ಕಾಂಗ್ರೆಸ್‌ ಪಾದ ಯಾತ್ರೆಗೆ ಹೈಕೋರ್ಟ್‌ ಕೆಂಡಾಮಂಡಲ, ಪಾದ ಯಾತ್ರೆ ತಡೆಯಲು ಸರ್ಕಾರ ಅಸಮರ್ಥವಾಗಿದೆಯೇ ಎಂದು ಪ್ರಶ್ನೆ

TV9 Digital Desk

| Edited By: ಸಾಧು ಶ್ರೀನಾಥ್​

Updated on:Jan 12, 2022 | 1:38 PM

ಬೆಂಗಳೂರು: ಕೊರೊನಾ ಮಹಾಮಾರಿ ಮಧ್ಯೆ ಅತ್ತ ಕಾಂಗ್ರೆಸ್​ ಪ್ರಾಯೋಜಕತ್ವದ ಮೇಕೆದಾಟು ಪಾದಯಾತ್ರೆ ನಾಲ್ಕನೆಯ ದಿನಕ್ಕೆ ಪ್ರವೇಶವಾಗಿರುವ ಸಂದರ್ಭದಲ್ಲಿ ಪಾದಯಾತ್ರೆ ವಿರುದ್ಧ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಕೆಯಾಗಿದೆ. ತುರ್ತು ವಿಚಾರಣೆಗೆ ವಕೀಲ ಶ್ರೀಧರ್ ಪ್ರಭು ಎಂಬುವವರು ಇಂದು ಮನವಿ ಮಾಡಿದ್ದರು. ಕೆಪಿಸಿಸಿ ಪಾದಯಾತ್ರೆಯಿಂದ ಕೊವಿಡ್ ಹಬ್ಬಲಿದೆ. ಸರ್ಕಾರ ಪಾದಯಾತ್ರೆ ತಡೆಗೆ ಕ್ರಮ ಕೈಗೊಂಡಿಲ್ಲ. ಮಾಸ್ಕ್ ಇಲ್ಲದೇ ನಾಯಕರು ಮಕ್ಕಳನ್ನು ಭೇಟಿ ಮಾಡಿದ್ದಾರೆ . ಪಾದಯಾತ್ರೆ ಸೂಪರ್ ಸ್ಪ್ರೆಡರ್ ಆಗುವ ಭೀತಿ ಇದೆ. ಹೀಗಾಗಿ ಪಿಐಎಲ್ ತುರ್ತು ವಿಚಾರಣೆ ನಡೆಸಬೇಕು ಎಂದು […]

ಕಾಂಗ್ರೆಸ್‌ ಪಾದ ಯಾತ್ರೆಗೆ ಹೈಕೋರ್ಟ್‌ ಕೆಂಡಾಮಂಡಲ, ಪಾದ ಯಾತ್ರೆ ತಡೆಯಲು ಸರ್ಕಾರ ಅಸಮರ್ಥವಾಗಿದೆಯೇ ಎಂದು ಪ್ರಶ್ನೆ
ಹೈಕೋರ್ಟ್

ಬೆಂಗಳೂರು: ಕೊರೊನಾ ಮಹಾಮಾರಿ ಮಧ್ಯೆ ಅತ್ತ ಕಾಂಗ್ರೆಸ್​ ಪ್ರಾಯೋಜಕತ್ವದ ಮೇಕೆದಾಟು ಪಾದಯಾತ್ರೆ ನಾಲ್ಕನೆಯ ದಿನಕ್ಕೆ ಪ್ರವೇಶವಾಗಿರುವ ಸಂದರ್ಭದಲ್ಲಿ ಪಾದಯಾತ್ರೆ ವಿರುದ್ಧ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಕೆಯಾಗಿದೆ. ತುರ್ತು ವಿಚಾರಣೆಗೆ ವಕೀಲ ಶ್ರೀಧರ್ ಪ್ರಭು ಎಂಬುವವರು ಇಂದು ಮನವಿ ಮಾಡಿದ್ದರು. ಕೆಪಿಸಿಸಿ ಪಾದಯಾತ್ರೆಯಿಂದ ಕೊವಿಡ್ ಹಬ್ಬಲಿದೆ. ಸರ್ಕಾರ ಪಾದಯಾತ್ರೆ ತಡೆಗೆ ಕ್ರಮ ಕೈಗೊಂಡಿಲ್ಲ. ಮಾಸ್ಕ್ ಇಲ್ಲದೇ ನಾಯಕರು ಮಕ್ಕಳನ್ನು ಭೇಟಿ ಮಾಡಿದ್ದಾರೆ . ಪಾದಯಾತ್ರೆ ಸೂಪರ್ ಸ್ಪ್ರೆಡರ್ ಆಗುವ ಭೀತಿ ಇದೆ. ಹೀಗಾಗಿ ಪಿಐಎಲ್ ತುರ್ತು ವಿಚಾರಣೆ ನಡೆಸಬೇಕು ಎಂದು ಅವರು ಮನವಿ ಮಾಡಿದ್ದರು. ಪಿಐಎಲ್ ವಿಚಾರಣೆಯನ್ನು ತುರ್ತಾಗಿಯೇ ಕೈಗೆತ್ತಿಕೊಂಡ ಹೈಕೋರ್ಟ್​ ಕಾಂಗ್ರೆಸ್‌ ಪಾದಯಾತ್ರೆ ಬಗ್ಗೆ ಕೆಂಡಾಮಂಡಲಗೊಂಡಿದೆ. ರಾಜ್ಯ ಸರ್ಕಾರ ಅಸಮರ್ಥವಾಗಿದೆಯೇ ಎಂದೂ ಪ್ರಶ್ನೆ ಮಾಡಿದೆ. ಸರ್ಕಾರ ಮತ್ತು ಕೆಪಿಸಿಸಿಗೆ ಕೋರ್ಟ್‌ ಒಂದು ದಿನದ ಗಡುವು ನೀಡಿ, ತಕ್ಷಣ ಉತ್ತರಿಸುವಂತೆ ಸೂಚಿಸಿದೆ.

ಕರ್ನಾಟಕ ಈಗಾಗಲೇ ಕೋವಿಡ್ ನಿಂದ ತತ್ತರಿಸುತ್ತಿದೆ. ಹೀಗಿರುವಾಗ ಪಾದಯಾತ್ರೆಗೆ ಹೇಗೆ ಅನುಮತಿ ನೀಡಿದ್ದೀರಿ ಎಂದು ಹೈಕೋರ್ಟ್ ವಿಭಾಗೀಯ ಪೀಠ ತೀವ್ರ ಅಸಮಾಧಾನ ಹೊರ ಹಾಕಿದೆ. ಸರ್ಕಾರದ ಮಾರ್ಗಸೂಚಿ ಪಾಲಿಸಲು ಕೆಪಿಸಿಸಿ ಏನು ಕ್ರಮ ಕೈಗೊಂಡಿದೆ ಎಂದೂ ಕಾಂಗ್ರೆಸ್​ ಪಕ್ಷವನ್ನು ಪೀಠ ಪ್ರಶ್ನಿಸಿದೆ. ಶ್ರೀಧರ್ ಪ್ರಭು, ಅರ್ಜಿದಾರರ ಪರ ವಕೀಲರಾಗಿದ್ದರೆ ಸುಬ್ರಮಣ್ಯ ಅವರು ಸರ್ಕಾರದ ಪರ ಎಎಜಿ ಆಗಿದ್ದಾರೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ಮತ್ತು ನ್ಯಾ. ಸೂರಜ್ ಗೋವಿಂದರಾಜ್ ಅವರು ನ್ಯಾಯಪೀಠದಲ್ಲಿದ್ದಾರೆ.

ಒಂದು ಹಂತದಲ್ಲಿ ಸರ್ಕಾರದ ಪರ ಸಹಾಯಕ ಅಡ್ವೊಕೇಟ್​ ಜನರಲ್ (ಎಎಜಿ ) ಸುಬ್ರಮಣ್ಯ ಅವರು ಈಗಾಗಲೇ ಪಾದಯಾತ್ರೆ ನಡೆಸುವವರ ಮೇಲೆ ಮೂರು ಎಫ್ಐಆರ್ ದಾಖಲಿಸಿರುವುದಾಗಿ ಎಎಜಿ ಕೋರ್ಟ್​ಗೆ ಮಾಹಿತಿ ನೀಡಿದರು. ಅದಕ್ಕೆ ಸರ್ಕಾರ ಪಾದಯಾತ್ರೆ ತಡೆಯಲು ಅಸಮರ್ಥವಾಗಿದೆಯೇ? ಅನುಮತಿ ಕೊಟ್ಟಿಲ್ಲದಿದ್ದರೆ ಯಾರಿಗಾಗಿ ಕಾಯುತ್ತಿದ್ದೀರಿ? ಸರ್ಕಾರ ಸಂಪೂರ್ಣ ಅಸಮರ್ಥವಾಗಿದೆಯೇ? ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಿದ್ದರೂ ಅನುಮತಿ ಹೇಗೆ ಸಿಕ್ಕಿತು? ಹೈಕೋರ್ಟ್ ಆದೇಶದವರೆಗೆ ನೀವು ಕ್ರಮ ಕೈಗೊಳ್ಳುವುದಿಲ್ಲವೇ? ಎಂದು ಎಂದು ರಾಜ್ಯ ಸರ್ಕಾರವನ್ನು ಹೈಕೋರ್ಟ್ ವಿಭಾಗೀಯ ಪೀಠ ತರಾಟೆಗೆ ತೆಗೆದುಕೊಂಡಿದೆ.

ಮೇಕೆದಾಟು ಪಾದಯಾತ್ರೆ ವಿಚಾರದ ಬಗ್ಗೆ ಮಾಹಿತಿ ನೀಡವಂತೆ ಕೆಪಿಸಿಸಿಗೆ ಸಹ ಹೈಕೋರ್ಟ್ ಸೂಚನೆ ನೀಡಿದೆ. ಇದೇ ವೇಳೆ ವಿಚಾರಣೆಯನ್ನು ಜನವರಿ 14 ಕ್ಕೆ ಮುಂದೂಡಿದೆ. ರಾಜ್ಯ ಸರ್ಕಾರಕ್ಕೆ ಒಂದು ದಿನ ಕಾಲಾವಕಾಶ ನೀಡಿದ್ದೇವೆ. ಎಸ್ಒಪಿ ಜಾರಿಗೊಳಿಸಲು ಯಾವ ಕ್ರಮ ಕೈಗೊಳ್ಳಲಾಗಿದೆ. ಕೋವಿಡ್ ಬಿಗಡಾಯಿಸಿರುವ ವೇಳೆ ಪಾದಯಾತ್ರೆಗೆ ಅವಕಾಶ ಏಕೆ? ಎಂಬುದರ ಬಗ್ಗೆ ಉತ್ತರಿಸಲು ಸರ್ಕಾರಕ್ಕೆ ಕೋರ್ಟ್​ ತಾಕೀತು ಮಾಡಿದೆ.

ಮೇಕೆದಾಟು ಯೋಜನೆಗಾಗಿ ಕಾಂಗ್ರೆಸ್ ನಾಯಕರ ಪಾದಯಾತ್ರೆ ವಿರುದ್ಧ ರಾಜ್ಯ ಸರ್ಕಾರ ಕಣ್ಣುಮುಚ್ಚಿ ಕುಳಿತಿರುವ ಬಗ್ಗೆ ಹೈಕೋರ್ಟ್ ಆಕ್ಷೇಪ ವ್ತಕ್ತಪಡಿಸುತ್ತಿದ್ದಂತೆ ಗೃಹ ಸಚಿವ ಆರಗ ಜ್ಞಾನೇಂದ್ರ ವಿಕಾಸಸೌಧದಲ್ಲಿ ತುರ್ತು ಸಭೆ ಕರೆದಿದ್ದಾರೆ. ಡಿಜಿ ಮತ್ತು ಐಜಿಪಿ ಪ್ರವೀಣ್ ಸೂದ್, ಗೃಹ ಇಲಾಖೆ ಎಸಿಎಸ್​ ಸಭೆಯಲ್ಲಿ ಭಾಗಿಯಾಗಿದ್ದಾರೆ. ಹಿರಿಯ ಅಧಿಕಾರಿಗಳ ಜೊತೆ ತುರ್ತು ಸಭೆ ನಡೆಸಿ, ಮುಂದಿನ ಕ್ರಮದ ಕುರಿತು ಸಮಾಲೋಚನೆ ನಡೆಸಿದ್ದಾರೆ.

ಕಾಂಗ್ರೆಸ್‌ನವರೇ ಇಂದು ಪಾದಯಾತ್ರೆ ನಿಲ್ಲಿಸಬಹುದು, ಇಲ್ಲದಿದ್ದರೆ ನಾವು ಕ್ರಮಕೈಗೊಳ್ಳುತ್ತೇವೆ: ಹೈಕೋರ್ಟ್ ನಮಗೆ 1 ದಿನ ಕಾಲಾವಕಾಶ ಕೊಟ್ಟಿದೆ. ಹೈಕೋರ್ಟ್‌ಗೆ ಏನು ಉತ್ತರಿಸಬೇಕೆಂದು ಚರ್ಚಿಸುತ್ತಿದ್ದೇವೆ ಎಂದು ಸಭೆಯ ಬಳಿಕ ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ವಿರೋಧ ಪಕ್ಷಕ್ಕೂ ಹೈಕೋರ್ಟ್‌ ನೋಟಿಸ್ ನೀಡಿದೆ. ವಿಪಕ್ಷದ ಬಗ್ಗೆಯೂ ಕೋರ್ಟ್ ಅಷ್ಟೇ ಜೋರಾಗಿ ಮಾತಾಡಿದೆ. ಕಾಂಗ್ರೆಸ್‌ನವರೇ ಇಂದು ಪಾದಯಾತ್ರೆ ನಿಲ್ಲಿಸಬಹುದು. ಇಲ್ಲದಿದ್ದರೆ ನಾವು ಕ್ರಮಕೈಗೊಳ್ಳುತ್ತೇವೆ ಎಂದು ಕೋರ್ಟ್​ ಸೂಚನೆಯ ನಂತರ ಸಚಿವ ಆರಗ ಜ್ಞಾನೇಂದ್ರ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.

ಪ್ರತಿಭಟನೆ ಮಾಡುವುದು ಪ್ರಜೆಗಳ ಸಾಂವಿಧಾನಿಕ ಹಕ್ಕು ಎಂದ ಎಂ.ಬಿ.ಪಾಟೀಲ್​ ಹೈಕೋರ್ಟ್​ ಆಕ್ಷೇಪದ ಬಗ್ಗೆ ಬೆಂಗಳೂರಿನಲ್ಲಿ ಹೇಳಿಕೆ ನೀಡಿರುವ ಮಾಜಿ ಸಚಿವ ಎಂ.ಬಿ.ಪಾಟೀಲ್​ ಅವರು ಪ್ರತಿಭಟನೆ ಮಾಡುವುದು ಪ್ರಜೆಗಳ ಸಾಂವಿಧಾನಿಕ ಹಕ್ಕು. ಹೈಕೋರ್ಟ್​ ಆಕ್ಷೇಪದ ಬಗ್ಗೆ ನಾನು ಮಾತನಾಡುವುದಿಲ್ಲ. ಪಾದಯಾತ್ರೆಗೂ ಕಾವೇರಿ ಜಲವಿವಾದಕ್ಕೂ ಸಂಬಂಧವಿಲ್ಲ. ಕೆಪಿಸಿಸಿ ಕಾನೂನು ಘಟಕ ಕೋರ್ಟ್​ಗೆ ಉತ್ತರ ನೀಡುತ್ತೆ. ಕೊವಿಡ್ ನಿಯಮ ಪಾಲಿಸಿ ಪಾದಯಾತ್ರೆ ಮಾಡುತ್ತಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಸಿದ್ದರಾಮಯ್ಯನವರು ತಿಳಿಸಿದ್ದಾರೆ ಎಂದು ಎಂ.ಬಿ. ಪಾಟೀಲ್​ ಹೇಳಿದ್ದಾರೆ.

ಮೇಕೆದಾಟು ಪಾದಯಾತ್ರೆ ಬಗ್ಗೆ ಪಿಐಎಲ್ ವಿಚಾರಣೆ ವಿಚಾರದಲ್ಲಿ ನಮ್ಮನ್ನು 6ನೇ ಪ್ರತಿವಾದಿಯಾಗಿ ಮಾಡಿದ್ದಾರೆ. ನಾವು ಕೋರ್ಟ್ ಮುಂದೆ ಹಾಜರಾಗುತ್ತೇವೆ. ಯಾವ ತರಹ ನಡೆದುಕೊಳ್ಳಬೇಕೆಂದು ನಾಯಕರು ನಿರ್ಧರಿಸ್ತಾರೆ. ನಮಗೆ ಕೋರ್ಟ್ ಆದೇಶದ ಕಾಪಿ ಸಿಕ್ಕಿಲ್ಲ ಎಂದು ಕೆಪಿಸಿಸಿ ಕಾನೂನು ಘಟಕದ ಮುಖ್ಯಸ್ಥ ಪೊನ್ನಣ್ಣ ಹೇಳಿದ್ದಾರೆ.

ರಾಜ್ಯ ಬಿಜೆಪಿ ಸರ್ಕಾರಕ್ಕೆ ಬೆನ್ನುಮೂಳೆ ಇಲ್ಲ: ಟಿ.ಎ. ಶರವಣ ಆಕ್ರೋಶ ರಾಜ್ಯದಲ್ಲಿ ಕೊವಿಡ್ ಹೆಚ್ಚಲು 2 ರಾಷ್ಟ್ರೀಯ ಪಕ್ಷಗಳು ಕಾರಣವಾಗಿವೆ. ಜನರ ಜೀವನದ ಜತೆ ಚೆಲ್ಲಾಟವಾಡುತ್ತಿದ್ದಾರೆ. ಒಂದು ಕಡೆ ಕಾಂಗ್ರೆಸ್ ಪಾದಯಾತ್ರೆ ಮಾಡುತ್ತಿದೆ. ಮತ್ತೊಂದೆಡೆ ಬಿಜೆಪಿ ನಾಯಕರು ಸಭೆ, ಸಮಾರಂಭ ಮಾಡುತ್ತಿದ್ದಾರೆ. ಈ ರಾಜ್ಯ ಸರ್ಕಾರಕ್ಕೆ ಬೆನ್ನುಮೂಳೆ ಇಲ್ಲ ಎಂದು ಟಿವಿ9 ಜೊತೆ ಮಾತನಾಡುತ್ತಾ ಮಾಜಿ ಎಂಎಲ್‌ಸಿ ಟಿ.ಎ. ಶರವಣ ಆಕ್ರೋಶ ಹೊರಹಾಕಿದ್ದಾರೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada