Ram Temple Construction Fund ಮಂದಿರ ನಿರ್ಮಾಣಕ್ಕೆ 500100 ರೂ. ದೇಣಿಗೆ ನೀಡಿದ ರಾಷ್ಟ್ರಪತಿ ರಾಮನಾಥ್ ಕೋವಿಂದ್
ಇಂದಿನಿಂದ ಆರಂಭವಾದ ರಾಮ ಮಂದಿರ ನಿರ್ಮಾಣಕ್ಕೆ ದೇಣಿಗೆ ಅಭಿಯಾನಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್, ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವ್ರಾಜ್ ಸಿಂಗ್ ಚೌವ್ಹಾಣ್ ಸೇರಿ ಹಲವರು ದೇಣಿಗೆ ನೀಡಿದ್ದಾರೆ. ಈ ಅಭಿಯಾನ ಫೆಬ್ರವರಿ 27 ರವರೆಗೆ ನಡೆಯಲಿದೆ.
ದೆಹಲಿ: ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ವೈಯಕ್ತಿಕವಾಗಿ ಐದು ಲಕ್ಷ ನೂರು ರೂಪಾಯಿ ದೇಣಿಗೆ ನೀಡಿದ್ದಾರೆ. ಇಂದಿನಿಂದ ಆರಂಭವಾದ ಅಯೋಧ್ಯೆಯ ರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ಸಂಗ್ರಹಕ್ಕೆ ದೇಶದ 4 ಲಕ್ಷ ಹಳ್ಳಿಗಳಿಂದ ದೇಣಿಗೆ ಸಂಗ್ರಹಿಸಲಾಗುತ್ತಿದ್ದು, ಫೆಬ್ರವರಿ 27 ರವರೆಗೆ ಈ ಅಭಿಯಾನ ಮುಂದುವರೆಯಲಿದೆ.
ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ನ ಸಹ ಅಧ್ಯಕ್ಷ ಗೋವಿಂದ್ ದೇವ್ ಗಿರಿಜಿ ಮಹಾರಾಜ್, ವಿಶ್ವ ಹಿಂದೂ ಪರಿಷತ್ನ ಕಾರ್ಯನಿರತ ಅಧ್ಯಕ್ಷ ಅಲೋಕ್ ಕುಮಾರ್, ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಮತ್ತು ಆರ್ಎಸ್ಎಸ್ ಮುಖ್ಯಸ್ಥ ಕುಲ್ಭೂಷಣ್ ಅಹುಜಾ ಅವರ ನಿಯೋಗ ರಾಷ್ಟ್ರಪತಿ ರಾಮನಾಥ್ ಕೋವಿಂದ್ರನ್ನು ಭೇಟಿಯಾಗಿದ್ದರು.
ರಾಷ್ಟ್ರಪತಿ ದೇಶದ ಮೊದಲ ಪ್ರಜೆಯಾಗಿದ್ದು, ಅವರಿಂದಲೇ ದೇಣಿಗೆ ಸಂಗ್ರಹ ಆರಂಭಿಸಲು ಇಚ್ಛಿಸಿ ಭೇಟಿಯಾದೆವು ಎಂದು ವಿಶ್ವ ಹಿಂದೂ ಪರಿಷತ್ನ ಅಲೋಕ್ ಕುಮಾರ್ ತಿಳಿಸಿದರು.
ರಾಮ ಮಂದಿರವಷ್ಟೇ ಅಲ್ಲ, ರಾಷ್ಟ್ರೀಯ ಮಂದಿರ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವ್ರಾಜ್ ಸಿಂಗ್ ಚೌವ್ಹಾಣ್ ಕೂಡ ರಾಮ ಮಂದಿರ ನಿರ್ಮಾಣಕ್ಕೆ 1 ಲಕ್ಷ ದೇಣಿಗೆ ನೀಡಿದ್ದಾರೆ. ‘ನನ್ನ ಕುಟುಂಬ ಸಹ ರಾಮ ಮಂದಿರ ನಿರ್ಮಾಣದಲ್ಲಿ ಪಾಲ್ಗೊಳ್ಳಲಿದೆ. ಇದು ಕೇವಲ ರಾಮ ಮಂದಿರವಷ್ಟೇ ಅಲ್ಲ, ರಾಷ್ಟ್ರೀಯ ದೇವಾಲಯ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಬಿಹಾರದ ಮಾಜಿ ಉಪ ಮುಖ್ಯಮಂತ್ರಿ, ರಾಜ್ಯಸಭಾ ಸಂಸದ ಸುಶಿಲ್ ಕುಮಾರ್ ಮೋದಿ ರಾಮ ಮಂದಿರ ನಿರ್ಮಾಣ ದೇಣಿಗೆ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ‘ಇತರ ಧರ್ಮೀಯರು ಸಹ ರಾಮ ಮಂದಿರ ನಿರ್ಮಾಣದಲ್ಲಿ ಪಾಲ್ಗೊಳ್ಳಬಹುದು ಎಂದು ಅವರು ತಿಳಿಸಿದ್ದಾರೆ. ಮಸೀದಿ ನಿರ್ಮಾಣದಲ್ಲಿ ಮುಸ್ಲಿಮರು ಹೇಗೆ ಮುನ್ನೆಲೆಯಲ್ಲಿ ಪಾಲ್ಗೊಳ್ಳುವಂತೆಯೇ, ರಾಮ ಮಂದಿರ ನಿರ್ಮಾಣದಲ್ಲಿ ಹಿಂದೂಗಳು ಮುನ್ನೆಲೆಯಲ್ಲಿರುತ್ತಾರೆ ಎಂದು ಅವರು ತಿಳಿಸಿದ್ದಾರೆ.