ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತವರ ಸೋದರನ ವಿರುದ್ಧ ಕಳ್ಳತನದ ಆರೋಪ; ಠಾಣೆಯಲ್ಲಿ ದೂರು ದಾಖಲು

| Updated By: Lakshmi Hegde

Updated on: Jun 06, 2021 | 9:38 AM

ವಂಚನೆ ಪ್ರಕರಣದಡಿ ಸುವೇಂದು ಅಧಿಕಾರಿ ಆಪ್ತಸಹಾಯಕನೊಬ್ಬನನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದರು. ಅದೇ ದಿನ ಸುವೇಂದು ಮತ್ತು ಸೌಮೇಂದು ವಿರುದ್ಧ ಕೂಡ ದೂರು ದಾಖಲಾಗಿದೆ.

ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತವರ ಸೋದರನ ವಿರುದ್ಧ ಕಳ್ಳತನದ ಆರೋಪ; ಠಾಣೆಯಲ್ಲಿ ದೂರು ದಾಖಲು
ಸುವೇಂದು ಅಧಿಕಾರಿ
Follow us on

ಕೋಲ್ಕತ್ತ: ಬಿಜೆಪಿ ಮುಖಂಡ (ಟಿಎಂಸಿ ಮಾಜಿ ನಾಯಕ) ಸುವೇಂದು ಅಧಿಕಾರಿ ಮತ್ತು ಅವರ ಸೋದರನ ವಿರುದ್ಧ ಕಳ್ಳತನದ ಆರೋಪ ದಾಖಲಾಗಿದೆ. ಇವರಿಬ್ಬರೂ ಪಶ್ಚಿಮಬಂಗಾಳದ ಕಾಂತಿ ಪುರಸಭಾ ಕಚೇರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಕದ್ದಿದ್ದಾರೆ ಎಂಬ ಆರೋಪದಡಿ ಪೊಲೀಸ್​ ಕೇಸ್​ ದಾಖಲಾಗಿದೆ. ಕೋಲ್ಕತ್ತದಿಂದ 150 ಕಿಮೀ ದೂರದಲ್ಲಿರುವ ಕಾಂತಿ ಪುರಸಭೆ ಆಡಳಿತ ಮಂಡಳಿ ಸದಸ್ಯ ರತ್ನದೀಪ್​ ಮನ್ನಾ ನೀಡಿದ ದೂರಿನ ಅನ್ವಯ ಕಾಂರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸುವೇಂದು ಅಧಿಕಾರಿಯವರ ಸೋದರ ಸೌಮೇಂದು ಅಧಿಕಾರಿ ಈ ಪುರಸಭೆಯ ಮಾಜಿ ಮುಖ್ಯಸ್ಥರಾಗಿದ್ದರು. ಇವರಿಬ್ಬರೂ ಸೇರಿ ಮೇ 29ರಂದು ಮಧ್ಯಾಹ್ನ 12.30ರ ಹೊತ್ತಿಗೆ ಪುರಸಭೆಯ ಗೋಡೌನ್​ನ್ನು ಅಕ್ರಮವಾಗಿ ತೆರೆದು, ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಟ್ರೈಪಲ್​​ಗಳನ್ನು ಕದ್ದಿದ್ದಾರೆ. ಗೋದಾಮಿನ ಬಾಗಿಲನ್ನು ಬಲವಂತವಾಗಿ, ಕಾನೂನು ಬಾಹಿರವಾಗಿ ತೆರೆಯಲಾಯಿತು ಎಂದೂ ರತ್ನದೀಪ್​ ಮನ್ನಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ಕಳ್ಳತನ ಮಾಡುವಾಗ ಬಿಜೆಪಿ ನಾಯಕರು ಕೇಂದ್ರ ಸಶಸ್ತ್ರಪಡೆಗಳ ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಜೂ.1ರಂದು ಈ ದೂರು ನೀಡಲ್ಪಟ್ಟಿದೆ.

ವಂಚನೆ ಪ್ರಕರಣದಡಿ ಸುವೇಂದು ಅಧಿಕಾರಿ ಆಪ್ತಸಹಾಯಕನೊಬ್ಬನನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದರು. ಅದೇ ದಿನ ಸುವೇಂದು ಮತ್ತು ಸೌಮೇಂದು ವಿರುದ್ಧ ಕೂಡ ದೂರು ದಾಖಲಾಗಿದೆ. ರಾಖಲ್​ ಭೇರಾ ಬಂಧಿತನಾಗಿದ್ದು, ಈತ 2019ರಲ್ಲಿ ವ್ಯಕ್ತಿಯೋರ್ವನಿಗೆ, ನೀರಾವರಿ ಮತ್ತು ಜಲಸಂಪನ್ಮೂಲ ಸಚಿವಾಲಯದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಸುಮಾರು 2 ಲಕ್ಷ ರೂ. ಪಡೆದಿದ್ದರು. ಆದರೆ ನಂತರ ಅವರು ಕೆಲಸ ಕೊಡಿಸಿರಲಿಲ್ಲ ಎಂಬ ಆರೋಪದಡಿ ಈತನ ವಿರುದ್ಧ ದೂರು ದಾಖಲಾಗಿತ್ತು.

ಸುವೇಂದು ಅಧಿಕಾರಿ ನವೆಂಬರ್​​ವರೆಗೆ ಮಮತಾ ಬ್ಯಾನರ್ಜಿಯವರ ಕ್ಯಾಬಿನೆಟ್​​ನಲ್ಲಿ ಸಚಿವರಾಗಿದ್ದರು. ಆದರೆ 2020ರ ಡಿಸೆಂಬರ್​​ನಲ್ಲಿ ಬಿಜೆಪಿ ಸೇರ್ಪಡೆಯಾಗಿ, ನಂದಿಗ್ರಾಮದಲ್ಲಿ ಗೆದ್ದು, ಇದೀಗ ಪಶ್ಚಿಮ ಬಂಗಾಳ ಪ್ರತಿಪಕ್ಷ ನಾಯಕರಾಗಿದ್ದಾರೆ.

ಇದನ್ನೂ ಓದಿ: Karnataka SSLC 2nd PUC Exam 2021: ಎಸ್ಎಸ್ಎಲ್ಸಿ, ಪಿಯುಸಿ ರಿಪೀಟರ್ಸ್ಗೆ ಟೆನ್ಷನ್ ಶುರು, ಶಿಕ್ಷಣ ಇಲಾಖೆಯಿಂದ ಮತ್ತೊಂದು ನಿರ್ಧಾರ