ಕಾಶಿ ವಿಶ್ವನಾಥ ಧಾಮ ಕಾರಿಡಾರ್(Kashi Vishwanath Dham corridor) ಮೊದಲ ಹಂತವನ್ನು ಇತ್ತೀಚೆಗಷ್ಟೇ ಪ್ರಧಾನಿ ಮೋದಿ (PM Modi) ಉದ್ಘಾಟನೆ ಮಾಡಿದ್ದಾರೆ. ವಾರಾಣಸಿಯಲ್ಲಿ ಕಾಶಿ ದೇಗುಲ ನವೀಕರಣದ ಬಗ್ಗೆ ವಿಶೇಷ ಆಸಕ್ತಿ, ಆಸ್ಥೆ ವಹಿಸಿರುವ ಪಿಎಂ ಮೋದಿ ಪುರಾತನ ನಗರ ಮತ್ತು ವಿಶ್ವನಾಥ ದೇವಾಲಯದ ವೈಭವ ಮತ್ತೆ ಮಾರ್ದನಿಸುವಂತೆ ಮಾಡಿದ್ದಾರೆ. ಅಲ್ಲಿ ಇನ್ನೂ ಕೂಡ ಕೆಲಸ ನಡೆಯುತ್ತಿದೆ. ಆದರೆ ಈ ಮಧ್ಯೆ ಒಂದು ಸೂಕ್ಷ್ಮ ವಿಷಯವನ್ನು ಗಮನಿಸಿದ ಪ್ರಧಾನಿ ಮೋದಿ, ಮಹತ್ವದ ಕೆಲಸ ಮಾಡಿದ್ದಾರೆ.
ಕಾಶಿ ವಿಶ್ವನಾಥ ದೇಗುಲದ ಆವರಣದಲ್ಲಿ ಯಾರೊಬ್ಬರೂ ರಬ್ಬರ್ ಅಥವಾ ಚರ್ಮದ ಪಾದರಕ್ಷೆ (ಚಪ್ಪಲಿ)ಯನ್ನು ಧರಿಸುವಂತಿಲ್ಲ. ಅರ್ಚಕರಾಗಲಿ, ದೇವರ ದರ್ಶನಕ್ಕೆ ಹೋಗುವ ಭಕ್ತರಾಗಲಿ, ಭದ್ರತಾ ಸಿಬ್ಬಂದಿಯೇ ಆಗಲಿ ಅಥವಾ ಸ್ವಚ್ಛತೆಗಾಗಿ ಹೋಗುವವರೇ ಆಗಲಿ, ಯಾರೂ ಸಹ ಪಾದರಕ್ಷೆ ಧರಿಸಿ ದೇಗುಲದ ಆವರಣದೊಳಗೆ ಕಾಲಿಡಬಾರದು. ಹೀಗಾಗಿ ಅಲ್ಲಿ ಅಭಿವೃದ್ಧಿ ಕಾರ್ಯ ಮಾಡುತ್ತಿರುವ ಕಾರ್ಮಿಕರು ಬರಿಗಾಲಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಇದನ್ನು ಗಮನಿಸಿ, ಅವರ ಕಷ್ಟವನ್ನು ಅರ್ಥ ಮಾಡಿಕೊಂಡ ಪ್ರಧಾನಿ ಸುಮಾರು 100 ಜೊತೆ ಸೆಣಬಿನ ಪಾದರಕ್ಷೆಗಳನ್ನು ಕಾರ್ಮಿಕರಿಗಾಗಿ ಕಳಿಸಿಕೊಟ್ಟಿದ್ದಾರೆ. ಈಗ ವಿಪರೀತ ಚಳಿ ಬೀಳುತ್ತಿದೆ. ಅದರಲ್ಲೂ ನಿರ್ಮಾಣ ಕಾಮಗಾರಿಗಳನ್ನು ಪಾದರಕ್ಷೆ ಇಲ್ಲದೆ ಮಾಡುವುದು ತುಸು ಕಷ್ಟವೂ ಹೌದು. ಇದನ್ನೆಲ್ಲ ಗಮನಿಸಿದ ದೇಶದ ಪ್ರಧಾನಮಂತ್ರಿ 100 ಜೊತೆ ಸೆಣಬಿನ ಪಾದರಕ್ಷೆ ಕಳಿಸಿಕೊಟ್ಟಿದ್ದಾರೆ. ಈ ಮೂಲಕ ತಾವು ಪ್ರಧಾನಮಂತ್ರಿಯಲ್ಲ, ಪ್ರಧಾನ ಸೇವಕ ಎಂಬುದನ್ನು ಮತ್ತೊಮ್ಮೆ ಸಾಕ್ಷೀಕರಿಸಿದ್ದಾರೆ. ಪ್ರಧಾನಿ ಕಳಿಸಿಕೊಟ್ಟ ಪಾದರಕ್ಷೆ ನೋಡಿ, ಅಲ್ಲಿನ ಕಾರ್ಮಿಕರು ಸಿಕ್ಕಾಪಟೆ ಸಂತೋಷ ವ್ಯಕ್ತಪಡಿಸಿದ್ದಾರೆ ಎಂದು ಕೇಂದ್ರ ಸರ್ಕಾರದ ಮೂಲಗಳು ತಿಳಿಸಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಬಡವರಿಗಾಗಿ ಅದೆಷ್ಟೋ ಅಭಿವೃದ್ಧಿ ಯೋಜನೆಗಳನ್ನು ತಂದಿದ್ದಾರೆ. ತಳಮಟ್ಟದ ವರ್ಗವೆಂದರೆ ಅದೇನೋ ಪ್ರೀತಿ ಅವರಿಗೆ. ಈ ಹಿಂದೆ 2019ರಲ್ಲಿ ಪ್ರಯಾಗ್ರಾಜ್ನಲ್ಲಿ ನಡೆದಿದ್ದ ಕುಂಭಮೇಳದ ವೇಳೆ, ಪ್ರಧಾನಿ ಮೋದಿ ಪೌರ ಕಾರ್ಮಿಕರ ಪಾದಪೂಜೆ ಮಾಡಿ, ನಂತರ ಅವರನ್ನು ಸನ್ಮಾನಿಸಿದ್ದರು. ಇತ್ತೀಚೆಗೆ ಕಾಶಿ ವಿಶ್ವನಾಥ ಧಾಮ ಕಾರಿಡಾರ್ ಉದ್ಘಾಟನೆ ಮಾಡಲು ಹೋಗಿದ್ದಾಗ, ಅದರ ನಿರ್ಮಾಣ ಮಾಡಿದ್ದ ಕಾರ್ಮಿಕರೊಟ್ಟಿಗೆ ಕುಳಿತು ಊಟ ಮಾಡಿದ್ದರು. ಅಷ್ಟೇ ಅಲ್ಲ, ಅವರನ್ನೆಲ್ಲ ಒಂದೆಡೆ ಕೂರಿಸಿಕೊಂಡು ಪ್ರತಿಯೊಬ್ಬರ ಬಳಿಯೂ ಹೋಗಿ, ಅವರ ಮೇಲೆ ಗುಲಾಬಿ ಹೂವುಗಳ ಎಸಳುಗಳನ್ನು ಚೆಲ್ಲುವ ಮೂಲಕ ಗೌರವ ಸಲ್ಲಿಸಿದ್ದರು.
ಇದನ್ನೂ ಓದಿ: Novak Djokovic: ಜೊಕೊವಿಕ್ ಗಡಿಪಾರು ತೀರ್ಪಿಗೆ ಆಸ್ಟ್ರೇಲಿಯಾ ನ್ಯಾಯಾಧೀಶರಿಂದ ಮಧ್ಯಂತರ ತಡೆಯಾಜ್ಞೆ
Published On - 12:09 pm, Mon, 10 January 22