‘ಇನ್ಮುಂದೆ ರೋಗಿಗಳು, ಸಹೋದ್ಯೋಗಿಗಳ ಜತೆ ಮಲಯಾಳಂನಲ್ಲಿ ಮಾತಾಡಬೇಡಿ..’ -ನರ್ಸ್ ಸಿಬ್ಬಂದಿಗೆ ಸುತ್ತೋಲೆ ಹೊರಡಿಸಿದ ಸರ್ಕಾರಿ ಆಸ್ಪತ್ರೆ
ದೆಹಲಿಯ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಗೋವಿಂದ್ ಬಲ್ಲಬ್ ಪಂತ್ ಇನ್ಸ್ಟಿಟ್ಯೂಟ್ ಆಫ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಆಸ್ಪತ್ರೆ(GIPMER)ಯಲ್ಲಿ ಹೀಗೆ ನರ್ಸ್ಗಳಿಗೆ ಸುತ್ತೋಲೆ ಹೊರಡಿಸಿ, ಮಲಯಾಳಂ ಮಾತನಾಡದಂತೆ ಸೂಚಿಸಿದೆ.
ಮಲಯಾಳಂನಲ್ಲಿ ಮಾತನಾಡಬೇಡಿ..ಹಿಂದಿ ಅಥವಾ ಇಂಗ್ಲಿಷ್ನಲ್ಲೇ ಮಾತನಾಡಿ..ನಮ್ಮಲ್ಲಿ ಅದೆಷ್ಟೋ ಸಹೋದ್ಯೋಗಿಗಳಿಗೆ, ರೋಗಿಗಳಿಗೆ ಮಲಯಾಳಂ ಅರ್ಥ ಆಗೋದಿಲ್ಲ..ಮಾತನಾಡಲೂ ಬರುವುದಿಲ್ಲ ಎಂದು ದೆಹಲಿ ಸರ್ಕಾರಿ ಆಸ್ಪತ್ರೆಯೊಂದು ನರ್ಸಿಂಗ್ ಸಿಬ್ಬಂದಿಗೆ ಸುತ್ತೋಲೆ ಹೊರಡಿಸಿದೆ. ನೀವು ಮಲಯಾಳಂನಲ್ಲಿ ವ್ಯವಹರಿಸುವುದರಿಂದ ಹಲವು ತರಹದ ಅನನುಕೂಲಗಳು ಆಗುತ್ತಿವೆ. ಇನ್ನು ಮುಂದೆ ಆ ಭಾಷೆಯಲ್ಲಿ ಮಾತನಾಡಿದ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದೂ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ದೆಹಲಿಯ ಪ್ರಮುಖ ಆಸ್ಪತ್ರೆಗಳಲ್ಲಿ ಒಂದಾದ ಗೋವಿಂದ್ ಬಲ್ಲಬ್ ಪಂತ್ ಇನ್ಸ್ಟಿಟ್ಯೂಟ್ ಆಫ್ ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಆಸ್ಪತ್ರೆ(GIPMER)ಯಲ್ಲಿ ಹೀಗೆ ನರ್ಸ್ಗಳಿಗೆ ಸುತ್ತೋಲೆ ಹೊರಡಿಸಿ, ಮಲಯಾಳಂ ಮಾತನಾಡದಂತೆ ಸೂಚಿಸಿದೆ. ವೈದ್ಯಕೀಯ ಸಿಬ್ಬಂದಿ ಅಥವಾ ರೋಗಿಗಳೊಟ್ಟಿಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲೇ ಮಾತನಾಡಬೇಕು. ಅದಾಗದಿದ್ದರೆ ಕಠಿಣ ಕ್ರಮ ಎದುರಿಸಲು ಸಿದ್ಧರಿರಬೇಕು ಎಂದು ಹೇಳಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಜಿ.ಬಿ.ಪಂತ್ ನರ್ಸ್ ಸಂಘಟನೆಯ ಅಧ್ಯಕ್ಷ ಲೀಲಾಧರ್ ರಾಮಚಂದಾನಿ, ಆಸ್ಪತ್ರೆಗೆ ದಾಖಲಾಗಿದ್ದ ರೋಗಿಯೊಬ್ಬರು ಹಿರಿಯ ಆರೋಗ್ಯ ಅಧಿಕಾರಿಯೊಬ್ಬರಿಗೆ ನೀಡಿದ ದೂರಿನ ಅನ್ವಯ ಪ್ರಸ್ತುತ ಸೂಚನೆ ಹೊರಡಿಸಲಾಗಿದೆ. ಆದರೆ ಸುತ್ತೋಲೆಯಲ್ಲಿ ಬಳಸಿದ ಪದಗಳ ಬಗ್ಗೆ ನಮ್ಮ ಒಕ್ಕೂಟದ ವಿರೋಧವಿದೆ ಎಂದೂ ಹೇಳಿದ್ದಾರೆ. ದೆಹಲಿ ನರ್ಸಸ್ ಫೆಡರೇಶನ್ ಪ್ರಧಾನ ಕಾರ್ಯದರ್ಶಿಯೂ ಆಗಿರುವ ರಾಮ್ಚಂದಾನಿ, ಈ ಸುತ್ತೋಲೆಯಲ್ಲಿ ಮಲಯಾಳಂ ಹೆಸರನ್ನು ಸೇರಿಸಲಾಗಿದೆ. ಅನೇಕರು ಇದನ್ನು ಅಪರಾಧವೆಂಬಂತೆ ಭಾವಿಸುತ್ತಾರೆ. ಒಬ್ಬ ರೋಗಿಯ ದೂರಿನಿಂದ ಹೀಗಾಗಿದೆ. ಅದನ್ನು ಹೊರತುಪಡಿಸಿದರೆ ನರ್ಸ್ಗಳು ಮತ್ತು ಆಡಳಿತದ ಮಧ್ಯೆ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಈ ಆಸ್ಪತ್ರೆಯಲ್ಲಿ ಅನೇಕರು ಕೇರಳದ ನರ್ಸ್ಗಳೇ ಇದ್ದು, ಅವರ ಭಾಷೆ ಮಲಯಾಳಂ ಆಗಿದೆ. ಹೀಗಾಗಿ ಅವರು ಅದೇ ಭಾಷೆಯಲ್ಲಿ ಮಾತನಾಡುತ್ತಾರೆ ಎಂದೂ ತಿಳಿಸಿದ್ದಾರೆ.
ಇದನ್ನೂ ಓದಿ: ವರ್ಕ್ ಫ್ರಂ ಹೋಮ್ ನಡುವೆ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳುವ ಕೆಲವು ಸಲಹೆಗಳು