ದೆಹಲಿ: ಸಾರ್ವಜನಿಕರು ಡಿಜಿಟಲ್ ಆರೋಗ್ಯ ಸಂಖ್ಯೆ ಪಡೆದುಕೊಳ್ಳಲು ಪ್ರೋತ್ಸಾಹಿಸುವ ಹಲವು ಕ್ರಮಗಳನ್ನು ಕೇಂದ್ರ ಸರ್ಕಾರವು ಶೀಘ್ರದಲ್ಲಿಯೇ ಘೋಷಿಸುವ ಸಾಧ್ಯತೆಯಿದೆ. ಜನವರಿ 26ರ ಗಣರಾಜ್ಯೋತ್ಸವ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಈ ಯೋಜನೆಗೆ ‘ಅಭಾ’ (Arogya Bharat Health Accounts – ABHA) ಎಂಬ ಹೆಸರು ನೀಡಲಿದ್ದಾರೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
ಆಯುಷ್ಮಾನ್ ಭಾರತ್ ಡಿಜಿಟಲ್ ಮಿಷನ್ (Ayushman Bharat Digital Mission – ABDM) ಯೋಜನೆಗೆ ಜನರ ಪ್ರಾತಿನಿಧ್ಯ ಹೆಚ್ಚಿಸಲು ಸರ್ಕಾರವು ಹಲವು ಕ್ರಮಗಳನ್ನು ತೆಗೆದುಕೊಂಡಿದೆ. ಈ ಯೋಜನೆಯನ್ವಯ ಭಾರತೀಯರು ತಮ್ಮ ಆರೋಗ್ಯ ದಾಖಲೆಗಳನ್ನು ಡಿಜಿಟಲ್ ರೂಪದಲ್ಲಿ ದಾಖಲಿಸಿ, ಸಂಗ್ರಹಿಸಲು ಅವಕಾಶ ಸಿಗಲಿದೆ. ಸಾಮಾನ್ಯ ಜನರಲ್ಲಿ ಅಭಾ (ABHA) ಹೆಸರನ್ನು ಚಾಲ್ತಿಗೆ ತರಲು, ಜನಪ್ರಿಯಗೊಳಿಸಲು ಸರ್ಕಾರವು ಚಿಂತನೆ ನಡೆಸಿದೆ.
ಈ ಯೋಜನೆಯನ್ವಯ ಎಲ್ಲ ಭಾರತೀಯರು 14 ಅಂಕಿಗಳ ವಿಶಿಷ್ಟ ಆರೋಗ್ಯ ಗುರುತಿನ ಸಂಖ್ಯೆಯನ್ನು (Health Identification Number) ಪಡೆಯಲಿದ್ದಾರೆ. ಈ ವೈಯಕ್ತಿಕ ಆರೋಗ್ಯ ಗುರುತಿನ ಸಂಖ್ಯೆಯನ್ನು ಬಳಸಿಕೊಂಡು ವೈದ್ಯರು ಮತ್ತು ವೈದ್ಯಕೀಯ ಸೇವಾ ಸಂಸ್ಥೆಗಳು ಹಿಂದಿನ ಚಿಕಿತ್ಸಾ ವಿವರಗಳನ್ನು ಪರಿಶೀಲಿಸಬಹುದು.
ಈ ಯೋಜನೆಯಡಿ ಸಂಗ್ರಹಿಸುವ ದಾಖಲೆಗಳಿಗೆ ಆರೋಗ್ಯ ಭಾರತ್ ಹೆಲ್ತ್ ಅಕೌಂಟ್ಸ್ (ABHA) ಎಂದು ಕರೆಯಲಾಗುವುದು. ಡಿಜಿಟಲ್ ಹೆಲ್ತ್ ಅಕೌಂಟ್ ಎಂದು ಪೂರ್ಣ ಹೆಸರು ಕರೆಯುವುದಕ್ಕಿಂತಲೂ ಅಭಾ ಎಂದು ಕರೆಯುವುದು ಜನರಿಗೆ ಹೆಚ್ಚು ಹತ್ತಿರವಾಗಬಹುದು. ಈ ಕುರಿತು ಪ್ರಧಾನಿ ಕಚೇರಿಯು ಅಂತಿಮ ನಿರ್ಧಾರವನ್ನು ಇನ್ನಷ್ಟೇ ಪ್ರಕಟಿಸಬೇಕಿದೆ.
ಪ್ರಧಾನಿ ನರೇಂದ್ರ ಮೋದಿ ಅವರು ಆಗಸ್ಟ್ 15, 2020ರಂದು ಡಿಜಿಟಲ್ ಆರೋಗ್ಯ ಯೋಜನೆಯನ್ನು ಘೋಷಿಸಿದ್ದರು. ಸರ್ವರಿಗೂ ಆರೋಗ್ಯ ಎನ್ನುವ ಮಹತ್ವದ ಘೋಷಣೆಯನ್ನು ಸಾಕಾರಗೊಳಿಸುವ ಯೋಜನೆಯನ್ನು ಪ್ರಾಯೋಗಿಕವಾಗಿ ಕಳೆದ ಸೆಪ್ಟೆಂಬರ್ 27ರಿಂದ ಜಾರಿಗೊಳಿಸಲಾಯಿತು. ಯೋಜನೆ ಅರಂಭವಾದಾಗಿನಿಂದ ಈವರೆಗೆ ಸುಮಾರು 15 ಕೋಟಿ ಹೆಲ್ತ್ ಐಡಿಗಳನ್ನು ರೂಪಿಸಲಾಗಿದೆ. 15,000 ವೈದ್ಯಕೀಯ ಸಂಸ್ಥೆಗಳು ಹಾಗೂ 7,400 ವೈದ್ಯರು ಈ ಸೌಲಭ್ಯ ಬಳಸುತ್ತಿದ್ದಾರೆ. 2 ಲಕ್ಷಕ್ಕೂ ಹೆಚ್ಚು ಜನರು ಹೆಲ್ತ್ ರೆಕಾರ್ಡ್ ಆ್ಯಪ್ ಡೌನ್ಲೋಡ್ ಮಾಡಿಕೊಂಡಿದ್ದಾರೆ.
ಯಾವುದೇ ವ್ಯಕ್ತಿ ಯೋಜನೆಯಲ್ಲಿ ಸ್ವಂತ ಇಚ್ಛೆಯಿಂದ ಪಾಲ್ಗೊಳ್ಳಬಹುದು. ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್ ಅಥವಾ ಮೊಬೈಲ್ ಸಂಖ್ಯೆಯನ್ನು ಆಧರಿಸಿ ಡಿಜಿಟಲ್ ಹೆಲ್ತ್ ರೆಕಾರ್ಡ್ ಸಂಖ್ಯೆ ರೂಪಿಸಿಕೊಳ್ಳಬಹುದಾಗಿದೆ.