ನಾನೂ ಮನುಷ್ಯನೇ ವಿನಃ ದೇವರಲ್ಲ, ತಪ್ಪಾಗುವುದು ಸಹಜ; ಪ್ರಧಾನಿ ಮೋದಿ ಹೀಗಂದಿದ್ದೇಕೆ?

|

Updated on: Jan 10, 2025 | 5:19 PM

ಜೆರೋಧಾ ಮುಖ್ಯಸ್ಥ ನಿಖಿಲ್ ಕಾಮತ್ ಅವರ ಪಾಡ್​ಕಾಸ್ಟ್​ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ರಾಜಕೀಯ ಜೀವನದಲ್ಲಿ ಉಂಟಾದ ಏಳು-ಬೀಳುಗಳು, ತಾವು ಮೊದಲ ಬಾರಿಗೆ ಪ್ರಧಾನಿಯಾದಾಗ ಎದುರಿಸಿದ ಸವಾಲುಗಳು, ಈ 10 ವರ್ಷಗಳಲ್ಲಿ ತಮ್ಮಲ್ಲಾಗಿರುವ ಬದಲಾವಣೆಗಳು ಹೀಗೆ ಹಲವು ವಿಷಯಗಳ ಬಗ್ಗೆ ಮಾತನಾಡಿದ್ದಾರೆ. ಅವುಗಳಲ್ಲಿ ಕೆಲವು ಮುಖ್ಯಾಂಶಗಳು ಇಲ್ಲಿವೆ.

ನಾನೂ ಮನುಷ್ಯನೇ ವಿನಃ ದೇವರಲ್ಲ, ತಪ್ಪಾಗುವುದು ಸಹಜ; ಪ್ರಧಾನಿ ಮೋದಿ ಹೀಗಂದಿದ್ದೇಕೆ?
Narendra Modi
Follow us on

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ತಮ್ಮ ಮೊದಲ ಪಾಡ್‌ಕ್ಯಾಸ್ಟ್​ನಲ್ಲಿ ರಾಜಕೀಯ ಮಾತ್ರವಲ್ಲದೆ ಖಾಸಗಿ ವಿಷಯಗಳು, ಕುಟುಂಬಸ್ಥರು, ಗೆಳೆಯರು ಹೀಗೆ ಹಲವಾರು ವಿಷಯಗಳನ್ನು ಮೆಲುಕು ಹಾಕಿದ್ದಾರೆ. ಜೆರೋಧಾ ಸಹ ಸಂಸ್ಥಾಪಕ ನಿಖಿಲ್ ಕಾಮತ್ ಅವರ ಜೊತೆ ಮೊದಲ ಬಾರಿಗೆ ಪಾಡ್​ಕಾಸ್ಟ್​ನಲ್ಲಿ ಪಾಲ್ಗೊಂಡಿರುವ ಪಿಎಂ ನರೇಂದ್ರ ಮೋದಿ ಒಳ್ಳೆಯ ಜನರು ರಾಜಕೀಯಕ್ಕೆ ಪ್ರವೇಶಿಸಬೇಕೆಂದು ಹೇಳಿದ್ದಾರೆ. ಎರಡು ಗಂಟೆಗಳ ಕಾಲ ನಡೆದ ಮಾತುಕತೆಯಲ್ಲಿ ಪ್ರಧಾನಿ ಮೋದಿ ತಮ್ಮ ಆರಂಭಿಕ ವರ್ಷಗಳು, ಶಿಕ್ಷಣ, ರಾಜಕೀಯ ಸ್ಪರ್ಧೆ, ಒತ್ತಡವನ್ನು ನಿಭಾಯಿಸುವುದು ಹೇಗೆ, ರಾಜಕೀಯದಲ್ಲಾದ ಹಿನ್ನಡೆಗಳು ಸೇರಿದಂತೆ ತಮ್ಮ ಜೀವನದ ವಿವಿಧ ಅಂಶಗಳನ್ನು ಹಂಚಿಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ‘ಪೀಪಲ್ ಬೈ ಡಬ್ಲ್ಯೂಟಿಎಫ್’ ಎಂಬ ಪಾಡ್‌ಕ್ಯಾಸ್ಟ್ ಸರಣಿಯಲ್ಲಿ ಅತಿಥಿಯಾಗಿ ಕಾಣಿಸಿಕೊಂಡಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ ತಮ್ಮ ಅವಧಿ, ಭಾರತದ ತಾಂತ್ರಿಕ ಪ್ರಗತಿ, ಸಾಮಾಜಿಕ ಮಾಧ್ಯಮ, ರಾಜಕೀಯ ಮತ್ತು ಉದ್ಯಮಶೀಲತೆಯ ಬಗ್ಗೆ ಎರಡು ಗಂಟೆಗಳ ಕಾಲ ನಡೆದ ಈ ಸಂಚಿಕೆ ಹಲವಾರು ವಿಷಯಗಳನ್ನು ಒಳಗೊಂಡಿತ್ತು.


“ಇದು ನನ್ನ ಮೊದಲ ಪಾಡ್‌ಕ್ಯಾಸ್ಟ್. ಈ ಜಗತ್ತು ನನಗೆ ಸಂಪೂರ್ಣವಾಗಿ ಹೊಸದು” ಎಂದು ಯುವ ಬಿಲಿಯನೇರ್ ನಿಖಿಲ್ ಕಾಮತ್ ಜೊತೆಗಿನ ಸಂಭಾಷಣೆಯ ಆರಂಭದಲ್ಲಿ ಪ್ರಧಾನಿ ಮೋದಿ ಹೇಳಿದ್ದಾರೆ.

ಇದನ್ನೂ ಓದಿ: ಪೋಡ್​​ಕ್ಯಾಸ್ಟ್ ಸೂಪರ್​ಸ್ಟಾರ್ ನಿಖಿಲ್ ಕಾಮತ್ ಜೊತೆ ಪ್ರಧಾನಿ ಮೋದಿ; ಟ್ರೇಲರ್ ಸದ್ದು; ಅಧಿಕೃತ ವಿಡಿಯೋ ಸದ್ಯದಲ್ಲೇ

ಇದಕ್ಕೆ ಪ್ರತಿಕ್ರಿಯಿಸಿದ ನಿಖಿಲ್ ಕಾಮತ್, ನೀವು ಹಿಂದಿ ಭಾಷೆಯಲ್ಲಿ ಬಹಳ ಪ್ರಬುದ್ಧತೆ ಹೊಂದಿದ್ದೀರಿ. ಆದರೆ, ನನ್ನ ಹಿಂದಿ ಭಾಷೆಯ ಬಳಕೆಯಲ್ಲಿ ತಪ್ಪಾದರೆ ಕ್ಷಮಿಸಿ. ಏಕೆಂದರೆ, ನನ್ನ ಮಾತೃಭಾಷೆ ಹಿಂದಿ ಅಲ್ಲ. ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ನನ್ನ ತಾಯಿ ಮೈಸೂರಿನವರು, ನನ್ನ ತಂದೆ ಮಂಗಳೂರಿನವರು. ಮನೆಯಲ್ಲಿ ಮಾತನಾಡುವ ಭಾಷೆ ಕನ್ನಡ. ಹೀಗಾಗಿ, ಹಿಂದಿಯಲ್ಲಿ ಶಾಲೆಯಲ್ಲಿ ಮಾತ್ರ ಕಲಿತವನು ನಾನು. ಆದ್ದರಿಂದ ಸರಿಯಾಗಿ ಹಿಂದಿ ಮಾತನಾಡದಿದ್ದರೆ ಕ್ಷಮಿಸಿ ಎಂದಿದ್ದಾರೆ.


ರಾಜಕೀಯ ಕೊಳಕು ಎಂಬುದು ನಿಜವೇ?:

ನಿಖಿಲ್ ಕಾಮತ್ ಪ್ರಧಾನಿ ಮೋದಿಯವರಿಗೆ ರಾಜಕೀಯದ ಕುರಿತಾಗಿ ಕೇಳಿದ ಪ್ರಶ್ನೆಯಲ್ಲಿ, ರಾಜಕೀಯವು ಕೊಳಕು ರಂಗ ಎಂದು ಭಾವಿಸುವವರಿಗೆ ತಮ್ಮ ಸಲಹೆ ಏನು? ಎಂದು ಕೇಳಿದರು. “ದಕ್ಷಿಣ ಭಾರತದ ಮಧ್ಯಮ ವರ್ಗದ ಮನೆಯಲ್ಲಿ ಬೆಳೆದ ನಮಗೆ ಯಾವಾಗಲೂ ರಾಜಕೀಯವೆಂದರೆ ಕೊಳಕು ಎಂದು ಹೇಳಲಾಗುತ್ತಿತ್ತು. ಈ ನಂಬಿಕೆ ನಮ್ಮ ಮನಸ್ಸಿನಲ್ಲಿ ಎಷ್ಟು ಬೇರೂರಿದೆ ಎಂದರೆ ಅದನ್ನು ಬದಲಾಯಿಸುವುದು ಅಸಾಧ್ಯ. ಇದೇ ರೀತಿ ಯೋಚಿಸುವ ಜನರಿಗೆ ನಿಮ್ಮ ಒಂದು ಸಲಹೆ ಏನು?” ಎಂದು ಕೇಳಿದರು.

ಅದಕ್ಕೆ ಉತ್ತರಿಸಿದ ಪ್ರಧಾನಿ ಮೋದಿ, “ನಿಮ್ಮ ಸುತ್ತಲಿನವರು ರಾಜಕೀಯದ ಬಗ್ಗೆ ಹೇಳಿದ್ದನ್ನು ನೀವು ನಂಬಿದ್ದರೆ, ನಾವು ಇಂದು ಈ ಸಂಭಾಷಣೆಯನ್ನು ನಡೆಸುತ್ತಿರಲಿಲ್ಲ” ಎಂದಿದ್ದಾರೆ.

ಇದನ್ನೂ ಓದಿ:  ಸಿಎಂ ಆದಾಗ ಗೆಳೆಯರನ್ನು ಸರ್ಕಾರಿ ನಿವಾಸಕ್ಕೆ ಆಹ್ವಾನಿಸಿದ್ದೆ; ನಿಖಿಲ್ ಕಾಮತ್ ಜೊತೆ ಪ್ರಧಾನಿ ಮೋದಿ ಮಾತುಕತೆ

ನಾನು ದೇವರಲ್ಲ:

ಇದೇ ವೇಳೆ, ಗುಜರಾತ್ ಮುಖ್ಯಮಂತ್ರಿಯಾಗಿದ್ದಾಗ ಅವರ ಹಳೆಯ ಭಾಷಣಗಳ ಬಗ್ಗೆ ಕೇಳಿದಾಗ, ಪ್ರಧಾನಿ ಮೋದಿ “ನಾನು ಸೂಕ್ಷ್ಮವಲ್ಲದ ರೀತಿಯಲ್ಲಿ ಕೆಲವು ಬಾರಿ ಮಾತನಾಡಿದ್ದೇನೆ. ತಪ್ಪುಗಳು ಸಂಭವಿಸುತ್ತವೆ. ಏಕೆಂದರೆ ನಾನು ಕೂಡ ಮನುಷ್ಯನೇ ವಿನಃ ದೇವರಲ್ಲ.” ಎಂದಿದ್ದಾರೆ.

“ನಾನು ಮುಖ್ಯಮಂತ್ರಿಯಾದಾಗ ನನ್ನ ಒಂದು ಭಾಷಣದಲ್ಲಿ, ನನ್ನ ಪ್ರಯತ್ನಗಳಲ್ಲಿ ಯಾವುದೇ ಕಲ್ಲನ್ನು ಬಿಡುವುದಿಲ್ಲ ಎಂದು ಹೇಳಿದ್ದೆ. ಎರಡನೆಯದಾಗಿ, ನಾನು ನನಗಾಗಿ ಏನನ್ನೂ ಮಾಡುವುದಿಲ್ಲ ಎಂದಿದ್ದೆ. ಮೂರನೆಯದಾಗಿ ನಾನು ಕೂಡ ಮನುಷ್ಯ, ನಾನು ತಪ್ಪುಗಳನ್ನು ಮಾಡಬಹುದು. ಆದರೆ ನಾನು ಕೆಟ್ಟ ಉದ್ದೇಶದಿಂದ ತಪ್ಪುಗಳನ್ನು ಮಾಡುವುದಿಲ್ಲ ಎಂದಿದ್ದೆ. ನಾನು ಅವುಗಳನ್ನು ನನ್ನ ಜೀವನದ ಮಂತ್ರಗಳನ್ನಾಗಿ ಮಾಡಿಕೊಂಡಿದ್ದೇನೆ. ತಪ್ಪುಗಳನ್ನು ಮಾಡುವುದು ಸಹಜ. ಏಕೆಂದರೆ ಎಲ್ಲರಂತೆ ನಾನು ಒಬ್ಬ ಮನುಷ್ಯ, ನಾನೇನು ದೇವರಲ್ಲ. ಆದರೆ ಉದ್ದೇಶಪೂರ್ವಕವಾಗಿ ತಪ್ಪು ಮಾಡುವುದಿಲ್ಲ” ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ