No Money for Terror: ‘ಭಯೋತ್ಪಾದನೆಗೆ ಹಣಕಾಸು ಬೇಡ’ ಜಾಗತಿಕ ಸಮಾವೇಶವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ

| Updated By: Rakesh Nayak Manchi

Updated on: Nov 18, 2022 | 7:02 AM

ಭಯೋತ್ಪಾದನೆಗೆ ಹಣಕಾಸು ನಿಗ್ರಹ, ಭಯೋತ್ಪಾದನೆಗೆ ಹಣಕಾಸು ಬೇಡ- ಕುರಿತ ಸಚಿವರ 3ನೇ ಸಮಾವೇಶ ನವೆಂಬರ್ 18 ಮತ್ತು 19 ರಂದು ನವದೆಹಲಿಯಲ್ಲಿ ನಡೆಯಲಿದೆ.

No Money for Terror: ಭಯೋತ್ಪಾದನೆಗೆ ಹಣಕಾಸು ಬೇಡ ಜಾಗತಿಕ ಸಮಾವೇಶವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ
'ಭಯೋತ್ಪಾದನೆಗೆ ಹಣಕಾಸು ಬೇಡ' ಜಾಗತಿಕ ಸಮಾವೇಶವನ್ನು ಉದ್ಘಾಟಿಸಲಿರುವ ಪ್ರಧಾನಿ ಮೋದಿ
Follow us on

ದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಶುಕ್ರವಾರ ರಾಷ್ಟ್ರೀಯ ರಾಜಧಾನಿ ದೆಹಲಿಯಲ್ಲಿ ‘ಭಯೋತ್ಪಾದನೆಗೆ ಹಣಕಾಸು ಬೇಡ’ (NMFT) ಕುರಿತ ಮೂರನೇ ಜಾಗತಿಕ ಸಮ್ಮೇಳನ (3rd Global meet)ವನ್ನು ಇಂದು ಉದ್ಘಾಟಿಸಲಿದ್ದು, ಅಲ್ಲಿ 75 ದೇಶಗಳ ಪ್ರತಿನಿಧಿಗಳು ಭಯೋತ್ಪಾದನೆ ಮತ್ತು ಭಯೋತ್ಪಾದಕ ಹಣಕಾಸುಗೆ ಸಂಬಂಧಿಸಿದ ವಿವಿಧ ವಿಷಯಗಳ ಕುರಿತು ಚರ್ಚಿಸಲಿದ್ದಾರೆ. ಈ ಹಿಂದಿನ ಎರಡು ಸಭೆಗಳು ಕ್ರಮವಾಗಿ 2018 ಮತ್ತು 2019 ರಲ್ಲಿ ಫ್ರಾನ್ಸ್ ಮತ್ತು ಆಸ್ಟ್ರೇಲಿಯಾದಲ್ಲಿ ನಡೆದಿದ್ದವು. ನವೆಂಬರ್ 18 ಮತ್ತು 19ರಂದು ತಾಜ್ ಪ್ಯಾಲೇಸ್​ ಹೊಟೇಲ್​ನಲ್ಲಿ ನಡೆಯುವ ಈ ಸಮ್ಮೇಳನವು ಭಯೋತ್ಪಾದನೆ ನಿಗ್ರಹದ ಮೇಲೆ ಪ್ರಸ್ತುತ ಅಂತಾರಾಷ್ಟ್ರೀಯ ಆಡಳಿತದ ಪರಿಣಾಮಕಾರಿತ್ವ ಮತ್ತು ಭವಿಷ್ಯದ ಸವಾಲುಗಳನ್ನು ಎದುರಿಸಲು ಅಗತ್ಯವಾದ ಕ್ರಮಗಳ ಕುರಿತು ಚರ್ಚಿಸಲು ಭಾಗವಹಿಸುವ ರಾಷ್ಟ್ರಗಳು ಮತ್ತು ಸಂಸ್ಥೆಗಳಿಗೆ ವೇದಿಕೆಯನ್ನು ನೀಡುತ್ತದೆ ಎಂದು ಪ್ರಧಾನ ಮಂತ್ರಿ ಕಚೇರಿ ಹೇಳಿಕೆಯಲ್ಲಿ ತಿಳಿಸಿದೆ.

ಸಚಿವರು, ಬಹುಪಕ್ಷೀಯ ಸಂಸ್ಥೆಗಳ ಮುಖ್ಯಸ್ಥರು ಮತ್ತು ಫೈನಾನ್ಷಿಯಲ್ ಆಕ್ಷನ್ ಟಾಸ್ಕ್ ಫೋರ್ಸ್ (FATF) ನಿಯೋಗಗಳ ಮುಖ್ಯಸ್ಥರು ಸೇರಿದಂತೆ ಪ್ರಪಂಚದಾದ್ಯಂತದ ಸುಮಾರು 450 ಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಎನ್‌ಎಂಎಫ್‌ಟಿ ಸಮ್ಮೇಳನಕ್ಕೆ ಸಿದ್ಧಪಡಿಸಲಾದ ಕಾರ್ಯಸೂಚಿಯ ಪ್ರಕಾರ, ಎರಡು ದಿನಗಳ ಕಾಲ ನಾಲ್ಕು ಸೆಷನ್‌ಗಳು ನಡೆಯಲಿವೆ, ಇದರಲ್ಲಿ 75 ದೇಶಗಳ ಪ್ರತಿನಿಧಿಗಳು ಚರ್ಚಿಸುತ್ತಾರೆ. ನಾಲ್ಕು ಸೆಷನ್‌ಗಳು ಹೀಗಿವೆ:

  • ಭಯೋತ್ಪಾದನೆ ಮತ್ತು ಭಯೋತ್ಪಾದಕ ಹಣಕಾಸಿನ ಜಾಗತಿಕ ಪ್ರವೃತ್ತಿಗಳು
  • ಭಯೋತ್ಪಾದನೆಗಾಗಿ ಔಪಚಾರಿಕ ಮತ್ತು ಅನೌಪಚಾರಿಕ ನಿಧಿಗಳ ಬಳಕೆ
  • ಉದಯೋನ್ಮುಖ ತಂತ್ರಜ್ಞಾನಗಳು ಮತ್ತು ಭಯೋತ್ಪಾದಕ ಹಣಕಾಸು
  • ಭಯೋತ್ಪಾದಕ ಹಣಕಾಸು ವಿರುದ್ಧ ಹೋರಾಡುವ ಸವಾಲುಗಳನ್ನು ಎದುರಿಸಲು ಅಂತಾರಾಷ್ಟ್ರೀಯ ಸಹಕಾರ

ಇದನ್ನೂ ಓದಿ: ನವೆಂಬರ್ 19ರಂದು ಅರುಣಾಚಲ ಪ್ರದೇಶ, ಉತ್ತರಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಮೋದಿ

ಸಮಾವೇಶಕ್ಕೆ ಆತಿಥ್ಯ ವಹಿಸಿರುವುದು ಅಂತಾರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ವಿಷಯಕ್ಕೆ ಮೋದಿ ಸರ್ಕಾರವು ನೀಡುತ್ತಿರುವ ಪ್ರಾಮುಖ್ಯವನ್ನು ಮತ್ತು ಈ ಬೆದರಿಕೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ನೀತಿಯನ್ನು ಪ್ರತಿಬಿಂಬಿಸುತ್ತದೆ. ಕೇಂದ್ರ ಗೃಹ ವ್ಯವಹಾರಗಳು ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಸಮಾವೇಶದಲ್ಲಿ ಭಾಗವಹಿಸಲಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟ ಕುರಿತ ಭಾರತದ ದೃಢಸಂಕಲ್ಪವನ್ನು ತಿಳಿಸಲಿದ್ದಾರೆ. ಸಮಾವೇಶವು ಭಯೋತ್ಪಾದನೆಗೆ ಹಣಕಾಸು ನಿಗ್ರಹ ಕುರಿತ ಹೋರಾಟದ ಚರ್ಚೆಗಳನ್ನು ಮುನ್ನಡೆಸುವ ಗುರಿಯನ್ನು ಹೊಂದಿದೆ. ಭಯೋತ್ಪಾದನೆಗೆ ಹಣಕಾಸು ನಿಗ್ರಹ ಸಮಾವೇಶವು ರಾಷ್ಟ್ರಗಳ ನಡುವೆ ತಿಳಿವಳಿಕೆ ಮತ್ತು ಸಹಕಾರವನ್ನು ನಿರ್ಮಿಸಲು ಭಾರತದ ಪ್ರಯತ್ನಗಳನ್ನು ಮತ್ತಷ್ಟು ಮುಂದುವರಿಸುತ್ತದೆ ಎಂದು ಗೃಹ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:02 am, Fri, 18 November 22