ಪ್ರಧಾನಿ ಲಖನೌಗೆ ಭೇಟಿ ನೀಡಿದ್ದರು, ಲಖಿಂಪುರ್​ಗೆ ಅಲ್ಲ: ಉತ್ತರ ಪ್ರದೇಶ ರೈತರ ಸಾವಿನ ಹಿನ್ನೆಲೆ ಬಿಜೆಪಿಯನ್ನು ಟೀಕಿಸಿದ ಪ್ರಿಯಾಂಕಾ ಗಾಂಧಿ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Oct 10, 2021 | 5:43 PM

ಪ್ರಧಾನಿ ಸೇರಿದಂತೆ ಯಾವುದೇ ಹಿರಿಯ ನಾಯಕ ಲಖಿಂಪುರಕ್ಕೆ ಭೇಟಿ ನೀಡಿಲ್ಲ. ಪ್ರಧಾನಿ ಮೋದಿ, ಲಖನೌಗೆ ಭೇಟಿ ನೀಡಿದ್ದಾರೆ, ಆದರೆ ಲಖಿಂಪುರ್ ಖೇರಿಗೆ ಅಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹೇಳಿದ್ದಾರೆ.

ಪ್ರಧಾನಿ ಲಖನೌಗೆ ಭೇಟಿ ನೀಡಿದ್ದರು, ಲಖಿಂಪುರ್​ಗೆ ಅಲ್ಲ: ಉತ್ತರ ಪ್ರದೇಶ ರೈತರ ಸಾವಿನ ಹಿನ್ನೆಲೆ ಬಿಜೆಪಿಯನ್ನು ಟೀಕಿಸಿದ ಪ್ರಿಯಾಂಕಾ ಗಾಂಧಿ
ಪ್ರಿಯಾಂಕಾ ಗಾಂಧಿ
Follow us on

ಲಖನೌ: ಲಖಿಂಪುರ ಖೇರಿ ಗ್ರಾಮದಲ್ಲಿ ರೈತರ ಸಾವುಗಳ ವಿಚಾರವನ್ನು ಮತ್ತೊಮ್ಮೆ ಪ್ರಸ್ತಾಪಿಸಿರುವ ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ, ಶನಿವಾರ ಬಿಜೆಪಿ ವಿರುದ್ಧ ಟೀಕಾ ಪ್ರಹಾರ ಮಾಡಿದ್ದಾರೆ. ಪ್ರಧಾನಿ ಸೇರಿದಂತೆ ಯಾವುದೇ ಹಿರಿಯ ನಾಯಕ ಲಖಿಂಪುರಕ್ಕೆ ಭೇಟಿ ನೀಡಿಲ್ಲ. ಪ್ರಧಾನಿ ಮೋದಿ, ಲಖನೌಗೆ ಭೇಟಿ ನೀಡಿದ್ದಾರೆ, ಆದರೆ ಲಖಿಂಪುರ್ ಖೇರಿಗೆ ಅಲ್ಲ. ಘಟನೆಗೆ ಸಂಬಂಧಿಸಿದಂತೆ ಕೇಂದ್ರ ಗೃಹ ಖಾತೆಯ ರಾಜ್ಯ ಸಚಿವ ಅಜಯ್ ಮಿಶ್ರಾ ತಕ್ಷಣ ರಾಜೀನಾಮೆ ನೀಡಬೇಕು ಎಂದು ಪ್ರಿಯಾಂಕಾ ಆಗ್ರಹಿಸಿದ್ದಾರೆ. ಅಜಯ್​ ಮಿಶ್ರಾರ ಮಗ ಆಶೀಶ್ ಮಿಶ್ರಾರನ್ನು ರೈತರ ಮೇಲೆ ಕಾರು ಹರಿದ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

‘ಸೊನ್​ಭಾದ್ರಾ ಹತ್ಯಾಕಾಂಡ, ಉನ್ನಾವೊ ಅಥವಾ ಹತ್ರಾಸ್​ಗಳಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಕೊಲೆ ಪ್ರಕರಣಗಳಲ್ಲಿಯೂ ನ್ಯಾಯ ಸಿಕ್ಕಿಲ್ಲ. ಈ ಪ್ರಕರಣದಲ್ಲಿಯೂ ಪರಿಸ್ಥಿತಿ ಹಾಗೆಯೇ ಇದೆ’ ಎಂದು ಉತ್ತರ ಪ್ರದೇಶದಲ್ಲಿ ನಡೆದ ರೈತರ ಱಲಿಯಲ್ಲಿ ಪ್ರಿಯಾಂಕಾ ಹೇಳಿದರು. ‘ಅಲ್ಲಿರುವ ಜನರಿಗೂ ನ್ಯಾಯ ಸಿಗುತ್ತದೆ ಎನ್ನುವ ವಿಶ್ವಾಸವಿಲ್ಲ. ಪೊಲೀಸರು ಅಪರಾಧಿಗಳನ್ನು ನಮ್ಮೊಡನೆ ಮಾತುಕತೆಗೆ ಕರೆಸುತ್ತಿದ್ದಾರೆ. ವಿಶ್ವದಲ್ಲಿ ಎಲ್ಲಿಯೂ ಇಂಥ ಬೆಳವಣಿಗೆ ನಡೆದಿಲ್ಲ’ ಎಂದು ರೈತರೊಬ್ಬರ ಮಾತನ್ನು ಉದಾಹರಿಸಿದರು.

‘ಕೊರೊನಾ ಬಂದಾಗ ಸಾರ್ವಜನಿಕರಲ್ಲಿ ಆತಂಕ ಮೂಡಿತ್ತು. ಈ ಸರ್ಕಾರವು ಅವರಿಗೆ ಸಂಕಷ್ಟ ಪರಿಸ್ಥಿತಿಯಲ್ಲಿ ಎನಾದರೂ ಸಹಾಯ ಮಾಡೀತು ಎಂದು ಅವರು ನಿರೀಕ್ಷಿಸಲಿಲ್ಲ. ಭಾರತಕ್ಕೆ ನ್ಯಾಯ ಸಮ್ಮತ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಉತ್ತರ ಪ್ರದೇಶದಲ್ಲಿ ಸಂತ್ರಸ್ತರ ಕುಟುಂಬಗಳಿಗೆ ನ್ಯಾಯ ಸಿಗುವ ಭರವಸೆಯೇ ಬತ್ತಿ ಹೋಗಿದೆ’ ಎಂದು ಬೇಸರ ವ್ಯಕ್ತಪಡಿಸಿದರು. ಲಖಿಂಪುರ ಖೇರಿಗೆ ತೆರಳುತ್ತಿದ್ದ ಪ್ರಿಯಾಂಕಾ ಅವರನ್ನು ಕಳೆದ ಸೋಮವಾರ ರಾಜ್ಯ ಸರ್ಕಾರ ಬಂಧಿಸಿತ್ತು. ಮೃತರ ಸಂಬಂಧಿಕರನ್ನು ಭೇಟಿ ಮಾಡಿ ಸಾಂತ್ವನ ಹೇಳಲೆಂದು ಉತ್ತರ ಪ್ರದೇಶದ ಕಾಂಗ್ರೆಸ್ ಉಸ್ತುವಾರಿಯೂ ಆಗಿರುವ ಪ್ರಿಯಾಂಕಾ ಹೊರಟಿದ್ದರು.

ಲಖಿಂಪುರದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವರ ಮಗನಿಗೆ ಸೇರಿದ ಕಾರು ರೈತರ ಮೇಲೆ ಹರಿದು ಸಾವುನೋವು ಸಂಭವಿಸಿತ್ತು. ಈ ಘಟನೆಗೆ ಪ್ರತಿಕ್ರಿಯೆಯಾಗಿ ನಡೆದ ಹಿಂಸಾಚಾರದಲ್ಲಿ ಕಾರಿನಲ್ಲಿದ್ದ ಕೆಲವರು ಮೃತಪಟ್ಟಿದ್ದರು. ಈ ಘಟನೆಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಹಗ್ಗಜಗ್ಗಾಟದ ವಿಷಯವಾಗಿದೆ. ಕಾಂಗ್ರೆಸ್ ಮತ್ತು ಇತರ ಪ್ರತಿಪಕ್ಷಗಳು ಸಚಿವ ಅಜಯ್ ಮಿಶ್ರಾ ರಾಜೀನಾಮೆಗೆ ಒತ್ತಾಯಿಸುತ್ತಿವೆ. ಆದರೆ ಅವರು ಘಟನೆ ನಡೆದ ದಿನ ತಾವು ಸ್ಥಳದಲ್ಲಿ ಇರಲೇ ಇಲ್ಲ ಎಂದು ಹೇಳುತ್ತಿದ್ದಾರೆ. ರಾಜೀನಾಮೆ ನೀಡುವ ವಿಚಾರವನ್ನೂ ಸ್ಪಷ್ಟವಾಗಿ ನಿರಾಕರಿಸಿದ್ದಾರೆ.

ಮೃತರ ಮನೆಗಳಿಗೆ ಭೇಟಿ ನೀಡಲೆಂದು ಹೊರಟಿದ್ದ ಪ್ರಿಯಾಂಕಾ ಅವರನ್ನು ಉತ್ತರ ಪ್ರದೇಶ ಪೊಲೀಸರು ಕಳೆದ ಸೋಮವಾರ ಬಂಧಿಸಿ ಅತಿಥಿ ಗೃಹದಲ್ಲಿ ಬಂಧನದಲ್ಲಿಟ್ಟಿದ್ದರು. ನಂತರ ಕಾಂಗ್ರೆಸ್ ತಂಡದೊಂದಿಗೆ ಮೃತರ ಕುಟುಂಬ ಭೇಟಿ ಮಾಡಲು ಅವಕಾಶ ನೀಡಲಾಯಿತು. 19 ವರ್ಷದ ಲವ್​ಪ್ರೀತ್ ಸಿಂಗ್ ಮತ್ತು 30 ವರ್ಷದ ಸ್ಥಳೀಯ ಪತ್ರಕರ್ತ ರಮಣ್ ಕಶ್ಯಪ್​ರ ಮನೆಗಳಿಗೆ ಕಾಂಗ್ರೆಸ್ ನಿಯೋಗ ಭೇಟಿ ನೀಡಿತ್ತು. ‘ಈ ಕುಟುಂಬಗಳಿಗೆ ಪರಿಹಾರ ಹಣ ಬೇಕಿಲ್ಲ, ನ್ಯಾಯ ಬೇಕಿದೆ. ಗೃಹ ಇಲಾಖೆಗೆ ಅಜಯ್ ಮಿಶ್ರಾ ರಾಜೀನಾಮೆ ನೀಡುವವರೆಗೂ ಇದು ಸಿಗುವುದಿಲ್ಲ’ ಎಂದು ಹೇಳಿದ್ದರು.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಅಲ್ಪಸಂಖ್ಯಾತ ನಾಯಕರ ನಡುವೆ ಸಮರ: ಶಾಸಕ ಶಾಸಕ ಜಮೀರ್ ಅಹ್ಮದ್​ಗೆ ಮಣೆ; ಸಿ ಎಂ ಇಬ್ರಾಹಿಂ ದೂರ
ಇದನ್ನೂ ಓದಿ: Lakhimpur Kheri ಲಖಿಂಪುರ್ ಘಟನೆಯನ್ನು ಹಿಂದೂ- ಸಿಖ್ ನಡುವಿನ ಕದನ ಮಾಡಲು ಪ್ರಯತ್ನ ನಡೆಯುತ್ತಿದೆ: ವರುಣ್ ಗಾಂಧಿ