AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಂಡಿನ ದಾಳಿಗೆ ಸೋಶಿಯಲ್​​ ಮೀಡಿಯಾ ಇನ್‌ಫ್ಲುಯೆನ್ಸರ್ ಮ್ಯಾಡ್ ಸಂಧು ಬಲಿ: ದಾಳಿ ನಡೆಸಿ ಆರೋಪಿಗಳು ಎಸ್ಕೇಪ್​​

ಪಂಜಾಬ್‌ನ ಜನಪ್ರಿಯ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಮತ್ತು ಮೇಕಪ್ ಆರ್ಟಿಸ್ಟ್ ಮ್ಯಾಡ್ ಸಂಧು (ಮಧುಸೂದನ್) ಅವರನ್ನು ಅಮೃತಸರದಲ್ಲಿ ದುಷ್ಕರ್ಮಿಗಳು ಗುಂಡಿಕ್ಕಿ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದು ಹರಿದಾಡುತ್ತಿದ್ದು, ಸಂಧು ಹತ್ಯೆಯ ಹೊಣೆ ಹೊತ್ತಿರುವುದಾಗಿ ಅದರಲ್ಲಿ ಹೇಳಲಾಗಿದೆ. ಆದರೆ ಹತ್ಯೆಯ ಹಿಂದಿನ ಕಾರಣಗಳು ಮತ್ತು ಘಟನೆಗೆ ಸಂಬಂಧಿಸಿದ ಪರಿಸ್ಥಿತಿಗಳ ಕುರಿತು ತನಿಖೆ ನಡೆಸಲು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುಂಡಿನ ದಾಳಿಗೆ ಸೋಶಿಯಲ್​​ ಮೀಡಿಯಾ ಇನ್‌ಫ್ಲುಯೆನ್ಸರ್ ಮ್ಯಾಡ್ ಸಂಧು ಬಲಿ: ದಾಳಿ ನಡೆಸಿ ಆರೋಪಿಗಳು ಎಸ್ಕೇಪ್​​
ಮ್ಯಾಡ್ ಸಂಧುImage Credit source: Mad Sandhu Instagram Page
ಪ್ರಸನ್ನ ಹೆಗಡೆ
|

Updated on: Oct 04, 2026 | 10:03 AM

Share

ಅಮೃತಸರ, ಅಕ್ಟೋಬರ್​​ 04: ಜನಪ್ರಿಯ ಪಂಜಾಬಿ ಸಾಮಾಜಿಕ ಮಾಧ್ಯಮ ಇನ್‌ಫ್ಲುಯೆನ್ಸರ್ ಹಾಗೂ ಮೇಕಪ್ ಕಲಾವಿದ ಮ್ಯಾಡ್ ಸಂಧು ಅವರನ್ನು ಅಮೃತಸರದಲ್ಲಿ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕ್‌ನಲ್ಲಿ ಬಂದು ಅವರ ಮೇಲೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ನಗರದ ಲೋಹಾರ್ಕಾ ರಸ್ತೆ ಪ್ರದೇಶದಲ್ಲಿ ಘಟನೆ ನಡೆದಿದ್ದು, ದಾಳಿಕೋರರು ಸಂಧು ಅವರ ಮೇಲೆ ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಮಾರ್ಗಮಧ್ಯೆಯೇ ಸಂಧು ಮೃತಪಟ್ಟಿದ್ದಾರೆ ಎನ್ನಲಾಗಿದೆ.

FIR ದಾಖಲು, ಆರೋಪಿಗಳ ಪತ್ತೆಗೆ ತನಿಖೆ

ಇನ್ನು ಘಟನೆ ಸಂಬಂಧ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದು, ಕೆಲವು ಪ್ರಮುಖ ಸುಳಿವುಗಳು ನಮಗೆ ದೊರೆತಿವೆ. ಹತ್ಯೆಯ ಹಿಂದಿನ ಕಾರಣಗಳು ಮತ್ತು ಘಟನೆಗೆ ಸಂಬಂಧಿಸಿದ ಪರಿಸ್ಥಿತಿಗಳ ಕುರಿತು ತನಿಖೆ ನಡೆಸಲು ತಂಡಗಳನ್ನು ರಚಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಭ್‌ಜೋತ್ ಸಿಂಗ್ ವಿರ್ಕ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಫರೀದಾಬಾದ್‌ನ ಪಾಳುಬಿದ್ದ ಕಟ್ಟಡದಲ್ಲಿ 13 ವರ್ಷದ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ

ಹತ್ಯೆಯ ಹಿಂದೆ ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್?

ಗ್ಯಾಂಗ್‌ಸ್ಟರ್ ಗೋಲ್ಡಿ ಧಿಲ್ಲೋನ್ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್‌ವೊಂದು ಹರಿದಾಡುತ್ತಿದ್ದು, ಸಂಧು ಹತ್ಯೆಯ ಹೊಣೆ ಹೊತ್ತಿರುವುದಾಗಿ ಅದರಲ್ಲಿ ಹೇಳಲಾಗಿದೆ. ಆದರೆ ಈ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಸ್ವತಂತ್ರವಾಗಿ ದೃಢಪಡಿಸಲಾಗಿಲ್ಲ. ಸಂಧು ಮೇಲಿನ ದಾಳಿಯಲ್ಲಿ ಧಿಲ್ಲೋನ್ ಭಾಗಿಯಾಗಿರುವುದನ್ನೂ ಪೊಲೀಸರು ಈವರೆಗೆ ಅಧಿಕೃತವಾಗಿ ಖಚಿತಪಡಿಸಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಆ ಪೋಸ್ಟ್‌ನಲ್ಲಿ, ಸಂಧು “ಹೊಸ ಪೀಳಿಗೆಯನ್ನು ದಾರಿ ತಪ್ಪಿಸುತ್ತಿದ್ದರು” ಎಂದು ಆರೋಪಿಸಿರುವುದು ಕಂಡುಬಂದಿದೆ. ಇನ್‌ಫ್ಲುಯೆನ್ಸರ್‌ ಅವರ ಸಾಮಾಜಿಕ ಮಾಧ್ಯಮದ ವಿಷಯಗಳನ್ನೂ ಪೋಸ್ಟ್‌ನಲ್ಲಿ ಟೀಕಿಸಲಾಗಿದೆ. ಜೊತೆಗೆ ಇಂತಹ ವಿಷಯಗಳನ್ನು ಪ್ರಚಾರ ಮಾಡುತ್ತಿರುವ ಇತರರೂ ಇದೇ ಪರಿಸ್ಥಿತಿ ಎದುರಿಸಬೇಕಾಗಬಹುದು ಎಂದು ಪೋಸ್ಟ್‌ನಲ್ಲಿ ಬೆದರಿಕೆ ಹಾಕಲಾಗಿದೆ.

ಮ್ಯಾಡ್ ಸಂಧು ಯಾರು?

ಮ್ಯಾಡ್ ಸಂಧು ಅವರ ನಿಜವಾದ ಹೆಸರು ಮಧುಸೂದನ್. ಅವರು ಮೇಕಪ್ ಕಲಾವಿದ, ಸ್ಟೈಲಿಸ್ಟ್ ಹಾಗೂ ಸಾಮಾಜಿಕ ಮಾಧ್ಯಮ ಇನ್‌ಫ್ಲುಯೆನ್ಸರ್ ಆಗಿ ಗುರುತಿಸಿಕೊಂಡಿದ್ದರು. ಆನ್‌ಲೈನ್‌ನಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿದ್ದ ಅವರು, ಮೇಕಪ್, ಪಂಜಾಬಿ ಮನರಂಜನಾ ಉದ್ಯಮ ಹಾಗೂ ಲಿಂಗ ಸಂಬಂಧಿತ ವಿಚಾರಗಳ ಕುರಿತು ಚರ್ಚಿಸುವ ಪಾಡ್‌ಕಾಸ್ಟ್‌ಗಳು ಮತ್ತು ಇತರ ಡಿಜಿಟಲ್ ಕಾರ್ಯಕ್ರಮಗಳಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುತ್ತಿದ್ದರು. ಸಾಮಾಜಿಕ ಮಾಧ್ಯಮದಲ್ಲಿ ಹೋಮೋಫೋಬಿಕ್ ಟ್ರೋಲಿಂಗ್‌ಗೂ ಅವರು ಗುರಿಯಾಗಿದ್ದರು. ಫ್ಯಾಷನ್ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಿದ್ದ ಸಂಧು, ಮೇಕಪ್ ಕಲಾವಿದ ಹಾಗೂ ಡಿಜಿಟಲ್ ಕಂಟೆಂಟ್ ಕ್ರಿಯೇಟರ್ ಆಗಿ ಗುರುತಿಸಿಕೊಳ್ಳುವ ಮೊದಲು ಪಂಜಾಬ್ ಮತ್ತು ಮುಂಬೈನಲ್ಲಿ ಹಲವು ಸಿನಿಮಾಗಳಲ್ಲಿ ಸ್ಟೈಲಿಸ್ಟ್ ಹಾಗೂ ಸಹಾಯಕ ವಸ್ತ್ರ ವಿನ್ಯಾಸಕರಾಗಿ ಕೆಲಸ ಮಾಡಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Follow Us
ಪ್ರಸನ್ನ ಹೆಗಡೆ
ಪ್ರಸನ್ನ ಹೆಗಡೆ

ಪ್ರಸನ್ನ ಹೆಗಡೆ ಹುಟ್ಟಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕು. 9 ವರ್ಷಗಳಿಂದ ಪತ್ರಕರ್ತನಾಗಿ ಕೆಲಸ ಮಾಡಿರುವ ಅನುಭವವಿದೆ. ಮುದ್ರಣ, ಟಿವಿ ಮತ್ತು ಡಿಜಿಟಲ್​ ಮಾಧ್ಯಮಗಳಲ್ಲಿ ವಿವಿಧ ಜವಾಬ್ದಾರಿ ನಿಭಾಯಿಸಿದ್ದೇನೆ. ರಾಜಕೀಯ, ಸಿನಿಮಾ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿ ಇದೆ. ಕವನಗಳ ರಚನೆ, ಪುಸ್ತಕಗಳನ್ನ ಓದುವುದು ನೆಚ್ಚಿನ ಹವ್ಯಾಸಗಳು.

Read More