ಬಿಜೆಪಿ ನಾಯಕ ಸುವೇಂದು ಅಧಿಕಾರಿ ಮತ್ತವರ ಸೋದರನ ವಿರುದ್ಧ ಕಳ್ಳತನದ ಆರೋಪ; ಠಾಣೆಯಲ್ಲಿ ದೂರು ದಾಖಲು
ವಂಚನೆ ಪ್ರಕರಣದಡಿ ಸುವೇಂದು ಅಧಿಕಾರಿ ಆಪ್ತಸಹಾಯಕನೊಬ್ಬನನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದರು. ಅದೇ ದಿನ ಸುವೇಂದು ಮತ್ತು ಸೌಮೇಂದು ವಿರುದ್ಧ ಕೂಡ ದೂರು ದಾಖಲಾಗಿದೆ.
ಕೋಲ್ಕತ್ತ: ಬಿಜೆಪಿ ಮುಖಂಡ (ಟಿಎಂಸಿ ಮಾಜಿ ನಾಯಕ) ಸುವೇಂದು ಅಧಿಕಾರಿ ಮತ್ತು ಅವರ ಸೋದರನ ವಿರುದ್ಧ ಕಳ್ಳತನದ ಆರೋಪ ದಾಖಲಾಗಿದೆ. ಇವರಿಬ್ಬರೂ ಪಶ್ಚಿಮಬಂಗಾಳದ ಕಾಂತಿ ಪುರಸಭಾ ಕಚೇರಿಯಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಪರಿಹಾರ ಸಾಮಗ್ರಿಗಳನ್ನು ಕದ್ದಿದ್ದಾರೆ ಎಂಬ ಆರೋಪದಡಿ ಪೊಲೀಸ್ ಕೇಸ್ ದಾಖಲಾಗಿದೆ. ಕೋಲ್ಕತ್ತದಿಂದ 150 ಕಿಮೀ ದೂರದಲ್ಲಿರುವ ಕಾಂತಿ ಪುರಸಭೆ ಆಡಳಿತ ಮಂಡಳಿ ಸದಸ್ಯ ರತ್ನದೀಪ್ ಮನ್ನಾ ನೀಡಿದ ದೂರಿನ ಅನ್ವಯ ಕಾಂರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುವೇಂದು ಅಧಿಕಾರಿಯವರ ಸೋದರ ಸೌಮೇಂದು ಅಧಿಕಾರಿ ಈ ಪುರಸಭೆಯ ಮಾಜಿ ಮುಖ್ಯಸ್ಥರಾಗಿದ್ದರು. ಇವರಿಬ್ಬರೂ ಸೇರಿ ಮೇ 29ರಂದು ಮಧ್ಯಾಹ್ನ 12.30ರ ಹೊತ್ತಿಗೆ ಪುರಸಭೆಯ ಗೋಡೌನ್ನ್ನು ಅಕ್ರಮವಾಗಿ ತೆರೆದು, ಅಲ್ಲಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಟ್ರೈಪಲ್ಗಳನ್ನು ಕದ್ದಿದ್ದಾರೆ. ಗೋದಾಮಿನ ಬಾಗಿಲನ್ನು ಬಲವಂತವಾಗಿ, ಕಾನೂನು ಬಾಹಿರವಾಗಿ ತೆರೆಯಲಾಯಿತು ಎಂದೂ ರತ್ನದೀಪ್ ಮನ್ನಾ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇನ್ನು ಈ ಕಳ್ಳತನ ಮಾಡುವಾಗ ಬಿಜೆಪಿ ನಾಯಕರು ಕೇಂದ್ರ ಸಶಸ್ತ್ರಪಡೆಗಳ ಬಳಕೆ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಜೂ.1ರಂದು ಈ ದೂರು ನೀಡಲ್ಪಟ್ಟಿದೆ.
ವಂಚನೆ ಪ್ರಕರಣದಡಿ ಸುವೇಂದು ಅಧಿಕಾರಿ ಆಪ್ತಸಹಾಯಕನೊಬ್ಬನನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದರು. ಅದೇ ದಿನ ಸುವೇಂದು ಮತ್ತು ಸೌಮೇಂದು ವಿರುದ್ಧ ಕೂಡ ದೂರು ದಾಖಲಾಗಿದೆ. ರಾಖಲ್ ಭೇರಾ ಬಂಧಿತನಾಗಿದ್ದು, ಈತ 2019ರಲ್ಲಿ ವ್ಯಕ್ತಿಯೋರ್ವನಿಗೆ, ನೀರಾವರಿ ಮತ್ತು ಜಲಸಂಪನ್ಮೂಲ ಸಚಿವಾಲಯದಲ್ಲಿ ಕೆಲಸ ಕೊಡಿಸುತ್ತೇನೆ ಎಂದು ಸುಮಾರು 2 ಲಕ್ಷ ರೂ. ಪಡೆದಿದ್ದರು. ಆದರೆ ನಂತರ ಅವರು ಕೆಲಸ ಕೊಡಿಸಿರಲಿಲ್ಲ ಎಂಬ ಆರೋಪದಡಿ ಈತನ ವಿರುದ್ಧ ದೂರು ದಾಖಲಾಗಿತ್ತು.
ಸುವೇಂದು ಅಧಿಕಾರಿ ನವೆಂಬರ್ವರೆಗೆ ಮಮತಾ ಬ್ಯಾನರ್ಜಿಯವರ ಕ್ಯಾಬಿನೆಟ್ನಲ್ಲಿ ಸಚಿವರಾಗಿದ್ದರು. ಆದರೆ 2020ರ ಡಿಸೆಂಬರ್ನಲ್ಲಿ ಬಿಜೆಪಿ ಸೇರ್ಪಡೆಯಾಗಿ, ನಂದಿಗ್ರಾಮದಲ್ಲಿ ಗೆದ್ದು, ಇದೀಗ ಪಶ್ಚಿಮ ಬಂಗಾಳ ಪ್ರತಿಪಕ್ಷ ನಾಯಕರಾಗಿದ್ದಾರೆ.