ಡಿಎಂಕೆ ಪಕ್ಷ ತಮಿಳುನಾಡಿನ ಭವಿಷ್ಯ ಮತ್ತು ಸಂಸ್ಕೃತಿಯ ಶತ್ರು: ಮೋದಿ

|

Updated on: Mar 15, 2024 | 4:57 PM

"ಡಿಎಂಕೆಯು ತಮಿಳುನಾಡಿನ ಭವಿಷ್ಯದ ಮತ್ತು ಸಂಸ್ಕೃತಿಯ ಶತ್ರುವಾಗಿದೆ. ಅಯೋಧ್ಯೆ ರಾಮಮಂದಿರ 'ಪ್ರಾಣ ಪ್ರತಿಷ್ಠಾ' ಸಮಾರಂಭಕ್ಕೂ ಮುನ್ನ ನಾನು ತಮಿಳುನಾಡಿಗೆ ಬಂದು ರಾಜ್ಯದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಅವರು ತಮಿಳು ಸಂಸ್ಕೃತಿಯನ್ನು ನಾಶಮಾಡಲು ಬಯಸುತ್ತಿದ್ದಾರೆ" ಎಂದು ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ ಹೇಳಿದ್ದಾರೆ.

ಡಿಎಂಕೆ ಪಕ್ಷ ತಮಿಳುನಾಡಿನ ಭವಿಷ್ಯ ಮತ್ತು  ಸಂಸ್ಕೃತಿಯ ಶತ್ರು: ಮೋದಿ
ತಮಿಳುನಾಡಿನಲ್ಲಿ ನರೇಂದ್ರ ಮೋದಿ
Follow us on

ಕನ್ಯಾಕುಮಾರಿ ಮಾರ್ಚ್ 15: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶುಕ್ರವಾರ ದ್ರಾವಿಡ ಮುನ್ನೇತ್ರ ಕಳಗಂ (DMK) ವಿರುದ್ಧ ವಾಗ್ದಾಳಿ ನಡೆಸಿದ್ದು, ಡಿಎಂಕೆ ತಮಿಳುನಾಡಿನ ಭವಿಷ್ಯ ಮತ್ತು ಸಂಸ್ಕೃತಿಯ ಶತ್ರು ಎಂದು ಆರೋಪಿಸಿದ್ದಾರೆ. ಕನ್ಯಾಕುಮಾರಿಯಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಮೋದಿ, ಡಿಎಂಕೆಗೆ ದೇಶ, ಅದರ ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ದ್ವೇಷವಿದೆ ಎಂದು ಹೇಳಿದ್ದಾರೆ. “ಡಿಎಂಕೆಯು ತಮಿಳುನಾಡಿನ ಭವಿಷ್ಯದ ಮತ್ತು ಸಂಸ್ಕೃತಿಯ ಶತ್ರುವಾಗಿದೆ. ಅಯೋಧ್ಯೆ ರಾಮಮಂದಿರ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೂ ಮುನ್ನ ನಾನು ತಮಿಳುನಾಡಿಗೆ ಬಂದು ರಾಜ್ಯದ ಪ್ರಮುಖ ದೇವಾಲಯಗಳಿಗೆ ಭೇಟಿ ನೀಡಿದ್ದೇನೆ. ಅವರು ತಮಿಳು ಸಂಸ್ಕೃತಿಯನ್ನು ನಾಶಮಾಡಲು ಬಯಸುತ್ತಿದ್ದಾರೆ” ಎಂದಿದ್ದಾರೆ ಮೋದಿ.

ಇತ್ತೀಚಿನ ಅಯೋಧ್ಯೆ ದೇವಾಲಯದ ಕಾರ್ಯಕ್ರಮದ ಪ್ರಸಾರವನ್ನು ರಾಜ್ಯವು ‘ನಿಷೇಧಿಸಿದೆ’ ಎಂಬ ತಮ್ಮ ಪಕ್ಷದ ಆರೋಪವನ್ನು ಅವರು ಪುನರುಚ್ಚರಿಸಿದರು.ಡಿಎಂಕೆ ಸರ್ಕಾರವು ಅಯೋಧ್ಯೆ ರಾಮ ಮಂದಿರದ ಶಂಕುಸ್ಥಾಪನೆ ಸಮಾರಂಭದ ಪ್ರಸಾರವನ್ನು ನಿಲ್ಲಿಸಲು ಪ್ರಯತ್ನಿಸಿತು. ಈ ಕುರಿತು ಸುಪ್ರೀಂ ಕೋರ್ಟ್ ತಮಿಳುನಾಡು ಸರ್ಕಾರಕ್ಕೆ ಛೀಮಾರಿ ಹಾಕಬೇಕಾಯಿತು. ಹೊಸ ಸಂಸತ್ತಿನಲ್ಲಿ ಸೆಂಗೋಲ್ ಅಳವಡಿಸುವುದು ಅವರಿಗೆ ಇಷ್ಟವಾಗಲಿಲ್ಲ. ನಮ್ಮ ಸರ್ಕಾರವೇ ಜಲ್ಲಿಕಟ್ಟುಗೆ ದಾರಿ ಮಾಡಿಕೊಟ್ಟಿದೆ ಎಂದು ಮೋದಿ ಹೇಳಿದ್ದಾರೆ.

ಈ ಬಾರಿ ತಮಿಳುನಾಡಿನಲ್ಲಿ ಬಿಜೆಪಿಯ ಸಾಧನೆಯು ಡಿಎಂಕೆ-ಕಾಂಗ್ರೆಸ್ ಇಂಡಿಯಾ ಮೈತ್ರಿಯ ದುರಹಂಕಾರವನ್ನು ಛಿದ್ರಗೊಳಿಸಲಿದೆ. ಜನರಿಗೆ ತೋರಿಸಲು ಬಿಜೆಪಿ ಅಭಿವೃದ್ಧಿ ಉಪಕ್ರಮಗಳನ್ನು ಹೊಂದಿದ್ದರೂ, ವಿರೋಧ ಪಕ್ಷದ ಹಗರಣಗಳ ಪಟ್ಟಿ ದೊಡ್ಡದಾಗಿದೆ ಎಂದು ಪ್ರಧಾನಿ ಹೇಳಿದರು.  ಡಿಎಂಕೆ ಮತ್ತು ಕಾಂಗ್ರೆಸ್ ಮಹಿಳಾ ವಿರೋಧಿಯಾಗಿದ್ದು, ಅವರು ಮಹಿಳೆಯರನ್ನು ಮೂರ್ಖರನ್ನಾಗಿಸಿದ್ದಾರೆ ಮತ್ತು ಅವಮಾನಿಸಿದ್ದಾರೆ ಎಂದು ಆರೋಪಿಸಿದರು.

ಮೋದಿ ಭಾಷಣ

ಕನ್ಯಾಕುಮಾರಿ ಜಿಲ್ಲೆಗಾಗಿ ಕೇಂದ್ರ ಸರ್ಕಾರವು ಅನೇಕ ಉಪಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದರು. “ತಮಿಳುನಾಡಿನ ಸಂಪರ್ಕವನ್ನು ಸುಧಾರಿಸಲು, ನಾವು ರೈಲ್ವೆ ಮತ್ತು ಹೆದ್ದಾರಿಗಳ ಜಾಲವನ್ನು ಸಿದ್ಧಪಡಿಸುತ್ತಿದ್ದೇವೆ. ಕಳೆದ 10 ವರ್ಷಗಳಲ್ಲಿ ತಮಿಳುನಾಡಿನಲ್ಲಿ ಸುಮಾರು ₹ 50,000 ಕೋಟಿ ಮೌಲ್ಯದ ಹೆದ್ದಾರಿ ಯೋಜನೆಗಳು ಪೂರ್ಣಗೊಂಡಿವೆ ಮತ್ತು ₹ 70,000 ಕೋಟಿ ಮೌಲ್ಯದ ಯೋಜನೆಗಳು ಇನ್ನೂ ನಡೆಯುತ್ತಿವೆ ಎಂದು ಮೋದಿ ಹೇಳಿದ್ದಾರೆ.

“ಇಂಡಿಯಾ ಒಕ್ಕೂಟವು ತನ್ನ ಹೆಸರಿನ ವಿರುದ್ಧ ಹಗರಣಗಳ ಸರಣಿಯನ್ನು ಹೊಂದಿದೆ. ಆದರೆ ಬಿಜೆಪಿ ಯೋಜನೆಗಳ ಬಗ್ಗೆ ಹೆಮ್ಮೆಪಡಬಹುದು. ನಾವು ಖೇಲೋ ಇಂಡಿಯಾವನ್ನು ಹೊಂದಿರುವಾಗ, ಅವರು ಕಾಮನ್‌ವೆಲ್ತ್ ಗೇಮ್ಸ್ ಹಗರಣವನ್ನು ಹೊಂದಿದ್ದಾರೆ.ಮಾಜಿ ಪ್ರಧಾನಿ ಎ ಬಿ ವಾಜಪೇಯಿ ಅವರು ಸುವರ್ಣ ಚತುಷ್ಪಥ ಯೋಜನೆ ತಂದಿದ್ದರು. ಶ್ರೀಲಂಕಾದಲ್ಲಿ ಮರಣದಂಡನೆಗೆ ಒಳಗಾದ ತಮಿಳುನಾಡಿನ ಐವರು ಮೀನುಗಾರರನ್ನು ರಕ್ಷಿಸಿದ್ದರ  ಬಗ್ಗೆಯೂ ಮೋದಿ ಮಾತನಾಡಿದ್ದಾರೆ.

ಮೀನುಗಾರರ ಬಿಕ್ಕಟ್ಟಿಗೆ ಡಿಎಂಕೆ ಮತ್ತು ಕಾಂಗ್ರೆಸ್ ಕಾರಣ ಎಂದು ಆರೋಪಿಸಿದ ಮೋದಿ, ಜೀವನೋಪಾಯಕ್ಕಾಗಿ ಮೀವುಗಾರರು ಶ್ರೀಲಂಕಾದ ಸಮುದ್ರಕ್ಕೆ ಹೋಗಬೇಕಾದ ಪರಿಸ್ಥಿತಿ ಇದೆ. ಇದು ಡಿಎಂಕೆ ಮಾಡಿದ ಪಾಪದ ಪರಿಣಾಮ. ಬಿಜೆಪಿ ಸರ್ಕಾರ ಮೀನುಗಾರರ ಜೊತೆ ನಿಲ್ಲುತ್ತದೆ. ಕಾಂಗ್ರೆಸ್ ಮತ್ತು ಡಿಎಂಕೆ ತಮ್ಮ ಪಾಪಗಳಿಗೆ ಉತ್ತರಿಸುವ ಸಮಯ ಬಂದಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಈ ಬಾರಿ ಕೇರಳದಲ್ಲಿ ಕಮಲ ಅರಳಲಿದೆ: ಪತ್ತನಂತಿಟ್ಟದಲ್ಲಿ ಪ್ರಧಾನಿ ನರೇಂದ್ರ ಮೋದಿ

ತಮಿಳುನಾಡಿನ ಜನರು ಎಕ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ನನ್ನ ಭಾಷಣವನ್ನು ಕೇಳಬಹುದು. ತಮಿಳು ಜನರೊಂದಿಗೆ ತಮಿಳಿನಲ್ಲಿ ಸಂವಹನ ನಡೆಸಲು ಕೃತಕ ಬುದ್ಧಿಮತ್ತೆ ಮತ್ತು ತಂತ್ರಜ್ಞಾನವನ್ನು ಬಳಸಲು ತಾನು ನಿರ್ಧರಿಸಿದ್ದೇನೆ. ತಮಿಳಿನಲ್ಲಿ ನಮೋ ಎಂಬ ತಮಿಳು ಹ್ಯಾಂಡಲ್ ಅನ್ನು ಫಾಲೋ ಮಾಡುವಂತೆ ಅವರು ಜನರನ್ನು ಒತ್ತಾಯಿಸಿದರು.

ವೇದಿಕೆಯಲ್ಲಿ ಕೇಂದ್ರ ಮೀನುಗಾರಿಕೆ, ಹೈನುಗಾರಿಕೆ ಮತ್ತು ಪ್ರಸಾರ ಖಾತೆ ರಾಜ್ಯ ಸಚಿವ ಎಲ್.ಮುರುಗನ್, ಮಾಜಿ ಸಚಿವ ಪೊನ್ ರಾಧಾಕೃಷ್ಣನ್, ಬಿಜೆಪಿ ರಾಜ್ಯಾಧ್ಯಕ್ಷ ಕೆ.ಅಣ್ಣಾಮಲೈ ಮತ್ತು ನಟ-ರಾಜಕಾರಣಿ ಶರತ್ ಕುಮಾರ್ ಮತ್ತು ಕಾಂಗ್ರೆಸ್ ಮಾಜಿ ಶಾಸಕಿ ವಿಜಯತಾರಿಣಿ ಉಪಸ್ಥಿತರಿದ್ದರು.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:57 pm, Fri, 15 March 24