Kannada News National pm narendra modi to visit jammu kashmir first formal event after special status scrapped
ಇಂದು ಜಮ್ಮು ಕಾಶ್ಮೀರಕ್ಕೆ ಪ್ರಧಾನಿ ನರೇಂದ್ರ ಮೋದಿ: ವಿಶೇಷ ಸ್ಥಾನಮಾನ ರದ್ದತಿ ನಂತರ ಕಣಿವೆ ರಾಜ್ಯಕ್ಕೆ ಮೊದಲ ಅಧಿಕೃತ ಭೇಟಿ
ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದು, ರಾಜ್ಯವನ್ನು ವಿಭಜಿಸಿದ ನಂತರ ಪ್ರಧಾನಿ ನೀಡುತ್ತಿರುವ ಮೊದಲ ಅಧಿಕೃತ ಸಾರ್ವಜನಿಕ ಭೇಟಿಯಿದು.
ಪ್ರಧಾನಿ ನರೇಂದ್ರ ಮೋದಿ
Follow us on
ಶ್ರೀನಗರ: ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡಲಿದ್ದಾರೆ. ಎರಡು ವರ್ಷಗಳ ಹಿಂದೆ ಕೇಂದ್ರ ಸರ್ಕಾರವು ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ಹಿಂಪಡೆದು, ರಾಜ್ಯವನ್ನು ವಿಭಜಿಸಿದ ನಂತರ ಪ್ರಧಾನಿ ನೀಡುತ್ತಿರುವ ಮೊದಲ ಅಧಿಕೃತ ಸಾರ್ವಜನಿಕ ಭೇಟಿಯಿದು. ಹೀಗಾಗಿಯೇ ಈ ಭೇಟಿ ಮಹತ್ವ ಪಡೆದಿದೆ. ಪ್ರಧಾನಿ ಭೇಟಿಯ ಬಗ್ಗೆ ನೀವು ತಿಳಿಯಬೇಕಾದ 10 ಪ್ರಮುಖ ಅಂಶಗಳಿವು.
ಪ್ರಧಾನಿ ಭೇಟಿ ಹಿನ್ನೆಲೆಯಲ್ಲಿ ಕಾಶ್ಮೀರದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಪಲ್ಲಿ ಪ್ರದೇಶದಲ್ಲಿ ಪ್ರಧಾನಿಗೆ ವೈಭವದ ಸ್ವಾಗತಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬಿಜೆಪಿ ಆಯೋಜಿಸಿರುವ ಈ ಕಾರ್ಯಕ್ರದಲ್ಲಿ ಸಾವಿರಾರು ಜನರು ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಪಂಚಾಯತ್ ರಾಜ್ ವ್ಯವಸ್ಥೆಯ ಪ್ರಾಮುಖ್ಯತೆಯನ್ನು ಸಾರಿಹೇಳುವ ಕಾರ್ಯಕ್ರಮವೊಂದರ ಅಧ್ಯಕ್ಷತೆಯನ್ನೂ ಪ್ರಧಾನಿ ನರೇಂದ್ರ ಮೋದಿ ವಹಿಸಲಿದ್ದಾರೆ. ಇಂದು ಪಂಚಾಯತ್ ರಾಜ್ ದಿನವೂ ಹೌದು.
ಪ್ರಧಾನಿ ನರೇಂದ್ರ ಮೋದಿ ಅವರು ಇಂದಿನ ಭೇಟಿಯು ಕಣಿವೆ ರಾಜ್ಯವನ್ನು ಅಭಿವೃದ್ಧಿಯ ಹೊಸ ಪಥದತ್ತ ಮುನ್ನಡೆಸುವಲ್ಲಿ ಮಹತ್ವದ ಮೈಲಿಗಲ್ಲಾಗುತ್ತದೆ ಎಂದು ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ವರದಿಗಾರರಿಗೆ ತಿಳಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಆಗಸ್ಟ್ 2019ರ ನಂತರ ಪ್ರಧಾನಿ ನರೇಂದ್ರ ಮೋದಿ ಇದೇ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆಯೂ ಹಲವು ಬಾರಿ ಗಡಿ ನಿಯಂತ್ರಣ ರೇಖೆಯಲ್ಲಿ ನಿಯೋಜನೆಗೊಂಡಿದ್ದ ಸೇನಾ ತುಕಡಿಗಳನ್ನು ಪ್ರಧಾನಿ ಮೋದಿ ಭೇಟಿಯಾಗಿದ್ದರು.
ಪ್ರಧಾನಿ ನರೇಂದ್ರ ಮೋದಿ ಅವರು ₹ 20,000 ಕೋಟಿಗೂ ಹೆಚ್ಚು ಮೊತ್ತದ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಕೇಂದ್ರಾಡಳಿತ ಪ್ರದೇಶಗಳ ಎರಡು ಪ್ರದೇಶಗಳ ನಡುವೆ ಸರ್ವಋತು ಸಂಪರ್ಕ ಕಲ್ಪಿಸುವ ಬನಿಹಾಲ್-ಖಾಜಿಗುಂಡ್ ರಸ್ತೆ ಸುರಂಗ ಮಾರ್ಗವನ್ನೂ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ರಾಷ್ಟ್ರೀಯ ಪಂಚಾಯತ್ ರಾಜ್ ದಿನದ ಪ್ರಯುಕ್ತ ಜಮ್ಮು ಕಾಶ್ಮೀರದಲ್ಲಿ ನಡೆಯುವ ಸಮಾರಂಭದಲ್ಲಿ ಪಾಲ್ಗೊಂಡು, ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಭಾರತದ ಎಲ್ಲ ಜಿಲ್ಲೆಗಳಲ್ಲಿ 75 ಜಲಮೂಲಗಳನ್ನು ಗುರುತಿಸಿ, ಅಭಿವೃದ್ಧಿಪಡಿಸಲು ‘ಅಮೃತ ಸರೋವರ’ ಯೋಜನೆಯನ್ನು ಮೋದಿ ಘೋಷಿಸಲಿದ್ದಾರೆ.
ಬನಿಹಾಲ್-ಖಾಜಿಗುಂಡ್ ರಸ್ತೆ ಸುರಂಗವು 8.45 ಕಿಮೀ ಉದ್ದವಿದೆ. ಕೇಂದ್ರ ಸರ್ಕಾರವು ₹ 3,100 ಕೋಟಿ ವೆಚ್ಚದಲ್ಲಿ ಈ ಸುರಂಗವನ್ನು ನಿರ್ಮಿಸಿದೆ. ಇದು ಬನಿಹಾಲ್-ಖಾಜಿಗುಂಡ್ ನಡುವಣ ಅಂತರವನ್ನು 16 ಕಿಮೀಗಳಷ್ಟು ಕಡಿಮೆ ಮಾಡಲಿದೆ. ಪ್ರಯಾಣದ ಅವಧಿಯೂ ಒಂದೂವರೆ ಗಂಟೆಯಷ್ಟು ಕಡಿಮೆಯಾಗಲಿದೆ.
ಟ್ವಿನ್ ಟ್ಯೂಬ್ ತಂತ್ರಜ್ಞಾನದ ಈ ಸುರಂಗದಲ್ಲಿ ಹೋಗಲು ಮತ್ತು ಬರಲು ಪ್ರತ್ಯೇಕ ಮಾರ್ಗಗಳಿರುತ್ತವೆ. ಪ್ರತಿ 500 ಮೀಟರ್ಗೆ ಒಂದರಂತೆ ಸುರಂಗಗಳನ್ನು ಪರಸ್ಪರ ಸಂಪರ್ಕಿಸುವ ಕಿಂಡಿ ಇರುತ್ತದೆ.
ಇದೇ ವೇಳೆ ಮೋದಿ ಅವರು 850 ಮೆಗಾವಾಟ್ ವಿದ್ಯುತ್ ಉತ್ಪಾದಿಸುವ ರಾಟಲ್ ಮತ್ತು ಕ್ವಾರ್ ಜಲವಿದ್ಯುತ್ ಯೋಜನೆಗಳಿಗೂ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ರಾಟಲ್ ಯೋಜನೆಯನ್ನು ಕಿಶತ್ವಾರ್ ಎಂಬಲ್ಲಿ ₹ 5300 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. 540 ಮೆಗಾವಾಟ್ ಸಾಮರ್ಥ್ಯದ ಕ್ವಾರ್ ಜಲವಿದ್ಯುತ್ ಯೋಜನೆಯನ್ನು ₹ 4500 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಎರಡೂ ಯೋಜನೆಗಳು ಚಿನಾಬ್ ನದಿಗೆ ಅಡ್ಡಲಾಗಿಯೇ ಜಾರಿಯಾಗಲಿವೆ. 2013ರಲ್ಲಿ ಇವೇ ಯೋಜನೆಗಳಿಗೆ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಸಹ ಶಂಕುಸ್ಥಾಪನೆ ನೆರವೇರಿಸಿದ್ದರು.