ನವದೆಹಲಿ: ರಾಷ್ಟ್ರಪತಿ ಭವನದಲ್ಲಿ ಇತ್ತೀಚೆಗೆ ಅನಾವರಣಗೊಂಡಿದ್ದ ಸುಭಾಷ್ ಚಂದ್ರ ಬೋಸ್ ಅವರ ಭಾವಚಿತ್ರ ವಿವಾದಕ್ಕೆ ಸಂಬಂಧಿಸಿ ಮತ್ತೊಂದು ಬೆಳವಣಿಗೆ ನಡೆದಿದೆ. ರಾಷ್ಟ್ರಪತಿ ಪತ್ರಿಕಾ ಕಾರ್ಯದರ್ಶಿ ಅಜಯ್ ಕುಮಾರ್ ಸಿಂಗ್ ಈ ಸಂಬಂಧ ಇಂಡಿಯಾ ಟುಡೆ ಸಮೂಹದ ಪ್ರಧಾನ ಸಂಪಾದಕ ಅರುಣ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.
ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಜನವರಿ 25 ರಂದು ನೇತಾಜಿ ಸುಭಾಸ್ ಚಂದ್ರ ಬೋಸ್ ಬದಲಿಗೆ ಬಂಗಾಳಿ ನಟ ಪ್ರೊಸೆನ್ಜಿತ್ ಚಟರ್ಜಿ ಅವರ ಭಾವಚಿತ್ರವನ್ನು ಅನಾವರಣಗೊಳಿಸಿದ್ದಾರೆ ಎಂದು ಕೆಲವರು ಸಾಮಾಜಿಕ ಮಾಧ್ಯಮಗಳು ಆಕ್ಷೇಪಿಸಿದ್ದರು. ತೃಣಮೂಲ ಕಾಂಗ್ರೆಸ್ ನಾಯಕರು, ಪ್ರಮುಖ ಪತ್ರಕರ್ತರಾದ ರಾಜ್ದೀಪ್ ಸರ್ದೇಸಾಯಿ ಅವರ ಹೆಸರು ಈ ವಿಚಾರದಲ್ಲಿ ಕೇಳಿ ಬಂದಿತ್ತು.
ಆದರೆ, ಪತ್ರಕರ್ತೆ ನಿಸ್ತುಲಾ ಹೆಬ್ಬಾರ್, ಇದು ಮೂಲ ಫೋಟೋವನ್ನೇ ಬಳಕೆ ಮಾಡಿಕೊಂಡು ಚಿತ್ರಿಸಿದ ಕಲಾಕೃತಿ ಎನ್ನುವುದನ್ನು ನಿರೂಪಿಸಿದ್ದರು.
ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸುಭಾಷ್ ಚಂದ್ರ ಬೋಸ್ ಭಾವಚಿತ್ರದ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಪತ್ರಕರ್ತರ ನಡೆಯನ್ನು ಪ್ರಶ್ನಿಸಿ ರಾಷ್ಟ್ರಪತಿ ಭವನದ ಪತ್ರಿಕಾ ಕಾರ್ಯದರ್ಶಿ ಅಜಯ್ ಕುಮಾರ್, ಇಂಡಿಯಾ ಟುಡೆ ಸಮೂಹದ ಪ್ರಧಾನ ಸಂಪಾದಕ ಅರುಣ್ ಪುರಿ ಅವರಿಗೆ ಪತ್ರ ಬರೆದಿದ್ದಾರೆ.
ಇಂಡಿಯಾ ಟುಡೆ ಪತ್ರಕರ್ತರು ಸತ್ಯ-ಪರಿಶೀಲನೆ ನಡೆಸಲು ಮುಂದಾಗಿಲ್ಲ ಮತ್ತು ರಾಜಕೀಯ ಲಾಭಕ್ಕಾಗಿ ಸುಳ್ಳು ಆರೋಪಗಳನ್ನು ಎಸೆಯುವವರ ಜತೆ ಸೇರಿಕೊಂಡರು.ಇಂತಹ ಬೇಜವಾಬ್ದಾರಿಯುತ ವರ್ತನೆಯು ರಾಷ್ಟ್ರಪತಿ ಭವನದ ಘನತೆಗೆ ಧಕ್ಕೆಯುಂಟು ಮಾಡಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಮೇಲೆ ತಿಳಿಸಿದ ಪತ್ರಕರ್ತರು ತಮ್ಮ ಟ್ವೀಟ್ ಮಾಡಿ ನಂತರ ಅದನ್ನು ಡಿಲೀಟ್ ಮಾಡಿದ್ದಾರೆ. ತಾವು ಮಾಡಿದ ಬ್ಲಂಡರ್ಗೆ ಒಂದೇ ಒಂದು ಕ್ಷಮೆ ಕೂಡ ಯಾಚಿಸಿಲ್ಲ. ಈ ಘಟನೆಯಿಂದ ರಾಷ್ಟ್ರಪತಿ ಭವನಕ್ಕೆ ತೀವ್ರ ತೊಂದರೆ ಉಂಟಾಗಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.
Published On - 10:05 pm, Sat, 30 January 21