ದೆಹಲಿ:ಪ್ರಧಾನಿ ನರೇಂದ್ರ ಮೋದಿಯವರು ಇಂದು ತಮ್ಮ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕೀ ಬಾತ್(Mann Ki Baat)ನ 84ನೇ ಆವೃತ್ತಿ ಮೂಲಕ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. 2021ನೇ ಇಸ್ವಿಯ ಕೊನೇ ಎಪಿಸೋಡ್ ಇದಾಗಿದ್ದು, ಮತ್ತೆ ಮುಂದಿನ ಮನ್ ಕೀ ಬಾತ್ ಬರುವ ವರ್ಷವೇ ಇರಲಿದೆ. ಸಾಮಾನ್ಯವಾಗಿ ಪ್ರತಿ ಬಾರಿಯೂ ಮನ್ ಕೀ ಬಾತ್ ಪೂರ್ವದಲ್ಲಿ ಪ್ರಧಾನಿ ಮೋದಿ, ಯಾವ ವಿಷಯದ ಬಗ್ಗೆ ಮಾತನಾಡಲಿ ಎಂದು ಜನರ ಬಳಿ ಸಲಹೆ ಕೇಳುತ್ತಾರೆ. ಜನರೂ ಕೂಡ ತಮ್ಮ ಅನಿಸಿಕೆಗಳನ್ನು ಮುಕ್ತವಾಗಿ ಅವರ ಬಳಿ ಹೇಳಿಕೊಳ್ಳಬಹುದಾಗಿದೆ. ಹಾಗೇ, ಈ ಬಾರಿ ಕೂಡ ಅವರಿಗೆ ಜನರಿಂದ ಅನೇಕ ರೀತಿಯ ಸಲಹೆಗಳು ಬಂದಿವೆ ಎಂದು ಅವರೇ ತಿಳಿಸಿದ್ದಾರೆ.
ತಿಂಗಳ ಪ್ರಾರಂಭದಲ್ಲಿಯೇ ಮನ್ ಕೀ ಬಾತ್ ಬಗ್ಗೆ ಟ್ವೀಟ್ ಮಾಡಿದ್ದ ಅವರು, 2021ರ ಕೊನೇ ಮನ್ ಕೀ ಬಾತ್ನ್ನು ಡಿ.26ರಂದು ನಡೆಸಲಿದ್ದೇನೆ. ವರ್ಷದ ಕೊನೇ ಮನ್ ಕೀ ಬಾತ್ಗೆ ಸಂಬಂಧಪಟ್ಟಂತೆ ಈಗಾಗಲೇ ಹಲವು ಸಲಹೆಗಳನ್ನು ಜನರು ನನಗೆ ನೀಡುತ್ತಿದ್ದಾರೆ. ವಿಭಿನ್ನ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿರುವವರು, ತಳಮಟ್ಟದಲ್ಲಿ ಬದಲಾವಣೆ ತರಲು ಪ್ರಯತ್ನ ಮಾಡುತ್ತಿರುವವರ ಜೀವನದ ಬಗ್ಗೆ ಮನ್ ಕೀ ಬಾತ್ನಲ್ಲಿ ಮಾತನಾಡಿ ಎಂದು ಹಲವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ ಎಂದು ತಿಳಿಸಿದ್ದರು.
ನರೇಂದ್ರ ಮೋದಿ ಪ್ರಧಾನಮಂತ್ರಿಯಾದ ಮೇಲೆ, 2014ರಲ್ಲಿ ಈ ಮನ್ ಕೀ ಬಾತ್ ಶುರು ಮಾಡಿದ್ದರು. ಜನರೊಂದಿಗೆ ನೇರವಾಗಿ ಮಾತನಾಡಲು (ರಾಜಕೀಯದ ಹೊರತಾಗಿ) ಮನ್ ಕೀ ಬಾತ್ ವೇದಿಕೆ ಸೃಷ್ಟಿಸಿಕೊಂಡರು. ಈ ಸರಣಿಯ ಮೊದಲ ಎಪಿಸೋಡ್ ಪ್ರಸಾರವಾಗಿದ್ದು 2014ರ ಅಕ್ಟೋಬರ್ 3ರಂದು. ಅಂದಿನಿಂದಲೂ ಪ್ರತಿ ತಿಂಗಳ ಕೊನೇ ಭಾನುವಾರ ತಪ್ಪದೆ ಈ ಮನ್ ಕೀ ಬಾತ್ ನಡೆಸುತ್ತಿದ್ದಾರೆ. ಸ್ವಚ್ಛ ಭಾರತ ಅಭಿಯಾನದಿಂದ..ಆತ್ಮ ನಿರ್ಭರ ಭಾರತ ಅಭಿಯಾನದವರೆಗೆ ಅನೇಕ ವಿಚಾರಗಳನ್ನು ಇಲ್ಲಿ ಮಾತನಾಡಿದ್ದಾರೆ. ಅದೆಷ್ಟೋ ಸಾಧಕರ ಬಳಿ ಸಂವಾದ ನಡೆಸಿದ್ದಾರೆ. ಪ್ರಮುಖ ದಿನಗಳನ್ನು ನೆನಪಿಸಿದ್ದಾರೆ. ಕೊವಿಡ್ 19 ಬಗ್ಗೆ ಅರಿವು ಮೂಡಿಸಿದ್ದಾರೆ.
ಇಂದಿನ ಮನ್ ಕೀ ಬಾತ್ ವೀಕ್ಷಣೆ ಹೇಗೆ?
ಮನ್ ಕೀ ಬಾತ್ ರೇಡಿಯೋ ಕಾರ್ಯಕ್ರಮ ಇಂದು ಬೆಳಗ್ಗೆ 11 ಗಂಟೆಗೆ ಪ್ರಸಾರಗೊಳ್ಳಲಿದೆ. ರೇಡಿಯೋ ಮತ್ತು ದೂರದರ್ಶನದಲ್ಲಿ ಲೈವ್ ಪ್ರಸಾರವಾಗಲಿದೆ. AIR ಮತ್ತು ದೂರದರ್ಶನದ ಎಲ್ಲ ನೆಟ್ವರ್ಕ್ನಲ್ಲಿ ಮನ್ ಕೀ ಬಾತ್ ಪ್ರಸಾರಗೊಳ್ಳಲಿದೆ ಎಂದು ಪ್ರಸಾರ ಭಾರತಿ ತಿಳಿಸಿದೆ. ಆಲ್ ಇಂಡಿಯಾ ರೇಡಿಯೋದ ನ್ಯೂಸ್ವೆಬ್ಸೈಟ್ ಮತ್ತು newsonair ಮೊಬೈಲ್ ಆ್ಯಪ್ನಲ್ಲೂ ಕೂಡ ಮನ್ ಕೀ ಬಾತ್ ಕೇಳಬಹುದು. ಅದರೊಂದಿಗೆ ಆಲ್ ಇಂಡಿಯಾ ರೇಡಿಯೋ ನ್ಯೂಸ್, ಡಿಡಿ ನ್ಯೂಸ್ ಪಿಎಂಒ, ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಯೂಟ್ಯೂಬ್ ಚಾನಲ್ಗಳಲ್ಲಿ ಕೂಡ ನೇರ ಪ್ರಸಾರ ಆಗಲಿದೆ.
ಇದನ್ನೂ ಓದಿ: PM Narendra Modi Speech: ಹಿರಿಯ ನಾಗರಿಕರಿಗೆ ಜನವರಿ 10ರಿಂದ ಬೂಸ್ಟರ್ ಡೋಸ್: ಮೋದಿ ಭಾಷಣದ ಮುಖ್ಯ ಅಂಶಗಳಿವು