ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಡಿ.25) ದೇಶವನ್ನು ಉದ್ದೇಶಿಸಿ ತುರ್ತು ಭಾಷಣ ಮಾಡಿದರು. ಕೊರೊನಾ ವೈರಾಣುವಿನ ಹೊಸ ರೂಪಾಂತರಿ ಒಮಿಕ್ರಾನ್ ಆತಂಕ ದೇಶದಲ್ಲಿ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮಾತಿಗೆ ವಿಶೇಷ ಮಹತ್ವ ಪಡೆದಿತ್ತು. ಹೊಸವರ್ಷವನ್ನು ಸಂಭ್ರಮದಿಂದ ಬರಮಾಡಿಕೊಳ್ಳುವುದರ ಜೊತೆಗೆ ಎಚ್ಚರ ವಹಿಸಬೇಕು ಎಂದು ಪ್ರಧಾನಿ ಕಿವಿಮಾತು ಹೇಳಿದರು. ವಿಶ್ವದ ಹಲವು ದೇಶಗಳಲ್ಲಿ ಕೊವಿಡ್ ರೂಪಾಂತರಿ ಒಮಿಕ್ರಾನ್ ಆತಂಕ ಹೆಚ್ಚಾಗಿದೆ. ಭಾರತದಲ್ಲಿಯೂ ಕೆಲ ಪ್ರಕರಣಗಳು ವರದಿಯಾಗಿವೆ. ನೀವ್ಯಾರೂ ಆತಂಕಗೊಳ್ಳಬಾರದು ಎಂದು ನಾನು ಕರೆನೀಡುತ್ತೇನೆ. ಮಾಸ್ಕ್ಗಳನ್ನು ಬಳಸಿ ಮತ್ತು ನಿಮ್ಮ ಕೈಗಳನ್ನು ನಿಯಮಿತವಾಗಿ ತೊಳೆದುಕೊಳ್ಳಿ, ಸದಾ ಎಚ್ಚರದಿಂದ ಇರಿ ಎಂದು ಸಲಹೆ ಮಾಡಿದರು.
ದೇಶದಲ್ಲಿ ಇಂದು 18 ಲಕ್ಷ ಐಸೊಲೇಶನ್, 1.4 ಲಕ್ಷ ಐಸಿಯು ಬೆಡ್ಗಳನ್ನು ಸಿದ್ಧಪಡಿಸಲಾಗಿದೆ. ಮಕ್ಕಳಿಗಾಗಿ 90 ಸಾವಿರ ವಿಶೇಷ ಬೆಡ್ಗಳನ್ನು ಸಿದ್ಧಪಡಿಸಲಾಗಿದೆ. ಸುಮಾರು 3000 ಆಮ್ಲಜನಕ ಘಟಕಗಳ ಮತ್ತು 4 ಲಕ್ಷ ಆಕ್ಸಿಜನ್ ಸಿಲಿಂಡರ್ಗಳನ್ನು ಸಿದ್ಧಪಡಿಸಲಾಗಿದೆ ಎಂದರು.
ಜಾಗತಿಕ ಪಿಡುಗಾಗಿರುವ ಕೊರೊನಾ ಸೋಂಕು ಎದುರಿಸುವ ವಿಚಾರದಲ್ಲಿ ರೂಪಿಸಿರುವ ಮಾರ್ಗದರ್ಶಿ ಸೂತ್ರಗಳನ್ನು ವೈಯಕ್ತಿಕ ಮಟ್ಟದಲ್ಲಿ ಅನುಸರಿಸುವುದು ಎಲ್ಲರ ಕರ್ತವ್ಯ ಆಗಬೇಕು. ಅದು ವೈರಸ್ ಎದುರಿಸಲು ನಮಗಿರುವ ದೊಡ್ಡ ಅಸ್ತ್ರ. ಎರಡನೇ ಅಸ್ತ್ರವೆಂದರೆ ಲಸಿಕಾಕರಣ. ಲಸಿಕೆ ಕುರಿತ ಸಂಶೋಧನೆ, ಅನುಮತಿ ನೀಡುವ ಪ್ರಕ್ರಿಯೆ, ಪೂರೈಕೆ ವ್ಯವಸ್ಥೆ, ವಿತರಣೆ, ತರಬೇತಿ, ಮಾಹಿತಿ ತಂತ್ರಜ್ಞಾನ ವ್ಯವಸ್ಥೆ ಮತ್ತು ಪ್ರಮಾಣಪತ್ರದ ಬಗ್ಗೆಯೂ ಶೀಘ್ರದಲ್ಲಿ ನಿರ್ಧಾರಗಳನ್ನು ತೆಗೆದುಕೊಂಡೆವು. ಕಳೆದ ಜನವರಿ 16ರಿಂದ ದೇಶದಲ್ಲಿ ಲಸಿಕಾಕರಣ ಪ್ರಕ್ರಿಯೆ ವೇಗವಾಗಿ ನಡೆಯಿತು ಎಂದರು. 15ರಿಂದ 18 ವರ್ಷ ವಯೋಮಾನದ ಮಕ್ಕಳಿಗೆ ಜನವರಿ 3ರಿಂದ ಲಸಿಕಾಕರಣ ಆರಂಭವಾಗಲಿದೆ. ಆರೋಗ್ಯ ಸೇವಾ ಸಿಬ್ಬಂದಿ ಮತ್ತು ಫ್ರಂಟ್ಲೈನ್ ಕಾರ್ಯಕರ್ತರಿಗೆ ಜನವರಿ 10ರಿಂದ ಲಸಿಕೆ ವಿತರಣೆ ನಡೆಯಲಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಬಿಜೆಪಿ ನಿಧಿಗೆ 1000 ರೂ.ದೇಣಿಗೆ ನೀಡಿದ ಪ್ರಧಾನಿ ಮೋದಿ; ಕೈಲಾದಷ್ಟು ಹಣ ನೀಡಿ, ಪಕ್ಷ ಸದೃಢಗೊಳಿಸಲು ಕರೆ
Published On - 10:50 pm, Sat, 25 December 21