India 5G Launch: ಭಾರತದಲ್ಲಿ 5ಜಿ ಯುಗ ಆರಂಭ; ಹೈಸ್ಪೀಡ್ ಇಂಟರ್ನೆಟ್​ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ

ದೆಹಲಿಯ ಪ್ರಗತಿ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ 5G ಸೇವೆಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಹೈಸ್ಪೀಡ್ ಇಂಟರ್ನೆಟ್ ಬಳಕೆ ಆರಂಭವಾಗಿದೆ.

India 5G Launch: ಭಾರತದಲ್ಲಿ 5ಜಿ ಯುಗ ಆರಂಭ; ಹೈಸ್ಪೀಡ್ ಇಂಟರ್ನೆಟ್​ ಸೇವೆಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ದೆಹಲಿಯ ಪ್ರಗತಿ ಮೈದಾನದಲ್ಲಿ 5ಜಿ ತಂತ್ರಜ್ಞಾನ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ
Edited By:

Updated on: Oct 01, 2022 | 10:50 AM

ನವದೆಹಲಿ: ಭಾರತದಲ್ಲಿ ಇಂದು 5ಜಿ ತಂತ್ರಜ್ಞಾನವನ್ನು (5G Technology) ಪ್ರಧಾನಿ ನರೇಂದ್ರ ಮೋದಿ (PM Narendra Modi) ಉದ್ಘಾಟಿಸಿದ್ದಾರೆ. ಈ ಮೂಲಕ ಇಂದಿನಿಂದ ಭಾರತವು ಇಂಟರ್ನೆಟ್‌ನ 5G ಯುಗವನ್ನು ಪ್ರವೇಶಿಸಲಿದೆ. ಇದರಿಂದ ಜನರು ಎದುರಿಸುತ್ತಿರುವ ಇಂಟರ್ನೆಟ್ ಸಮಸ್ಯೆಗಳಿಗೆ ಇನ್ನು ಪರಿಹಾರ ಸಿಗಲಿದೆ. ಪ್ರಧಾನಿ ನರೇಂದ್ರ ಮೋದಿಯವರು ಇಂದು (ಅಕ್ಟೋಬರ್ 1) ಭಾರತದಲ್ಲಿ 5G ಸೇವೆಗಳಿಗೆ ಚಾಲನೆ ನೀಡಿದ್ದಾರೆ. ದೆಹಲಿಯ ಪ್ರಗತಿ ಮೈದಾನದಲ್ಲಿ ಮೋದಿ 5G ಸೇವೆಗೆ ಚಾಲನೆ ನೀಡಿದ್ದಾರೆ. ಇದರೊಂದಿಗೆ ದೇಶದಲ್ಲಿ ಹೈಸ್ಪೀಡ್ ಇಂಟರ್ನೆಟ್ ಬಳಕೆ ಆರಂಭವಾಗಿದೆ. ಜಿಯೋ, ಏರ್​ಟೆಲ್ ಮುಂದಿನ ದಿನಗಳಲ್ಲಿ 5ಜಿ ಸೇವೆಯನ್ನು ತನ್ನ ಗ್ರಾಹಕರಿಗೆ ಒದಗಿಸಲಿದೆ.

ದೂರದರ್ಶನ ಮತ್ತು ಇತರ ಪ್ರಮುಖ ಸುದ್ದಿ ವಾಹಿನಿಗಳಲ್ಲಿ 5ಜಿ ಇಂಟರ್ನೆಟ್ ಸೇವೆಯ ಉದ್ಘಾಟನಾ ಕಾರ್ಯಕ್ರಮವನ್ನು ನೇರ ಪ್ರಸಾರ ಮಾಡಲಾಗುತ್ತಿದೆ. ಆಸಕ್ತರು ಅಲ್ಲಿ 5G ಯ ಲೈವ್ ಅಪ್‌ಡೇಟ್‌ಗಳನ್ನು ಪಡೆಯಬಹುದು. ಪ್ರಧಾನಿ ನರೇಂದ್ರ ಮೋದಿ ಅವರು ಇಂಡಿಯಾ ಮೊಬೈಲ್ ಕಾಂಗ್ರೆಸ್‌ನ 6ನೇ ಆವೃತ್ತಿಯನ್ನು ಉದ್ಘಾಟಿಸಿದ್ದಾರೆ.

ಇಂದು ದೆಹಲಿಯ ದ್ವಾರಕಾ ಸೆಕ್ಟರ್ 25ರಲ್ಲಿ ದೆಹಲಿ ಮೆಟ್ರೋ ನಿಲ್ದಾಣದ ಭೂಗತ ಸುರಂಗದಿಂದ 5G ಸೇವೆಗಳ ಕೆಲಸವನ್ನು ಪ್ರಧಾನ ಮಂತ್ರಿಗೆ ಪ್ರದರ್ಶಿಸಲಾಯಿತು. 5G ತಂತ್ರಜ್ಞಾನದ ಸಹಾಯದಿಂದ ಯಾವುದೇ ಅಡಚಣೆಯಿಲ್ಲದೆ ಹೆಚ್ಚಿನ ವೇಗದ ಇಂಟರ್ನೆಟ್ ಅನ್ನು ಬಳಸಬಹುದು. ತಂತ್ರಜ್ಞಾನ ಲೋಕದಲ್ಲಿ ಇದೊಂದು ಕ್ರಾಂತಿ ಎಂದೇ ಪರಿಗಣಿಸಲಾಗುತ್ತಿದೆ.

ಇದನ್ನೂ ಓದಿ: 5ಜಿ ಸೇವೆ ಆರಂಭಕ್ಕೆ ಸಿದ್ಧವಾಗಿರುವಂತೆ ಟೆಲಿಕಾಂ ಕಂಪನಿಗಳಿಗೆ ಕೇಂದ್ರ ಸರ್ಕಾರ ಸೂಚನೆ; 4ಜಿ ಡಾಟಾಗೂ 5ಜಿ ಡಾಟಾಗೂ ಇರುವ ವ್ಯತ್ಯಾಸ, ದರ ಎಷ್ಟು ?

ನವದೆಹಲಿಯ ನಿರ್ಮಾಣ ಹಂತದಲ್ಲಿರುವ ಐಐಸಿಸಿ ಕ್ಯಾಂಪಸ್‌ನಲ್ಲಿ ಸುರಂಗದ ಒಂದು ಭಾಗವನ್ನು ಆಯ್ಕೆ ಮಾಡಲಾಗಿದೆ. ಈ ಸುರಂಗದೊಳಗೆ 5G ನೆಟ್‌ವರ್ಕ್‌ನ ಕಾರ್ಯಕ್ಷಮತೆಯನ್ನು ಇಲ್ಲಿ ಪ್ರಧಾನಿ ಮೋದಿಗೆ ತೋರಿಸಲಾಯಿತು. ಸುರಂಗದ ಒಳಗಿನ 5G ಸೆಟಪ್ ಟೆಲಿಕಾಂ ಉಪಕರಣಗಳು, ಕ್ಯಾಮೆರಾಗಳು, ಆಪ್ಟಿಕಲ್ ಫೈಬರ್ ಕೇಬಲ್‌ಗಳನ್ನು ಒಳಗೊಂಡಿದೆ. ದೆಹಲಿ ಮೆಟ್ರೋ 5G ಪ್ರದರ್ಶನಕ್ಕೆ ಸಲಕರಣೆಗಳನ್ನು ಒದಗಿಸಿದೆ.

ಇಂದಿನಿಂದ (ಅಕ್ಟೋಬರ್ 1) ದೇಶದಲ್ಲಿ ವಾಣಿಜ್ಯ 5G ಸೇವೆ ಪ್ರಾರಂಭವಾಗಲಿದೆ. ಆದರೆ, ಈ ಸೇವೆ ಸಾಮಾನ್ಯ ಜನರಿಗೆ ತಲುಪಲು ಇನ್ನೂ 1 ವರ್ಷ ಬೇಕಾಗಬಹುದು. 5ಜಿ ತರಂಗಾಂತರ ಹರಾಜಿನಲ್ಲಿ ಹಲವು ವರ್ಷಗಳ ಕಠಿಣ ಪರಿಶ್ರಮದ ಬಳಿಕ 5ಜಿ ಸೇವೆಯನ್ನು ಆರಂಭಿಸಲಿದ್ದೇವೆ ಎಂದು ಸಂವಹನ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. 5G ಇಂಟರ್ನೆಟ್​ ಸೇವೆಯಲ್ಲಿ ಯಾವುದೇ ಬಫರಿಂಗ್ ಇಲ್ಲದೆ ಉತ್ತಮ ಗುಣಮಟ್ಟದ ವೀಡಿಯೊಗಳನ್ನು ಸ್ಟ್ರೀಮ್ ಮಾಡಬಹುದು. ಇಂಟರ್ನೆಟ್ ಕರೆಗಳಲ್ಲಿ ಧ್ವನಿ ಬಹಳ ಸ್ಪಷ್ಟವಾಗಿರುತ್ತದೆ. 2 ಜಿಬಿಯ ಸಂಪೂರ್ಣ ಚಲನಚಿತ್ರವು ಕೇವಲ 10 ರಿಂದ 20 ಸೆಕೆಂಡುಗಳಲ್ಲಿ ಡೌನ್‌ಲೋಡ್ ಆಗುತ್ತದೆ. ವಿಡಿಯೋ ಗೇಮಿಂಗ್ ಕ್ಷೇತ್ರಕ್ಕೂ 5G ಇಂಟರ್ನೆಟ್​ ಸೇವೆಯಿಂದ ಅವಕಾಶಗಳು ಹೆಚ್ಚಾಗುತ್ತವೆ. ಮೂಲಗಳ ಪ್ರಕಾರ, ಸರಾಸರಿ ಮೊಬೈಲ್ ಇಂಟರ್ನೆಟ್ ವೇಗದ ವಿಷಯದಲ್ಲಿ ಭಾರತವು ಇಡೀ ಪ್ರಪಂಚದಲ್ಲಿ 117ನೇ ಸ್ಥಾನದಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:46 am, Sat, 1 October 22