ನಿನ್ನೆ ರೋಮ್ಗೆ ತೆರಳಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಇಂದು ಜಿ20 ಶೃಂಗಸಭೆ (G20 Summit)ಯಲ್ಲಿ ಮಾತನಾಡಲಿದ್ದಾರೆ. ಕೊರೊನಾ ಸಾಂಕ್ರಾಮಿಕದಿಂದ ಜಾಗತಿಕ ಆರ್ಥಿಕ ಮತ್ತು ಆರೋಗ್ಯ ಚೇತರಿಕೆ, ಸುಸ್ಥಿರ ಅಭಿವೃದ್ಧಿ ಮತ್ತು ಹವಾಮಾನ ಬದಲಾವಣೆ ಎಂಬ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ. ನರೇಂದ್ರ ಮೋದಿಯವರು ನಿನ್ನೆ ರೋಮ್ಗೆ ತೆರಳಿದ ಬಳಿಕ ಮೊದಲು ಮಹಾತ್ಮ ಗಾಂಧಿ ಪ್ರತಿಮೆಗೆ ಗೌರವ ಸಲ್ಲಿಸಿದ್ದಾರೆ. ಬಳಿಕ ಟ್ವೀಟ್ ಮಾಡಿ, ಲಕ್ಷಾಂತರ ಜನರಿಗೆ ಸ್ಫೂರ್ತಿಯ ಸೆಲೆಯಾಗಿರುವ ಮಹಾತ್ಮ ಗಾಂಧಿಗೆ ಗೌರವ ಸಲ್ಲಿಸಲು ನನಗೆ ರೋಮ್ನಲ್ಲಿ ಅವಕಾಶ ಸಿಕ್ಕಿದೆ ಎಂದು ಹೇಳಿದ್ದರು. ಅವರು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಚಾರ್ಲ್ಸ್ ಮೈಕೆಲ್ ಮತ್ತು ಯುರೋಪಿಯನ್ ಕಮಿಷನ್ ಅಧ್ಯಕ್ಷ ಉರ್ಸುಲಾ ವಾನ್ ಡೆರ್ ಲೇಯೆನ್ರೊಂದಿಗೆ ಕೂಡ ಮಾತುಕತೆ ನಡೆಸಿದರು.
ಜಿ20 ಶೃಂಗಸಭೆಯಲ್ಲಿ ಮಾತನಾಡಿದ ಬಳಿಕ ಪ್ರಧಾನಿ ಮೋದಿ ವ್ಯಾಟಿಕನ್ ಸಿಟಿಗೆ ಭೇಟಿಕೊಡಲಿದ್ದಾರೆ. ಪೋಪ್ ಫ್ರಾನ್ಸಿಸ್ ಮತ್ತು ವಿದೇಶಾಂಗ ಕಾರ್ಯದರ್ಶಿ ಕಾರ್ಡಿನಲ್ ಪಿಯೆಟ್ರೋ ಪರೋಲಿನ್ರನ್ನು ಭೇಟಿ ಮಾಡುವರು. ಕೊವಿಡ್ 19 ಸಾಂಕ್ರಾಮಿಕ ಕಾಲಿಟ್ಟ ಮೇಲೆ ಇದೇ ಮೊದಲ ಜಿ20 ಶೃಂಗಸಭೆ ನಾಯಕರ ಭಾಗವಹಿಸುವಿಕೆಯಲ್ಲಿ ನಡೆಯುತ್ತಿದೆ. ನಿನ್ನೆ ಬೆಳಗ್ಗೆ ಇಟಲಿಗೆ ಹೋಗಿ ಇಳಿದ ಪ್ರಧಾನಿ ಮೋದಿಯವರನ್ನು ಅಲ್ಲಿರುವ ಭಾರತೀಯರು ಮಂತ್ರ ಪಠಿಸಿ ಸ್ವಾಗತಿಸಿದ್ದಾರೆ. ಇಟಲಿಗೆ ಹೋಗುವ ಪೂರ್ವದಲ್ಲಿ ಮಾತನಾಡಿದ್ದ ಅವರು, ಸದ್ಯದ ಜಾಗತಿಕ ಪರಿಸ್ಥಿತಿಯ ಬಗ್ಗೆ ಚರ್ಚಿಸಲು ಈ ಜಿ20 ಶೃಂಗಸಭೆ ನಮಗೆ ವೇದಿಕೆಯಾಗಿದೆ. ಹಾಗೇ, ಆರ್ಥಿಕ ಸಬಲೀಕರಣ, ಸಾಂಕ್ರಾಮಿಕದಿಂದ ಉಂಟಾಗಿರುವ ಅವ್ಯವಸ್ಥೆಯನ್ನು ಸರಿಪಡಿಸಲು, ಸ್ಥಿತಿಸ್ಥಾಪಕತ್ವ ಅಭಿವೃದ್ಧಿ ಸ್ಥಾಪಿಸಲು ಜಿ20 ಹೇಗೆ ಎಂಜಿನ್ ಆಗಬಹುದು ಎಂಬುದನ್ನು ನಾವು ಚರ್ಚಿಸಲಿದ್ದೇವೆ ಎಂದು ಹೇಳಿದ್ದರು.
ಬೆಂಗಳೂರು ವಿವಿ ಪರೀಕ್ಷೆಯಲ್ಲಿ ಯಾವುದೇ ಬದಲಾವಣೆ ಇಲ್ಲ: ಅ.30ಕ್ಕೆ 4ನೇ ಸೆಮಿಸ್ಟರ್ ಕೊನೆಯ ಪರೀಕ್ಷೆ