ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಯುದ್ಧ ಪೀಡಿತ ಉಕ್ರೇನ್ಗೆ ಆಗಸ್ಟ್ 23ರಂದು ಭೇಟಿ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಪ್ರಧಾನಿ ಮೋದಿ ಉಕ್ರೇನ್ ಭೇಟಿ ವೇಳೆ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ವರದಿ ಹೇಳಿದೆ. ರಷ್ಯಾ ಮತ್ತು ಉಕ್ರೇನ್ ಯುದ್ಧದ ನಂತರ ಪ್ರಧಾನಿ ಮೋದಿ ಅವರ ಇದು ಮೊದಲ ಭೇಟಿಯಾಗಿದೆ.
ಪ್ರಧಾನಿ ಮೋದಿ ಅವರು ಜುಲೈ 8-9ರಂದು ರಷ್ಯಾದ ಮಾಸ್ಕೋಗೆ ಭೇಟಿ ನೀಡಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿಯಾದ ನಂತರ, ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ವ್ಲಾಡಿಮಿರ್ ಪುಟಿನ್ ಅವರು ಪ್ರಧಾನಿ ಮೋದಿ ಅವರನ್ನು 22ನೇ ಭಾರತ ಮತ್ತು ರಷ್ಯಾ ಶೃಂಗಸಭೆಗೆ ಆಹ್ವಾನಿಸಿದ್ದರು. ಈ ನಿಟ್ಟಿನಲ್ಲಿ ಮೋದಿ ರಷ್ಯಾಕ್ಕೆ ಭೇಟಿ ನೀಡಿದರು.
ಇನ್ನು ಈ ಉಭಯ ನಾಯಕರ ಭೇಟಿಯ ಸಂದರ್ಭದಲ್ಲಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಈ ಭೇಟಿಯನ್ನು ವಿರೋಧಿಸಿದರು. ಹಾಗೂ ತಮ್ಮ ಎಕ್ಸ್ ಖಾತೆಯಲ್ಲಿ ರಷ್ಯಾ ದಾಳಿಯ ಬಗ್ಗೆ ಉಲ್ಲೇಖಿಸಿದ್ದಾರೆ. ಕೈವ್‌ನ ಮಕ್ಕಳ ಆಸ್ಪತ್ರೆಯ ಮೇಲೆ ರಷ್ಯಾ ಕ್ಷಿಪಣಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು 37 ಜನ ಸಾವನ್ನಪ್ಪಿದ್ದಾರೆ. 170 ಜನ ಗಾಯಗೊಂಡಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಇಂದು ನಡೆಯಲಿದೆ ನೀತಿ ಆಯೋಗದ ಸಭೆ
ಪ್ರಧಾನಿ ಮೋದಿ ರಷ್ಯಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ಬಾಂಧವ್ಯದ ಸಂಕೇತವಾಗಿ ರಷ್ಯಾದ ಅತ್ಯುನ್ನತ ನಾಗರಿಕ ಗೌರವವಾದ ಆರ್ಡರ್ ಆಫ್ ಸೇಂಟ್ ಆಂಡ್ರ್ಯೂ ದಿ ಅಪೊಸ್ಟಲ್ ಪ್ರಶಸ್ತಿಯನ್ನು ಪ್ರಧಾನಿ ಮೋದಿ ಅವರಿಗೆ ನೀಡಲಾಗಿತ್ತು. ಉಭಯ ರಾಷ್ಟ್ರಗಳ ನಡುವಿನ ಬಾಂಧವ್ಯವನ್ನು ಬಲಪಡಿಸಲು ಮೋದಿ ಅವರ ಮಹತ್ವದ ಕೊಡುಗೆಗಾಗಿ ಈ ಪ್ರಶಸ್ತಿಯು ರಷ್ಯಾದ ಪ್ರಾಮಾಣಿಕ ಕೃತಜ್ಞತೆಗೆ ಸಾಕ್ಷಿಯಾಗಿದೆ ಎಂದು ಪುಟಿನ್ ಹೇಳಿದರು. ಇದೀಗ ಇದರ ನಡುವೆ ಪ್ರಧಾನಿ ಮೋದಿ ಅವರು ಉಕ್ರೇನ್ಗೆ ಭೇಟಿ ನೀಡುತ್ತಿರುವುದು ಮಹತ್ವದ ವಿಚಾರವಾಗಿದೆ.
ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ