ಪ್ರಧಾನಿ ನರೇಂದ್ರ ಮೋದಿಯವರು ಇಂದು ಉತ್ತರ ಪ್ರದೇಶದ ಕಾನ್ಪುರ (PM Modi Kanpur Visit)ಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಕಾನ್ಪುರ ಮೆಟ್ರೋ ರೈಲು ಯೋಜನೆಯ ಸಂಪೂರ್ಣಗೊಂಡ ಮೊದಲ ಹಂತವನ್ನು ಉದ್ಘಾಟನೆ ಮಾಡಲಿದ್ದಾರೆ. ಐಐಟಿ ಕಾನ್ಪುರದಿಂದ ಮೋಟಿ ಝೀಲ್ವರೆಗಿನ 9 ಕಿಮೀ ಉದ್ದದ ಮೆಟ್ರೋ ಮಾರ್ಗ ಸಂಪೂರ್ಣವಾಗಿದ್ದು, ಅದನ್ನಿಂದು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ. ಅಂದಹಾಗೆ, ಕಾನ್ಪುರದ ಮೆಟ್ರೋ ರೈಲು ಯೋಜನೆಯ ಒಟ್ಟೂ ಉದ್ದ 32 ಕಿಮೀ ಆಗಿದ್ದು, ಒಟ್ಟಾರೆ ವೆಚ್ಚ 11 ಸಾವಿರ ಕೋಟಿ ರೂಪಾಯಿ.
ಪ್ರಧಾನಿ ನರೇಂದ್ರ ಮೋದಿಯವರು ಇಂದು ಐಐಟಿ ಮೆಟ್ರೋ ಸ್ಟೇಶನ್ನಿಂದ ಗೀತಾ ನಗರದವರೆಗೆ ಮೆಟ್ರೋ ರೈಲಿನಲ್ಲಿ ಪ್ರಯಾಣ ಮಾಡಿ, ಪರಿಶೀಲನೆ ನಡೆಸಲಿದ್ದಾರೆ. ನಗರಾಭಿವೃದ್ಧಿ, ಅದರಲ್ಲೂ ನಗರದಲ್ಲಿ ಸಂಚಾರ ಮಾರ್ಗ ಸುಧಾರಣೆ ಪ್ರಧಾನಿ ಮೋದಿಯವರ ಆದ್ಯತೆಯಾಗಿದೆ. ಈ ನಿಟ್ಟಿನಲ್ಲಿ ಕಾನ್ಪುರ ಮೆಟ್ರೋ ರೈಲು ಯೋಜನೆ ಇನ್ನೊಂದು ಪ್ರಮುಖ ಹೆಜ್ಜೆಯಾಗಿದೆ ಎಂದು ಉತ್ತರ ಪ್ರದೇಶ ಸರ್ಕಾರ ತಿಳಿಸಿದೆ. ಹಾಗೇ, ಇಂದಿನ ಕಾನ್ಪುರ ಭೇಟಿ ವೇಳೆ ಪ್ರಧಾನಿ ಮೋದಿ, ಬಿನಾ-ಪಂಕಿ ಮಲ್ಟಿಪ್ರೊಡಕ್ಟ್ ಪೈಪ್‌ಲೈನ್ ಯೋಜನೆ ಉದ್ಘಾಟಿಸುವರು. ಅದಾದ ಬಳಿಕ ಐಐಟಿ ಕಾನ್ಪುರ 54ನೇ ಘಟಿಕೋತ್ಸವದಲ್ಲಿ ಪಾಲ್ಗೊಳ್ಳುವರು. ಈ ವೇಳೆ ಐಐಟಿ ಕಾನ್ಪುರದ ಎಲ್ಲ ವಿದ್ಯಾರ್ಥಿಗಳಿಗೆ ಆಂತರಿಕ ಬ್ಲಾಕ್ಚೈನ್ ತಂತ್ರಜ್ಞಾನದ ಮೂಲಕ ಡಿಜಿಟಲ್ ಪದವಿ ನೀಡಲಾಗುತ್ತದೆ. ಇದನ್ನು ರಾಷ್ಟ್ರೀಯ ಬ್ಲಾಕ್ಚೈನ್ ಯೋಜನೆಯಡಿ ಅಭಿವೃದ್ಧಿಪಡಿಸಲಾಗಿದ್ದು, ಇದನ್ನು ಜಾಗತಿಕವಾಗಿಯೂ ಪರಿಗಣಿಸಬಹುದಾಗಿದೆ.
ಬಿನಾ-ಪಂಕಿ ಪೈಪ್‌ಲೈನ್ ಯೋಜನೆ
ಬಿನಾ-ಪಿಂಕಿ ಪೈಪ್‌ಲೈನ್ ಯೋಜನೆ 1500 ಕೋಟಿ ರೂಪಾಯಿಯೂ ಅಧಿಕ ವೆಚ್ಚದ ಯೋಜನೆಯಾಗಿದೆ. ಇದು ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಸಲುವಾಗಿ ನಿರ್ಮಿಸಲಾದ ಪೈಪ್‌ಲೈನ್ ಆಗಿದ್ದು, ಮಧ್ಯಪ್ರದೇಶದ ಬಿನಾ ಸಂಸ್ಕರಣಾಗಾರದಿಂದ ಕಾನ್ಪುರ ಪಂಕಿಯವರೆಗೆ 356 ಕಿಮೀ ಉದ್ದದ ಪೈಪ್‌ಲೈನ್ ಹಾಕಲಾಗಿದೆ. ಇದು ವಾರ್ಷಿಕವಾಗಿ 3.45 ಮಿಲಿಯನ್ ಮೆಟ್ರಿಕ್ ಟನ್ಗಳಷ್ಟು ಪೆಟ್ರೋಲಿಯಂ ಉತ್ಪನ್ನಗಳ ಪೂರೈಕೆ ಸಾಮರ್ಥ್ಯ ಹೊಂದಿದೆ. ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಇದರ ಕಾರ್ಯನಿರ್ವಹಿಸುತ್ತದೆ.
ನಿನ್ನೆ ಟ್ವೀಟ್ ಮಾಡಿದ್ದ ಪ್ರಧಾನಿ ಮೋದಿ
ಇಂದು ಉತ್ತರಪ್ರದೇಶದ ಕಾನ್ಪುರಕ್ಕೆ ಭೇಟಿ ನೀಡುವ ಬಗ್ಗೆ ನಿನ್ನೆಯೇ ಪ್ರಧಾನಮಂತ್ರಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದರು. ಡಿ.28ರಂದು ನಾನು ಕಾನ್ಪುರಕ್ಕೆ ತೆರಳುತ್ತಿದ್ದೇನೆ. ಅಲ್ಲಿ ಘಟಿಕೋತ್ಸವದಲ್ಲಿ ಮಾತನಾಡಲಿದ್ದೇನೆ. ಅದಕ್ಕೂ ಮೊದಲು ಕಾನ್ಪುರ ಮೆಟ್ರೋ ಯೋಜನೆಯ ಸಂಪೂರ್ಣಗೊಂಡ ಹಂತ ಮತ್ತು ಬಿನಾ-ಪಂಕಿ ಯೋಜನೆಯ ಉದ್ಘಾಟನೆ ಮಾಡಲಿದ್ದೇನೆ ಎಂದು ಹೇಳಿದ್ದರು. ಅಂದಹಾಗೆ ಉತ್ತರ ಪ್ರದೇಶಕ್ಕೆ ಅವರು ಒಂದು ತಿಂಗಳಿಂದಲೂ ಪದೇಪದೆ ಭೇಟಿ ಕೋಡುತ್ತಿದ್ದು ಈಗಾಗಲೇ ಹಲವು ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಮಾಡಿದ್ದಾರೆ.
ಇದನ್ನೂ ಓದಿ: ತುಮಕೂರಿನ ನಾನಾ ಕಡೆಗಳಲ್ಲಿ ಡಿಸೆಂಬರ್ 29 ಕ್ಕೆ ವಿದ್ಯುತ್ ವ್ಯತ್ಯಯ, ಬೆಳಿಗ್ಗೆ 10ರಿಂದ ಸಂಜೆ 6 ಗಂಟೆಯವರೆಗೂ ನೋ ಪವರ್
Published On - 9:40 am, Tue, 28 December 21