Rozgar Mela: 10 ಲಕ್ಷ ಜನರನ್ನು ನೇಮಿಸಿಕೊಳ್ಳುವ ಅಭಿಯಾನ ‘ರೋಜ್ಗಾರ್ ಮೇಳ’ಕ್ಕೆ ನಮೋ ಚಾಲನೆ

| Updated By: Rakesh Nayak Manchi

Updated on: Oct 22, 2022 | 6:52 AM

10 ಲಕ್ಷ ಜನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಆಯೋಜಿಸಲಾದ ರೋಜ್ಗಾರ್ ಮೇಳಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ. ಆ ಮೂಲಕ ಉದ್ಯೋಗ ಹುಡುಕಾಟದಲ್ಲಿ ತೊಡಗಿರುವವರಿಗೆ ಸಮಾಧಾನ ತಂದಿದೆ.

Rozgar Mela: 10 ಲಕ್ಷ ಜನರನ್ನು ನೇಮಿಸಿಕೊಳ್ಳುವ ಅಭಿಯಾನ ‘ರೋಜ್ಗಾರ್ ಮೇಳಕ್ಕೆ ನಮೋ ಚಾಲನೆ
ರೋಜ್ಗಾರ್ ಮೇಳ'ಕ್ಕೆ ನರೇಂದ್ರ ಮೋದಿ ಚಾಲನೆ
Follow us on

ಉದ್ಯೋಗಕ್ಕಾಗಿ ಕಾಯುತ್ತಿರುವ ಯುವಕರಿಗೆ ದೊಡ್ಡ ಮತ್ತು ಸಮಾಧಾನದ ಸುದ್ದಿ ಇದಾಗಿದ್ದು, ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ದೀಪಾವಳಿಗೂ ಮುನ್ನವೇ ಭರ್ಜರಿ ಉಡುಗೊರೆ ನೀಡಿದ್ದಾರೆ. ಇಂದು (ಅಕ್ಟೋಬರ್ 22) 10 ಲಕ್ಷ ಜನರಿಗೆ ಉದ್ಯೋಗ ನೀಡುವ ಉದ್ದೇಶದಿಂದ ಆಯೋಜಿಸಿದ ರೋಜ್ಗಾರ್ ಮೇಳ (Rozgar Mela)ಕ್ಕೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಮೊದಲ ಹಂತದಲ್ಲಿ 75,000 ಯುವಕರಿಗೆ ನೇಮಕಾತಿ ಪತ್ರ ನೀಡಲಾಗುತ್ತಿದೆ ಎಂದು ಪ್ರಧಾನಿ ಕಾರ್ಯಾಲಯ ಗುರುವಾರ ತಿಳಿಸಿದೆ. ಯುವಜನರಿಗೆ ಉದ್ಯೋಗಾವಕಾಶಗಳನ್ನು ಒದಗಿಸುವ ಮತ್ತು ನಾಗರಿಕರ ಕಲ್ಯಾಣವನ್ನು ಖಾತ್ರಿಪಡಿಸುವ ಪ್ರಧಾನಮಂತ್ರಿಯವರ ನಿರಂತರ ಬದ್ಧತೆಯನ್ನು ಪೂರೈಸುವಲ್ಲಿ ಇದು ಮಹತ್ವದ ಹೆಜ್ಜೆಯಾಗಿದೆ. ಪ್ರಧಾನಮಂತ್ರಿಗಳ ನಿರ್ದೇಶನದಂತೆ ಎಲ್ಲಾ ಸಚಿವಾಲಯಗಳು ಮತ್ತು ಇಲಾಖೆಗಳು ಅಸ್ತಿತ್ವದಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಕೆಲಸ ಮಾಡುತ್ತಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಈ ನೇಮಕಾತಿಗಳನ್ನು ಸಚಿವಾಲಯಗಳು ಮತ್ತು ಇಲಾಖೆಗಳು ಸ್ವತಃ ಅಥವಾ UPSC, SSC, ರೈಲ್ವೇ ನೇಮಕಾತಿ ಮಂಡಳಿಯಂತಹ ನೇಮಕಾತಿ ಏಜೆನ್ಸಿಗಳ ಮೂಲಕ ಮಾಡಲಾಗುತ್ತಿದೆ. ತ್ವರಿತ ನೇಮಕಾತಿಗಾಗಿ ಆಯ್ಕೆ ಪ್ರಕ್ರಿಯೆಗಳನ್ನು ಸರಳೀಕರಿಸಲಾಗಿದ್ದು, ತಂತ್ರಜ್ಞಾನವನ್ನು ಸಕ್ರಿಯಗೊಳಿಸಲಾಗಿದೆ.

ದೇಶಾದ್ಯಂತದಿಂದ ಆಯ್ಕೆಯಾದ ಅಭ್ಯರ್ಥಿಗಳು ಭಾರತ ಸರ್ಕಾರದ 38 ಸಚಿವಾಲಯಗಳು ಅಥವಾ ಇಲಾಖೆಗಳಿಗೆ ಸೇರಲಿದ್ದಾರೆ. ಗ್ರೂಪ್ -ಎ, ಗ್ರೂಪ್-ಬಿ (ಗೆಜೆಟೆಡ್), ಗ್ರೂಪ್-ಬಿ (ನಾನ್-ಗೆಜೆಟೆಡ್) ಮತ್ತು ಗ್ರೂಪ್-ಸಿ ಮಟ್ಟದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ಯುವಕರನ್ನು ಕೇಂದ್ರ ಸಶಸ್ತ್ರ ಪಡೆಗಳ ಸಿಬ್ಬಂದಿ, ಸಬ್-ಇನ್‌ಸ್ಪೆಕ್ಟರ್, ಕಾನ್‌ಸ್ಟೆಬಲ್, ಎಲ್‌ಡಿಸಿ, ಸ್ಟೆನೋ ಪಿಎ, ಆದಾಯ ತೆರಿಗೆ ಇನ್‌ಸ್ಪೆಕ್ಟರ್, ಎಂಟಿಎಸ್‌ನಂತಹ ಹುದ್ದೆಗಳಲ್ಲಿ ನೇಮಿಸಲಾಗುತ್ತದೆ.

ವರದಿಯ ಪ್ರಕಾರ, ಮೇಳವು ಬೆಳಗ್ಗೆ 11 ಗಂಟೆಗೆ ಆರಂಭವಾಗಲಿದ್ದು, ರಕ್ಷಣಾ ಸಚಿವಾಲಯ, ರೈಲ್ವೆ ಸಚಿವಾಲಯ, ಗೃಹ ಸಚಿವಾಲಯ, ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯ, ಅಂಚೆ ಇಲಾಖೆ, ಸಿಬಿಐ, ಕಸ್ಟಮ್ಸ್, ಬ್ಯಾಂಕಿಂಗ್ ಮತ್ತು ವಿವಿಧ ಭದ್ರತಾ ಪಡೆಗಳಲ್ಲಿ ನೇಮಕಾತಿ ನಡೆಯಲಿದೆ. ಈ ಉದ್ಯೋಗ ಮೇಳದಲ್ಲಿ ವಿವಿಧ ಸಚಿವಾಲಯಗಳ ಸಚಿವರಲ್ಲದೆ ಇತರೆ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಇಂದು ಸಂಜೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಫಲಾನುಭವಿಗಳ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ಅದರಂತೆ ಯೋಜನೆಯ ಸುಮಾರು 4.51 ಲಕ್ಷ ಫಲಾನುಭವಿಗಳಿಗೆ ಮಧ್ಯಪ್ರದೇಶದ ಸತ್ನಾದಲ್ಲಿ ಹೊಸ ಮನೆಗಳನ್ನು ಫಲಾನುಭವಿಗಳಿಗೆ ವಿತರಿಸಲಾಗುತ್ತಿದೆ.

ಮತ್ತಷ್ಟು ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:52 am, Sat, 22 October 22