ದೆಹಲಿ: ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ 125ನೇ ಜನ್ಮದಿನದ ಪ್ರಯುಕ್ತ ಜನವರಿ 23ರಂದು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡುವ ಸಂಭವವಿದೆ. ನೇತಾಜಿಯವರ ಜನ್ಮದಿನವನ್ನು ಆಚರಿಸಲು ಕಳೆದ ವರ್ಷದ ಡಿಸೆಂಬರ್ನಲ್ಲಿ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಕೇಂದ್ರ ಸರ್ಕಾರ ಸಮಿತಿಯೊಂದನ್ನು ರಚಿಸಿತ್ತು.
ಸುಭಾಷ್ ಚಂದ್ರ ಬೋಸ್ ಅವರು ಸ್ಥಾಪಿಸಿದ್ದ ಆಝಾದ್ ಹಿಂದ್ ಫೌಜ್ ಸಹಯೋಗದ ಈ ಸಮಿತಿಯು ಇತಿಹಾಸಕಾರರು, ಅವರ ಕುಟುಂಬದವರು, ಲೇಖಕರು, ಪರಿಣಿತರನ್ನೊಳಗೊಂಡಿತ್ತು. ಮುಂದಿನ 1 ವರ್ಷಾವಧಿ ನೇತಾಜಿಯವರ ಸ್ಮರಣೆಗೆ ಕೈಗೊಳ್ಳಬಹುದಾದ ಕೆಲಸಗಳನ್ನು ಈ ಸಮಿತಿಯು ಸೂಚಿಸಲಿದೆ.
2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ನೇತಾಜಿಯವರ ಸಾಧನೆಗಳನ್ನು ಬಿಂಬಿಸುವ ಹಲವು ಕಾರ್ಯಗಳನ್ನು ಕೈಗೆತ್ತಿಕೊಂಡಿದೆ. ಸುಭಾಷ್ ಚಂದ್ರ ಬೋಸ್ರಿಗೆ ಸಂಬಂಧಿಸಿದ ಕೆಲ ದಾಖಲೆಗಳನ್ನು ಕೆಂಪುಕೋಟೆಯಲ್ಲಿ ಪ್ರತ್ಯೇಕ ಮ್ಯೂಸಿಯಂ ಕಲ್ಪಿಸಿ ಸಾರ್ವಜನಿಕರಿಗೆ ಲಭ್ಯವಾಗಿಸಿದೆ.
ಅಲ್ಲದೇ, ನೇತಾಜಿಯವರ ಸ್ಮರಣಾರ್ಥ ಅಂಡಮಾನ್ ನಿಕೋಬಾರ್ನ ರೋಸ್,ನೀಲ್ ಮತ್ತು ಹಾವ್ಲಾಕ್ ದ್ವೀಪಗಳಿಗೆ ಅನುಕ್ರಮವಾಗಿ ಸುಭಾಷ್ ಚಂದ್ರ ಬೋಸ್ ದ್ವೀಪ, ಶಹೀದ್ ದ್ವೀಪ ಮತ್ತು ಸ್ವರಾಜ್ ದ್ವೀಪಗಳೆಂದು ಮರು ನಾಮಕರಣ ಮಾಡಿದೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ ಸುಭಾಷ್ ಚಂದ್ರ ಬೋಸ್ ಅವರು ರಾಜ್ಯದಲ್ಲಿ ಪದೇ ಪದೇ ಪ್ರಸ್ತಾಪಿಸಲ್ಪಡುತ್ತಿದ್ದಾರೆ. ನಿನ್ನೆಯಷ್ಟೇ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಸುಭಾಷ್ ಚಂದ್ರ ಬೋಸ್ರ ಜನ್ಮದಿನವನ್ನು ರಾಷ್ಟ್ರೀಯ ರಜಾದಿನವೆಂದು ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಆಗ್ರಹಿಸಿದ್ದರು.
‘ದೇಶ ಭಕ್ತರ ದಿನ’ವಾಗಿ ನೇತಾಜಿ ಜನ್ಮದಿನ ಆಚರಿಸೋಣ; ಅಂದು ರಾಷ್ಟ್ರೀಯ ರಜಾನೂ ಘೋಷಿಸಿ: ಕೇಂದ್ರಕ್ಕೆ ಮಮತೆಯ ಪತ್ರ!