Mann Ki Baat: ಪ್ಲಾಸ್ಟಿಕ್ ತಂದುಕೊಡಿ, ಹೊಟ್ಟೆ ತುಂಬಾ ಊಟ ಮಾಡಿ, ಛತ್ತೀಸ್​ಗಢದ ವಿಶೇಷ ಕೆಫೆ ಬಗ್ಗೆ ಮೋದಿ ಪ್ರಸ್ತಾಪ

ಪ್ರಧಾನಿ ನರೇಂದ್ರ ಮೋದಿ ಈ ಬಾರಿ 127 ನೇ ಮನ್​ ಕಿ ಬಾತ್​ನಲ್ಲಿ ಹಲವು ವಿಚಾರಗಳ ಬಗ್ಗೆ ಚರ್ಚಿಸಿದ್ದಾರೆ. ಬೆಂಗಳೂರಿನ ಎಂಜಿನಿಯರ್, ಛತ್ ಪೂಜೆ, ಜಿಎಸ್​ಟಿ ಉಳಿತಾಯ ಉತ್ಸವ, ದೇಶೀಯ ನಾಯಿ ತಳಿ, ಮ್ಯಾಂಗ್ರೋವ್ ಕಾಡು ಹೀಗೆ ಹತ್ತು ಹಲವು ವಿಚಾರಗಳ ಕುರಿತು ಮಾತನಾಡಿದ್ದಾರೆ. ಕಳೆದ ಬಾರಿ, ಪ್ರಧಾನಿ ಮೋದಿ ಜನರು ಉತ್ಸವಕ್ಕಾಗಿ ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಂತೆ ಮನವಿ ಮಾಡಿದರು ಮತ್ತು ಸ್ವಾವಲಂಬಿ ಭಾರತದ ಬಗ್ಗೆ ಮಾತನಾಡಿದ್ದಾರೆ.ಒಂದು ಕಾಲದಲ್ಲಿ ಮಾವೋವಾದಿ ಭಯೋತ್ಪಾದನೆಯ ಕತ್ತಲೆಯಲ್ಲಿ ಮುಳುಗಿದ್ದ ಪ್ರದೇಶಗಳಲ್ಲಿಯೂ ಸಹ ಸಂತೋಷದ ದೀಪಗಳನ್ನು ಬೆಳಗಿಸಲಾಯಿತು. ಜನರು ತಮ್ಮ ಮಕ್ಕಳ ಭವಿಷ್ಯಕ್ಕೆ ಬೆದರಿಕೆಯೊಡ್ಡಿರುವ ಮಾವೋವಾದಿ ಭಯೋತ್ಪಾದನೆಗೆ ಸಂಪೂರ್ಣ ಅಂತ್ಯ ಹಾಡಲು ಬಯಸುತ್ತಾರೆ ಎಂದರು.

Mann Ki Baat: ಪ್ಲಾಸ್ಟಿಕ್ ತಂದುಕೊಡಿ, ಹೊಟ್ಟೆ ತುಂಬಾ ಊಟ ಮಾಡಿ, ಛತ್ತೀಸ್​ಗಢದ ವಿಶೇಷ ಕೆಫೆ ಬಗ್ಗೆ ಮೋದಿ ಪ್ರಸ್ತಾಪ
ಮನ್​ ಕಿ ಬಾತ್

Updated on: Oct 26, 2025 | 11:58 AM

ನವದೆಹಲಿ, ಅಕ್ಟೋಬರ್ 26: ಪ್ಲಾಸ್ಟಿಕ್ ತನ್ನಿ ಉಚಿತವಾಗಿ ಊಟ ಮಾಡಿ, ಛತ್ತೀಸ್​ಗಢದ ಈ ಕೆಫೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮನ್​ಕಿ ಬಾತ್​(Mann Ki Baat)ನಲ್ಲಿ ಪ್ರಸ್ತಾಪಿಸಿದ್ದಾರೆ. ಛತ್ತೀಸ್​ಗಢದ ಅಂಬಿಕಾ ಪುರದ ಬಗ್ಗೆ ಪ್ರಸ್ತಾಪಿಸಿದ್ದು, ಅಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಶೇಷ ಕೆಫೆಯ ಬಗ್ಗೆ ತಿಳಿಸಿದ್ದಾರೆ. ಛತ್ತೀಸ್‌ಗಢದ ಅಂಬಿಕಾಪುರದಲ್ಲಿ ಕೆಫೆಗಳನ್ನು ನಡೆಸಲಾಗುತ್ತಿದೆ, ಈ ಕೆಫೆಗಳಲ್ಲಿ ಪ್ಲಾಸ್ಟಿಕ್ ತ್ಯಾಜ್ಯವನ್ನು ತರುವ ಜನರಿಗೆ ಹೊಟ್ಟೆತುಂಬಾ ಊಟ ನೀಡುವ ವಿಶೇಷ ಕೆಫೆ ಇದು. ಒಂದು ಕೆಜಿ ಪ್ಲಾಸ್ಟಿಕ್ ಅನ್ನು ತರುವವರಿಗೆ ಮಧ್ಯಾಹ್ನದ ಊಟವನ್ನು ನೀಡಲಾಗುತ್ತದೆ. ಅರ್ಧ ಕೆಜಿ ತರುವವರಿಗೆ ಬೆಳಗ್ಗೆಯ ತಿಂಡಿಯನ್ನು ನೀಡಲಾಗುತ್ತದೆ. ಈ ಕೆಫೆಗಳನ್ನು ಅಂಬಿಕಾಪುರ ಮುನ್ಸಿಪಲ್ ಕಾರ್ಪೊರೇಷನ್ ನಡೆಸುತ್ತಿದೆ ಎಂದರು.

ರಿಯಾ ಎಂಬ ಶ್ವಾನವನ್ನು ಹೊಗಳಿದ ಮೋದಿ
ಕಳೆದ ವರ್ಷ ಲಕ್ನೋನಲ್ಲಿ ನಡೆದ ಅಖಿಲ ಭಾರತ ಪೊಲೀಸ್ ಕರ್ತವ್ಯ ಮೀಟ್​ನಲ್ಲಿ ರಿಯಾ ಎಂಬ ನಾಯಿ ಎಲ್ಲರ ಗಮನ ಸೆಳೆದಿತ್ತು. ಅದು ಬಿಎಸ್‌ಎಫ್‌ನಿಂದ ತರಬೇತಿ ಪಡೆದ ಮುಧೋಳ ಹೌಂಡ್.ರಿಯಾ ಅಲ್ಲಿ ಹಲವಾರು ವಿದೇಶಿ ತಳಿಗಳನ್ನು ಹಿಂದಿಕ್ಕಿ ಪ್ರಥಮ ಬಹುಮಾನವನ್ನು ಗೆದ್ದಿತು. ನಮ್ಮ ಸ್ಥಳೀಯ ನಾಯಿಗಳು ಸಹ ಅದ್ಭುತ ಧೈರ್ಯವನ್ನು ಪ್ರದರ್ಶಿಸಿವೆ. ಕಳೆದ ವರ್ಷ, ಛತ್ತೀಸ್‌ಗಢದ ಮಾವೋವಾದಿ ಪೀಡಿತ ಪ್ರದೇಶದಲ್ಲಿ ಗಸ್ತು ತಿರುಗುತ್ತಿದ್ದಾಗ, ಸ್ಥಳೀಯ ಸಿಆರ್‌ಪಿಎಫ್ ನಾಯಿಯೊಂದು 8 ಕಿಲೋಗ್ರಾಂಗಳಷ್ಟು ಸ್ಫೋಟಕಗಳನ್ನು ಪತ್ತೆಹಚ್ಚಿದೆ. ಈ ದಿಕ್ಕಿನಲ್ಲಿ ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್‌ನ ಪ್ರಯತ್ನಗಳಿಗಾಗಿ ನಾನು ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದರು. ಹಾಗೆಯೇ ಎಲ್ಲರೂ ಆದಷ್ಟು ದೇಶೀಯ ತಳಿಯ ನಾಯಿಗಳನ್ನೇ ಸಾಕಿ ಎಂದು ಸಲಹೆ ನೀಡಿದ್ದಾರೆ.

ಮ್ಯಾಂಗ್ರೋವ್ ಕಾಡಿದ ಮಹತ್ವ ತಿಳಿಸಿದ ಪ್ರಧಾನಿ ಮೋದಿ
ಪರ್ವತಗಳು ಮತ್ತು ಬಯಲು ಪ್ರದೇಶಗಳು ಮಣ್ಣನ್ನು ಹಿಡಿದಿಟ್ಟುಕೊಳ್ಳುವ ಕಾಡನ್ನು ಹೊಂದಿರುವಂತೆ, ಕರಾವಳಿಯಲ್ಲಿ ಮ್ಯಾಂಗ್ರೋವ್‌ಗಳು ಅಷ್ಟೇ ಮುಖ್ಯ.ಮ್ಯಾಂಗ್ರೋವ್‌ಗಳು ಉಪ್ಪುನೀರು ಮತ್ತು ಜೌಗು ಪ್ರದೇಶಗಳಲ್ಲಿ ಬೆಳೆಯುತ್ತವೆ ಮತ್ತು ಸಮುದ್ರ ಪರಿಸರ ವ್ಯವಸ್ಥೆಯ ಪ್ರಮುಖ ಭಾಗವಾಗಿದೆ. ಸುನಾಮಿಗಳು ಅಥವಾ ಚಂಡಮಾರುತಗಳಂತಹ ವಿಪತ್ತುಗಳ ಸಮಯದಲ್ಲಿ ಈ ಮ್ಯಾಂಗ್ರೋವ್‌ಗಳು ಬಹಳ ಸಹಾಯಕವಾಗಿವೆ ಎಂದರು.

ಮತ್ತಷ್ಟು ಓದಿ: Mann Ki Baat: ಛತ್ ಪೂಜೆಯನ್ನು ಯುನೆಸ್ಕೋ ಪಟ್ಟಿಯಲ್ಲಿ ಸೇರಿಸಲು ಸರ್ಕಾರ ಶ್ರಮ; ಮನ್ ಕಿ ಬಾತ್​​ನಲ್ಲಿ ಪ್ರಧಾನಿ ಮೋದಿ

ಸ್ವದೇಶಿ ವಸ್ತುಗಳ ಖರೀದಿಯಲ್ಲಿ ಏರಿಕೆ
ಜಿಎಸ್‌ಟಿ ಉಳಿತಾಯ ಉತ್ಸವದ ಬಗ್ಗೆ ಜನರು ಕೂಡ ತುಂಬಾ ಉತ್ಸುಕರಾಗಿದ್ದಾರೆ. ಈ ಹಬ್ಬದ ಋತುವಿನಲ್ಲಿ ಇದೇ ರೀತಿಯ ಸಂತೋಷದ ವಾತಾವರಣ ಕಂಡುಬಂದಿದೆ. ಮಾರುಕಟ್ಟೆಗಳಲ್ಲಿ ಸ್ಥಳೀಯ ವಸ್ತುಗಳ ಖರೀದಿಯಲ್ಲಿ ಅಗಾಧ ಏರಿಕೆ ಕಂಡುಬಂದಿದೆ. ನನ್ನ ಪತ್ರದಲ್ಲಿ, ಖಾದ್ಯ ತೈಲ ಬಳಕೆಯಲ್ಲಿ ಶೇ. 10 ರಷ್ಟು ಕಡಿತವನ್ನು ನಾನು ಒತ್ತಾಯಿಸಿದ್ದೇನೆ ಮತ್ತು ಜನರು ಇದಕ್ಕೆ ತುಂಬಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದರು.

ಆಪರೇಷನ್ ಸಿಂಧೂರ್ ಕುರಿತು ಪ್ರಧಾನಿ ಮೋದಿ ಮಾತು
ಆಪರೇಷನ್ ಸಿಂಧೂರ್ ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ತಂದಿದೆ ಎಂದು ಹೇಳಿದರು. ಈ ಬಾರಿ, ಒಂದು ಕಾಲದಲ್ಲಿ ಮಾವೋವಾದಿ ಭಯೋತ್ಪಾದನೆಯ ಕತ್ತಲೆಯಲ್ಲಿ ಮುಳುಗಿದ್ದ ಪ್ರದೇಶಗಳಲ್ಲಿಯೂ ಸಹ ಸಂತೋಷದ ದೀಪಗಳನ್ನು ಬೆಳಗಿಸಲಾಯಿತು. ಜನರು ತಮ್ಮ ಮಕ್ಕಳ ಭವಿಷ್ಯಕ್ಕೆ ಬೆದರಿಕೆಯೊಡ್ಡಿರುವ ಮಾವೋವಾದಿ ಭಯೋತ್ಪಾದನೆಗೆ ಸಂಪೂರ್ಣ ಅಂತ್ಯ ಹಾಡಲು ಬಯಸುತ್ತಿದ್ದಾರೆ.

ಎಂಜಿನಿಯರ್ ಕಪಿಲ್ ಶರ್ಮಾ ಅವರನ್ನು ಶ್ಲಾಘಿಸಿದ ಪ್ರಧಾನಿ ಮೋದಿ
ಛತ್ತೀಸ್‌ಗಢದ ಸಾಫ್ಟ್‌ವೇರ್ ಎಂಜಿನಿಯರ್ ಕಪಿಲ್ ಶರ್ಮಾ 18 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದವರು. ನಗರದಲ್ಲಿ ಕಡಿಮೆಯಾಗುತ್ತಿರುವ ಹಸಿರಿನ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು 2007 ರಲ್ಲಿ ವಾರಾಂತ್ಯದಲ್ಲಿ ಮರಗಳನ್ನು ನೆಡಲು ಪ್ರಾರಂಭಿಸಿದ್ದರು. ಅವರ ಹೋರಾಟ ಈಗ ಕೆರೆಗಳವರೆಗೆ ಬಂದು ನಿಂತಿದೆ. ನಗರದಲ್ಲಿ ಸರಿಯಾದ ನಿರ್ವಹಣೆ ಇಲ್ಲದೆ ಬತ್ತಿ ಹೋಗಿದ್ದ ಅಥವಾ ಯೋಗ್ಯವಲ್ಲದ ಕೆರೆಗಳನ್ನು ಪುನರುಜ್ಜೀವನಗೊಳಿಸುವ ಕೆಲಸ ಮಾಡುತ್ತಿದ್ದಾರೆ. ಕಪಿಲ್ ಶರ್ಮಾ ಅವರ ತಂಡವು ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ 40 ಬಾವಿಗಳು ಮತ್ತು ಆರು ಕೆರೆಗಳನ್ನು ಪುನರುಜ್ಜೀವನಗೊಳಿಸಿದೆ. ಗಮನಾರ್ಹವಾಗಿ, ಅವರು ಈ ಕಾರ್ಯಾಚರಣೆಯಲ್ಲಿ ನಿಗಮಗಳು ಮತ್ತು ಸ್ಥಳೀಯ ನಿವಾಸಿಗಳನ್ನು ಸಹ ತೊಡಗಿಸಿಕೊಂಡಿದ್ದಾರೆ. ಇವರನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.

ಭಾರತೀಯ ತಳಿಯ ನಾಯಿಗಳನ್ನು ದತ್ತು ಪಡೆಯಲು ಪ್ರಧಾನಿ ಮೋದಿ ಮನವಿ
ಸುಮಾರು ಐದು ವರ್ಷಗಳ ಹಿಂದೆ, ಈ ಕಾರ್ಯಕ್ರಮದಲ್ಲಿ ನಾನು ಭಾರತೀಯ ತಳಿಯ ನಾಯಿಗಳ ಬಗ್ಗೆ ಚರ್ಚಿಸಿದೆ. ನಮ್ಮ ದೇಶವಾಸಿಗಳು ಮತ್ತು ನಮ್ಮ ಭದ್ರತಾ ಪಡೆಗಳು ನಮ್ಮ ಪರಿಸರ ಮತ್ತು ಸನ್ನಿವೇಶಗಳಿಗೆ ಸುಲಭವಾಗಿ ಹೊಂದಿಕೊಳ್ಳುವುದರಿಂದ ಭಾರತೀಯ ತಳಿಯ ನಾಯಿಗಳನ್ನು ದತ್ತು ತೆಗೆದುಕೊಳ್ಳುವಂತೆ ನಾನು ಒತ್ತಾಯಿಸಿದೆ. ಬಿಎಸ್‌ಎಫ್ ಮತ್ತು ಸಿಆರ್‌ಪಿಎಫ್ ತಮ್ಮ ತಂಡಗಳಲ್ಲಿ ಭಾರತೀಯ ತಳಿಯ ನಾಯಿಗಳ ಸಂಖ್ಯೆಯನ್ನು ಹೆಚ್ಚಿಸಿವೆ ಎಂದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ