ಪ್ರಧಾನಿ ಮೋದಿ ನಿವಾಸಕ್ಕೆ ಭೇಟಿಕೊಟ್ಟ ಅಫ್ಘಾನ್​​ ಹಿಂದು-ಸಿಖ್​ ಮುಖಂಡರು; ನರೇಂದ್ರ ಮೋದಿಯವರಿಗೆ ರುಮಾಲು, ಸಾಂಪ್ರದಾಯಿಕ ಉಡುಪು ಉಡುಗೊರೆ

| Updated By: Lakshmi Hegde

Updated on: Feb 19, 2022 | 6:00 PM

ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದ ಹಿಂದು-ಸಿಖ್​ ಮುಖಂಡರ ನಿಯೋಗವೊಂದು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿತ್ತು. ಅವರ ಬಳಿ ಮಾತನಾಡಿದ ಮೋದಿ, ಭಾರತ ನಿಮಗೆ ಮನೆಯೇ ಹೊರತು, ನೀವು ಇಲ್ಲಿ ಅತಿಥಿಗಳಲ್ಲ ಎಂದಿದ್ದಾರೆ.

ಪ್ರಧಾನಿ ಮೋದಿ ನಿವಾಸಕ್ಕೆ ಭೇಟಿಕೊಟ್ಟ ಅಫ್ಘಾನ್​​ ಹಿಂದು-ಸಿಖ್​ ಮುಖಂಡರು; ನರೇಂದ್ರ ಮೋದಿಯವರಿಗೆ ರುಮಾಲು, ಸಾಂಪ್ರದಾಯಿಕ ಉಡುಪು ಉಡುಗೊರೆ
ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾದ ಅಫ್ಘಾನ್​ ಸಿಖ್​-ಹಿಂದು ಮುಖಂಡರು
Follow us on

ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi)  ನಿವಾಸಕ್ಕೆ ಅಫ್ಘಾನಿಸ್ತಾನದ ಹಿಂದು ಮತ್ತು ಸಿಖ್​ ಸಮುದಾಯದ ನಾಯಕರನ್ನೊಳಗೊಂಡ ನಿಯೋಗ (Delegation of Sikhs and Hindus from Afghanistan)  ಭೇಟಿ ಕೊಟ್ಟಿತ್ತು.  ಹೀಗೆ ಮುಂಜಾನೆ ತಮ್ಮ ನಿವಾಸಕ್ಕೆ ಆಗಮಿಸಿದ ಅಫ್ಘಾನ್​ ಮೂಲದ ಹಿಂದು ಮತ್ತು ಸಿಖ್​ ನಾಯಕರಿಗೆ, ಭಾರತ ನಿಮ್ಮ ಮನೆಯೇ ಹೊರತು, ನೀವಿಲ್ಲ ಅತಿಥಿಗಳಲ್ಲ. ಭಾರತೀಯರು ನಿಮ್ಮನ್ನು ಪ್ರೀತಿಸುತ್ತಾರೆ ಮತ್ತು ಗೌರವಿಸುತ್ತಾರೆ ಎಂದು ಹೇಳಿದ್ದಾರೆ. ಹಾಗೇ, ಈ ನಿಯೋಗವನ್ನು ಭೇಟಿಯಾದ ಬಗ್ಗೆ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಫೋಟೋಗಳನ್ನು ಶೇರ್ ಮಾಡಿಕೊಂಡು, ಅಫ್ಘಾನ್​​ನಿಂದ ನಿರಾಶ್ರಿತರಾಗಿ ಭಾರತಕ್ಕೆ ಬಂದವರನ್ನು ಇಂದು ಭೇಟಿಯಾದೆ ಎಂದು ಕ್ಯಾಪ್ಷನ್​ ಬರೆದುಕೊಂಡಿದ್ದಾರೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ ಆಡಳಿತಕ್ಕೆ ಬಂದ ಮೇಲೆ ಅಲ್ಲಿನ ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದು ಮತ್ತು ಸಿಖ್​ರು ಅನೇಕರು ಭಾರತಕ್ಕೆ ಬಂದಿದ್ದಾರೆ. ಹೀಗೆ ಅಫ್ಘಾನಿಸ್ತಾನದಿಂದ ಭಾರತಕ್ಕೆ ಬಂದವರ ನಿಯೋಗವೊಂದು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರನ್ನು ಭೇಟಿಯಾಗಿತ್ತು. ಹಾಗೇ, ಪ್ರಧಾನಿ ಮೋದಿಯವರಿಗೆ ಅಫ್ಘಾನ್​ ಪೇಟ ಮತ್ತು ಸಾಂಪ್ರದಾಯಿಕ ಉಡುಗೆಯೊಂದನ್ನು ನೀಡಿದ್ದಾರೆ. ಈ ಪೇಟ (ಟರ್ಬನ್​) ಅಫ್ಘಾನಿಸ್ತಾನದ ಸಂಕೇತವಾಗಿದೆ. ನೀವಿದನ್ನು ಧರಿಸಿದರೆ ಅಫ್ಘಾನ್​​ ಮಾಜಿ ಅಧ್ಯಕ್ಷ ಹಮೀದ್ ಕರ್ಜಾಯಿ ಅವರಿಗೆ ನಿಜಕ್ಕೂ ಸಂತೋಷವಾಗಲಿದೆ ಎಂದು ಅವರು ಪಿಎಂಗೆ ಹೇಳಿದ್ದಾರೆ.

ಇಂದು ಅಫ್ಘಾನಿಸ್ತಾನ ಹಿಂದೂ-ಸಿಖ್​ ಸಮುದಾಯದವರು ತಮ್ಮನ್ನು ಭೇಟಿಯಾದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ, ತಾವು 2015ರಲ್ಲಿ ಅಫ್ಘಾನ್​ ಸಂಸತ್ತನ್ನು ಉದ್ದೇಶಿಸಿ ಮಾತನಾಡಿದ್ದನ್ನು ನೆನಪಿಸಿಕೊಂಡರು. ಇನ್ನು ಭೇಟಿಗೆ ಬಂದ ಅಫ್ಘಾನ್​ ಅಲ್ಪಸಂಖ್ಯಾತರು, ತಾಲಿಬಾನ್​ ಆಕ್ರಮಣ ಮಾಡಿದಾಗ ತಮಗೆ ಭಾರತ ಸರ್ಕಾರ ನೀಡಿದ ನೆರವನ್ನು ನೆನಪಿಸಿಕೊಂಡು, ಕೃತಜ್ಞತೆ ಸಲ್ಲಿಸಿದರು.  ಮುಂದಿನ ವಾರ ಭಾರತ ಅಫ್ಘಾನಿಸ್ತಾನದ ಜನರಿಗಾಗಿ ಸುಮಾರು 50 ಸಾವಿರ ಮೆಟ್ರಿಕ್​ ಟನ್​ಗಳಷ್ಟು ಗೋಧಿ ಕಳಿಸಿಕೊಡಲಿದೆ. ಗೋಧಿಯನ್ನು ಹೊತ್ತು ಹೋಗುವ ಅಫ್ಘಾನ್​ ಟ್ರಕ್​ ಪಾಕಿಸ್ತಾನಿ ಭೂಪ್ರದೇಶದ ಮೂಲಕವೇ ಹಾದುಹೋಗಲಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ಅರಿಂದಾಮ್​ ಬಾಗ್ಚಿ ಗುರುವಾರ ತಿಳಿಸಿದ್ದಾರೆ.

ನಿನ್ನೆ (ಫೆ.18) ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮನೆಯಲ್ಲಿ ಭಾರತದ ಹಿರಿಯ ಸಿಖ್​ ನಾಯಕರೊಂದಿಗೆ ಸಂವಾದ ನಡೆಸಿದ್ದರು. ಪಂಜಾಬ್​ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಿಖ್​ ನಾಯಕರನ್ನು ಭೇಟಿ ಮಾಡಿದ್ದ ಅವರು, 1947 ರ ವಿಭಜನೆಯ ಸಮಯದಲ್ಲಿ ಸಿಖ್ ಪುಣ್ಯಕ್ಷೇತ್ರ ಕರ್ತಾರ್‌ಪುರ ಸಾಹಿಬ್​​ನ್ನು ಭಾರತದಲ್ಲಿಯೇ ಉಳಿಸಿಕೊಳ್ಳಲು ಕಾಂಗ್ರೆಸ್ ವಿಫಲವಾಗಿದೆ ಎಂದೂ ಹೇಳಿದ್ದರು.

ಇದನ್ನೂ ಓದಿ:  ಭಾರತ 1947ರಲ್ಲಿ ಹುಟ್ಟಿಲ್ಲ: ಹಿರಿಯ ಸಿಖ್ ನಾಯಕರೊಂದಿಗೆ ಸಂವಾದ ನಡೆಸಿದ ಪ್ರಧಾನಿ ಮೋದಿ

Published On - 5:34 pm, Sat, 19 February 22