ಪಾಕಿಸ್ತಾನದಿಂದ ರಾಹುಲ್ ಗಾಂಧಿ, ಕೇಜ್ರಿವಾಲ್​ಗೆ ಬೆಂಬಲ; ಮೋದಿ ಹೇಳಿದ್ದೇನು?

|

Updated on: May 27, 2024 | 6:17 PM

ಪಾಕಿಸ್ತಾನದ ಮಾಜಿ ಸಚಿವ ಫವಾದ್ ಚೌಧರಿ ಇತ್ತೀಚೆಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಬೆಂಬಲಕ್ಕೆ ಘೋಷಿಸಿದ್ದರು. ಅಕ್ರಮ ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಚೌಧರಿ ಕೇಜ್ರಿವಾಲ್ ಅವರನ್ನು ಬೆಂಬಲಿಸಿದ್ದರು. ರಾಹುಲ್ ಗಾಂಧಿಗೂ ಚೌಧರಿ ಬೆಂಬಲ ನೀಡಿದ್ದರು.

ಪಾಕಿಸ್ತಾನದಿಂದ ರಾಹುಲ್ ಗಾಂಧಿ, ಕೇಜ್ರಿವಾಲ್​ಗೆ ಬೆಂಬಲ; ಮೋದಿ ಹೇಳಿದ್ದೇನು?
ಪ್ರಧಾನಿ ನರೇಂದ್ರ ಮೋದಿ
Follow us on

ನವದೆಹಲಿ: ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್‌ಗೆ (Arvind Kejriwal) ಪಾಕಿಸ್ತಾನ ಹೊರಗಿನಿಂದ ಬೆಂಬಲ ನೀಡಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಿದ್ದಾರೆ. “ಇದು ತನಿಖೆ ಮಾಡಬೇಕಾದ ಅತ್ಯಂತ ಗಂಭೀರವಾದ ವಿಷಯವಾಗಿದೆ” ಎಂದು ಹೇಳಿದ್ದಾರೆ.

ಐಎಎನ್‌ಎಸ್‌ ಸುದ್ದಿ ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, “ನಾನು ಈಗಿರುವ ಸ್ಥಾನದಿಂದ ಅಂತಹ ವಿಷಯಗಳ ಬಗ್ಗೆ ನಾನು ಕಾಮೆಂಟ್ ಮಾಡಲು ನಾನು ಬಯಸುವುದಿಲ್ಲ. ಆದರೆ ನಿಮ್ಮ ಕಾಳಜಿಯನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ” ಎಂದು ಸೇರಿಸಿದ್ದಾರೆ. ದೆಹಲಿಯಲ್ಲಿ ಲೋಕಸಭೆ ಚುನಾವಣೆ ನಡೆದಿದೆ. ಈ ವೇಳೆ ಪಾಕಿಸ್ತಾನದ ಮಾಜಿ ಸಚಿವ ಚೌಧರಿ ಫವಾದ್ ಹುಸೇನ್ ರಾಹುಲ್ ಗಾಂಧಿಯವರ ವಿಡಿಯೋವನ್ನು ಹಂಚಿಕೊಂಡಿದ್ದರು. ಆ ವೇಳೆ ರಾಹುಲ್ ಗಾಂಧಿಯನ್ನು ಹೊಗಳಿದ್ದರು. ಅರವಿಂದ್ ಕೇಜ್ರಿವಾಲ್ ಅವರನ್ನು ಕೂಡ ಇದೇ ವೇಳೆ ಹೊಗಳಿದ್ದರು.

ಇದನ್ನೂ ಓದಿ: ಪ್ರಧಾನಿ ಹುದ್ದೆಗೆ ಅಮಿತ್ ಶಾಗೆ ಮೋದಿ ದಾರಿ ಕ್ಲಿಯರ್ ಮಾಡುತ್ತಿದ್ದಾರೆ; ಅರವಿಂದ್ ಕೇಜ್ರಿವಾಲ್

ಈ ವಿಷಯದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪಿಎಂ ನರೇಂದ್ರ ಮೋದಿ, “ನಮ್ಮೊಂದಿಗೆ ದ್ವೇಷ ಹೊಂದಿರುವವರು ಕೆಲವೇ ಜನರನ್ನು ಏಕೆ ಇಷ್ಟಪಡುತ್ತಾರೆ, ಅವರ ಪರವಾಗಿ ಏಕೆ ಬೆಂಬಲದ ಧ್ವನಿ ಎತ್ತುತ್ತಾರೆ ಎಂದು ನನಗೆ ತಿಳಿದಿಲ್ಲ. ಇದು ಕಳವಳದ ಸಂಗತಿ. ಆದರೆ, ಭಾರತೀಯ ಮತದಾರರು ಪ್ರಬುದ್ಧರಾಗಿದ್ದಾರೆ ಮತ್ತು ಗಡಿಯಾಚೆಗಿನ ನಮ್ಮ ವಿರೋಧ ಪಕ್ಷದವರ ಪರವಾದ ಹೇಳಿಕೆಗಳು ಭಾರತದಲ್ಲಿನ ಚುನಾವಣೆಯ ಮೇಲೆ ಪರಿಣಾಮ ಬೀರುವುದಿಲ್ಲ ” ಎಂದು ಹೇಳಿದ್ದಾರೆ.

ಇಮ್ರಾನ್ ಖಾನ್ ಅವರ ಸಂಪುಟದಲ್ಲಿ ಸಚಿವರಾಗಿದ್ದ ಚೌಧರಿ ಅವರು ಈ ಹಿಂದೆ ಅರವಿಂದ್ ಕೇಜ್ರಿವಾಲ್ ಅವರು ಸುಪ್ರೀಂ ಕೋರ್ಟ್‌ನಿಂದ ಮಧ್ಯಂತರ ಜಾಮೀನು ಪಡೆದಾಗ ಸಂತಸ ವ್ಯಕ್ತಪಡಿಸಿದ್ದರು. “ಮೋದಿಯವರು ಮತ್ತೊಂದು ಯುದ್ಧದಲ್ಲಿ ಸೋತಿದ್ದಾರೆ. ಕೇಜ್ರಿವಾಲ್ ಬಿಡುಗಡೆಯಾಗಿದ್ದಾರೆ. ಭಾರತಕ್ಕೆ ಒಳ್ಳೆಯ ಸುದ್ದಿ ಕೇಳಿಬರುತ್ತಿದೆ” ಎಂದು ಅವರು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ್ದರು.

ಅದಾದ ಬಳಿಕ ಅರವಿಂದ್ ಕೇಜ್ರಿವಾಲ್ ಕುರಿತೂ ಚೌಧರಿ ಪೋಸ್ಟ್ ಮಾಡಿದ್ದರು. ಕೇಜ್ರಿವಾಲ್ ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಪೋಸ್ಟ್ ಮಾಡಿದ್ದ ಚೌಧರಿ “ಶಾಂತಿ ಮತ್ತು ಸಾಮರಸ್ಯವು ದ್ವೇಷ ಮತ್ತು ಉಗ್ರವಾದದ ಶಕ್ತಿಗಳನ್ನು ಸೋಲಿಸಲಿ #MorePower #IndiaElection2024” ಎಂದು ಪ್ರತಿಕ್ರಿಯಿಸಿದ್ದರು.

ಇದನ್ನೂ ಓದಿ: ಮಧ್ಯಂತರ ಜಾಮೀನು ಅವಧಿ ವಿಸ್ತರಿಸುವಂತೆ ಕೋರಿ ಸುಪ್ರೀಂಕೋರ್ಟ್​ ಮೆಟ್ಟಿಲೇರಿದ ಅರವಿಂದ್ ಕೇಜ್ರಿವಾಲ್

ಆದರೆ, ಇದಕ್ಕೆ ಅರವಿಂದ್ ಕೇಜ್ರಿವಾಲ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದರು. “ಚೌಧರಿ ಸಾಹಿಬ್, ನಾನು ಮತ್ತು ನನ್ನ ದೇಶದ ಜನರು ನಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಮರ್ಥರಾಗಿದ್ದೇವೆ. ನಿಮ್ಮ ಟ್ವೀಟ್ ನಮಗೆ ಅಗತ್ಯವಿಲ್ಲ. ಇದೀಗ, ಪಾಕಿಸ್ತಾನ ಭಯಾನಕ ಸ್ಥಿತಿಯಲ್ಲಿದೆ. ನಿಮ್ಮದೇ ದೇಶವನ್ನು ನೀವು ನಿಭಾಯಿಸಿ” ಎಂದು ಪೋಸ್ಟ್ ಮಾಡಿದ್ದರು.

ಇದಕ್ಕೂ ಮೊದಲು, ರಾಹುಲ್ ಗಾಂಧಿಗೆ ಪಾಕ್ ಮಾಜಿ ಸಚಿವ ಚೌಧರಿ ಅವರ ಬೆಂಬಲವು ರಾಜಕೀಯ ಬಿರುಗಾಳಿಯನ್ನು ಎಬ್ಬಿಸಿತ್ತು. ಕೇಂದ್ರ ಸಚಿವ ರಾಜನಾಥ್ ಸಿಂಗ್ ಸೇರಿದಂತೆ ವಿವಿಧ ಬಿಜೆಪಿ ನಾಯಕರು ಕಾಂಗ್ರೆಸ್‌ ವಿರುದ್ಧ ಟೀಕೆ ಮಾಡಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:14 pm, Mon, 27 May 24