ಉತ್ತರ ಪ್ರದೇಶದಲ್ಲಿ ಪೂರ್ವಾಂಚಲ ಎಕ್ಸ್​ಪ್ರೆಸ್​ ವೇ ಚಾಲನೆಗೆ ಕ್ಷಣಗಣನೆ: ಅಭಿವೃದ್ಧಿಗೆ ಹೊಸ ವೇಗ ಸಿಗುವ ಕನಸು

ಎಕ್ಸ್​ಪ್ರೆಸ್ ವೇನಲ್ಲೇ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡಲಾಗುತ್ತೆ.

ಉತ್ತರ ಪ್ರದೇಶದಲ್ಲಿ ಪೂರ್ವಾಂಚಲ ಎಕ್ಸ್​ಪ್ರೆಸ್​ ವೇ ಚಾಲನೆಗೆ ಕ್ಷಣಗಣನೆ: ಅಭಿವೃದ್ಧಿಗೆ ಹೊಸ ವೇಗ ಸಿಗುವ ಕನಸು
ಪೂರ್ವಾಂಚಲ್ ಎಕ್ಸ್​ಪ್ರೆಸ್​ ವೇ ಮತ್ತು ಪ್ರಧಾನಿ ನರೇಂದ್ರ ಮೋದಿ
Edited By:

Updated on: Nov 15, 2021 | 4:24 PM

ಲಖನೌ: ಪ್ರಧಾನಿ ನರೇಂದ್ರ ಮೋದಿ ಮಂಗಳವಾರ (ನ.16) ಉತ್ತರ ಪ್ರದೇಶದಲ್ಲಿ ಪೂರ್ವಾಂಚಲ ಎಕ್ಸಪ್ರೆಸ್ ವೇ ಲೋಕಾರ್ಪಣೆ ಮಾಡಲಿದ್ದಾರೆ. ಈ ಪೂರ್ವಾಂಚಲ ಎಕ್ಸಪ್ರೆಸ್ ವೇ ಯೋಜನೆಯಿಂದ ನಿಂದ ಉತ್ತರ ಪ್ರದೇಶದ ಅನೇಕ ಜಿಲ್ಲೆಗಳ ಅಭಿವೃದ್ದಿಗೆ ವೇಗ ಸಿಗುವ ನಿರೀಕ್ಷೆ ಇದೆ. ಎಕ್ಸ್​ಪ್ರೆಸ್ ವೇನಲ್ಲೇ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡಲಾಗುತ್ತೆ.

ಸುಲ್ತಾನ್‌ಪುರ ಜಿಲ್ಲೆಯ ಕರ್ವಾಲ್ ಖೇರಿಯಲ್ಲಿ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ ವೇ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ. ಮಧ್ಯಾಹ್ನ 1.30ರ ಸುಮಾರಿಗೆ ಉದ್ಘಾಟನೆ ಕಾರ್ಯಕ್ರಮ ನಡೆಯಲಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. ಉದ್ಘಾಟನೆಯ ನಂತರ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ಎಕ್ಸ್​ಪ್ರೆಸ್ ವೇನಲ್ಲಿ ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡಲಾಗುತ್ತೆ. ಸುಲ್ತಾನ್‌ಪುರ ಜಿಲ್ಲೆಯ ಎಕ್ಸ್‌ಪ್ರೆಸ್‌ವೇಯಲ್ಲಿ ನಿರ್ಮಿಸಲಾದ 3.2 ಕಿಮೀ ಉದ್ದದ ಏರ್‌ಸ್ಟ್ರಿಪ್‌ನಲ್ಲಿ ಭಾರತೀಯ ವಾಯುಪಡೆಯ ವಿಮಾನಗಳ ವೈಮಾನಿಕ ಪ್ರದರ್ಶನಕ್ಕೂ ಪ್ರಧಾನಿ ಮೋದಿ ಸಾಕ್ಷಿಯಾಗಲಿದ್ದಾರೆ.

ತುರ್ತು ಸಂದರ್ಭಗಳಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡಲು ಅನುಕೂಲವಾಗುವಂತೆ ಪೂರ್ವಾಂಚಲ್ ಎಕ್ಸ್​ಪ್ರೆಸ್ ವೇ ನಿರ್ಮಿಸಲಾಗಿದೆ. ಈ ಹಿಂದೆ ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಿಂದ ಆಗ್ರಾವರೆಗೂ ನಿರ್ಮಿಸಿರುವ ಯಮುನಾ ಎಕ್ಸಪ್ರೆಸ್ ವೇನಲ್ಲಿ ಭಾರತೀಯ ವಾಯುಪಡೆಯ ಯುದ್ಧ ವಿಮಾನಗಳನ್ನು ಲ್ಯಾಂಡ್ ಮಾಡಲಾಗಿತ್ತು. ರಾಜಸ್ಥಾನದ ಪಾಕ್ ಗಡಿಯಲ್ಲೂ ಇತ್ತೀಚೆಗೆ ಯುದ್ಧ ವಿಮಾನಗಳನ್ನು ಲ್ಯಾಂಡ್ ಮಾಡಲಾಗಿತ್ತು. ಈಗ ನಾಳೆ ಪೂರ್ವಾಂಚಲ ಎಕ್ಸಪ್ರೆಸ್ ವೇನಲ್ಲೂ ಅದೇ ರೀತಿ ಯುದ್ಧ ವಿಮಾನಗಳನ್ನು ಲ್ಯಾಂಡಿಂಗ್ ಮತ್ತು ಟೇಕಾಫ್ ಮಾಡಲಾಗುತ್ತೆ.

ಭೂಕಂಪ, ಪ್ರವಾಹ, ಯುದ್ಧದಂಥ ತುರ್ತು ಸಂದರ್ಭಗಳಲ್ಲಿ ಯುದ್ಧ ವಿಮಾನಗಳ ಮೂಲಕ ಪರಿಹಾರ ಕಾರ್ಯ ಕೈಗೊಳ್ಳಬೇಕಾದ ಅನಿವಾರ್ಯತೆ ಎದುರಾಗಬಹುದು. ಅಂಥ ತುರ್ತು ಸಂದರ್ಭಗಳನ್ನು ಎದುರಿಸಲು ಮುಂದಾಲೋಚನೆಯಿಂದ ಹೆದ್ದಾರಿಗಳನ್ನು ವಿಮಾನಗಳ ಏರ್​ಸ್ಟ್ರಿಪ್ ಆಗಿಯೂ ಬಳಸಿಕೊಳ್ಳಲು ಅವಕಾಶ ಆಗುವಂತೆ ನಿರ್ಮಾಣ ಮಾಡಲಾಗುತ್ತಿದೆ. ಪಾಕಿಸ್ತಾನ ಕೂಡ ಹೆದ್ದಾರಿಗಳಲ್ಲಿ ಯುದ್ಧ ವಿಮಾನಗಳನ್ನು ಲ್ಯಾಂಡಿಂಗ್, ಟೇಕಾಫ್ ಮಾಡುತ್ತಿದೆ.

341 ಕಿಲೋಮೀಟರ್ ಉದ್ದದ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಲಖನೌ-ಸುಲ್ತಾನ್‌ಪುರ ರಸ್ತೆಯಲ್ಲಿ (NH-731) ಲಖನೌ ಜಿಲ್ಲೆಯ ಚೌದ್ಸರೈ ಗ್ರಾಮದಿಂದ ಪ್ರಾರಂಭವಾಗುತ್ತದೆ. ಉತ್ತರ ಪ್ರದೇಶ-ಬಿಹಾರ ಗಡಿಯಿಂದ ಪೂರ್ವಕ್ಕೆ 18 ಕಿಲೋಮೀಟರ್ ದೂರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 31 ರಲ್ಲಿರುವ ಹೈದರಿಯಾ ಹಳ್ಳಿಯಲ್ಲಿ ಕೊನೆಗೊಳ್ಳುತ್ತದೆ. ಎಕ್ಸ್‌ಪ್ರೆಸ್‌ವೇ 6-ಲೇನ್​ಗಳಷ್ಟು ಅಗಲವಾಗಿದ್ದು, ಭವಿಷ್ಯದಲ್ಲಿ 8-ಲೇನ್‌ಗೆ ವಿಸ್ತರಿಸಬಹುದು. ಸುಮಾರು ₹ 22,500 ಕೋಟಿ ಅಂದಾಜು ವೆಚ್ಚದಲ್ಲಿ ನಿರ್ಮಿಸಲಾಗಿರುವ ಪೂರ್ವಾಂಚಲ್ ಎಕ್ಸ್‌ಪ್ರೆಸ್‌ವೇ ಉತ್ತರ ಪ್ರದೇಶದ ಪೂರ್ವಭಾಗದ ವಿಶೇಷವಾಗಿ ಲಖನೌ, ಬಾರಾಬಂಕಿ, ಅಮೇಥಿ, ಅಯೋಧ್ಯೆ, ಸುಲ್ತಾನ್‌ಪುರ, ಅಂಬೇಡ್ಕರ್ ನಗರ, ಅಜಂಗಢ, ಮೌವ, ಗಾಜಿಪುರ ಜಿಲ್ಲೆಗಳ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡುವ ನಿರೀಕ್ಷೆ ಇದೆ.

ಉತ್ತರ ಪ್ರದೇಶದ ಪೂರ್ವಾಂಚಲ ಪ್ರಾಂತ್ಯದಲ್ಲಿ ಕೆಲ ಅಭಿವೃದ್ದಿ ಕಾರ್ಯಗಳನ್ನು ಕೇಂದ್ರ ಹಾಗೂ ಉತ್ತರ ಪ್ರದೇಶ ರಾಜ್ಯ ಸರ್ಕಾರ ಮಾಡಿವೆ. ಈ ಅಭಿವೃದ್ದಿ ಕಾರ್ಯಗಳ ಆಧಾರದ ಮೇಲೆಯೇ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಮತಯಾಚನೆ ಮಾಡಲು ಬಿಜೆಪಿ ಯೋಜನೆ ರೂಪಿಸಿದೆ. ಆದರೆ, ಪೂರ್ವಾಂಚಲ ಎಕ್ಸಪ್ರೆಸ್ ವೇ ಈ ಹಿಂದೆ ಸಮಾಜವಾದಿ ಪಕ್ಷದ ಸರ್ಕಾರ ಆಸ್ತಿತ್ವದಲ್ಲಿದ್ದಾಗ ಪ್ರಾರಂಭವಾಗಿದ್ದ ಯೋಜನೆ. ಹೀಗಾಗಿ ಈ ಎಕ್ಸಪ್ರೆಸ್ ವೇ ನಿರ್ಮಾಣದ ಕ್ರೆಡಿಟ್ ತನಗೆ ಸೇರುತ್ತೆ ಎಂದು ಸಮಾಜವಾದಿ ಪಕ್ಷ ಹೇಳುತ್ತಿದೆ. ಈ ಹಿಂದಿನ ಸರ್ಕಾರದ ಎಲ್ಲ ಯೋಜನೆಗಳನ್ನು ಮುಂದುವರಿಸಿದ್ದೇವೆ. ಪೂರ್ವಾಂಚಲ ಎಕ್ಸಪ್ರೆಸ್ ವೇ ನಿರ್ಮಾಣದ ಕ್ರೆಡಿಟ್ ಬಿಜೆಪಿಗೆ ಹಾಗೂ ಯೋಗಿ ಆದಿತ್ಯನಾಥ ಸರ್ಕಾರಕ್ಕೆ ಸಲ್ಲಬೇಕು ಎಂದು ಬಿಜೆಪಿ ನಾಯಕರು ವಾದಿಸುತ್ತಿದ್ದಾರೆ. ಪೂರ್ವಾಂಚಲ ಎಕ್ಸಪ್ರೆಸ್ ವೇ ನಿರ್ಮಾಣದ ಕ್ರೆಡಿಟ್ ಪಡೆಯಲು ಎಸ್​ಪಿ-ಬಿಜೆಪಿ ಮಧ್ಯೆ ವಾಗ್ವಾದವೂ ನಡೆಯುತ್ತಿದೆ.

ಇದನ್ನೂ ಓದಿ: Cryptocurrency: ಕ್ರಿಪ್ಟೋಕರೆನ್ಸಿ ಕುರಿತು ತಜ್ಞರ ಜೊತೆ ಪ್ರಧಾನಿ ನರೇಂದ್ರ ಮೋದಿ ಉನ್ನತ ಮಟ್ಟದ ಸಭೆ
ಇದನ್ನೂ ಓದಿ: ನರೇಂದ್ರ ಮೋದಿಯವರಿಗೆ ಸೀರೆ ಉಡುಗೊರೆ ಕೊಟ್ಟ ಪದ್ಮಶ್ರೀ ಪುರಸ್ಕೃತ; ಗಿಫ್ಟ್​ ನೋಡಿ ಪ್ರಧಾನಿಗೆ ಖುಷಿಯೋ ಖುಷಿ !

Published On - 4:11 pm, Mon, 15 November 21