
ದೆಹಲಿ: ಲಡಾಖ್ ಗಡಿಯಲ್ಲಿ ಲಡಾಯಿ ಆಗಿದ್ದೇ ಆಗಿದ್ದು. ಕೊರೊನಾ ಹುಟ್ಟಿ ಹಾಕಿರೋ ಪಾಪದ ಕೂಸುಗಳು ಕಿರಿಕ್ ಮಾಡಿದ್ದೇ ಮಾಡಿದ್ದು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹೈ ಅಲರ್ಟ್ ಆಗ್ಬಿಡ್ತು. ಗಡಿಯಲ್ಲಿ ನಡೆದ ಹಿಂಸಾತ್ಮಕ ಘರ್ಷಣೆಯಲ್ಲಿ ನಮ್ಮ 20 ಸೈನಿಕರು ವೀರಮರಣವನ್ನುಪ್ಪುತ್ತಿದ್ದಂತೆ ಮೋದಿ ಮೆಗಾ ಮೀಟಿಂಗ್ ನಡೆಸಿದ್ರು. ದೆಹಲಿಯ ತಮ್ಮ ನಿವಾಸದಲ್ಲಿ ಬ್ಯಾಕ್ ಟು ಬ್ಯಾಕ್ ಸಭೆ ನಡೆಸಿ ಇಂಚಿಂಚು ಮಾಹಿತಿ ಕಲೆ ಹಾಕಿದ್ರು.
ಚೀನಾ ಕಿರಿಕ್ ಕುರಿತು ತಡರಾತ್ರಿವರೆಗೂ ಮೋದಿ ಮೀಟಿಂಗ್!
ಯೆಸ್.. ಲಡಾಖ್ನ ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಕೆಂಪು ಸೈನಿಕರು- ಭಾರತೀಯ ಯೋಧರ ನಡುವೆ ಮಾರಾಣಾಂತಿಕ ಮಲ್ಲಯುದ್ಧ ನಡೆದಿದ್ದೆ ತಡ. ಪ್ರಧಾನಿ ನರೇಂದ್ರ ಮೋದಿ ದೆಹಲಿಯ ತಮ್ಮ ನಿವಾಸದಲ್ಲಿ ನಿನ್ನೆ ತಡರಾತ್ರಿವರೆಗೂ ಭದ್ರತಾ ಸಂಪುಟ ಉಪಸಮಿತಿ ಸಭೆ ನಡೆಸಿದ್ರು.
ಈ ಮಹತ್ವದ ಮೀಟಿಂಗ್ನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್, ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಉಪಸ್ಥಿತರಿದ್ರು. ಈ ವೇಳೆ ಗಡಿಯಲ್ಲಿನ ಪರಿಸ್ಥಿತಿ ಚೀನಾ ಸೈನಿಕರ ಕ್ಯಾತೆ ಬಗ್ಗೆ ಪ್ರಧಾನಿ ಮೋದಿ ಇಂಚಿಂಚು ಮಾಹಿತಿ ಕಲೆ ಹಾಕಿದ್ರು. ಇಷ್ಟೇ ಅಲ್ಲ, ಗಡಿಯಲ್ಲಿ ಭಾರತೀಯ ಸೇನೆ ನಿಯೋಜನೆ ಬಗ್ಗೆಯೂ ಪ್ರಧಾನಿ ಮೋದಿ ಇನ್ಫರ್ಮೆಷನ್ ಪಡೆದ್ರು.
ಇತ್ತ, ಕಗ್ಗತ್ತಲಲ್ಲಿ ಬಂದು ಕಿರಿಕ್ ಮಾಡಿರೋ ಕುತಂತ್ರ ಚೀನಾಕ್ಕೆ ಭಾರತೀಯ ಸೇನೆ ತಕ್ಕ ಪಾಠ ಕೂಡ ಕಲಿಸಿದೆ. ಇಂಡೋ-ಚೀನಾ ಗಡಿ ಭಾಗದ ಲಡಾಕ್‍ನಲ್ಲಿ ನಡೆದ ಕಾಳಗದಲ್ಲಿ ಸಾವು-ನೋವು ಸಂಭವಿಸಿರೋದ್ರಿಂದ ರಕ್ಷಣಾ ಸಚಿವ ರಾಜನಾಥ ಸಿಂಗ್ ಕೂಡ ನಿನ್ನೆ ಉನ್ನತ ಮಟ್ಟದ ತುರ್ತು ಸಭೆ ನಡೆಸಿದರು.
ಭಾರತೀಯ ಮೂರು ಸಶಸ್ತ್ರ ಪಡೆಗಳ ಮಹಾ ದಂಡನಾಯಕ ಜನರಲ್ ಬಿಪಿನ್ ರಾವತ್, ಭೂ ಸೇನೆ, ವಾಯು ದಳ ಮತ್ತು ನೌಕಾ ಪಡೆಯ ಮುಖ್ಯಸ್ಥರೊಂದಿಗೆ ಉನ್ನತ ಮಟ್ಟದ ಸಭೆ ನಡೆಸಿ ಗಡಿಯಲ್ಲಿನ ಪರಿಸ್ಥಿತಿಯನ್ನು ಪರಾಮರ್ಶಿಸಿದರು. ಪೂರ್ವ ಲಡಾಕ್‍ನ ಗಲ್ವನ್ ಪ್ರದೇಶದಲ್ಲಿ ತಲೆದೋರಿರುವ ಉದ್ವಿಗ್ನ ಪರಿಸ್ಥಿತಿ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂದಿನ ಕ್ರಮಗಳ ಬಗ್ಗೆ ಸಭೆಯಲ್ಲಿ ಗಹನ ಚರ್ಚೆ ನಡೆಸಲಾಗಿದೆ.
ಚೀನಾ ಮೊಂಡಾಟದ ಬಗ್ಗೆ ರಾಜನಾಥ್ ಸಿಂಗ್ ಆಕ್ರೋಶ!
ಇಷ್ಟೇ ಅಲ್ಲ, ಶಾಂತಿ ಸಂಧಾನದ ಭರವಸೆ ನೀಡುತ್ತಲೇ ನರಿ ಬುದ್ಧಿ ಪ್ರದರ್ಶಿಸಿರುವ ಚೀನಾ ವರ್ತನೆ ಬಗ್ಗೆ ರಾಜನಾಥ ಸಿಂಗ್ ಮತ್ತು ಸೇನಾ ಮುಖ್ಯಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ ಅಂತ ಉನ್ನತ ಮೂಲಗಳು ತಿಳಿಸಿವೆ. ಕೊರೊನಾದಂತಹ ಬಿಗುವಿನ ಪರಿಸ್ಥಿತಿಯಲ್ಲೂ ಚೀನಾ ಗಡಿಯಲ್ಲಿ ಸಂಯಮ ಕಾಯ್ದುಕೊಳ್ಳದೆ ಕಿರಿಕ್ ಮಾಡ್ತಿದೆ. ನಮ್ಮ ಯೋಧರ ಮೇಲೆ ದಾಳಿ ಮಾಡ್ತಿರೋದು ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಚೀನಾ ಆರೋಪಕ್ಕೆ ಭಾರತದಿಂದ ಖಡಕ್ ತಿರುಗೇಟು!
ಲಡಾಖ್ನ ಗಾಲ್ವಾನ್ ಗಡಿ ಪ್ರದೇಶದಲ್ಲಿ ಕೆಂಪು ಸೈನಿಕರ ಕಾದಾಟಕ್ಕೆ ಸಂಬಂಧಿಸಿದಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಪ್ರಕಟಣೆ ಹೊರಡಿಸಿದೆ. ಭಾರತೀಯ ಸೇನೆ ಗಡಿ ನಿಯಮ ಉಲ್ಲಂಘನೆ ಮಾಡಿಲ್ಲ. ಜೂನ್ 15ರ ರಾತ್ರಿ ಚೀನಾ ಸೇನೆ ನುಸುಳಲು ಯತ್ನಿಸಿತ್ತು, ಚೀನಾ ಶಿಷ್ಟಾಚಾರ ಪಾಲಿಸಿದ್ದರೆ ಘರ್ಷಣೆ ಆಗುತ್ತಿರಲಿಲ್ಲ. ಸೈನಿಕರ ನಡುವೆ ಘರ್ಷಣೆಯಲ್ಲಿ 2 ಕಡೆ ಹಾನಿಯಾಗಿದೆ ಅಂತ ಪಾಪಿ ಚೀನಾಕ್ಕೆ ಭಾರತ ಖಡಕ್ ತಿರುಗೇಟು ನೀಡಿದೆ.
ಭಾರತದ ಭೂಭಾಗ ರಕ್ಷಿಸಲು ಸೇನೆ ಸರ್ವ ಸನ್ನದ್ಧವಾಗಿದೆ!
ಗಾಲ್ವಾನ್ನಲ್ಲಿ ಯುದ್ಧೋನ್ಮಾದ ಸ್ಥಿತಿ ನಿರ್ಮಾಣವಾಗಿದ್ರೆ, ಉದ್ವಿಗ್ನ ಸ್ಥಿತಿ ಶಮನದ ಕುರಿತು ಭಾರತೀಯ ಸೇನೆ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ಮೊನ್ನೆ ಸಂಜೆಯಿಂದ ಮಧ್ಯರಾತ್ರಿಯವರೆಗೆ ಘರ್ಷಣೆ ನಡೆದಿದ್ದು ನಿಜ. ಭಾರತದ ಭೂಭಾಗವನ್ನು ರಕ್ಷಿಸಲು ಸೇನೆ ಸರ್ವ ಸನ್ನದ್ಧವಾಗಿದೆ ಅಂತ ಗಾಲ್ವಾನ್ ಕಣಿವೆ ಘರ್ಷಣೆ ಕುರಿತು ಸೇನೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.
ಭಾರತ-ಚೀನಾ ಘರ್ಷಣೆ ಬಗ್ಗೆ ವಿಶ್ವಸಂಸ್ಥೆ ಕಳವಳ!
ಲಡಾಖ್ನಲ್ಲಿ ಚೀನಾ, ಭಾರತದ ಸೈನಿಕರ ಘರ್ಷಣೆ ಸಂಬಂಧಿಸಿದಂತೆ ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ. ಗಡಿ ರೇಖೆಯಲ್ಲಿ ಹಿಂಸಾಚಾರ, ಸಾವುನೋವು ವರದಿ ಬಗ್ಗೆ ನಾವು ಕಳವಳ ಹೊಂದಿದ್ದೇವೆ. ಎರಡೂ ದೇಶಗಳ ಗರಿಷ್ಠ ಸಂಯಮ ಕಾಯ್ದುಕೊಳ್ಳಬೇಕು. ಎರಡೂ ಕಡೆಯವರನ್ನು ನಾವು ಒತ್ತಾಯಿಸಿಸ್ತೀವಿ ಅಂತ ವಿಶ್ವಸಂಸ್ಥೆ ಕಾರ್ಯದರ್ಶಿ ಌಂಟೊನಿಯೊ ಗುಟೆರೆಸ್ ಮನವಿ ಮಾಡಿದ್ದಾರೆ.
ಒಟ್ನಲ್ಲಿ ಗಡಿಯಲ್ಲಿ ಚೀನಾ ಮಾಡಿರೋ ಲಡಾಯಿಗೆ ಭಾರತೀಯ ಏನೆ ತಕ್ಕ ಪಾಠ ಕಲಿಸಿದೆ. ಗಾಲ್ವಾನ್ ಗಡಿಯಲ್ಲಿ ಪರಿಸ್ಥಿತಿ ಬೂದು ಮುಚ್ಚಿದ ಕೆಂಡದಂತಾಗಿದ್ದು ಪ್ರಧಾನಿ ಮೋದಿ ಸರ್ಕಾರ ಕೂಡ ಎಂಥಾ ಪರಿಸ್ಥಿತಿ ಎದುರಿಸೋಕೆ ಸರ್ವ ಸನ್ನದ್ಧವಾಗಿದೆ.
Published On - 7:30 am, Wed, 17 June 20