PM Modi Speech: ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಮಲ ಅರಳಿದೆ; ಬಂಗಾಳದ ಗೆಲುವು ಐತಿಹಾಸಿಕವೆಂದ ಪ್ರಧಾನಿ ಮೋದಿ 

ಪ್ರಧಾನಿ ಮೋದಿ ಭಾಷಣ: ಪಶ್ಚಿಮ ಬಂಗಾಳ, ಪುದುಚೇರಿ ಮತ್ತು ಅಸ್ಸಾಂನಲ್ಲಿ ಬಿಜೆಪಿ ಭಾರೀ ಗೆಲುವು ಸಾಧಿಸಿದೆ. ಐದು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಮೂರು ರಾಜ್ಯಗಳಲ್ಲಿ ಗೆಲುವು ಕಂಡಿರುವ ಬಿಜೆಪಿ ವಿಜಯೋತ್ಸವದ ಸಂಭ್ರಮದಲ್ಲಿದೆ. ಈ ವೇಳೆ ದೆಹಲಿಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಿಜೆಪಿ ಕಾರ್ಯಕರ್ತರು ಮತ್ತು ಬಿಜೆಪಿಯ ಗೆಲುವಿಗೆ ಕಾರಣರಾದ ಮತದಾರರನ್ನು ಉದ್ದೇಶಿಸಿ ಭಾಷಣ ಮಾಡಿದ್ದಾರೆ. ಪಶ್ಚಿಮ ಬಂಗಾಳದ ಗೆಲುವು ಐತಿಹಾಸಿಕ ಗೆಲುವು ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದಾರೆ.

PM Modi Speech: ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಮಲ ಅರಳಿದೆ; ಬಂಗಾಳದ ಗೆಲುವು ಐತಿಹಾಸಿಕವೆಂದ ಪ್ರಧಾನಿ ಮೋದಿ 
Pm Modi In Bjp Head Office
Image Credit source: PTI

Updated on: May 04, 2026 | 8:00 PM

ನವದೆಹಲಿ, ಮೇ 4: ಮೂರು ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಿಜೆಪಿಯ ಗೆಲುವನ್ನು ಸಂಭ್ರಮಿಸಲು ನವದೆಹಲಿಯ ಭಾರತೀಯ ಜನತಾ ಪಕ್ಷದ ಪ್ರಧಾನ ಕಚೇರಿಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಬಂಗಾಳಿ ಧೋತಿ ಧರಿಸಿ ಬಂದ ಪ್ರಧಾನಿ ಮೋದಿ ಕಾರಿನಿಂದ ಕೆಳಗೆ ಇಳಿಯುತ್ತಿದ್ದಂತೆ ಇಡೀ ಆವರಣದ ಸುತ್ತ “ಮೋದಿ, ಮೋದಿ!” ಎಂಬ ಘೋಷಣೆಗಳು ಪ್ರತಿಧ್ವನಿಸಿತು. ಪ್ರಧಾನಿ ಮೋದಿ “ಭಾರತ್ ಮಾತಾ ಕಿ ಜೈ” ಎಂಬ ಘೋಷಣೆಯೊಂದಿಗೆ ತಮ್ಮ ಭಾಷಣವನ್ನು ಪ್ರಾರಂಭಿಸಿದರು. ಇಂದು ಐತಿಹಾಸಿಕ ಮತ್ತು ಅಭೂತಪೂರ್ವ ದಿನ ಎಂದ ಅವರು ಈ ಗೆಲುವಿಗೆ ಕಾರಣರಾದ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸಿದರು.

ಪಶ್ಚಿಮ ಬಂಗಾಳದಲ್ಲಿ ಮೊದಲ ಬಾರಿ ಬಿಜೆಪಿ ಗೆಲುವು ಸಾಧಿಸಿದ ಕುರಿತು ಮಾತನಾಡಿದ ಪ್ರಧಾನಿ ಮೋದಿ, “ತಲೆಮಾರುಗಳಿಂದ ಅಸಂಖ್ಯಾತ ಕಾರ್ಯಕರ್ತರ ಪ್ರಯತ್ನ ಮತ್ತು ಹೋರಾಟಗಳಿಲ್ಲದೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ದಾಖಲೆಯ ಗೆಲುವು ಸಾಧ್ಯವಾಗುತ್ತಿರಲಿಲ್ಲ. ನಾನು ಅವರೆಲ್ಲರನ್ನೂ ವಂದಿಸುತ್ತೇನೆ. ಹಲವು ವರ್ಷಗಳಿಂದ ಅವರು ಎಲ್ಲಾ ರೀತಿಯ ತೊಂದರೆಗಳನ್ನು ನಿವಾರಿಸಿಕೊಂಡು, ಪಕ್ಷದ ಅಭಿವೃದ್ಧಿಗೆ ತಳಮಟ್ಟದಲ್ಲಿ ಶ್ರಮಿಸಿದ್ದಾರೆ. ಅವರು ನಮ್ಮ ಪಕ್ಷದ ಶಕ್ತಿ” ಎಂದು ಹೇಳಿದ್ದಾರೆ.


ಇದನ್ನೂ ಓದಿ: PM Modi Speech Live ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೇರಿ ಗೆದ್ದ ಬಿಜೆಪಿ, ಮೋದಿ ಭಾಷಣದ ನೇರಪ್ರಸಾರ

“ಗಂಗಾ ಮಾತೆಯ ಜೊತೆಗೆ ಬ್ರಹ್ಮಪುತ್ರ ಕೂಡ ನಮ್ಮನ್ನು ಆಶೀರ್ವದಿಸಿದೆ. ಅಸ್ಸಾಂನ ಜನರು ಮೂರನೇ ಬಾರಿಗೆ ಬಿಜೆಪಿಯ ಮೇಲೆ ತಮ್ಮ ನಂಬಿಕೆಯನ್ನು ಇಟ್ಟಿದ್ದಾರೆ. ಇದು ಅಸ್ಸಾಂ ಇತಿಹಾಸದಲ್ಲಿ ಮಹತ್ವದ ಘಟನೆಯಾಗಿದೆ. ಅಸ್ಸಾಂ ತನ್ನ ಅಭಿವೃದ್ಧಿಯನ್ನು ಮತ್ತಷ್ಟು ವೇಗಗೊಳಿಸುತ್ತದೆ ಎಂದು ನಾನು ಭರವಸೆ ನೀಡುತ್ತೇನೆ. ಗಂಗೋತ್ರಿಯಿಂದ ಗಂಗಾಸಾಗರದವರೆಗೆ ಕಮಲ ಅರಳಿದೆ. ಗಂಗಾ ಮಾತೆಯ ದಡದಲ್ಲಿರುವ ರಾಜ್ಯಗಳಲ್ಲಿ ಈಗ ಬಿಜೆಪಿ-ಎನ್‌ಡಿಎ ಸರ್ಕಾರಗಳಿವೆ” ಎಂದು ಪ್ರಧಾನಿ ಮೋದಿ ಸಂತಸ ವ್ಯಕ್ತಪಡಿಸಿದರು.


“ಪ್ರಜಾಪ್ರಭುತ್ವ ಮತ್ತು ಚುನಾವಣಾ ರಾಜಕೀಯದಲ್ಲಿ ಗೆಲುವು ಮತ್ತು ಸೋಲು ಸಹಜವಾದ ಭಾಗ. ಆದರೆ ಈ 5 ರಾಜ್ಯಗಳ ಜನರು ನಮ್ಮ ಭಾರತ ಏಕೆ ಪ್ರಜಾಪ್ರಭುತ್ವದ ತಾಯಿ ಎಂಬುದನ್ನು ಇಡೀ ಜಗತ್ತಿಗೆ ತೋರಿಸಿದ್ದಾರೆ. ಪ್ರಜಾಪ್ರಭುತ್ವ ನಮಗೆ ಕೇವಲ ಒಂದು ವ್ಯವಸ್ಥೆಯಲ್ಲ. ಅದು ನಮ್ಮ ರಕ್ತನಾಳಗಳಲ್ಲಿ ಹರಿಯುವ ಸಂಸ್ಕೃತಿ. ಹಲವು ವರ್ಷಗಳ ಪರಿಶ್ರಮ ಸಾಧನೆಯಾಗಿ ಪರಿವರ್ತನೆಗೊಂಡಾಗ ಆಗುವ ಸಂತೋಷವನ್ನು ನಾನು ಇಂದು ದೇಶಾದ್ಯಂತದ ಬಿಜೆಪಿ ಕಾರ್ಯಕರ್ತರ ಮುಖಗಳಲ್ಲಿ ನೋಡುತ್ತಿದ್ದೇನೆ” ಎಂದು ಪ್ರಧಾನಿ ಮೋದಿ ಹೇಳಿದರು.


ಇದನ್ನೂ ಓದಿ: ಬಂಗಾಳಿ ಧೋತಿ ಧರಿಸಿ ಬಿಜೆಪಿ ಕಚೇರಿಗೆ ಭರ್ಜರಿ ಎಂಟ್ರಿ ಕೊಟ್ಟ ಪ್ರಧಾನಿ ಮೋದಿ

ಕೇರಳ ಮತ್ತು ಬಂಗಾಳದಲ್ಲಿ ಬಿಜೆಪಿ ಕಾರ್ಯಕರ್ತರು ಹಲವಾರು ದೌರ್ಜನ್ಯಗಳಿಗೆ ಒಳಗಾಗಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಬಂಗಾಳದಲ್ಲಿ ಇಂದು ಬಿಜೆಪಿಯ ಯಶಸ್ಸಿಗೆ ಅಂತಹ ಎಲ್ಲಾ ಕಾರ್ಯಕರ್ತರು ಮತ್ತು ಅವರ ಕುಟುಂಬಗಳು ಕಾರಣ ಎಂದು ಅವರು ಹೇಳಿದರು. ಈ ಗೆಲುವನ್ನು ನಾನು ಬಂಗಾಳದ ಜನರಿಗೆ ಅರ್ಪಿಸುತ್ತೇನೆ ಎಂದು ಪ್ರಧಾನಿ ಮೋದಿ ಹೇಳಿದರು.


“ಪುದುಚೇರಿಯ ಜನರು ನಮಗೆ ತಮ್ಮ ಆಶೀರ್ವಾದ ನೀಡಿದ್ದಾರೆ. ಕಳೆದ 5 ವರ್ಷಗಳಲ್ಲಿ ಎನ್‌ಡಿಎ ಸರ್ಕಾರ ಸಂಪೂರ್ಣ ಸಮರ್ಪಣಾಭಾವದಿಂದ ಕೆಲಸ ಮಾಡಿದೆ. ಇಂದು ಮತ್ತೊಮ್ಮೆ ಜನರು ಎನ್‌ಡಿಎ ಮೇಲೆ ತಮ್ಮ ನಂಬಿಕೆಯನ್ನು ವ್ಯಕ್ತಪಡಿಸಿದ್ದಾರೆ. ನಿಮ್ಮ ಉಜ್ವಲ ಭವಿಷ್ಯಕ್ಕಾಗಿ ಎನ್‌ಡಿಎ ಸರ್ಕಾರವು ಅವಿಶ್ರಾಂತವಾಗಿ ಕೆಲಸ ಮಾಡುವುದನ್ನು ಮುಂದುವರಿಸುತ್ತದೆ ಎಂದು ನಾನು ಪುದುಚೇರಿಯ ಯುವಕರಿಗೆ ಭರವಸೆ ನೀಡುತ್ತೇನೆ. ಇಂದು, ದೇಶಾದ್ಯಂತ 20ಕ್ಕೂ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ-ಎನ್‌ಡಿಎ ಸರ್ಕಾರಗಳು ಅಧಿಕಾರದಲ್ಲಿವೆ. ನಾವು ಜನರಿಗೆ ಸೇವೆ ಸಲ್ಲಿಸಲು ಸಮರ್ಪಿತರಾಗಿದ್ದೇವೆ. ಅದಕ್ಕಾಗಿಯೇ ಜನರು ಬಿಜೆಪಿಯನ್ನು ನಂಬುತ್ತಿದ್ದಾರೆ. ಬಿಜೆಪಿ ಇರುವಲ್ಲಿ ಉತ್ತಮ ಆಡಳಿತವಿದೆ, ಬಿಜೆಪಿ ಇರುವಲ್ಲಿ ಅಭಿವೃದ್ಧಿ ಇದೆ ಎಂಬುದನ್ನು ಜನರು ಸ್ಪಷ್ಟವಾಗಿ ನೋಡುತ್ತಿದ್ದಾರೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:56 pm, Mon, 4 May 26

Follow Us