
ಕೊಚ್ಚಿ ಮೇ 24: ಹೈದರಾಬಾದ್ ಮತ್ತು ಬೆಂಗಳೂರಿನಿಂದ ಹಲವಾರು ಯುವಕರನ್ನು ಕಿಡ್ನಿ ಕಸಿ (kidney transplantation) ಮಾಡಲು ಇರಾನ್‌ಗೆ ಕಳ್ಳಸಾಗಣೆ ಮಾಡಲಾಗಿದ್ದು, ಕೇರಳದ (Kerala) ಸಂಪರ್ಕ ಹೊಂದಿರುವ ಅಂತರಾಷ್ಟ್ರೀಯ ಮಟ್ಟದಲ್ಲಿ ಅಂಗಾಂಗಗಳ ಕಳ್ಳಸಾಗಣೆ ದಂಧೆಯನ್ನು(organ trafficking racket) ಪೊಲೀಸರು ಭೇದಿಸಿದ್ದಾರೆ. ಕಳೆದೆರಡು ದಿನಗಳಿಂದ ತ್ರಿಶ್ಶೂರ್ ಮೂಲದ ವ್ಯಕ್ತಿಯ ಬಂಧನ ಮತ್ತು ಮತ್ತೊಬ್ಬನನ್ನು ಕೊಚ್ಚಿಯಲ್ಲಿ ಬಂಧಿಸಿದ ನಂತರ ಆಘಾತಕಾರಿ ಸಂಗತಿಗಳು ಬಹಿರಂಗಗೊಂಡಿವೆ. ಈ ದಂಧೆಯು ಆರ್ಥಿಕವಾಗಿ ದುರ್ಬಲ ವರ್ಗದ ಜನರಲ್ಲಿ ವಿದೇಶದಲ್ಲಿ ಅಂಗಾಂಗಗಳನ್ನು ದಾನ ಮಾಡಲು ಆಮಿಷವೊಡ್ಡಿ ಬಲೆಗೆ ಬೀಳಿಸಲಾಗಿದೆ ಎಂದು ನಂಬಲಾಗಿದೆ. ಬಂಧಿತ ವ್ಯಕ್ತಿಯ ಹೇಳಿಕೆಗಳ ಪ್ರಕಾರ, ಅಂಗಾಂಗ ದಾನಕ್ಕಾಗಿ ಇರಾನ್‌ಗೆ ಕರೆದೊಯ್ದ ಕೆಲವು ಜನರು ಅಲ್ಲಿ ಸಾವಿಗೀಡಾಗಿದ್ದಾರೆ. ಎನ್‌ಐಎ ಸೇರಿದಂತೆ ಕೇಂದ್ರೀಯ ಏಜೆನ್ಸಿಗಳು ಕೂಡ ಪ್ರಕರಣದ ತನಿಖೆ ನಡೆಸುತ್ತಿದ್ದು, ಅವರು ಪ್ರಾಥಮಿಕ ತನಿಖೆಯನ್ನು ಪೂರ್ಣಗೊಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಂಗಾಂಗ ಕಳ್ಳಸಾಗಣೆ ದಂಧೆಯ ಶಂಕಿತ ಸದಸ್ಯ ತ್ರಿಶ್ಶೂರ್ ವಲಪ್ಪಾಜಡ್ ನ ಸಬಿತ್ ನಾಸರ್ (30) ನ್ನು ಭಾನುವಾರ ಕೊಚ್ಚಿ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದ್ದು, ಸಬಿತ್‌ಗೆ ಸಹಾಯ ಮಾಡಿದ ಕೊಚ್ಚಿ ಮೂಲದ ಮತ್ತೊಬ್ಬ ಯುವಕನನ್ನು ಸೋಮವಾರದಂದ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.
ನ್ಯಾಯಾಂಗ ಬಂಧನಕ್ಕೆ ಒಳಗಾಗಿರುವ ಸಬಿತ್, ಅಂಗಾಂಗ ದಂಧೆಗಾಗಿ ಭಾರತದಿಂದ 20 ಜನರನ್ನು ಇರಾನ್‌ಗೆ ಕರೆದೊಯ್ದಿದ್ದಾಗಿ ಪೊಲೀಸರ ಬಳಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ.
ರಿಮಾಂಡ್ ವರದಿಯ ಪ್ರಕಾರ, ಸಬಿತ್ ಅಕ್ರಮವಾಗಿ ಮೂತ್ರಪಿಂಡ ಕಸಿ ಮಾಡಲು ಭಾರತದಿಂದ ಜನರನ್ನು ನೇಮಿಸಿಕೊಳ್ಳುವ ದಂಧೆಯ ಭಾಗವಾಗಿದ್ದ ಎಂದು ಪೊಲೀಸರಿಗೆ ತಿಳಿಸಿದ್ದಾರೆ. “ಹೈದರಾಬಾದ್ ಮತ್ತು ಬೆಂಗಳೂರಿನ ಯುವಕರನ್ನು ಮೂತ್ರಪಿಂಡ ದಾನಿಗಳಾಗಿ ಇರಾನ್‌ಗೆ ನೇಮಿಸಿಕೊಳ್ಳಲಾಗಿದೆ” ಎಂದು ಪೊಲೀಸರು ಸೋಮವಾರ ಅಂಗಮಾಲಿ ಜುಡಿಷಿಯಲ್ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ಸಲ್ಲಿಸಿದ ವರದಿಯಲ್ಲಿ ತಿಳಿಸಿದ್ದಾರೆ.
ಯುವಕರನ್ನು ಇರಾನ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು, ಅಲ್ಲಿ ಅವರು ಸೂಕ್ತ ಸ್ವೀಕರಿಸುವವರಿಗೆ ಮೂತ್ರಪಿಂಡಗಳನ್ನು ದಾನ ಮಾಡಿದರು. ನಂತರ ಆಸ್ಪತ್ರೆಯಲ್ಲಿ ಮೂರು ದಿನಗಳ ಕಾಲ ಚಿಕಿತ್ಸೆ ನೀಡಲಾಯಿತು. ತರುವಾಯ, ದಾನಿಗಳಿಗೆ ಫ್ಲಾಟ್‌ನಲ್ಲಿ 20 ದಿನಗಳ ವಾಸ್ತವ್ಯವನ್ನು ಒದಗಿಸಲಾಯಿತು. ನಂತರ ಅವರನ್ನು ಭಾರತಕ್ಕೆ ಕಳಿಸಲಾಯಿತು ಎಂದು ವರದಿ ತಿಳಿಸಿದೆ.
”ಕಿಡ್ನಿ ನೀಡುವವರಿಗೆ 6 ಲಕ್ಷ ರೂ.ವರೆಗೆ ಸಂಭಾವನೆ ನೀಡಲಾಗುತ್ತದೆ. ಪಾಲಕ್ಕಾಡ್‌ನ ತಿರುನೆಲ್ಲಾಯಿಯ ಯುವಕ ಶಮೀರ್ ಆರು ತಿಂಗಳ ಹಿಂದೆ ಈ ರೀತಿ ಕಿಡ್ನಿ ದಾನ ಮಾಡಿದ್ದಾಗಿ ಆತ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿ ತಿಳಿಸಿದೆ. ಶಮೀರ್ ತೀವ್ರ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದ್ದು, ಸಾಲ ತೀರಿಸಲು ಕಿಡ್ನಿ ದಾನ ಮಾಡಿರಬಹುದು ಎಂದು ಹೇಳಲಾಗಿದೆ.
ಏತನ್ಮಧ್ಯೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನವರನ್ನು ಬಂಧಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬಂಧನಕ್ಕೊಳಗಾದ ಯುವಕನನ್ನು ವಿಚಾರಣೆ ನಡೆಸಿದ ನೆಡುಂಬಶ್ಶೇರಿ ಪೊಲೀಸರು ಇನ್ನೂ ಆತನ ಬಂಧನವನ್ನು ದಾಖಲಿಸಿಲ್ಲ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮೂಲಗಳ ಪ್ರಕಾರ, ಕೊಚ್ಚಿಯಲ್ಲಿ ಸಬಿತ್‌ನ ರೂಮ್‌ಮೇಟ್ ಆಗಿದ್ದ ವಲಪ್ಪಾಡ್ ಮೂಲದವನನ್ನು ಕೂಡ ಪೊಲೀಸರು ವಿಚಾರಣೆ ನಡೆಸಲಿದ್ದಾರೆ. ಪ್ರಕರಣದ ಅಂತರರಾಷ್ಟ್ರೀಯ ಪರಿಣಾಮಗಳನ್ನು ಪರಿಗಣಿಸಿ ಕೇರಳದಲ್ಲಿ ಸಬಿತ್‌ನ ಹಣಕಾಸು ವ್ಯವಹಾರಗಳು ಮತ್ತು ಲಿಂಕ್‌ಗಳ ಬಗ್ಗೆ ವಿವರವಾಗಿ ತನಿಖೆ ನಡೆಸಲಾಗುವುದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಅಂಗಾಂಗ ದಾನಕ್ಕಾಗಿ ದೇಶದಿಂದ 20 ಜನರನ್ನು ಇರಾನ್‌ಗೆ ನೇಮಿಸಿಕೊಂಡಿದ್ದಾಗಿ ಸಬಿತ್ ತಪ್ಪೊಪ್ಪಿಕೊಂಡಿದ್ದರೂ, ಆರೋಪಿಗಳಿಂದ ಇನ್ನಷ್ಟು ಜನರನ್ನು ಆಮಿಷವೊಡ್ಡಲಾಗಿದೆಯೇ ಎಂದು ಪೊಲೀಸರು ಪರಿಶೀಲಿಸುತ್ತಿದ್ದಾರೆ.
ಈ ದಂಧೆಯಲ್ಲಿ ಹೈದರಾಬಾದ್‌ನ ಕೆಲವರೂ ಸೇರಿದ್ದಾರೆ ಎಂದು ಮೂಲಗಳು ತಿಳಿಸಿವೆ. ದೆಹಲಿ ಮೂಲದವರಿಗೆ ಕಿಡ್ನಿ ದಾನಕ್ಕೆ ಸಂಬಂಧಿಸಿದಂತೆ ಹೈದರಾಬಾದ್ ಮೂಲದ ವ್ಯಕ್ತಿಯೊಂದಿಗೆ ಮೊದಲು ಪರಿಚಯವಾಯಿತು. ನಂತರ ಇತರರನ್ನು ಭೇಟಿ ಮಾಡಿ ಅಂಗಾಂಗ ವ್ಯಾಪಾರಕ್ಕೆ ಕರೆದೊಯ್ದರು ಎಂದು ಸಬಿತ್ ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ: ವಿಕಸಿತ ಭಾರತದ ಗುರಿಗೆ ದೈವ ಪ್ರೇರಣೆ; ಆ ದೈವವೇ ನನಗೆ ಶಕ್ತಿ ತುಂಬುತ್ತಿದೆ: ಪ್ರಧಾನಿ ಮೋದಿ
ಈ ಶಂಕಿತ ವ್ಯಕ್ತಿಗಳ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ. ನಕಲಿ ಆಧಾರ್ ಮತ್ತು ಇತರ ಗುರುತಿನ ಚೀಟಿಗಳೊಂದಿಗೆ ಕೇರಳಕ್ಕೆ ಆಗಮಿಸುವ ಕೆಲವು ವಲಸೆ ಕಾರ್ಮಿಕರನ್ನು ಅಂಗಾಂಗ ವ್ಯವಹಾರಕ್ಕಾಗಿ ಇರಾನ್‌ಗೆ ಸಬಿತ್ ನೇಮಕ ಮಾಡಿಕೊಂಡಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ. ಸಬಿತ್ ವಿರುದ್ಧ ಐಪಿಸಿಯ ಸೆಕ್ಷನ್ 370 (ಮಾನವ ಕಳ್ಳಸಾಗಣೆ) ಮತ್ತು ಮಾನವ ಅಂಗಗಳ ಕಸಿ ಕಾಯಿದೆಯ ಸೆಕ್ಷನ್ 19 (ಮಾನವ ಅಂಗಗಳ ವ್ಯಾಪಾರ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಭಾನುವಾರ ಇರಾನ್‌ನಿಂದ ಕುವೈತ್ ಮೂಲಕ ಆಗಮಿಸಿದ ಅವರನ್ನು ಬಂಧಿಸಲಾಯಿತು.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ