National Youth Day 2022: ಭಾರತದ ಯುವಜನತೆಗೆ ಟೆಕ್ನಾಲಜಿಯೂ ಗೊತ್ತು, ಪ್ರಜಾಪ್ರಭುತ್ವದ ಮೌಲ್ಯದ ಅರಿವೂ ಇದೆ: ಪ್ರಧಾನಿ ಮೋದಿ

| Updated By: Lakshmi Hegde

Updated on: Jan 12, 2022 | 1:28 PM

ಆತ್ಮನಿರ್ಭರ ಭಾರತ್​ ಅಭಿಯಾನದ ಯಶಸ್ಸಿನಲ್ಲಿ ಎಂ​ಎಸ್​ಎಂಇ ವಲಯವು ತುಂಬ ನಿರ್ಣಾಯಕ ಪಾತ್ರ ವಹಿಸುತ್ತದೆ.  ಈ ಎಂಎಸ್ಎಂಇ ​ತಂತ್ರಜ್ಞಾನಗಳು ಇಡೀ ಜಗತ್ತನ್ನೇ ಬದಲಿಸುತ್ತಿವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

National Youth Day 2022: ಭಾರತದ ಯುವಜನತೆಗೆ ಟೆಕ್ನಾಲಜಿಯೂ ಗೊತ್ತು, ಪ್ರಜಾಪ್ರಭುತ್ವದ ಮೌಲ್ಯದ ಅರಿವೂ ಇದೆ: ಪ್ರಧಾನಿ ಮೋದಿ
ವಿಡಿಯೋ ಕಾನ್ಫರೆನ್ಸ್ ಮೂಲಕ ಯುವಜನೋತ್ಸವ ಉದ್ಘಾಟಿಸಿದ ಪ್ರಧಾನಿ ಮೋದಿ
Follow us on

ಸ್ವಾಮಿ ವಿವೇಕಾನಂದರ ಜಯಂತಿ ನಿಮಿತ್ತ ಪುದುಚೇರಿಯಲ್ಲಿ ಆಯೋಜಿಸಲಾಗಿರುವ ಎರಡು ದಿನಗಳ ರಾಷ್ಟ್ರೀಯ ಯುವಜನೋತ್ಸವವನ್ನು(National Youth Festival In Puducherry) ಇಂದು 11ಗಂಟೆಗೆ ಪ್ರಧಾನಿ ಮೋದಿ ಉದ್ಘಾಟನೆ ಮಾಡಿದರು. ವಿಡಿಯೋ ಕಾನ್ಫರೆನ್ಸ್ ಮೂಲಕ 25ನೇ ರಾಷ್ಟ್ರೀಯ ಯುವಜನೋತ್ಸವ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ಮೋದಿ,  ಯುವಜನರಿಗೆ ಸ್ಪರ್ಧಿಸಿ ಮತ್ತು ಗೆಲುವು ಸಾಧಿಸಿ ಎಂಬ ಕರೆ ಕೊಟ್ಟರು. ನಮ್ಮ ದೇಶದ ಜನಸಂಖ್ಯಾಬಲ ಮತ್ತು ಪ್ರಜಾಪ್ರಭುತ್ವದ ಅಪರಿಮಿತ ಶಕ್ತಿಯನ್ನು ಇಂದು ಜಗತ್ತೇ ಗುರುತಿಸಿದೆ ಎಂದು ಹೇಳಿದರು. ನಮ್ಮ ದೇಶದ ಜನರಿಗೆ ಟೆಕ್ನಾಲಜಿ ಬಗ್ಗೆ ಗೊತ್ತಿದೆ, ಹಾಗೇ ಪ್ರಜಾಪ್ರಭುತ್ವದ ಮೌಲ್ಯಗಳಿಗೂ ಗೌರವಕೊಡುತ್ತಿದ್ದಾರೆ. ಶ್ರಮಪಡುವುದು ಗೊತ್ತು, ಭವಿಷ್ಯದ ಬಗ್ಗೆ ಸ್ಪಷ್ಟತೆಯೂ ಇದೆ. ಹಾಗೇ, ಜನಸಂಖ್ಯಾ ಬಲವನ್ನು ಹೇಗೆ ಉಪಯೋಗಿಸಿಕೊಳ್ಳಬಹುದೆಂಬ ಅರಿವನ್ನೂ ಹೊಂದಿದ್ದಾರೆ. ಇದೇ ಕಾರಣಕ್ಕೆ ಭಾರತ ತನ್ನ ಯುವಜನರನ್ನು ಅಭಿವೃದ್ಧಿಯ ಚಾಲಕರು ಎಂದು ಪರಿಗಣಿಸಿಕೊಂಡಿದೆ ಎಂದು ಪ್ರಧಾನಿ ಮೋದಿ ಹೇಳಿದರು. 

ಕಾರ್ಯಕ್ರಮ ಉದ್ಘಾಟನೆಯ ಪ್ರಾರಂಭದಲ್ಲಿ ಎಲ್ಲರಿಗೂ ಸ್ವಾಮಿ ವಿವೇಕಾನಂದರ ಜಯಂತಿಯ ಶುಭಾಶಯ ಕೋರಿದ ಪ್ರಧಾನಿ ಮೋದಿ, ನಾವು ಪ್ರತಿವರ್ಷವೂ ಜನವರಿ 12ರಂದು, ಈ ಭಾರತ ಮಾತೆಯ ಮಹಾನ್ ಪುತ್ರ ಸ್ವಾಮಿ ವಿವೇಕಾನಂದರ ಜಯಂತಿ ಆಚರಣೆ ಮಾಡುತ್ತಿದ್ದೇವೆ. ಆದರೆ ಈ ವರ್ಷ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಇನ್ನಷ್ಟು ಸ್ಫೂರ್ತಿದಾಯಕ ಮತ್ತು ವಿಶೇಷವಾಗಿ ಆಚರಣೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಭಾರತವೊಂದು ಭರವಸೆ, ನಂಬಿಕೆ ಎಂಬಂತೆ ಇಡೀ ಜಗತ್ತು ನಮ್ಮ ರಾಷ್ಟ್ರದ ಕಡೆಗೆ ನೋಡುತ್ತಿದೆ. ಯಾಕೆಂದರೆ ಇಲ್ಲಿನ ಜನರ ಯುವ ಮನಸ್ಥಿತಿ ಹೊಂದಿದ್ದಾರೆ. ಭಾರತದ ಸಾಮರ್ಥ್ಯ, ಕನಸು, ಆಲೋಚನೆ, ಪ್ರಜ್ಞೆಗಳೆಲ್ಲ ಯೌವ್ವನದಲ್ಲೇ ಇವೆ. ಹೀಗಾಗಿ ಸದಾ ಮುನ್ನೆಡೆಯುತ್ತಲೇ ಇರುತ್ತದೆ ಎಂದು ಪ್ರಧಾನಿ ಮೋದಿ ವ್ಯಾಖ್ಯಾನಿಸಿದರು.

ಹೆಣ್ಣುಮಕ್ಕಳ ಮದುವೆ ವಯಸ್ಸಿನ ಪ್ರಸ್ತಾಪ
ಇತ್ತೀಚೆಗೆ ಕೇಂದ್ರ ಸರ್ಕಾರ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 21ಕ್ಕೆ ಏರಿಸಿದೆ. ಈ ಬಗ್ಗೆ ಇಂದಿನ ಯುವಜನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ನಾವು ಮಗ ಮತ್ತು ಮಗಳು ಸಮಾನರು ಎಂದೇ ನಂಬುತ್ತೇವೆ. ಇದೇ ಕಾರಣಕ್ಕೆ ನಮ್ಮ ಸರ್ಕಾರ ಪುತ್ರಿಯರ ಮದುವೆ ವಯಸ್ಸನ್ನು 21ಕ್ಕೆ ಏರಿಸಲು ನಿರ್ಧಾರ ಮಾಡಿದೆ. ಹೆಣ್ಣುಮಕ್ಕಳೂ ಕೂಡ ತಮ್ಮ ವೃತ್ತಿ ಜೀವನ ರೂಪಿಸಿಕೊಳ್ಳಬೇಕು. ಅವರಿಗೂ ಮದುವೆಗೆ ಮನಸ್ಥಿತಿ ಹೊಂದಿಕೊಳ್ಳಲು ಒಂದಷ್ಟು ಕಾಲಾವಕಾಶ ಬೇಕು. ಈ ನಿಟ್ಟಿನಲ್ಲಿ ನಮ್ಮ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಪ್ರಕಟಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂದು ಯುವಜನೋತ್ಸವ ಉದ್ಘಾಟನೆ ಮಾಡಿದ ಬಳಿಕ ಪ್ರಧಾನಮಂತ್ರಿ ನರೇಂದ್ರ ಮೋದಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕಾ ಟೆಕ್ನಾಲಜಿ ಕೇಂದ್ರವನ್ನು ಉದ್ಘಾಟನೆ ಮಾಡಿದರು. ಬಳಿಕ ಮಾತನಾಡಿ, ಆತ್ಮನಿರ್ಭರ ಭಾರತ್​ ಅಭಿಯಾನದ ಯಶಸ್ಸಿನಲ್ಲಿ ಎಂ​ಎಸ್​ಎಂಇ ವಲಯವು ತುಂಬ ನಿರ್ಣಾಯಕ ಪಾತ್ರ ವಹಿಸುತ್ತದೆ.  ಈ ಎಂಎಸ್ಎಂಇ ​ತಂತ್ರಜ್ಞಾನಗಳು ಇಡೀ ಜಗತ್ತನ್ನೇ ಬದಲಿಸುತ್ತಿವೆ. ಹೀಗಿರುವಾಗ ನಾವೂ ಕೂಡ ಅವುಗಳ ಸಮರ್ಪಕ ಬಳಕೆ ಮಾಡಿಕೊಳ್ಳಬೇಕು ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಿಳಿಸಿದ್ದಾರೆ. ಅಂದಹಾಗೆ ಇಂದು ಪುದುಚೇರಿಯಲ್ಲಿ ಪೆರುಂತಲೈವರ್ ಕಾಮರಾಜರ್ ಮಣಿಮಂಡಪಂ’ ಎಂಬ ಬಯಲು ರಂಗಮಂದಿರ  ಹೊಂದಿರುವ ಸಭಾಂಗಣವನ್ನೂ ಪ್ರಧಾನಿ ಮೋದಿ ಉದ್ಘಾಟಿಸಿದರು. ಇದರಲ್ಲಿ ಶೈಕ್ಷಣಿಕ ಕಾರ್ಯಕ್ರಮ ನಡೆಸಲು ಆದ್ಯತೆ ನೀಡಲಾಗುವುದು. ಒಂದು ಸಲಕ್ಕೆ 1000ಜನರು ಕುಳಿತುಕೊಳ್ಳಬಹುದಾದ ಸಭಾಂಗಣ ಎಂದು ಪಿಎಂಒ ತಿಳಿಸಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಪಾದ ಯಾತ್ರೆಗೆ ಹೈಕೋರ್ಟ್‌ ಕೆಂಡಾಮಂಡಲ, ಪಾದ ಯಾತ್ರೆ ತಡೆಯಲು ಸರ್ಕಾರ ಅಸಮರ್ಥವಾಗಿದೆಯೇ ಎಂದು ಪ್ರಶ್ನೆ

Published On - 1:27 pm, Wed, 12 January 22