ದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ (ಜುಲೈ 10) ಬೆಳಿಗ್ಗೆ 10 ಗಂಟೆಗೆ ನೈಸರ್ಗಿಕ ಕೃಷಿಕರ ಸಮಾವೇಶ (Natural Farming Conclave) ಉದ್ಘಾಟಿಸಲಿದ್ದಾರೆ. ಭಾರತಕ್ಕೆ ಸ್ವಾತಂತ್ರ್ಯ ಬಂದು 75 ವರ್ಷವಾದ ಹಿನ್ನೆಲೆಯಲ್ಲಿ ದೇಶಾದ್ಯಂತ ನಡೆಯುತ್ತಿರುವ ‘ಆಜಾದಿ ಕಾ ಅಮೃತ್ ಮಹೋತ್ಸವ್’ (ಸ್ವಾತಂತ್ರ್ಯದ ಅಮೃತ ಮಹೋತ್ಸವ) (Azadi Ka Amrit Mahotsav) ವಿಶೇಷ ಕಾರ್ಯಕ್ರಮಗಳ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ನೈಸರ್ಗಿಕ ಕೃಷಿ ವಿಧಾನ ಅಳವಡಿಸಿಕೊಂಡಿರುವ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಕಳೆದ ಮಾರ್ಚ್ ತಿಂಗಳಲ್ಲಿ ನಡೆದಿದ್ದ ‘ಗುಜರಾತ್ ಪಂಚಾಯತ್ ಮಹಾಸಮ್ಮೇಳನ’ದಲ್ಲಿ ಮಾತನಾಡಿದ್ದ ಅವರು, ಪ್ರತಿ ಹಳ್ಳಿಯಲ್ಲಿ ಕನಿಷ್ಠ 75 ರೈತರು ನೈಸರ್ಗಿಕ ವಿಧಾನದ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರ ವಿಚಾರದಿಂದ ಪ್ರೇರಣೆ ಪಡೆದ ಸೂರತ್ ಜಿಲ್ಲೆಯ ರೈತ ಮುಖಂಡರು ಸತತ ಪ್ರಯತ್ನ ಮತ್ತು ಸಂಘಟನಾತ್ಮಕ ಕ್ರಮಗಳಿಂದ ರೈತರು, ಚುನಾಯಿತ ಪ್ರತಿನಿಧಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು, ಕೃಷಿ ಉತ್ಪನ್ನ ಮಾರಾಟ ಮಂಡಳಿ ಸಮಿತಿಗಳು (Agriculture Produce Marketing Committees – APMCs), ಸಹಕಾರ ಸಂಸ್ಥೆಗಳು, ಬ್ಯಾಂಕ್ಗಳು ಸೇರಿದಂತೆ ಕೃಷಿ ವಲಯದಲ್ಲಿ ಸಕ್ರಿಯವಾಗಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳಲ್ಲಿ ಜಾಗೃತಿ ಮೂಡಿಸಲು ಮುಂದಾದರು. ಈ ಉಪಕ್ರಮಗಳ ಪರಿಣಾಮವಾಗಿ ಜಿಲ್ಲೆಯ ಪ್ರತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯೂ ಕನಿಷ್ಠ 75 ರೈತರನ್ನು ಗುರುತಿಸಿ ನೈಸರ್ಗಿಕ ಕೃಷಿ ವಿಧಾನ ಅನುಸರಿಸಲು ಉತ್ತೇಜನ ನೀಡಲಾಯಿತು. ನೈಸರ್ಗಿಕ ಕೃಷಿ ಪದ್ಧತಿಯನ್ನು ಜನಪ್ರಿಯಗೊಳಿಸಲೆಂದು 90 ಕ್ಲಸ್ಟರ್ಗಳನ್ನು ರೂಪಿಸಿ 41,000ಕ್ಕೂ ಹೆಚ್ಚು ರೈತರಿಗೆ ತರಬೇತಿ ನೀಡಲಾಯಿತು.
ಗುಜರಾತ್ನ ಸೂರತ್ನಲ್ಲಿ ಸಮಾವೇಶವನ್ನು ಆಯೋಜಿಸಲಾಗಿದೆ. ಸಮಾವೇಶದಲ್ಲಿ ಸಾವಿರಾರು ರೈತರು ಮತ್ತು ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡಿರುವ ಇತರ ಉದ್ಯಮಿಗಳು, ವ್ಯಾಪಾರಿಗಳು, ಆಸಕ್ತರು ಪಾಲ್ಗೊಳ್ಳಲಿದ್ದಾರೆ. ಗುಜರಾತ್ನ ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಾರೆ.
Published On - 7:11 am, Sun, 10 July 22