ಹೊಸ ಸಂಸತ್ ಭವನಕ್ಕೆ ಶಂಕುಸ್ಥಾಪನೆ: ಕನ್ನಡ ನಾಡಿನ ಅನುಭವ ಮಂಟಪ ನೆನೆದ ಪ್ರಧಾನಿ ನರೇಂದ್ರ ಮೋದಿ
ಬಸವಣ್ಣನವರ ಅನುಭವ ಮಂಟಪದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, 12ನೇ ಶತಮಾನದಲ್ಲಿ ಅನುಭವ ಮಂಟಪ ಅಸ್ತಿತ್ವದಲ್ಲಿತ್ತು. ಅನುಭವ ಮಂಟಪ ನಾಡಿನ ಅಭಿವೃದ್ಧಿ ಮತ್ತು ಉನ್ನತಿಗೆ ಕೆಲಸ ಮಾಡುತ್ತದೆ ಎಂದರು.
ನವದೆಹಲಿ: ಇಂದು ಭಾರತವೇ ಹೆಮ್ಮೆ ಪಡುವ ದಿನ. ನೂತನ ಸಂಸತ್ ಕಟ್ಟಡ ದೇಶದ ಎಲ್ಲರನ್ನೂ ಪ್ರತಿನಿಧಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ದೆಹಲಿಯಲ್ಲಿ ಹೊಸ ಸಂಸತ್ ಭವನ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಿದ ನಂತರ ಮಾತನಾಡಿದ ಮೋದಿ, ಇಂದು ನಾವು ನೂತನ ಸಂಸತ್ ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ್ದೇವೆ. ಈ ಐತಿಹಾಸಿಕ ದಿನಕ್ಕೆ 130 ಕೋಟಿ ಜನರು ಸಾಕ್ಷಿಯಾಗಿದ್ದಾರೆ. ಅವಶ್ಯಕತೆಗೆ ಅನುಗುಣವಾಗಿ ನಾವು ಈ ಬದಲಾವಣೆ ಮಾಡುತ್ತಿದ್ದೇವೆ ಎಂದರು. ಈ ಮೂಲಕ ಹೊಸ ಕಟ್ಟಡ ನಿರ್ಮಾಣವನ್ನು ಮಾಡುತ್ತಿರುವುದಕ್ಕೆ ಕಾರಣ ಇದೆ ಎಂದು ಪರೋಕ್ಷವಾಗಿ ಹೇಳಿದರು.
ಬಸವಣ್ಣನವರ ಅನುಭವ ಮಂಟಪದ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, 12ನೇ ಶತಮಾನದಲ್ಲಿ ಅನುಭವ ಮಂಟಪ ಅಸ್ತಿತ್ವದಲ್ಲಿತ್ತು. ಅನುಭವ ಮಂಟಪ ನಾಡಿನ ಅಭಿವೃದ್ಧಿ ಮತ್ತು ಉನ್ನತಿಗೆ ಕೆಲಸ ಮಾಡಿತ್ತು ಎಂದು ಕೊಂಡಾಡಿದರು. 13ನೇ ಶತಮಾನದಲ್ಲಿ ಇಂಗ್ಲೆಂಡ್ನ ಮ್ಯಾಗ್ನಾಕಾರ್ಟ್ ಸನ್ನದನ್ನು ಪ್ರಜಾತಂತ್ರದ ಬುನಾದಿ ಎಂದು ವಿದ್ವಾಂಸರು ಕರೆಯುತ್ತಾರೆ. ಆದರೆ ಇದಕ್ಕಿಂತಲೂ ಮೊದಲು 12ನೇ ಶತಮಾನದಲ್ಲಿ ಭಾರತದಲ್ಲಿ ಭಗವಾನ್ ಬಸವೇಶ್ವರರ ಅನುಭವ ಮಂಟಪ ಅಸ್ತಿತ್ವಕ್ಕೆ ಬಂದಿತ್ತು. ಅನುಭವ ಮಂಟದ ರೂಪದಲ್ಲಿ ಅವರು ಲೋಕ ಸಂಸತ್ತನ್ನು ಸುವ್ಯವಸ್ಥಿತವಾಗಿ ನಿರ್ವಹಿಸುತ್ತಿದ್ದರು ಎಂದರು.
ಅನುಭವ ಮಂಟಪ ಜನಸಭೆಯು ನಾಡಿನ ಮತ್ತು ರಾಷ್ಟ್ರದ ಉನ್ನತಿಗೆ ಹಾಗೂ ಅಭಿವೃದ್ಧಿಗೆ ಪೂರಕವಾಗಿ ಕೆಲಸ ಮಾಡುತ್ತದೆ ಎಂದು ಬಸವಣ್ಣನವರ ಮಾತನ್ನು ಕನ್ನಡದಲ್ಲೇ ಹೇಳಿದರು.
ಈ ಐತಿಹಾಸಿಕ ಸಂಸತ್ ಕಟ್ಟಡ 100 ವರ್ಷ ಪೂರೈಸುತ್ತಿದೆ. ಈ ಕಟ್ಟಡ ಸಾಕಷ್ಟು ಬಾರಿ ನವೀಕರಣಗೊಂಡಿದೆ. ಭದ್ರತೆ ಹಾಗೂ ತಾಂತ್ರಿಕ ದೃಷ್ಟಿಯಲ್ಲೂ ಸಾಕಷ್ಟು ಬದಲಾವಣೆ ಕಂಡಿದೆ. ಹೀಗಾಗಿ ಆ ಕಟ್ಟಡಕ್ಕೆ ಈಗ ವಿಶ್ರಾಂತಿ ಬೇಕಿದೆ ಎಂದು ಮೋದಿ ತಿಳಿಸಿದರು.
ಹೊಸ ಸಂಸತ್ ಕಟ್ಟಡದೊಂದಿದೆ ಭಾರತೀಯರನ್ನು ಮುನ್ನಡೆಸಬೇಕಿದೆ. ಹೆಚ್ಚು ಆಸನ ವ್ಯವಸ್ಥೆ ಮತ್ತು ಹೊಸ ತಂತ್ರಜ್ಞಾನದೊಂದಿಗೆ ಈ ಹೊಸ ಕಟ್ಟಡ ನಿರ್ಮಾಣಗೊಳ್ಳಲಿದೆ ಎಂದಿರುವ ಮೋದಿ, ಈ ಕಟ್ಟಡ ಆತ್ಮ ನಿರ್ಭರ ಭಾರತದ ಸಂಕೇತವಾಗಲಿದೆ ಎಂದು ಹೇಳಿದರು.
ಪ್ರಜಾಪ್ರಭುತ್ವದಲ್ಲಿ ಭಾರತ ಯಶಸ್ಸು ಕಂಡಿದೆ: ಪ್ರಜಾಪ್ರಭುತ್ವದಲ್ಲಿ ಭಾರತ ಯಶಸ್ಸು ಕಂಡಿದೆ ಎಂದಿರುವ ಮೋದಿ, ಪ್ರಜಾಪ್ರಭುತ್ವ ಭಾರತಕ್ಕೆ ಯಾವುದೇ ತೊಂದರೆ ಇಲ್ಲ. ಭಾರತದಲ್ಲಿ ಪ್ರಜಾಪ್ರಭುತ್ವ ಎನ್ನುವುದು ಒಂದು ಸಂಸ್ಕಾರ. ಇದೊಂದು ಜೀವನದ ಮಂತ್ರ. ಭಾರತ ಡೆಮಕ್ರಸಿಯ ತಾಯಿ ಎಂದರು.
ಸಂವಾದ ನಡೆಯುತ್ತಿರಬೇಕು: ಜನರ ಸೇವೆಯಲ್ಲಿ ಯಾವುದೇ ಭೇದ ಇರಬಾರದು. ವಾದ-ಸಂವಾದ ಎಲ್ಲಿ ಬೇಕಾದರೂ ಇರಲಿ. ಆದರೆ, ಜಗತ್ತು ಇರುವವರೆಗೂ ಸಂವಾದ ನಡೆಯುತ್ತಿರಬೇಕು ಎಂದು ಮೋದಿ ಸಂಸದರಿಗೆ ಕಿವಿ ಮಾತು ಹೇಳಿದರು.
ಒಂದಾಗಿ ನಿಲ್ಲೋಣ: ದೇಶಕ್ಕಾಗಿ ನಾವು ಒಂದಾಗಿ ನಿಲ್ಲಬೇಕು ಎಂದು ಮೋದಿ ಕರೆ ನೀಡಿದರು. ಸಂಸದರ ವ್ಯವಹಾರ ಹಾಗೂ ಸೇವೆಯಿಂದ ಹೊಸ ಸಂಸತ್ತಿನಲ್ಲಿ ಪ್ರಾಣ ಪ್ರತಿಷ್ಠಾಪನೆ ಆಗಲಿದೆ. ಪ್ರಾಣ ಪ್ರತಿಷ್ಠಾಪನೆ ಆದಾಗಲೇ ಕಟ್ಟಡ ಎನ್ನುವುದು ಮಂದಿರ ಆಗುವುದು ಎಂದು ಮೋದಿ ಹೇಳಿದರು.
Published On - 2:41 pm, Thu, 10 December 20