ಕೊವಿಡ್-19 ಮೂರನೇ ಅಲೆ ಮಕ್ಕಳನ್ನು ಗುರಿಯಾಗಿಸಲಿರುವುದರಿಂದ ಹೆಚ್ಚು ಜಾಗರೂಕರಾಗಿರುವಂತೆ ಅಧಿಕಾರಿಗಳಿಗೆ ಪ್ರಧಾನಿ ಸೂಚನೆ

| Updated By: ರಾಜೇಶ್ ದುಗ್ಗುಮನೆ

Updated on: May 20, 2021 | 7:15 PM

ಕೊವಿಡ್ ವಿರುದ್ದ ರಕ್ಷಣಾ ಕವಚವಾಗಿರುವ ಲಸಿಕೆಯನ್ನು ಉಪಯೋಗಿಸದೆ ಹಾಳು ಮಾಡುವುದು ಅಕ್ಷಮ್ಯ ಎಂದು ಹೇಳಿದ ಪ್ರಧಾನಿಗಳು, ಹಾಗೆ ಹಾಳಾಗುವ ಲಸಿಕೆಯ ಪ್ರತಿ ಡೋಸ್ ಒಬ್ಬ ವ್ಯಕ್ತಿ ಸೋಂಕಿನಿಂದ ರಕ್ಷಣೆ ಪಡೆಯುವಲ್ಲಿ ವಂಚಿತನಾಗುವಂತೆ ಮಾಡುತ್ತದೆ ಎಂದರು.

ಕೊವಿಡ್-19 ಮೂರನೇ ಅಲೆ ಮಕ್ಕಳನ್ನು ಗುರಿಯಾಗಿಸಲಿರುವುದರಿಂದ ಹೆಚ್ಚು ಜಾಗರೂಕರಾಗಿರುವಂತೆ ಅಧಿಕಾರಿಗಳಿಗೆ ಪ್ರಧಾನಿ ಸೂಚನೆ
ಪ್ರಧಾನ ಮಂತ್ರಿ ನರೇಂದ್ರ ಮೋದಿ
Follow us on

ನವದೆಹಲಿ: ಮುಂಬರಲಿರುವ ಕೊವಿಡ್-19 ಸೋಂಕಿನ ಮೂರನೇ ಅಲೆ ಪ್ರಾಯದವರು ಮತ್ತು ಮಕ್ಕಳನ್ನು ಹೆಚ್ಚು ಗುರಿಯಾಗಿಸಲಿದೆ ಎಂದು ತಜ್ಞರು ಎಚ್ಚರಿಸುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗುರುವಾರದಂದು ಬೇರೆ ಬೇರೆ ಜಿಲ್ಲೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಎರಡನೇ ಅಲೆಯಲ್ಲಿ ಸೋಂಕಿಗೊಳಗಾಗಿರುವ ಮಕ್ಕಳ ವಿವರಗಳನ್ನು ಸಂಗ್ರಹಿಸಿಟ್ಟುಕೊಳ್ಳುವಂತೆ ಹೇಳಿದರಲ್ಲದೆ ಕೊವಿಡ್ ಲಸಿಕೆ ಹಾಳಾಗದಂತೆ ಕ್ರಮ ತೆಗೆದುಕೊಳ್ಳಲು ತಿಳಿಸಿದರು. ‘ಉಪಯೋಗಿಸದೆ ಹಾಳಾಗುವ ಪ್ರತಿ ಲಸಿಕೆಯು ಯಾರೋ ಒಬ್ಬರಿಗೆ ಅದರಿಂದ ರಕ್ಷಣೆ ಪಡೆದುಕೊಳ್ಳುವ ಅವಕಾಶವನ್ನು ಕಸಿಯುತ್ತದೆ’ ಅಂತ ಪ್ರಧಾನಿಗಳು ಈ ಸಂದರ್ಭದಲ್ಲಿ ಹೇಳಿದರು.

ಕೊರೊನಾ ವೈರಸ್​ ಅನ್ನು ಹಿಂದಿಯಲ್ಲಿ ‘ಧೂರ್ತ್’ ಮತ್ತು ‘ಬಹುರೂಪಿಯಾ’ ಎಂದು ಬಣ್ಣಿಸಿದ ಪ್ರಧಾನಿಗಳು, ಗುರುವಾರದಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಫೀಲ್ಡ್ ಅಧಿಕಾರಿಗಳೊಂದಿಗೆ ನಡೆಸಿದ ಸಭೆಯಲ್ಲಿ ಮೂರನೇ ಅಲೆಯು ಯುವಕರು ಮತ್ತು ಮಕ್ಕಳನ್ನು ಅಪಾಯಕ್ಕೆ ಸಿಲುಕಿಸುವ ಬಗ್ಗೆ ಬೇರೆ ಬೇರೆ ವಲಯಗಳಿಂದ ವ್ಯಕ್ತವಾಗುತ್ತಿರುವ ಕಳವಳವನ್ನು ಒತ್ತಿ ಹೇಳಿದರು.‘ಕೊರೊನಾ ವೈರಸ್ ರೂಪಾಂತರ ಹೊಂದುತ್ತಿರುವುದರಿಂದ ಮಕ್ಕಳು ಮತ್ತು ಪ್ರಾಯಸ್ಥರ ಬಗ್ಗೆ ಹೆಚ್ಚು ಕಳವಳ ವ್ಯಕ್ತವಾಗುತ್ತಿದೆ. ಹಾಗಾಗಿ ಅದನ್ನು ಎದುರಿಸಲು ಸರ್ವ ಸನ್ನದ್ಧರಾಗಿರಬೇಕು,’ ಎಂದು ಪ್ರಧಾನಿ ಮೋದಿ ಹೇಳಿದರು.

ಕೊವಿಡ್ ವಿರುದ್ದ ರಕ್ಷಣಾ ಕವಚವಾಗಿರುವ ಲಸಿಕೆಯನ್ನು ಉಪಯೋಗಿಸದೆ ಹಾಳು ಮಾಡುವುದು ಅಕ್ಷಮ್ಯ ಎಂದು ಹೇಳಿದ ಪ್ರಧಾನಿಗಳು, ಹಾಗೆ ಹಾಳಾಗುವ ಲಸಿಕೆಯ ಪ್ರತಿ ಡೋಸ್ ಒಬ್ಬ ವ್ಯಕ್ತಿ ಸೋಂಕಿನಿಂದ ರಕ್ಷಣೆ ಪಡೆಯುವಲ್ಲಿ ವಂಚಿತನಾಗುವಂತೆ ಮಾಡುತ್ತದೆ ಎಂದರು.

‘ಲಸಿಕೆ ಹಾಳಾಗುತ್ತಿರುವ ಸಂಗತಿ ದೊಡ್ಡ ಸಮಸ್ಯೆಯಾಗಿದೆ. ಲಸಿಕೆಗಳನ್ನು ನಿಮ್ಮಲ್ಲಿಗೆ ತಲುಪಿದ ನಂತರ ಅವು ಹಾಳಾಗದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿಯಾಗಿದೆ. ನಗರ ಮತ್ತು ಗ್ರಾಮೀಣ ಪ್ರದೇಶ ಎರಡೂ ಕಡೆಗಳಲ್ಲಿ ಲಸಿಕೆಗಳ ಸದುಪಯೋಗವಾಗುತ್ತಿರುವುದನ್ನು ನೀವು ಖಚಿತಪಡಿಸಿಕೊಳ್ಳಬೇಕು ಮತ್ತು ನಿರಂತರವಾಗಿ ಮಾನಿಟರ್ ಮಾಡಬೇಕು. ಲಸಿಕೆಗಳು ಹಾಳಾಗದಂತೆ ನೋಡಿಕೊಳ್ಳುವುದು ಅತ್ಯಂತ ನಿರ್ಣಾಯಕವಾಗಿದೆ ಮತ್ತು ನೀವು ಬಹಳ ಎಚ್ಚರಿಕೆಯಿಂದ ಇದನ್ನು ಗಮನಿಸಬೇಕು,’ ಎಂದು ಪ್ರಧಾನಿ ಮೋದಿ ತಾಕೀತು ಮಾಡಿದರು.

‘ಅಸದೃಶ್ಯವಾಗಿರುವ ಕೊರೊನಾ ವೈರಸ್ ತನ್ನ ರೂಪವನ್ನು ಬದಲಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಅದನ್ನು ಎದುರಿಸಲು ನಮ್ಮ ತಂತ್ರಗಾರಿಕೆ ಡೈನಮಿಕ್ ಆಗಿರಬೇಕು ಮತ್ತು ಅದನ್ನು ನಿರಂತರವಾಗಿ ಅಪ್​ಗ್ರೇಡ್​ ಮಾಡುತ್ತಿರಬೇಕು. ಈ ವೈರಸ್ ನಿಮ್ಮ ಕೆಲಸವನ್ನು ಮತ್ತಷ್ಟು ಜಟಿಲಗೊಳಿಸಿದೆ ಮತ್ತು ಹೆಚ್ಚಿನ ಸವಾಲನ್ನೊಡ್ಡಿದೆ. ಈ ಹೊಸ ಸವಾಲುಗಳ ನಡುವೆ ನಮಗೆ ಹೊಸ ರಣನೀತಿ ಮತ್ತ ಉಪಾಯಗಳ ಅಗತ್ಯವಿದೆ. ಸ್ಥಳೀಯ ಅನುಭವವನ್ನು ಉಪಯೋಗಿಸಿಕೊಳ್ಳುವುದು ಬಹಳ ಮುಖ್ಯವಾಗಿದೆ ಮತ್ತು ನಾವು ಒಂದು ದೇಶವಾಗಿ ವೈರಸ್ ವಿರುದ್ಧ ಹೋರಾಡಬೇಕಿದೆ,’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಬುಧವಾರದಂದು ಕೆಲ ಜಿಲ್ಲೆಗಳ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದ ಪ್ರಧಾನಿಗಳು, ಕೆಲವು ರಾಜ್ಯಗಳಲ್ಲಿ ಕೊವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಜಾಗರೂಕರಾಗಿರಬೇಕು ಎಂದು ಹೇಳಿದ್ದರು.

ರಾಜ್ಯ ಮತ್ತು ಜಿಲ್ಲೆಗಳ ಹಂತದ ಅಧಿಕಾರಿಗಳನ್ನು ‘ಫೀಲ್ಡ್ ಕಮಾಂಡರ್​ಗಳೆಂದು’ ಬಣ್ಣಿಸಿ, ಕೊವಿಡ್-19 ಮಾಹಾಮಾರಿಯ ವಿರುದ್ಧ ಜಾರಿಯಲ್ಲಿರುವ ಯುದ್ಧದಲ್ಲಿ ಪ್ರತಿ ಜೀವವನ್ನು ಉಳಿಸಲು ಹೋರಾಡಬೇಕು ಎಂದು ಹೇಳಿದರು. ವೈರಸ್ ವಿರುದ್ಧ ಉಫಯೋಗಿಸಬೇಕಿರುವ ಆಯುಧಗಳನ್ನು ಅವರು ಪಟ್ಟಿ ಮಾಡಿ ಹೇಳಿದ್ದರು: ಸ್ಥಳೀಯ ಕಂಟೇನ್​ಮೆಂಟ್ ವಲಯಗಳು, ತೀವ್ರ ಸ್ವರೂಪದ ಟೆಸ್ಟಿಂಗ್ ಮತ್ತು ಜನರಿಗೆ ಮಾಹಾಮಾರಿ ಬಗ್ಗೆ ಜನರು ಸರಿಯಾದ ಮತ್ತು ಸಮಗ್ರ ಮಾಹಿತಿ ಹೊಂದಿರುವಂತೆ ನೋಡಿಕೊಳ್ಳವುದು.

ಇದನ್ನೂ ಓದಿ: Narendra Modi: ಮೋದಿಯಿಂದಾಗಿ ಜಪಾನ್​ನಲ್ಲಿ ಕೊರೊನಾ 2ನೇ ಅಲೆ ಶುರು ಆಗಿದ್ಯಾ? ಕಂಗನಾ ಖಡಕ್​ ಪ್ರಶ್ನೆ