ಕಳೆದ ವರ್ಷ ಲಾಕ್ಡೌನ್ ಮಾಡಿದಾಗ, ಬಡವರು ಮತ್ತು ದಿನಗೂಲಿ ಕಾರ್ಮಿಕರಿಗೆ ಆದ ಸಂಕಷ್ಟವನ್ನು ಗಮನದಲ್ಲಿಟ್ಟಕೊಂಡು ಕೇಂದ್ರ ಸರಕಾರ ಮತ್ತೆ ಈ ಬಾರಿ ಕೂಡ ಉಚಿತ ಆಹಾರ ಧಾನ್ಯ ನೀಡಲು ನಿರ್ಧರಿಸಿದೆ. ಪ್ರಧಾನಿ ಕಾರ್ಯಲಯ ಈ ಕುರಿತು ಮಾಹಿತಿಯನ್ನು ಹಂಚಿಕೊಂಡಿದೆ. ಕಳೆದ ವರ್ಷ ಒಮ್ಮೆಲೆ ಲಾಕ್ಡೌನ್ ಮಾಡಿದ ಕಾರಣಕ್ಕಾಗಿ ಸಾವಿರಾರು ಜನ ಹಸಿವಿನಿಂದ ನರಳುವಂತಾಯಿತು. ಈ ಬಾರಿ ಕೇಂದ್ರ ಸರಕಾರ ಲಾಕ್ಡೌನ್ ಹಾಕದಿದ್ದರೂ, ಹಲವು ರಾಜ್ಯಗಳು ಕರ್ಫ್ಯೂ ಹೇರಿವೆ. ದೆಹಲಿಲಾಕ್ಡೌನ್ ಹೇರಿದೆ. ಮಹಾರಾಷ್ಟ್ರ ಈ ಕುರಿತು ಚಿಂತನೆ ನಡೆಸಿದೆ. ಈ ಹಿನ್ನೆಲೆಯಲ್ಲಿ ಮತ್ತೆ ಬಡವರು ಮತ್ತು ಕೂಲಿ ಕಾರ್ಮಿಕರಿಗೆ ತೊಂದರೆ ಆಗಬಾರದೆಂದು ಎರಡು ತಿಂಗಳು ಉಚಿತವಾಗಿ ಆಹಾರ ಧಾನ್ಯ ನೀಡಲು ನಿರ್ಧರಿಸಿದೆ.
ಮೇ ಮತ್ತು ಜೂನ್ ಪಿಎಂ ಗರಿಬ್ ಕಲ್ಯಾಣ್ ಆನ್ ಯೋಜನೆ ಅಡಿಯಲ್ಲಿ ಉಚಿತ ಆಹಾರ ಧಾನ್ಯಗಳನ್ನು ನೀಡಲು ಭಾರತ ಸರ್ಕಾರ ನಿರ್ಧರಿಸಿದ್ದು, ಮೇ ಮತ್ತು ಜೂನ್ 2021 ಕ್ಕೆ 5 ಕೆಜಿ ಉಚಿತ ಆಹಾರ ಧಾನ್ಯಗಳನ್ನು ಬಡವರಿಗೆ ನೀಡಲಾಗುವುದು. ಉಚಿತ ಆಹಾರ ಧಾನ್ಯಗಳನ್ನು ಪಡೆಯಲು ಸುಮಾರು 80 ಕೋಟಿ ಫಲಾನುಭವಿಗಳು ಇದ್ದಾರೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ.
ಕರೋನಾ ವೈರಸ್‌ನ ಎರಡನೇ ಅಲೆಯನ್ನು ದೇಶ ಎದುರಿಸುತ್ತಿರುವಾಗ ದೇಶದ ಬಡವರಿಗೆ ಪೌಷ್ಠಿಕಾಂಶದ ಬೆಂಬಲ ನೀಡಬೇಕಾದುದು ನಮ್ಮ ಕರ್ತವ್ಯ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕೇಂದ್ರ ಸರಕಾರ ಈ ಕಾರ್ಯಕ್ರಮಕ್ಕೆ ರೂ 26,000 ಕೋಟಿ ನೀಡಲು ನಿರ್ಧರಿಸಿದೆ ಎಂದು ಪ್ರಧಾನಿ ಹೇಳಿದ್ದಾರೆ ಎಂದು ಅವರ ಕಾರ್ಯಾಲಯ ಹೇಳಿದೆ. ಕಳೆದ ವರ್ಷ ಈ ಕುರಿತು ಯಾವ ಕ್ರಮ ತೆಗೆದುಕೊಂಡಿರಲಿಲ್ಲ ಎಂದು ವಿರೋಧ ಪಕ್ಷಗಳಿಂದ ತೀವ್ರ ಟೀಕೆಗೆ ಗುರಿಯಾಗಿದ್ದ ಪ್ರಧಾನಿ ಈ ಬಾರಿ ಮೊದಲೆ ಎಚ್ಚೆತ್ತುಕೊಂಡಿದ್ದಾರೆ.
ಈಗಾಗಲೇ ಮುಂಬೈ ಮತ್ತು ದೇಶದ ಇನ್ನಿತರೇ ನಗರಗಳಿಂದ ಸಾವಿರಾರು ದಿನಗೂಲಿ ನೌಕರರು ತಮ್ಮ ತಮ್ಮ ಊರುಗಳಿಗೆ ಹಿಂದಿರುಗಿದ್ದಾರೆ. ದೆಹಲಿಯಲ್ಲಿರುವ ಅರವಿಂದ್ ಕೇಜ್ರಿವಾಲ್ ನೇತೃತ್ವದ ಸರಕಾರ ಈಗಾಗಲೇ ಈ ವರ್ಗದ ಜನರಿಗೆ ಉಚಿತ ಊಟ ನೀಡಲು ನಿರ್ಧರಿಸಿದೆ.
ಇದನ್ನೂ ಓದಿ:
ಕೊವಿಡ್ ಕೇರ್ ಸೆಂಟರ್ ಆಗಿ ಬದಲಾಯ್ತು ಲಕ್ಸುರಿ ಹೋಟೆಲ್! ಎಲ್ಲಿ?
(Prime minister Narendra Modi announces free food grain for poor under PM Garib Kalyan Yojana during May and June)
Published On - 3:57 pm, Fri, 23 April 21