ದೆಹಲಿ: ಭಾರತದಲ್ಲಿ ಕೊರೊನಾ ಎರಡನೇ ಅಲೆ ವಿಪರೀತವಾಗಿ ಹೆಚ್ಚುತ್ತಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ನಿನ್ನೆ ಉನ್ನತ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಕೊವಿಡ್ 19 ಕೇಸ್ಗಳು ಹೆಚ್ಚುತ್ತಿರುವ, ನಿಯಂತ್ರಣಕ್ಕೆ ತೆಗೆದುಕೊಳ್ಳಲಾಗುತ್ತಿರುವ ಕ್ರಮಗಳು ಮತ್ತು ಲಸಿಕೆ ವಿತರಣೆಯ ಬಗ್ಗೆ ಚರ್ಚಿಸಿ, ಸ್ಥಿತಿಗತಿಗಳನ್ನು ಪರಿಶೀಲಿಸಿದರು. ಕೊರೊನಾ ನಿಯಂತ್ರಣಕ್ಕಾಗಿ ಟೆಸ್ಟಿಂಗ್, ಟ್ರ್ಯಾಕಿಂಗ್ ಮತ್ತು ಟ್ರೀಟ್ಮೆಂಟ್ (ತಪಾಸಣೆ, ಸೋಂಕಿತರ ಸಂಪರ್ಕಿತರನ್ನು ಪತ್ತೆಹಚ್ಚುವುದು ಮತ್ತು ಚಿಕಿತ್ಸೆ)ಗೆ ಪರ್ಯಾಯವಾಗಿ ಇನ್ನೇನೂ ಮಾಡಲು ಸಾಧ್ಯವಿಲ್ಲ ಎಂದು ಸಭೆಯಲ್ಲಿ ಹೇಳಿದ ಪ್ರಧಾನಿ ನರೇಂದ್ರ ಮೋದಿ, ಲಸಿಕೆ ಉತ್ಪಾದನೆ, ವಿತರಣೆಗಾಗಿ ಸಂಪೂರ್ಣವಾಗಿ ಈ ರಾಷ್ಟ್ರದ ಸಾಮರ್ಥ್ಯವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಟೆಸ್ಟಿಂಗ್, ಟ್ರ್ಯಾಕಿಂಗ್, ಟ್ರೀಟ್ಮೆಂಟ್ ಎಂಬ ತ್ರಿಬಲ್ ಟಿ ಸೂತ್ರವನ್ನು ಕಳೆದ ವರ್ಷವೇ ಪ್ರಧಾನಿ ನರೇಂದ್ರ ಮೋದಿ ಪ್ರಸ್ತುತ ಪಡಿಸಿದ್ದರು. ಅದನ್ನೇ ಈಗ ಪುನರುಚ್ಚರಿಸಿದ ಅವರು, ಕಳೆದ ಬಾರಿ ಕೊರೊನಾ ವೈರಸ್ನ್ನು ನಮ್ಮ ಭಾರತ ಯಶಸ್ವಿಯಾಗಿ ಮಣಿಸಿದೆ. ಕಳೆದ ಬಾರಿ ಕೊರೊನಾ ವಿರುದ್ಧ ಹೋರಾಡಲು ಅಳವಡಿಸಿಕೊಂಡಿದ್ದ ಸಂಕಲ್ಪ, ತತ್ವ, ಶಿಸ್ತಿನ ಪ್ರಯೋಗವನ್ನು ಈ ಬಾರಿಯೂ ಮಾಡಬೇಕು ಎಂದು ಹೇಳಿದರು.
ಆಕ್ಸಿಜನ್, ರೆಮ್ಡಿಸಿವಿರ್ ಔಷಧ, ವೆಂಟಿಲೇಟರ್ಗಳ ಕೊರತೆ, ಲಸಿಕೆಯ ಬಗ್ಗೆ ಪ್ರಧಾನಿ ಸುದೀರ್ಘ ಚರ್ಚೆ ನಡೆಸಿದ್ದಾರೆ. ವೈದ್ಯಕೀಯ ಆಕ್ಸಿಜನ್ ಕೊರತೆ ನೀಗಿಸಲು, ಅನುಮೋದಿತ ಆಕ್ಸಿಜನ್ ಪ್ಲಾಂಟ್ಗಳ ಅಳವಡಿಕೆ ಕಾರ್ಯವನ್ನು ತ್ವರಿತಗೊಳಿಸಬೇಕು. PM-CARES ಫಂಡ್ನಿಂದ 32 ರಾಜ್ಯಗಳಲ್ಲಿ ಒಟ್ಟು 162 ಆಕ್ಸಿಜನ್ ಸ್ಥಾವರಗಳನ್ನು ಅಳವಡಿಸಿದ ಬಗ್ಗೆಯೂ ಮೋದಿಯವರ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಸರ್ಕಾರ ಪ್ರಕಟಣೆ ಬಿಡುಗಡೆ ಮಾಡಿದೆ. ಹಾಗೇ, ಔಷಧಗಳ ಕೊರತೆ ನೀಗಿಸಲು ದೇಶದ ಔಷಧ ಉದ್ಯಮದ ಸಂಪೂರ್ಣ ಸಾಮರ್ಥ್ಯ ಬಳಕೆಯಾಗಬೇಕು ಎಂದೂ ಮೋದಿ ಹೇಳಿದ್ದಾರೆ. ಹಾಗೇ, ಎಲ್ಲ ರಾಜ್ಯಗಳ ಸ್ಥಳೀಯ ಆಡಳಿತಗಳು ಆಯಾ ಪ್ರದೇಶದ ಜನರ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ಪರಸ್ಪರ ಸಹಕಾರದಿಂದ ಕೊವಿಡ್ 19 ಸಾಂಕ್ರಾಮಿಕದ ವಿರುದ್ಧ ಹೋರಾಡಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಭೀಕರ ಮಹಾಮಾರಿ ನಡುವೆ ವೈದ್ಯರ ನಿರ್ಲಕ್ಷ್ಯ.. ಕೊರೊನಾ ದೃಢವಾಗುತ್ತಿದ್ದಂತೆ ಡಿಸ್ಚಾರ್ಜ್, ಆಸ್ಪತ್ರೆಗಳ ಮುಂದೆ ನರಳಾಟ
ದೆಹಲಿಯಲ್ಲಿ ಆಕ್ಸಿಜನ್, ರೆಮ್ಡಿಸಿವಿರ್ ಔಷಧಗಳ ತೀವ್ರ ಕೊರತೆ: ಆತಂಕ ವ್ಯಕ್ತಪಡಿಸಿದ ಸಿಎಂ ಅರವಿಂದ್ ಕೇಜ್ರಿವಾಲ್
Published On - 9:56 am, Sun, 18 April 21