Panchayati Raj Diwas: ಏಪ್ರಿಲ್ 24ರಂದು ಜಮ್ಮು-ಕಾಶ್ಮೀರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 24ರಂದು ಸಾಂಬಾ ಜಿಲ್ಲೆಯ ಪಲ್ಲಿ ಎಂಬ ಹಳ್ಳಿಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಏಪ್ರಿಲ್ 24ರಂದು ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ ಎಂದು ಬಿಜೆಪಿಯ ಪ್ರಧಾನ ಕಾರ್ಯದರ್ಶಿ ಅಶೋಕ್ ಕೌಲ್ ತಿಳಿಸಿದ್ದಾರೆ. ಪಂಚಾಯತ್ ರಾಜ್ ದಿವಸ್ದ ಅಂಗವಾಗಿ ಮೋದಿಯವರು ಅಲ್ಲಿಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಕಾಶ್ಮೀರಿ ಪಂಡಿತ್ ಸಮುದಾಯದ ಪ್ರತಿನಿಧಿಗಳು ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿಯಾಗಿ, ಮುಕ್ತವಾಗಿ ಚರ್ಚಿಸಲು ಅವಕಾಶ ಮಾಡಿಕೊಡಲು ಸಾಧ್ಯವಾ ಎಂಬುದನ್ನು ಪರಿಶೀಲನೆ ಮಾಡಲಾಗುತ್ತಿದೆ. ಒಮ್ಮೆ ಸಾಧ್ಯವಾದರೆ ಕಾಶ್ಮೀರಿ ಪಂಡಿತರು ತಮ್ಮ ಸಮಸ್ಯೆಗಳನ್ನು, ಬೇಡಿಕೆಗಳನ್ನು ಮುಕ್ತವಾಗಿ ಹೇಳಿಕೊಳ್ಳಲಾಗುತ್ತದೆ ಎಂದೂ ಕೌಲ್ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಏಪ್ರಿಲ್ 24ರಂದು ಸಾಂಬಾ ಜಿಲ್ಲೆಯ ಪಲ್ಲಿ ಎಂಬ ಹಳ್ಳಿಯಿಂದ ದೇಶವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಲ್ಲಿ ಈಗಾಗಲೇ ಸಿದ್ಧತೆಗಳು ನಡೆಯುತ್ತಿವೆ. ಈ ಸಲ ಪಂಚಾಯತ್ ರಾಜ್ ದಿವಸ್ನಲ್ಲಿ ಪಲ್ಲಿ ಗ್ರಾಮ ಪ್ರಮುಖವಾಗಿದ್ದರಿಂದ, ಅಲ್ಲಿಗೆ ಪ್ರಧಾನಿ ಮೋದಿ ಭೇಟಿ ನೀಡುತ್ತಿರುವುದರಿಂದ ಒಂದಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗುತ್ತಿದೆ. ಸಿದ್ಧತೆಗಳೂ ಭರ್ಜರಿಯಾಗಿ ನಡೆಯುತ್ತಿದೆ. ಇದಕ್ಕಾಗಿ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಜತೆ, ಕೇಂದ್ರದ ಆರು ಡಿಪಾರ್ಟ್ಮೆಂಟ್ಗಳು ಕೈಜೋಡಿಸಿವೆ. ಪಲ್ಲಿಯಲ್ಲಿರುವ 340 ಮನೆಗಳಿಗೂ ಸೋಲಾರ್ ನೀಡಲಾಗಿದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ನಾವು 20 ದಿನಗಳಲ್ಲಿ ಪಲ್ಲಿ ಗ್ರಾಮದಲ್ಲಿ ಮನೆಗಳಿಗೆ ಸೋಲಾರ್ ನೀಡುವುದು ಸೇರಿ, ವಿವಿಧ ಅಭಿವೃದ್ಧಿ ಮಾಡಿದ್ದೇವೆ. ಆದರೆ ಕಡಿಮೆ ಸಮಯದಲ್ಲಿ ಇದನ್ನೆಲ್ಲ ಮಾಡುವುದು ದೊಡ್ಡ ಸವಾಲಾಗಿತ್ತು. ಆದರೆ ಎಲ್ಲ ಮನೆಗಳಿಗೂ ಸೋಲಾರ್ ನೀಡಲಾಗಿದ್ದರಿಂದ ಅದೀಗ ಕಾರ್ಬನ್ ಮುಕ್ತ ಗ್ರಾಮವಾಗಿದೆ. ಉಳಿದ ಹಳ್ಳಿಗಳಿಗೆ ಅದು ಮಾದರಿಯಾಗಿದೆ ಎಂದೂ ಜಿತೇಂದ್ರ್ ಸಿಂಗ್ ತಿಳಿಸಿದ್ದಾರೆ. ನಾವಿಲ್ಲಿ ಅಳವಡಿಸಿದ ಹೊಸ ತಂತ್ರಜ್ಞಾನ, ಕೃಷಿ ಚಟುವಟಿಕೆಗಳಿಗೆ ಹೇಗೆ ಸಹಕಾರಿ? ರೈತರಿಗೆ ಯಾವ ಅನುಕೂಲ ಮಾಡಿಕೊಡುತ್ತದೆ ಎಂಬುದನ್ನು ತೋರಿಸಲು ಪ್ರದರ್ಶನವನ್ನೂ ಮಾಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಪ್ರಶಾಂತ್ ನೀಲ್ರನ್ನು ‘ನನ್ನ ನಿರ್ದೇಶಕ’ ಎಂದು ಕರೆದ ನಟ ಪ್ರಭಾಸ್