ಚಳಿಗಾಲದ ಅಧಿವೇಶನಕ್ಕೂ ಮುನ್ನ ನಡೆದ  ಸರ್ವಪಕ್ಷ ಸಭೆಗೆ ಪ್ರಧಾನಿ ಮೋದಿ ಗೈರು; ವಿಪಕ್ಷಗಳಿಂದ ವಾಗ್ದಾಳಿ

| Updated By: ರಶ್ಮಿ ಕಲ್ಲಕಟ್ಟ

Updated on: Nov 28, 2021 | 4:13 PM

ಈ ಮೂರು ಕೃಷಿ ಕಾನೂನುಗಳು ಮತ್ತೆ ಬೇರೆ ರೂಪದಲ್ಲಿ ಬರಬಹುದು ಎಂಬ ಕೆಲವು ಆತಂಕಗಳಿರುವುದರಿಂದ ನಾವು ಕೃಷಿ ಕಾನೂನುಗಳ ಬಗ್ಗೆ ಇನ್ನಷ್ಟು ಕೇಳಲು ಬಯಸಿದ್ದೇವೆ" ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದರು.

ಚಳಿಗಾಲದ ಅಧಿವೇಶನಕ್ಕೂ ಮುನ್ನ ನಡೆದ  ಸರ್ವಪಕ್ಷ ಸಭೆಗೆ ಪ್ರಧಾನಿ ಮೋದಿ ಗೈರು; ವಿಪಕ್ಷಗಳಿಂದ ವಾಗ್ದಾಳಿ
ಸರ್ವಪಕ್ಷ ಸಭೆಗೆ ಹಾಜರಾದ ಸದಸ್ಯರು
Follow us on

ದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನ (Winter Session) ಪ್ರಾರಂಭವಾಗುವ ಒಂದು ದಿನದ ಮೊದಲು ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು ತಮ್ಮ ಸರ್ಕಾರ ಕರೆದಿದ್ದ ಸರ್ವಪಕ್ಷ ಸಭೆಗೆ ಗೈರು ಹಾಜರಾಗಿದ್ದಾರೆ. ಸರ್ಕಾರದ ಕಡೆಯಿಂದ ರಕ್ಷಣಾ ಸಚಿವ ರಾಜನಾಥ ಸಿಂಗ್ (Rajnath Singh), ವಾಣಿಜ್ಯ ಸಚಿವ ಪಿಯೂಷ್ ಗೋಯಲ್ (Piyush Goyal) ಉಪಸ್ಥಿತರಿದ್ದರು. “ಪ್ರಧಾನಿ ಸಭೆಯಲ್ಲಿ ಭಾಗವಹಿಸುತ್ತಾರೆ ಮತ್ತು ನಮ್ಮೊಂದಿಗೆ ಏನನ್ನಾದರೂ ಹಂಚಿಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸಿದ್ದೇವೆ. ಈ ಮೂರು ಕೃಷಿ ಕಾನೂನುಗಳು ಮತ್ತೆ ಬೇರೆ ರೂಪದಲ್ಲಿ ಬರಬಹುದು ಎಂಬ ಕೆಲವು ಆತಂಕಗಳಿರುವುದರಿಂದ ನಾವು ಕೃಷಿ ಕಾನೂನುಗಳ ಬಗ್ಗೆ ಇನ್ನಷ್ಟು ಕೇಳಲು ಬಯಸಿದ್ದೇವೆ” ಎಂದು ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹೇಳಿದರು.  ರೈತರ ಪ್ರತಿಭಟನೆ ವೇಳೆ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ. ಇಂಧನ ಬೆಲೆ ಏರಿಕೆ ಮತ್ತು ವಾಸ್ತವಿಕ ನಿಯಂತ್ರಣ ರೇಖೆಯಲ್ಲಿ ಚೀನಾದೊಂದಿಗಿನ ಉದ್ವಿಗ್ನತೆಗಳ ವಿಚಾರದ ಬಗ್ಗೆಯೂ ಕಾಂಗ್ರೆಸ್ ಮಾತೆತ್ತಿದೆ. ಸರ್ವಪಕ್ಷಗಳ ಸಭೆಯನ್ನು ಬಿಟ್ಟುಬಿಡುವ ಮೂಲಕ ಪ್ರಧಾನಿ ಸಂಪ್ರದಾಯವನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪವನ್ನು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ (Pralhad Joshi) ನಿರಾಕರಿಸಿದ್ದಾರೆ.  “ಮೋದಿಜಿಯವರು ಆರಂಭಿಸಿದ ಸರ್ವಪಕ್ಷ ಸಭೆಗೆ ಪ್ರಧಾನಿ ಭಾಗವಹಿಸುವ ಸಂಪ್ರದಾಯ ಇರಲಿಲ್ಲ. ಇಂದಿನ ಸಭೆಗೆ ಅವರು ಭಾಗವಹಿಸಲು ಸಾಧ್ಯವಾಗಲಿಲ್ಲ” ಎಂದು ಜೋಶಿ ಹೇಳಿದರು. 31 ಪಕ್ಷಗಳು ಸಭೆಯಲ್ಲಿ ಭಾಗವಹಿಸಿದ್ದವು.

ಎಎಪಿ ನಾಯಕ ಸಂಜಯ್ ಸಿಂಗ್ ಅವರು ಮಾತನಾಡಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿ ಸರ್ವಪಕ್ಷ ಸಭೆಯಿಂದ ಹೊರನಡೆದರು. ಸಿಂಗ್ ಅವರು ಕನಿಷ್ಟ ಬೆಂಬಲ ಬೆಲೆಗಳ ಮೇಲಿನ ಕಾನೂನಿಗೆ ಬಗ್ಗೆ ಬೇಡಿಕೆ ವಿಷಯ ಪ್ರಸ್ತಾಪಿಸಿದ್ದರು.

“ಸರ್ಕಾರದ ಸಭೆಯಲ್ಲಿ ಅವರು (ಸರ್ಕಾರ) ಯಾವುದೇ ಸದಸ್ಯರಿಗೆ ಮಾತನಾಡಲು ಬಿಡುವುದಿಲ್ಲ. ಸಂಸತ್ತಿನ ಈ ಅಧಿವೇಶನದಲ್ಲಿ ಎಂಎಸ್‌ಪಿ ಖಾತರಿಯ ಮೇಲೆ ಕಾನೂನು ತರಲು ಮತ್ತು ಬಿಎಸ್‌ಎಫ್‌ನ ಅಧಿಕಾರ ವ್ಯಾಪ್ತಿ ವಿಸ್ತರಣೆ ಸೇರಿದಂತೆ ಇತರ ವಿಷಯಗಳ ಕುರಿತು ನಾನು ಪ್ರಸ್ತಾಪಿಸಿದೆ. ಅವರು ಸರ್ವಪಕ್ಷಗಳ ಸಭೆ ಮತ್ತು ಸಂಸತ್ತಿನಲ್ಲಿ ಮಾತನಾಡಲು ಬಿಡುವುದಿಲ್ಲ ಎಂದು ಸಂಜಯ್ ಸಿಂಗ್ ಹೇಳಿದರು.

ಎಂಎಸ್‌ಪಿಗೆ ಶಾಸನಬದ್ಧ ನಿರ್ಣಯವನ್ನು ತರಲು ಸರ್ಕಾರ ಜಂಟಿ ಸಂಸದೀಯ ಸಮಿತಿಯನ್ನು ರಚಿಸಬೇಕು ಎಂದು ವೈಎಸ್‌ಆರ್ ಕಾಂಗ್ರೆಸ್ ಪಕ್ಷ ಆಗ್ರಹಿಸಿದೆ. ಉತ್ತರ ಪ್ರದೇಶದ ಲಖಿಂಪುರ ಖೇರಿಯಲ್ಲಿ ರೈತರ ಮೇಲೆ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ಗೃಹ ಖಾತೆ ರಾಜ್ಯ ಸಚಿವ ಅಜಯ್ ಕುಮಾರ್ ಮಿಶ್ರಾ ಅವರನ್ನು ವಜಾಗೊಳಿಸುವಂತೆ ಬಹುತೇಕ ಎಲ್ಲ ವಿರೋಧ ಪಕ್ಷಗಳು ಒತ್ತಾಯಿಸಿವೆ.

ಸೋಮವಾರ ಅಧಿವೇಶನದ ಮೊದಲ ದಿನದಂದು ಲೋಕಸಭೆಯಲ್ಲಿ ಪರಿಚಯಿಸಲು ಮತ್ತು ಅಂಗೀಕಾರಕ್ಕಾಗಿ ಕೃಷಿ ಕಾನೂನುಗಳನ್ನು ರದ್ದುಗೊಳಿಸುವ ಸರ್ಕಾರದ ಮಸೂದೆಯನ್ನು ಪಟ್ಟಿ ಮಾಡಲಾಗಿದೆ.  ಈ ಮಸೂದೆಯನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಸದನದಲ್ಲಿ ಮಂಡಿಸಲಿದ್ದಾರೆ.
ಆಡಳಿತಾರೂಢ ಬಿಜೆಪಿ ಮತ್ತು ಪ್ರಮುಖ ವಿರೋಧ ಪಕ್ಷ ಕಾಂಗ್ರೆಸ್ ತಮ್ಮ ಸಂಸದರಿಗೆ ದಿನದಂದು ಹಾಜರಾಗುವಂತೆ ವಿಪ್ ಜಾರಿಗೊಳಿಸಿವೆ.

“ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕಾಯಿದೆ, 2020 ರ ರೈತರ (ಸಬಲೀಕರಣ ಮತ್ತು ರಕ್ಷಣೆ) ಒಪ್ಪಂದ, ರೈತರ ಉತ್ಪನ್ನ ವ್ಯಾಪಾರ ಮತ್ತು ವಾಣಿಜ್ಯ (ಪ್ರವರ್ತನೆ ಮತ್ತು ಅನುಕೂಲ ಕಾಯಿದೆ) ಕಾಯಿದೆಯನ್ನು ರದ್ದುಗೊಳಿಸುವ ಮಸೂದೆಯನ್ನು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಮಂಡಿಸಲಿದ್ದಾರೆ.

ಸಾಂಪ್ರದಾಯಿಕ ಅಧಿವೇಶನದ ಮುನ್ನಾದಿನದ ಸಭೆಯಲ್ಲಿ ಕಾಂಗ್ರೆಸ್‌ನಿಂದ ಮಲ್ಲಿಕಾರ್ಜುನ ಖರ್ಗೆ, ಅಧೀರ್ ರಂಜನ್ ಚೌಧರಿ ಮತ್ತು ಆನಂದ್ ಶರ್ಮಾ, ಡಿಎಂಕೆಯಿಂದ ಟಿಆರ್ ಬಾಲು ಮತ್ತು ತಿರುಚಿ ಶಿವ, ಎನ್‌ಸಿಪಿಯಿಂದ ಶರದ್ ಪವಾರ್, ಶಿವಸೇನೆಯಿಂದ ವಿನಾಯಕ ರಾವುತ್, ಸಮಾಜವಾದಿ ಪಕ್ಷದ ರಾಮಗೋಪಾಲ್ ಯಾದವ್ ಸೇರಿದಂತೆ ಪ್ರಮುಖ ವಿರೋಧ ಪಕ್ಷದ ನಾಯಕರು ಉಪಸ್ಥಿತರಿದ್ದರು. ಬಿಎಸ್ಪಿಯಿಂದ ಸತೀಶ್ ಮಿಶ್ರಾ, ಬಿಜೆಡಿಯಿಂದ ಪ್ರಸನ್ನ ಆಚಾರ್ಯ ಮತ್ತು ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ ಭಾಗಿಯಾಗಿದ್ದರು.

ಇದನ್ನೂ ಓದಿ: Tripura civic polls ತ್ರಿಪುರಾದ 8 ಮುನ್ಸಿಪಲ್ ಕೌನ್ಸಿಲ್​​ಗಳಲ್ಲಿ ಬಿಜೆಪಿಗೆ ಭರ್ಜರಿ ಗೆಲುವು; ಎಎಂಸಿ ಚುನಾವಣೆಯಲ್ಲಿ ಟಿಎಂಸಿಗೆ ಎರಡನೇ ಸ್ಥಾನ