ದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ನಾಳೆ (ಡಿ.21) ಮತ್ತೆ ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ. ಅಲ್ಲಿ ಸುಮಾರು 2 ಲಕ್ಷ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಪ್ರಧಾನಮಂತ್ರಿ ಕಾರ್ಯಾಲಯ (PMO) ಇಂದು ಮಾಹಿತಿ ನೀಡಿದೆ. ಮಹಿಳಾ ಸಬಲೀಕರಣಕ್ಕೆ ಸದಾ ಆದ್ಯತೆ ನೀಡುವ ಪ್ರಧಾನಿ ಮೋದಿ, ಸ್ತ್ರೀಯರಿಗೆ ಅಗತ್ಯವಾದ ಕೌಶಲ, ಪ್ರೋತ್ಸಾಹ ಮತ್ತು ಸಂಪನ್ಮೂಲಗಳನ್ನು ನೀಡುವ ಮೂಲಕ ಅವರ ಸಬಲೀಕರಣಕ್ಕೆ ಉತ್ತೇಜನ ಕೊಡುವ ಸಲುವಾಗಿ ಈ ಕಾರ್ಯಕ್ರಮ ನಡೆಸಲಿದ್ದಾರೆ. ಮಧ್ಯಾಹ್ನ 1 ಗಂಟೆ ಹೊತ್ತಿಗೆ ಪ್ರಯಾಗ್ರಾಜ್ನಲ್ಲಿ ಸಮಾರಂಭ ನಡೆಯುವುದು ಎಂದು ಪಿಎಂಒ ಮಾಹಿತಿ ನೀಡಿದೆ. ಹಾಗೇ, ಕಾರ್ಯಕ್ರಮದ ಭಾಗವಾಗಿ ಮಹಿಳೆಯರಿಗೆ ಆರ್ಥಿಕ ನೆರವು ನೀಡಲು ಪ್ರಧಾನಮಂತ್ರಿಯವರು ಸುಮಾರು 1000 ಕೋಟಿ ರೂಪಾಯಿಯನ್ನು ಸ್ವಸಹಾಯ ಗುಂಪುಗಳ ಖಾತೆಗೆ ವರ್ಗಾಯಿಸುವರು. ಇದರಿಂದ 16 ಲಕ್ಷ ಮಹಿಳೆಯರಿಗೆ ಅನುಕೂಲವಾಗಲಿದೆ ಎಂದಿದ್ದಾರೆ.
ಈ 1000 ಕೋಟಿ ರೂಪಾಯಿಗಳ ವರ್ಗಾವಣೆಯನ್ನು ದೀನ್ ದಯಾಳ್ ಅಂತ್ಯೋದಯ ಯೋಜನೆಯ, ರಾಷ್ಟ್ರೀಯ ಗ್ರಾಮೀಣ ಜೀವನ ಮಿಷನ್(DAY-NRLM)ನಡಿ ಮಾಡಲಾಗುತ್ತಿದೆ. 80 ಸಾವಿರ ಸ್ವಸಹಾಯ ಸಂಘಗಳು, ಪ್ರತಿ ಸಂಘ 1.10 ಲಕ್ಷ ರೂ.ನಂತೆ ಮತ್ತು 60 ಸಾವಿರ ಸ್ವಸಹಾಯ ಸಂಘಗಳು ಪ್ರತಿ ಸಂಘ 15 ಸಾವಿರ ರೂ.ನಂತೆ ಆವರ್ತ ನಿಧಿ ಪಡೆಯುತ್ತವೆ ಎಂದೂ ಪಿಎಂಒ ಮಾಹಿತಿ ನೀಡಿದೆ. ಅಲ್ಲದೆ, ಬ್ಯಾಂಕಿಂಗ್ ಕರೆಸ್ಪಾಂಡೆಂಟ್ ಸಖಿಗಳಿಗೆ ಪ್ರೋತ್ಸಾಹ ನೀಡುವ ದೃಷ್ಟಿಯಿಂದ, ಒಟ್ಟು 20 ಸಾವಿರ ಬಿಸಿ ಸಖಿಗಳ ಖಾತೆಗೆ ಮೊದಲ ತಿಂಗಳ ಸ್ಟೈಪಂಡ್ ಆಗಿ ತಲಾ 4 ಸಾವಿರ ರೂ. ವರ್ಗಾವಣೆ ಮಾಡುವ ಕಾರ್ಯಕ್ಕೂ ಈ ಕಾರ್ಯಕ್ರಮ ಸಾಕ್ಷಿಯಾಗಲಿದೆ ಎಂದು ಪಿಎಂಒ ತಿಳಿಸಿದೆ. ಬ್ಯಾಂಕಿಂಗ್ ಸಖಿ ಎಂಬುದು ಉತ್ತರಪ್ರದೇಶ ಸರ್ಕಾರ ಮಹಿಳೆಯರಿಗಾಗಿ ಪ್ರಾರಂಭಿಸಿದ ಸ್ಕೀಮ್. ಎಲ್ಲ ವರ್ಗದ ಜನರಿಗೂ, ಅದರಲ್ಲೂ ಬಡವರ-ದುರ್ಬಲರಿಗೆ ಅವರ ಮನೆಗೇ ತೆರಳಿ ಬ್ಯಾಂಕಿಂಗ್ ಸೇವೆ ಒದಗಿಸುತ್ತಾರೆ.
ಹಾಗೇ, ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು, ಮುಖ್ಯಮಂತ್ರಿ ಕನ್ಯಾ ಸುಮಂಗಲಾ ಯೋಜನೆಯಡಿ 1 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳಿಗೆ ಅನುಕೂಲವಾಗುವಂತೆ 20 ಕೋಟಿ ರೂಪಾಯಿ ವರ್ಗಾವಣೆ ಮಾಡಲಿದ್ದಾರೆ. ಇದು ಹೆಣ್ಣುಮಗುವಿಗೆ ಅನುಕೂಲವಾಗುವ ಯೋಜನೆ. ಒಂದು ಹೆಣ್ಣುಮಗುವಿನ ಜೀವನದ ವಿವಿಧ ಹಂತದಲ್ಲಿ, ಷರತ್ತುಬದ್ಧವಾಗಿ ನಗದು ವರ್ಗಾವಣೆಯನ್ನು ಈ ಯೋಜನೆ ಒಳಗೊಂಡಿದೆ. ಈ ಯೋಜನೆಯಡಿ ಒಬ್ಬ ಫಲಾನುಭವಿಗೆ ಒಟ್ಟಾರೆ ವರ್ಗಾವಣೆಯಾಗುವ ಹಣ 15 ಸಾವಿರ ರೂಪಾಯಿ ಎಂದು ಪಿಎಂಒ ಹೇಳಿದೆ. ನಾಳಿನ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಆದಿತ್ಯನಾಥ್ ಕೂಡ ಇರುವರು.
ಇನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಇತ್ತೀಚೆಗೆ ಹಲವು ಬಾರಿ ಉತ್ತರಪ್ರದೇಶ ಪ್ರವಾಸ ಮಾಡಿದ್ದಾರೆ. ಅಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳನ್ನು ಉದ್ಘಾಟನೆ ಮಾಡಿದ್ದಾರೆ. ಕಾಶಿ ವಿಶ್ವನಾಥ ಕಾರಿಡಾರ್, ಗಂಗಾ ಎಕ್ಸ್ಪ್ರೆಸ್ ವೇ, ಸರಯೂ ರಾಷ್ಟ್ರೀಯ ನದಿ ನಾಲೆ ಇತರ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ಪ್ರಧಾನಿ ನರೇಂದ್ರ ಮೋದಿಯವರ ಭೇಟಿ ಭಾರಿ ಮಹತ್ವ ಪಡೆದುಕೊಳ್ಳುತ್ತಿದೆ.
ಇದನ್ನೂ ಓದಿ: WhatsApp: ವಾಟ್ಸ್ಆ್ಯಪ್ನಲ್ಲಿ ಹಳೆಯ ಮೆಸೇಜ್ ಡಿಲೀಟ್ ಆಗದಂತೆ ನಂಬರ್ ಬದಲಾಯಿಸುವುದು ಹೇಗೆ?