Vande Bharat Express: ಹಿಮಾಚಲ ಪ್ರದೇಶದ ಉನಾದಲ್ಲಿ 4ನೇ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿಗೆ ಪ್ರಧಾನಿ ಮೋದಿ ಚಾಲನೆ

| Updated By: ಸುಷ್ಮಾ ಚಕ್ರೆ

Updated on: Oct 13, 2022 | 9:16 AM

ಮೋದಿ ಇಂದು ಉದ್ಘಾಟಿಸಲಿರುವ ವಂದೇ ಭಾರತ್ ರೈಲು ಹಿಂದಿನ ರೈಲುಗಳಿಗೆ ಹೋಲಿಸಿದರೆ ಸುಧಾರಿತ ಆವೃತ್ತಿಯಾಗಿದೆ. ಇದು ಹೆಚ್ಚು ಹಗುರವಾಗಿದೆ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

Vande Bharat Express: ಹಿಮಾಚಲ ಪ್ರದೇಶದ ಉನಾದಲ್ಲಿ 4ನೇ ವಂದೇ ಭಾರತ್ ಎಕ್ಸ್​ಪ್ರೆಸ್​ ರೈಲಿಗೆ ಪ್ರಧಾನಿ ಮೋದಿ ಚಾಲನೆ
ಪ್ರಧಾನಿ ನರೇಂದ್ರ ಮೋದಿ
Follow us on

ನವದೆಹಲಿ: ಹಿಮಾಚಲ ಪ್ರದೇಶದ (Himachal Pradesh) ಉನಾ ಜಿಲ್ಲೆಯಲ್ಲಿ ಇಂದು (ಗುರುವಾರ) ನಾಲ್ಕನೇ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲನ್ನು ಪ್ರಧಾನಿ ನರೇಂದ್ರ ಮೋದಿ (Narendra Modi) ಉದ್ಘಾಟಿಸಲಿದ್ದಾರೆ. ಈ ರೈಲು ದೆಹಲಿ ಮತ್ತು ಹಿಮಾಚಲ ಪ್ರದೇಶದ ನಡುವೆ ಸಂಚಾರ ನಡೆಸಲಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ಸೆಮಿ ಹೈಸ್ಪೀಡ್ ರೈಲು ದೆಹಲಿ ಮತ್ತು ಅಂಬ್ ಅಂಡೌರಾ ನಡುವೆ ಸಂಚರಿಸಲಿದೆ. ಇದು ಬುಧವಾರವನ್ನು ಹೊರತುಪಡಿಸಿ ವಾರದ ಉಳಿದೆಲ್ಲಾ ದಿನಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ರೈಲು ಸಂಖ್ಯೆ 22447 ನವದೆಹಲಿಯಿಂದ ಅಂಬ್ ಅಂಡೌರಾಗೆ ಬೆಳಿಗ್ಗೆ 5.50ಕ್ಕೆ ಹೊರಟು 11.05ಕ್ಕೆ ಅಂಬ್ ಅಂಡೌರಾ ರೈಲು ನಿಲ್ದಾಣವನ್ನು ತಲುಪಲಿದೆ. ಅಂಬ್ ಅಂಡೌರಾದಿಂದ 22448 ಸಂಖ್ಯೆಯ ರೈಲು ಮಧ್ಯಾಹ್ನ 1 ಗಂಟೆಗೆ ಹೊರಟು ಸಂಜೆ 6.25ಕ್ಕೆ ನವದೆಹಲಿಗೆ ತಲುಪಲಿದೆ. ಈ ರೈಲು 16 ಕೋಚ್‌ಗಳನ್ನು ಹೊಂದಿದ್ದು, ಅಂಬಾಲಾ, ಚಂಡೀಗಢ, ಆನಂದಪುರ ಸಾಹಿಬ್ ಮತ್ತು ಉನಾ ಹಿಮಾಚಲದಲ್ಲಿ ನಿಲುಗಡೆ ಹೊಂದಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Vande Bharat Train: ನೂತನ ವಂದೇ ಭಾರತ್ ರೈಲಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ: ರೈಲಿನ ವಿಶೇಷತೆ ಏನು?

ಪಿಎಂ ಮೋದಿ ಇಂದು ಉದ್ಘಾಟಿಸಲಿರುವ ವಂದೇ ಭಾರತ್ ರೈಲು ಹಿಂದಿನ ರೈಲುಗಳಿಗೆ ಹೋಲಿಸಿದರೆ ಸುಧಾರಿತ ಆವೃತ್ತಿಯಾಗಿದೆ. ಇದು ಹೆಚ್ಚು ಹಗುರವಾಗಿದೆ ಮತ್ತು ಕಡಿಮೆ ಅವಧಿಯಲ್ಲಿ ಹೆಚ್ಚಿನ ವೇಗವನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದು ಕೇವಲ 52 ಸೆಕೆಂಡುಗಳಲ್ಲಿ ಗಂಟೆಗೆ 100 ಕಿಮೀ ವೇಗವನ್ನು ಪಡೆಯುತ್ತದೆ.

ಸ್ಥಳೀಯವಾಗಿ ವಿನ್ಯಾಸಗೊಳಿಸಲಾದ ಸೆಮಿ-ಹೈ-ಸ್ಪೀಡ್ ರೈಲು, ವಂದೇ ಭಾರತ್ ಸರಣಿಯ ಅಡಿಯಲ್ಲಿ ಮೂರನೇ ಸೇವೆಗೆ ಪ್ರಧಾನಿ ಮೋದಿ ಸೆಪ್ಟೆಂಬರ್ 30ರಂದು ಗಾಂಧಿನಗರ ಕ್ಯಾಪಿಟಲ್‌ನಿಂದ ಹಸಿರು ನಿಶಾನೆ ತೋರಿದ್ದರು. ಇದು ಅಕ್ಟೋಬರ್ 1ರಿಂದ ಸಂಚಾರ ಪ್ರಾರಂಭಿಸಿತ್ತು. ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳು ದೆಹಲಿ-ವಾರಣಾಸಿ ಮತ್ತು ದೆಹಲಿ-ಕತ್ರಾ ಮಾರ್ಗಗಳಲ್ಲಿ ಸಹ ಸಂಚರಿಸುತ್ತವೆ.

ಇದನ್ನೂ ಓದಿ: ವಂದೇ ಭಾರತ್ ಎಕ್ಸ್‌ಪ್ರೆಸ್​ಗೆ ದಿನಕ್ಕೊಂದು ವಿಘ್ನ, 3ನೇ ದಿನ ಚಕ್ರ ಜಾಮ್‌, ಪ್ರಯಾಣಿಕರು ಶತಾಬ್ದಿಗೆ ಶಿಫ್ಟ್!

ಇದರ ಜೊತೆಗೆ ಇಂದು ಪ್ರಧಾನಿ ಮೋದಿ ಚಂಬಾ ಜಿಲ್ಲೆಯಲ್ಲಿ 2 ಜಲವಿದ್ಯುತ್ ಯೋಜನೆಗಳ ಶಂಕುಸ್ಥಾಪನೆ ಮತ್ತು ಹಿಮಾಚಲ ಪ್ರದೇಶದಲ್ಲಿ ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ-IIIಗೆ ಚಾಲನೆ ನೀಡಲಿದ್ದಾರೆ. ಬಳಿಕ ಅವರು ಉನಾ ಮತ್ತು ಚಂಬಾದಲ್ಲಿ ಎರಡು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 9:16 am, Thu, 13 October 22