AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಚ್ಛ ಭಾರತದಿಂದ ಪಿಎಂ ಇಂಟರ್ನ್‌ಶಿಪ್‌ವರೆಗೆ: ಪ್ರಧಾನಿ ಮೋದಿ ಘೋಷಿಸಿದ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ

ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬ: ಪ್ರಧಾನಿ ನರೇಂದ್ರ ಮೋದಿ ಜನ್ಮದಿನದ ಸಂದರ್ಭದಲ್ಲಿ, ಕಳೆದೊಂದು ದಶಕದಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಪ್ರಮುಖ ಯೋಜನೆಗಳ ಕುರಿತು ಇಲ್ಲಿ ಮೆಲುಕು ಹಾಕಲಾಗಿದೆ. ಸ್ವಚ್ಛ ಭಾರತ್ ಅಭಿಯಾನದಿಂದ ತೊಡಗಿ ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆಯವರೆಗೆ, ಮೋದಿ ಸರ್ಕಾರದ ಪ್ರಮುಖ ಯೋಜನೆಗಳ ಮಾಹಿತಿ ಇಲ್ಲಿದೆ.

ಸ್ವಚ್ಛ ಭಾರತದಿಂದ ಪಿಎಂ ಇಂಟರ್ನ್‌ಶಿಪ್‌ವರೆಗೆ: ಪ್ರಧಾನಿ ಮೋದಿ ಘೋಷಿಸಿದ ಪ್ರಮುಖ ಯೋಜನೆಗಳ ವಿವರ ಇಲ್ಲಿದೆ
ಪ್ರಧಾನಿ ನರೇಂದ್ರ ಮೋದಿImage Credit source: PTI
ಗಣಪತಿ ಶರ್ಮಾ
|

Updated on: Sep 16, 2026 | 1:22 PM

Share

ಬೆಂಗಳೂರು, ಸೆಪ್ಟೆಂಬರ್ 16: ಪ್ರಧಾನಿ ನರೇಂದ್ರ ಮೋದಿ ಜನ್ಮದಿನ (ಸೆಪ್ಟೆಂಬರ್ 17) ಪ್ರಯುಕ್ತ ಬಿಜೆಪಿ ದೇಶಾದ್ಯಂತ ಒಂದು ತಿಂಗಳ ಕಾಲ ‘ಸೇವಾ ಸಂಕಲ್ಪ’ ಅಭಿಯಾನ ಹಮ್ಮಿಕೊಂಡಿದೆ. 1950ರ ಸೆಪ್ಟೆಂಬರ್ 17ರಂದು ಗುಜರಾತ್‌ನ ವಡನಗರದಲ್ಲಿ ಜನಿಸಿದ ನರೇಂದ್ರ ಮೋದಿ ಅವರು 2014ರಿಂದ ದೇಶದ ಪ್ರಧಾನಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಅವಧಿಯಲ್ಲಿ ಕೇಂದ್ರ ಸರ್ಕಾರ ಹಲವು ಕ್ಷೇತ್ರಗಳನ್ನು ಗುರಿಯಾಗಿಸಿಕೊಂಡು ಮಹತ್ವದ ಯೋಜನೆಗಳನ್ನು ಜಾರಿಗೆ ತಂದಿದೆ. ಸ್ವಚ್ಛತೆ, ಬ್ಯಾಂಕಿಂಗ್, ಮನೆ, ಆರೋಗ್ಯ, ರೈತರ ನೆರವು, ಮಹಿಳಾ ಸಬಲೀಕರಣ, ಮೂಲಸೌಕರ್ಯ ಹಾಗೂ ಯುವಕರ ಉದ್ಯೋಗಾವಕಾಶಗಳಿಗೆ ಸಂಬಂಧಿಸಿದ, ಮೋದಿ ಸರ್ಕಾರ ಘೋಷಣೆ ಮಾಡಿ ಕೆಲವು ಪ್ರಮುಖ ಯೋಜನೆಗಳ ಮಾಹಿತಿ ಇಲ್ಲಿದೆ.

ಸ್ವಚ್ಛ ಭಾರತ್ ಅಭಿಯಾನ: ರಾಷ್ಟ್ರವ್ಯಾಪಿ ಸ್ವಚ್ಛತೆಗೆ ಒತ್ತು

2014ರ ಅಕ್ಟೋಬರ್ 2ರಂದು ಸ್ವಚ್ಛ ಭಾರತ್ ಅಭಿಯಾನಕ್ಕೆ ಚಾಲನೆ ನೀಡಲಾಯಿತು. ಬಯಲು ಶೌಚಮುಕ್ತ ಭಾರತ ನಿರ್ಮಾಣ, ಶೌಚಾಲಯಗಳ ಬಳಕೆ ಹೆಚ್ಚಿಸುವುದು, ಘನತ್ಯಾಜ್ಯ ನಿರ್ವಹಣೆ ಮತ್ತು ಸ್ವಚ್ಛತೆಯ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಇದರ ಪ್ರಮುಖ ಉದ್ದೇಶಗಳಾಗಿವೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಶೌಚಾಲಯ ನಿರ್ಮಾಣ, ಕಸ ವಿಂಗಡಣೆ, ತ್ಯಾಜ್ಯ ಸಂಗ್ರಹ ಮತ್ತು ವೈಜ್ಞಾನಿಕ ವಿಲೇವಾರಿಗೆ ಈ ಅಭಿಯಾನ ಒತ್ತು ನೀಡಿದೆ. ನಂತರದ ಹಂತದಲ್ಲಿ ‘ಸ್ವಚ್ಛ ಭಾರತ್ ಮಿಷನ್‌–ಗ್ರಾಮೀಣ’ ಮತ್ತು ‘ಸ್ವಚ್ಛ ಭಾರತ್ ಮಿಷನ್‌–ನಗರ’ದ ಮೂಲಕ ತ್ಯಾಜ್ಯ ನಿರ್ವಹಣೆಯತ್ತ ಗಮನ ಹರಿಸಲಾಯಿತು.

ಪ್ರಧಾನಮಂತ್ರಿ ಜನಧನ್ ಯೋಜನೆ: ಎಲ್ಲರಿಗೂ ಬ್ಯಾಂಕಿಂಗ್ ಸೇವೆ

2014ರಲ್ಲಿ ಘೋಷಣೆಯಾಗಿ ಆರಂಭವಾದ ಪ್ರಧಾನಮಂತ್ರಿ ಜನಧನ್ ಯೋಜನೆಯ ಉದ್ದೇಶ ಬ್ಯಾಂಕಿಂಗ್ ಸೇವೆಯಿಂದ ಹೊರಗಿದ್ದ ಜನರನ್ನು ಅಧಿಕೃತ ಹಣಕಾಸು ವ್ಯವಸ್ಥೆಗೆ ತರುವುದು. ಶೂನ್ಯ ಕನಿಷ್ಠ ಬ್ಯಾಲೆನ್ಸ್‌ನೊಂದಿಗೆ ಬ್ಯಾಂಕ್ ಖಾತೆ ತೆರೆಯುವ ಅವಕಾಶ, ಡೆಬಿಟ್ ಕಾರ್ಡ್, ನೇರ ಹಣ ವರ್ಗಾವಣೆ ಮತ್ತು ಕೆಲವು ವಿಮಾ ಸೌಲಭ್ಯಗಳು ಈ ಯೋಜನೆಯ ಪ್ರಮುಖ ಅಂಶಗಳಾಗಿವೆ. ಸರ್ಕಾರದ ವಿವಿಧ ಸಬ್ಸಿಡಿ ಹಾಗೂ ಕಲ್ಯಾಣ ಯೋಜನೆಗಳ ಹಣವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾಯಿಸುವ ವ್ಯವಸ್ಥೆಗೆ ಈ ಯೋಜನೆ ನೆರವಾಗಿದೆ.

ಪ್ರಧಾನಮಂತ್ರಿ ಉಜ್ವಲಾ ಯೋಜನೆ

2016ರಲ್ಲಿ ಆರಂಭವಾದ ಪ್ರಧಾನಮಂತ್ರಿ ಉಜ್ವಲಾ ಯೋಜನೆಯಡಿ ಬಡ ಕುಟುಂಬಗಳ ಮಹಿಳೆಯರಿಗೆ ಎಲ್‌ಪಿಜಿ ಸಂಪರ್ಕ ಒದಗಿಸುವ ಗುರಿ ಹೊಂದಲಾಗಿದೆ. ಕಟ್ಟಿಗೆ, ಕಲ್ಲಿದ್ದಲು ಹಾಗೂ ಇತರೆ ಸಾಂಪ್ರದಾಯಿಕ ಇಂಧನಗಳ ಬದಲಿಗೆ ಸ್ವಚ್ಛ ಅಡುಗೆ ಇಂಧನ ಬಳಕೆಯನ್ನು ಉತ್ತೇಜಿಸುವುದು ಯೋಜನೆಯ ಉದ್ದೇಶ. ಅಡುಗೆ ಹೊಗೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳನ್ನು ಕಡಿಮೆ ಮಾಡುವುದು ಮತ್ತು ಮಹಿಳೆಯರ ಅಡುಗೆ ಸಮಯವನ್ನು ಉಳಿಸುವುದಕ್ಕೂ ಯೋಜನೆ ಒತ್ತು ನೀಡಿದೆ.

ಪ್ರಧಾನಮಂತ್ರಿ ಆವಾಸ್ ಯೋಜನೆ: ಸರ್ವರಿಗೂ ಸೂರಿನ ಸಂಕಲ್ಪ

ನಗರ ಮತ್ತು ಗ್ರಾಮೀಣ ಪ್ರದೇಶಗಳ ಆರ್ಥಿಕವಾಗಿ ದುರ್ಬಲ ಕುಟುಂಬಗಳಿಗೆ ಮನೆ ನಿರ್ಮಾಣ ಅಥವಾ ಮನೆ ಖರೀದಿಗೆ ನೆರವು ನೀಡಲು ಪ್ರಧಾನಮಂತ್ರಿ ಆವಾಸ್ ಯೋಜನೆ ಜಾರಿಗೆ ಬಂದಿದೆ. ಗ್ರಾಮೀಣ ಭಾಗದಲ್ಲಿ ಮೂಲಸೌಕರ್ಯ ಹೊಂದಿರುವ ಪಕ್ಕಾ ಮನೆ ನಿರ್ಮಾಣಕ್ಕೆ ಸಹಾಯಧನ ನೀಡಲಾಗುತ್ತದೆ. ನಗರ ಪ್ರದೇಶದಲ್ಲಿ ಮನೆ ನಿರ್ಮಾಣ, ಸಾಲದ ಮೇಲಿನ ಬಡ್ಡಿ ಸಹಾಯಧನ ಹಾಗೂ ಕೈಗೆಟುಕುವ ದರದ ವಸತಿ ಯೋಜನೆಗಳ ಮೂಲಕ ಅರ್ಹ ಕುಟುಂಬಗಳಿಗೆ ನೆರವು ನೀಡುವ ವ್ಯವಸ್ಥೆ ಇದೆ. ಯೋಜನೆಯ ಅನುಷ್ಠಾನದಲ್ಲಿ ರಾಜ್ಯ ಸರ್ಕಾರಗಳು ಮತ್ತು ಸ್ಥಳೀಯ ಸಂಸ್ಥೆಗಳ ಪಾತ್ರವೂ ಇದೆ.

ಆಯುಷ್ಮಾನ್ ಭಾರತ್: ಆರೋಗ್ಯ ರಕ್ಷಣೆಗೆ ವಿಮಾ ನೆರವು

ಆಯುಷ್ಮಾನ್ ಭಾರತ್ ಯೋಜನೆಯ ಪ್ರಮುಖ ಭಾಗವಾದ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆಯಡಿ ಅರ್ಹ ಬಡ ಮತ್ತು ದುರ್ಬಲ ಕುಟುಂಬಗಳಿಗೆ ಆಸ್ಪತ್ರೆ ಚಿಕಿತ್ಸೆಯ ವೆಚ್ಚ ಭರಿಸಲು ಆರೋಗ್ಯ ರಕ್ಷಣೆಯನ್ನು ಒದಗಿಸುವ ಗುರಿ ಹೊಂದಲಾಗಿದೆ. ದ್ವಿತೀಯ ಮತ್ತು ತೃತೀಯ ಹಂತದ ಆಸ್ಪತ್ರೆ ಚಿಕಿತ್ಸೆಗೆ ಹಣಕಾಸಿನ ನೆರವು, ಆರೋಗ್ಯ ಮತ್ತು ಕ್ಷೇಮ ಕೇಂದ್ರಗಳ ಮೂಲಕ ಪ್ರಾಥಮಿಕ ಆರೋಗ್ಯ ಸೇವೆ ಬಲಪಡಿಸುವುದು ಯೋಜನೆಯ ಪ್ರಮುಖ ಅಂಶಗಳಾಗಿವೆ. ಫಲಾನುಭವಿಗಳ ಅರ್ಹತೆ ಹಾಗೂ ಸೌಲಭ್ಯಗಳ ವ್ಯಾಪ್ತಿ ಸರ್ಕಾರದ ನಿಯಮಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ: ರೈತರಿಗೆ ನೇರ ಹಣಕಾಸು ನೆರವು

2019ರಲ್ಲಿ ಆರಂಭವಾದ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಅರ್ಹ ಸಣ್ಣ ಮತ್ತು ಅತಿ ಸಣ್ಣ ರೈತ ಕುಟುಂಬಗಳಿಗೆ ವರ್ಷದಲ್ಲಿ ನಿಗದಿತ ಮೊತ್ತವನ್ನು ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾಯಿಸುವ ವ್ಯವಸ್ಥೆ ಇದೆ. ಕೃಷಿ ಚಟುವಟಿಕೆಗಳಿಗೆ ಬೇಕಾದ ಬೀಜ, ರಸಗೊಬ್ಬರ ಮತ್ತು ಇತರೆ ಸಣ್ಣಪುಟ್ಟ ವೆಚ್ಚಗಳಿಗೆ ನೆರವಾಗುವುದು ಯೋಜನೆಯ ಉದ್ದೇಶ. ಫಲಾನುಭವಿಗಳ ಗುರುತಿಸುವಿಕೆ, ಭೂ ದಾಖಲೆಗಳು ಮತ್ತು ಇ-ಕೆವೈಸಿ ಪ್ರಕ್ರಿಯೆಗಳಿಗೆ ಮಹತ್ವ ನೀಡಲಾಗಿದೆ.

ಜಲ ಜೀವನ ಮಿಷನ್: ಮನೆಮನೆಗೆ ನೀರು ಸಂಪರ್ಕ

ಗ್ರಾಮೀಣ ಪ್ರದೇಶಗಳ ಪ್ರತಿಯೊಂದು ಮನೆಗೂ ಸುರಕ್ಷಿತ ಕುಡಿಯುವ ನೀರನ್ನು ಕೊಳವೆ ಮೂಲಕ ಒದಗಿಸುವ ಗುರಿಯೊಂದಿಗೆ ಜಲ ಜೀವನ ಮಿಷನ್‌ನ್ನು 2019ರಲ್ಲಿ ಆರಂಭಿಸಲಾಯಿತು. ಮನೆಗಳಿಗೆ ನೀರಿನ ಸಂಪರ್ಕ ಕಲ್ಪಿಸುವುದರ ಜೊತೆಗೆ ನೀರಿನ ಮೂಲಗಳ ಸಂರಕ್ಷಣೆ, ನೀರಿನ ಗುಣಮಟ್ಟ ಪರೀಕ್ಷೆ ಮತ್ತು ಗ್ರಾಮಮಟ್ಟದ ನೀರು ನಿರ್ವಹಣೆಯತ್ತಲೂ ಯೋಜನೆ ಗಮನ ಹರಿಸುತ್ತದೆ. ಯೋಜನೆಯ ಅನುಷ್ಠಾನದಲ್ಲಿ ರಾಜ್ಯಗಳು ಮತ್ತು ಗ್ರಾಮ ಪಂಚಾಯಿತಿಗಳ ಸಹಭಾಗಿತ್ವವಿದೆ.

ಮೇಕ್ ಇನ್ ಇಂಡಿಯಾ: ದೇಶೀಯ ಉತ್ಪಾದನೆಗೆ ಉತ್ತೇಜನ

2014ರಲ್ಲಿ ಆರಂಭವಾದ ಮೇಕ್ ಇನ್ ಇಂಡಿಯಾ ಅಭಿಯಾನವು ಭಾರತವನ್ನು ಉತ್ಪಾದನಾ ಕೇಂದ್ರವನ್ನಾಗಿ ರೂಪಿಸುವ ಉದ್ದೇಶ ಹೊಂದಿದೆ. ದೇಶೀಯ ಹಾಗೂ ವಿದೇಶಿ ಹೂಡಿಕೆಗಳನ್ನು ಆಕರ್ಷಿಸುವುದು, ಕೈಗಾರಿಕಾ ಉತ್ಪಾದನೆ ಹೆಚ್ಚಿಸುವುದು, ಉದ್ಯೋಗ ಸೃಷ್ಟಿಸುವುದು ಮತ್ತು ವಿವಿಧ ಕ್ಷೇತ್ರಗಳಲ್ಲಿ ತಯಾರಿಕಾ ಸಾಮರ್ಥ್ಯ ವೃದ್ಧಿಸುವುದು ಇದರ ಪ್ರಮುಖ ಗುರಿಗಳಾಗಿವೆ. ರಕ್ಷಣಾ ಉತ್ಪಾದನೆ, ಎಲೆಕ್ಟ್ರಾನಿಕ್ಸ್, ಆಟೋಮೊಬೈಲ್, ಔಷಧ, ಬಾಹ್ಯಾಕಾಶ ಮತ್ತು ಇತರೆ ಕೈಗಾರಿಕಾ ಕ್ಷೇತ್ರಗಳಲ್ಲಿ ದೇಶೀಯ ಉತ್ಪಾದನೆಗೆ ಒತ್ತು ನೀಡಲಾಗಿದೆ.

ಡಿಜಿಟಲ್ ಇಂಡಿಯಾ: ಗ್ರಾಮೀಣ ಪ್ರದೇಶಗಳಿಗೂ ಡಿಜಿಟಲ್ ಸೇವೆ, ಸರ್ಕಾರಿ ಸೇವೆಗಳಿಗೂ ಡಿಜಿಟಲ್ ಸಂಪರ್ಕ

ಡಿಜಿಟಲ್ ಇಂಡಿಯಾ ಕಾರ್ಯಕ್ರಮದ ಮೂಲಕ ಸರ್ಕಾರಿ ಸೇವೆಗಳನ್ನು ಆನ್‌ಲೈನ್‌ಗೆ ತರುವುದು, ಡಿಜಿಟಲ್ ಮೂಲಸೌಕರ್ಯ ವಿಸ್ತರಿಸುವುದು ಮತ್ತು ನಾಗರಿಕರಿಗೆ ಡಿಜಿಟಲ್ ಸೇವೆಗಳ ಪ್ರವೇಶ ಹೆಚ್ಚಿಸುವ ಗುರಿ ಹೊಂದಲಾಗಿದೆ. ಆಧಾರ್ ಆಧಾರಿತ ಸೇವೆಗಳು, ಡಿಜಿಟಲ್ ಪಾವತಿ, ಆನ್‌ಲೈನ್ ಪ್ರಮಾಣಪತ್ರಗಳು, ಸರ್ಕಾರಿ ಅರ್ಜಿ ವ್ಯವಸ್ಥೆಗಳು ಮತ್ತು ಡಿಜಿಟಲ್ ಸಾಕ್ಷರತೆ ಈ ಕಾರ್ಯಕ್ರಮದ ಪ್ರಮುಖ ಭಾಗಗಳಾಗಿವೆ. ಗ್ರಾಮೀಣ ಪ್ರದೇಶಗಳಿಗೂ ಡಿಜಿಟಲ್ ಸಂಪರ್ಕದ ಗುರಿಯೊಂದಿಗೆ ಈ ಯೋಜನೆ ಆರಂಭಿಸಲಾಗಿದೆ.

ಪಿಎಂ ವಿಶ್ವಕರ್ಮ ಯೋಜನೆ: ಸಾಂಪ್ರದಾಯಿಕ ಕಲೆಗಾರರಿಗೆ ಬೆಂಬಲ

2023ರಲ್ಲಿ ಆರಂಭವಾದ ಪಿಎಂ ವಿಶ್ವಕರ್ಮ ಯೋಜನೆಯು ಸಾಂಪ್ರದಾಯಿಕ ವೃತ್ತಿಗಳಲ್ಲಿ ತೊಡಗಿರುವ ಕುಶಲಕರ್ಮಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ನೆರವು ನೀಡಲು ರೂಪಿಸಲಾಗಿದೆ. ತರಬೇತಿ, ಕೌಶಲ್ಯಾಭಿವೃದ್ಧಿ, ಉಪಕರಣಗಳ ಖರೀದಿಗೆ ನೆರವು, ಸಾಲ ಸೌಲಭ್ಯ, ಡಿಜಿಟಲ್ ವ್ಯವಹಾರಗಳಿಗೆ ಪ್ರೋತ್ಸಾಹ ಹಾಗೂ ಉತ್ಪನ್ನಗಳ ಮಾರುಕಟ್ಟೆ ವಿಸ್ತರಣೆಗೆ ಬೆಂಬಲ ನೀಡುವುದು ಯೋಜನೆಯ ಉದ್ದೇಶ.

ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ: ಯುವಕರಿಗೆ ಕೈಗಾರಿಕಾ ಅನುಭವ

ಯುವಕರಿಗೆ ಉದ್ಯಮ ಕ್ಷೇತ್ರದ ನೈಜ ಅನುಭವ ಒದಗಿಸುವ ಉದ್ದೇಶದಿಂದ ಪ್ರಧಾನಮಂತ್ರಿ ಇಂಟರ್ನ್‌ಶಿಪ್ ಯೋಜನೆ ಆರಂಭಿಸಲಾಯಿತು. ಐದು ವರ್ಷಗಳಲ್ಲಿ ದೇಶದ ಒಂದು ಕೋಟಿ ಯುವಕರಿಗೆ ಇಂಟರ್ನ್‌ಶಿಪ್ ಅವಕಾಶ ಕಲ್ಪಿಸುವ ಗುರಿಯನ್ನು ಯೋಜನೆ ಹೊಂದಿದೆ. ದೇಶದ ಪ್ರಮುಖ 500 ಕಂಪನಿಗಳಲ್ಲಿ ಇಂಟರ್ನ್‌ಶಿಪ್‌ ಅವಕಾಶಗಳನ್ನು ಒದಗಿಸುವ ಮೂಲಕ ಯುವಕರ ಉದ್ಯೋಗಾರ್ಹತೆ ಮತ್ತು ಪ್ರಾಯೋಗಿಕ ಕೌಶಲ್ಯ ಹೆಚ್ಚಿಸಲು ಯೋಜಿಸಲಾಗಿದೆ. ಆಯ್ಕೆಯಾದ ಅಭ್ಯರ್ಥಿಗಳಿಗೆ ಕಂಪನಿಗಳಲ್ಲಿ ಕೆಲಸದ ಅನುಭವ, ತರಬೇತಿ ಮತ್ತು ನಿಗದಿತ ಹಣಕಾಸಿನ ನೆರವು ನೀಡುವ ವ್ಯವಸ್ಥೆ ಇದೆ.

ಅಗ್ನಿಪಥ್ ಯೋಜನೆ: ಸೇನಾ ನೇಮಕಾತಿಯಲ್ಲಿ ಹೊಸ ಮಾದರಿ

2022ರಲ್ಲಿ ಘೋಷಿಸಲಾದ ಅಗ್ನಿಪಥ್ ಯೋಜನೆಯಡಿ ಸೇನೆಯ ಮೂರು ವಿಭಾಗಗಳಲ್ಲಿ ನಿರ್ದಿಷ್ಟ ಅವಧಿಗೆ ಯುವಕರನ್ನು ನೇಮಕ ಮಾಡಿಕೊಳ್ಳುವ ವ್ಯವಸ್ಥೆ ಜಾರಿಗೆ ಬಂದಿದೆ. ಆಯ್ಕೆಯಾದವರನ್ನು ‘ಅಗ್ನಿವೀರರು’ ಎಂದು ಕರೆಯಲಾಗುತ್ತದೆ. ನಾಲ್ಕು ವರ್ಷಗಳ ಸೇವಾ ಅವಧಿ, ತರಬೇತಿ ಮತ್ತು ಸೇವೆಯ ನಂತರದ ಹಣಕಾಸಿನ ಪ್ಯಾಕೇಜ್ ಯೋಜನೆಯ ಪ್ರಮುಖ ಅಂಶಗಳಾಗಿವೆ. ಸೇವೆಯ ಅವಧಿ ಪೂರ್ಣಗೊಂಡ ಬಳಿಕ ನಿರ್ದಿಷ್ಟ ಪ್ರಮಾಣದ ಅಭ್ಯರ್ಥಿಗಳನ್ನು ಮುಂದುವರಿಸುವ ವ್ಯವಸ್ಥೆಯೂ ಇದೆ.

ಏಕ್ ಭಾರತ್, ಶ್ರೇಷ್ಠ ಭಾರತ್ ಮತ್ತು ಮೂಲಸೌಕರ್ಯ ಯೋಜನೆಗಳು

ದೇಶದ ವಿವಿಧ ರಾಜ್ಯಗಳ ನಡುವೆ ಸಾಂಸ್ಕೃತಿಕ ಹಾಗೂ ಸಾಮಾಜಿಕ ಸಂಪರ್ಕ ಹೆಚ್ಚಿಸಲು ಏಕ್ ಭಾರತ್, ಶ್ರೇಷ್ಠ ಭಾರತ್ ಕಾರ್ಯಕ್ರಮ ರೂಪಿಸಲಾಗಿದೆ. ಇದರ ಜೊತೆಗೆ ಹೆದ್ದಾರಿ, ರೈಲ್ವೆ, ವಿಮಾನ ನಿಲ್ದಾಣ, ಬಂದರು ಮತ್ತು ನಗರ ಸಾರಿಗೆ ಕ್ಷೇತ್ರಗಳಲ್ಲಿ ಹಲವು ಮೂಲಸೌಕರ್ಯ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಅಮೃತ್ ಭಾರತ್ ರೈಲು ನಿಲ್ದಾಣ ಯೋಜನೆ, ವಂದೇ ಭಾರತ್ ರೈಲು ಸೇವೆಗಳು, ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯ ವಿಸ್ತರಣೆ ಮತ್ತು ನಗರ ಸಾರಿಗೆ ಸುಧಾರಣೆಗಳು ಮೋದಿ ಸರ್ಕಾರ ಕೈಗೊಂಡ ಮೂಲಸೌಕರ್ಯ ಕ್ಷೇತ್ರದ ಪ್ರಮುಖ ಕ್ರಮಗಳಾಗಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಎಸ್ಐಟಿ ತನಿಖೆ ಬಿಸಿ ಸಾಧ್ಯತೆ
ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಿಗೂ ಎಸ್ಐಟಿ ತನಿಖೆ ಬಿಸಿ ಸಾಧ್ಯತೆ
ಬಸ್‌ಗಾಗಿ ಬೇಡಿಕೆಯಿಟ್ಟ 140 ವಿದ್ಯಾರ್ಥಿಗಳು
ಬಸ್‌ಗಾಗಿ ಬೇಡಿಕೆಯಿಟ್ಟ 140 ವಿದ್ಯಾರ್ಥಿಗಳು
ಹೊಳೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಟ್ರಾಫಿಕ್ ಜಾಮ್
ಹೊಳೆಯಂತಾದ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್, ಟ್ರಾಫಿಕ್ ಜಾಮ್
ಹುಳ ಇರುವ ಕುಡಿಯುವ ನೀರನ್ನು ಗ್ರಾಮಸಭೆಗೇ ತಂದ ರಾರಾವಿ ಗ್ರಾಮಸ್ಥರು!
ಹುಳ ಇರುವ ಕುಡಿಯುವ ನೀರನ್ನು ಗ್ರಾಮಸಭೆಗೇ ತಂದ ರಾರಾವಿ ಗ್ರಾಮಸ್ಥರು!
ಮಸೀದಿಯೊಳಗೆ ಗಣಪತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕರು!
ಮಸೀದಿಯೊಳಗೆ ಗಣಪತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಮೆರೆದ ಮುಸ್ಲಿಂ ಯುವಕರು!
ಫುಟ್​ಪಾತ್​ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!
ಫುಟ್​ಪಾತ್​ನಲ್ಲಿ ಕಸ ಸುರಿದ ಕಟ್ಟಡ ಮಾಲೀಕನಿಗೆ 50,000 ರೂ. ದಂಡ!
ಧಾರಾಕಾರ ಮಳೆಯಿಂದ ಬಾಗಲಕುಂಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು!
ಧಾರಾಕಾರ ಮಳೆಯಿಂದ ಬಾಗಲಕುಂಟೆಯಲ್ಲಿ ಮನೆಗಳಿಗೆ ನುಗ್ಗಿದ ನೀರು!
ನಾಮಿನೇಷನ್ ವಿಷಯದಲ್ಲಿ ಉರಿದುಬಿದ್ದ ಶಾಸ್ತ್ರಿ; ನಡೆಯಿತು ಮತ್ತೊಂದು ಜಗಳ
ನಾಮಿನೇಷನ್ ವಿಷಯದಲ್ಲಿ ಉರಿದುಬಿದ್ದ ಶಾಸ್ತ್ರಿ; ನಡೆಯಿತು ಮತ್ತೊಂದು ಜಗಳ
ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿತ್ತು 10 ಟನ್ ಕೆಮಿಕಲ್ ಮಿಶ್ರಿತ ಅಡಿಕೆ
ಕೋಲ್ಕತ್ತಾದಿಂದ ಬೆಂಗಳೂರಿಗೆ ಬರುತ್ತಿತ್ತು 10 ಟನ್ ಕೆಮಿಕಲ್ ಮಿಶ್ರಿತ ಅಡಿಕೆ
ರವಿ ಸಿಂಹ ರಾಶಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ
ರವಿ ಸಿಂಹ ರಾಶಿ, ಚಂದ್ರ ತುಲಾ ರಾಶಿಯಲ್ಲಿ ಸಂಚಾರ: 12 ರಾಶಿಗಳ ದಿನ ಭವಿಷ್ಯ