ನವದೆಹಲಿ: ಇಂದಿನಿಂದ 2 ದಿನ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ತವರು ರಾಜ್ಯವಾದ ಗುಜರಾತ್ಗೆ (Gujarat) ಭೇಟಿ ನೀಡಲಿದ್ದಾರೆ. ಈ ವೇಳೆ 15,670 ಕೋಟಿ ರೂ. ಮೌಲ್ಯದ ವಿವಿಧ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ರಕ್ಷಣಾ ಇಲಾಖೆ ಉತ್ಪಾದನಾ ಸಾಮರ್ಥ್ಯದ ಪ್ರದರ್ಶನ ಮಾಡುವ ಡಿಫ್ಎಕ್ಸ್ಪೋ-22 ಅನ್ನು ಮೋದಿ ಉದ್ಘಾಟಿಸಲಿದ್ದಾರೆ. 2 ದಿನಗಳ ಗುಜರಾತ್ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ ಗಾಂಧಿನಗರ, ಜುನಾಗಢ್, ರಾಜ್‌ಕೋಟ್, ಕೆವಾಡಿಯಾ ಮತ್ತು ವ್ಯಾರಾಗೆ ಭೇಟಿ ನೀಡಲಿದ್ದಾರೆ.
ಇಂದು (ಬುಧವಾರ) ಬೆಳಗ್ಗೆ 9.45ರ ಸುಮಾರಿಗೆ ಗಾಂಧಿನಗರದಲ್ಲಿ ಡಿಫೆನ್ಸ್ ಎಕ್ಸ್‌ಪೋ-22ನ್ನು ಪ್ರಧಾನಿ ಮೋದಿ ಉದ್ಘಾಟಿಸಲಿದ್ದಾರೆ. ಇದು ಇಲ್ಲಿಯವರೆಗೆ ನಡೆದ ಭಾರತೀಯ ರಕ್ಷಣಾ ಎಕ್ಸ್‌ಪೋದಲ್ಲಿ ಅತಿ ದೊಡ್ಡ ಎಕ್ಸ್‌ಪೋ ಆಗಲಿದೆ. ಈ ಕಾರ್ಯಕ್ರಮವು ಭಾರತೀಯ ರಕ್ಷಣಾ ಉತ್ಪಾದನಾ ಸಾಮರ್ಥ್ಯದ ವಿಸ್ತಾರವಾದ ವ್ಯಾಪ್ತಿ ಮತ್ತು ಪ್ರಮಾಣವನ್ನು ಪ್ರದರ್ಶಿಸುತ್ತದೆ. ಈ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ (HAL) ವಿನ್ಯಾಸಗೊಳಿಸಿದ ಸ್ವದೇಶಿ ತರಬೇತುದಾರ ವಿಮಾನವಾದ HTT-40 ಅನ್ನು ಅನಾವರಣಗೊಳಿಸಲಿದ್ದಾರೆ.
ಇದನ್ನೂ ಓದಿ: Interpol General Assembly: ದೆಹಲಿಯಲ್ಲಿ ಇಂದು 90ನೇ ಇಂಟರ್ಪೋಲ್ ಸಭೆಯನ್ನು ಉದ್ದೇಶಿಸಿ ಪ್ರಧಾನಿ ಮೋದಿ ಭಾಷಣ
ಪ್ರಧಾನಿ ಮೋದಿ ಗುಜರಾತ್‌ನಲ್ಲಿ ದೀಸಾ ಏರ್‌ಫೀಲ್ಡ್‌ಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅದಾಲಾಜ್‌ನಲ್ಲಿ ಮಿಷನ್ ಸ್ಕೂಲ್ಸ್ ಆಫ್ ಎಕ್ಸಲೆನ್ಸ್‌ಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ತ್ರಿಮಂದಿರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಸುಮಾರು 4,260 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಈ ಮಿಷನ್ ಸ್ಕೂಲ್ಸ್ ಆಫ್ ಎಜುಕೇಷನ್ ಗುಜರಾತ್‌ನಲ್ಲಿ ಹೊಸ ತರಗತಿ ಕೊಠಡಿಗಳು, ಸ್ಮಾರ್ಟ್ ತರಗತಿಗಳು, ಕಂಪ್ಯೂಟರ್ ಲ್ಯಾಬ್‌ಗಳನ್ನು ಸ್ಥಾಪಿಸುವ ಮೂಲಕ ಶಿಕ್ಷಣ ಮೂಲಸೌಕರ್ಯವನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಗುಜರಾತ್ ರಾಜ್ಯದ ಶಾಲೆಗಳ ಮೂಲಸೌಕರ್ಯಗಳ ಉನ್ನತೀಕರಣವನ್ನು ಮಾಡುತ್ತದೆ.
ಬಳಿಕ ಜುನಾಗಢದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಸಂಜೆ ಇಂಡಿಯಾ ಅರ್ಬನ್ ಹೌಸಿಂಗ್ ಕಾನ್ಕ್ಲೇವ್ 2022 ಅನ್ನು ಉದ್ಘಾಟಿಸಲಿದ್ದಾರೆ. ಹಾಗೇ, ರಾಜ್‌ಕೋಟ್‌ನಲ್ಲಿ ಅನೇಕ ಪ್ರಮುಖ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಜುನಾಗಢದಲ್ಲಿ ಪ್ರಧಾನಿ ಮೋದಿ ಸುಮಾರು 3580 ಕೋಟಿ ರೂ. ಮೊತ್ತದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಬಳಿಕ, ರಾಜ್‌ಕೋಟ್‌ನಲ್ಲಿ ಸುಮಾರು 5860 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.