಳನ್ನೂ ಆಯೋಜಿಸಲಾಗುತ್ತದೆ. ದೈಹಿಕ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವ ನಿಟ್ಟನಲ್ಲಿ ಹಲವು ಕಾರ್ಯಕ್ರಮಗಳು ನಡೆಯುತ್ತವೆ.
ಇದನ್ನೂ ಓದಿ: World Health Day 2022: ವಿಶ್ವ ಆರೋಗ್ಯ ದಿನದ ವಿಶೇಷತೆ ಏನು? ಉತ್ತಮ ಆರೋಗ್ಯಕ್ಕೆ ಸಿಂಪಲ್ ಟಿಪ್ಸ್ ಇಲ್ಲಿವೆ ನೋಡಿ