ಅಂದು ಮಾದರಿಯಾಗಿದ್ದ ಕೇರಳದಲ್ಲೀಗ ಕೊರೊನಾ ತಾಂಡವ.. ಮೊದಲ ಲಸಿಕೆ ನಮ್ಮ ರಾಜ್ಯಕ್ಕೇ ಕೊಡಿ ಎಂದು ಕೇಂದ್ರಕ್ಕೆ ಮೊರೆ
ರಾಜ್ಯದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಎಲ್ಲಾ ರೀತಿಯ ಸಿದ್ಧತೆಗಳೂ ಆಗಿವೆ. ಕೇಂದ್ರ ಯಾವ ಲಸಿಕೆಯನ್ನು ನೀಡಿದರೂ ಅದನ್ನು ಸ್ವೀಕರಿಸಲು ತಯಾರಿದ್ದೇವೆ. ಕೇರಳವನ್ನೇ ಆದ್ಯತೆಯಾಗಿಟ್ಟುಕೊಂಡು ಲಸಿಕೆ ವಿತರಣೆ ಮಾಡಬೇಕು ಎನ್ನುವುದು ಅಲ್ಲಿನ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಬೇಡಿಕೆ..
ಕೊಚ್ಚಿ: ದೇಶದಲ್ಲಿ ಮೊಟ್ಟ ಮೊದಲ ಕೊವಿಡ್ ಪ್ರಕರಣ ಕೇರಳದಲ್ಲಿ ಕಂಡುಬಂದಿದ್ದರೂ ಆ ರಾಜ್ಯ ಮಾತ್ರ ಇಡೀ ದೇಶವೇ ನಿಬ್ಬೆರಗಾಗುವಂತೆ ಪರಿಸ್ಥಿತಿಯನ್ನು ನಿಭಾಯಿಸಿತ್ತು. ‘ಕೇರಳ ಮಾದರಿ’ಯನ್ನಿಟ್ಟುಕೊಂಡು ಜನ ಮಿಕ್ಕೆಲ್ಲಾ ರಾಜ್ಯ ಸರ್ಕಾರಗಳನ್ನೂ, ಕೇಂದ್ರವನ್ನೂ ಟೀಕಿಸಿದ್ದರು. ಕೇರಳ ಸರ್ಕಾರ ಜಾರಿಗೆ ತಂದ ಯೋಜನೆಗಳು, ಕಲ್ಪಿಸಿದ ವೈದ್ಯಕೀಯ ವ್ಯವಸ್ಥೆ ಎಲ್ಲವೂ ಜನಪ್ರಿಯವಾಗಿದ್ದವು. ವಿಪರ್ಯಾಸವೆಂದರೆ ಈಗ ಅದೇ ಕೇರಳ ಸರ್ಕಾರ ಕೈ ಚೆಲ್ಲಿ ಕೂತಿದೆ. ಕೊರೊನಾ ಲಸಿಕೆಯನ್ನು ಕೇರಳ ರಾಜ್ಯಕ್ಕೆ ಮೊದಲು ನೀಡುಬೇಕೆಂದು ಕೇಂದ್ರಕ್ಕೆ ದುಂಬಾಲು ಬಿದ್ದಿದೆ.
ಈ ಕುರಿತು ಕೇಂದ್ರ ಸರ್ಕಾರಕ್ಕೆ ಮಾಹಿತಿ ನೀಡಿರುವ ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ, ರಾಜ್ಯದಲ್ಲಿ ಕೊರೊನಾ ಲಸಿಕೆ ವಿತರಣೆಗೆ ಎಲ್ಲಾ ರೀತಿಯ ಸಿದ್ಧತೆಗಳೂ ಆಗಿವೆ. ಕೇಂದ್ರ ಯಾವ ಲಸಿಕೆಯನ್ನು ನೀಡಿದರೂ ಅದನ್ನು ಸ್ವೀಕರಿಸಲು ತಯಾರಿದ್ದೇವೆ. ಕೇರಳವನ್ನೇ ಆದ್ಯತೆಯಾಗಿಟ್ಟುಕೊಂಡು ಲಸಿಕೆ ವಿತರಣೆ ಮಾಡಬೇಕೆಂದು ತಿಳಿಸಿದ್ದಾರೆ. ಇದರೊಂದಿಗೆ ಈ ಕೋರಿಕೆಗಳನ್ನಿಡಲು ಕಾರಣಗಳೇನು ಎಂಬುದನ್ನೂ ಕೇರಳದ ಆರೋಗ್ಯ ಇಲಾಖೆ ವಿವರಿಸಿದೆ.
ಪ್ರಕರಣಗಳಲ್ಲಿ ಏರಿಕೆ ದೇಶದ ಮೊದಲ ಪ್ರಕರಣ ಕೇರಳದಲ್ಲಿ ದಾಖಲಾದರೂ ಸೋಂಕು ಒಮ್ಮೆಲೆಗೆ ಏರಿಕೆ ಕಾಣದಂತೆ ಪ್ರಕರಣವನ್ನು ನಿಭಾಯಿಸುವುದು ಅಲ್ಲಿನ ಸರ್ಕಾರದ ಯೋಜನೆಯಾಗಿತ್ತು. ಸೋಂಕು ಆದಷ್ಟು ನಿಧಾನವಾಗಿ ಹರಡಿದರೆ ಪರಿಸ್ಥಿತಿ ನಿಭಾಯಿಸುವುದು ಸುಲಭ ಎನ್ನುವುದನ್ನು ಗ್ರಹಿಸಿದ ಸರ್ಕಾರ ಕೆಲವು ಕಠಿಣ ನಿಯಮಗಳನ್ನು ಜಾರಿಗೊಳಿಸಿತು.
ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಬಳಕೆಯಿಂದ ಹಿಡಿದು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅಳವಡಿಸಿಕೊಳ್ಳುವತ್ತ ಹೆಜ್ಜೆ ಹಾಕಿತು. ಆದರೆ, ಕೆಲವು ತಿಂಗಳ ಕಾಲ ಸೋಂಕು ಹರಡುವಿಕೆಯನ್ನು ಹಿಡಿತದಲ್ಲಿಟ್ಟುಕೊಂಡಿದ್ದ ಕೇರಳದಲ್ಲಿ ಕಳೆದ ಎರಡು ತಿಂಗಳಿನಿಂದ ಭಾರೀ ಪ್ರಮಾಣದಲ್ಲಿ ಕೊರೊನಾ ಸೋಂಕು ಏರುತ್ತಿದೆ.
ಒಂದಕ್ಕಿಂತ ಹೆಚ್ಚು ರೋಗಗಳಿಂದ ಬಳಲುತ್ತಿರುವವರ ಸಂಖ್ಯೆ ಅತ್ಯಧಿಕ ದೇಶದಲ್ಲಿ ಅತಿ ಹೆಚ್ಚು ಮಧುಮೇಹಿಗಳನ್ನು ಒಳಗೊಂಡ ರಾಜ್ಯ ಎಂಬ ಪಟ್ಟ ಕೇರಳಕ್ಕೆ ಇದೆ. ಕೇರಳದಲ್ಲಿ ಹೃದಯಾಘಾತಕ್ಕೆ ಒಳಗಾಗುವವರ ಸಂಖ್ಯೆಯೂ ಅಧಿಕವಿದೆ. ಇದರೊಂದಿಗೆ ಕ್ಯಾನ್ಸರ್ನಂತಹ ಮಾರಕ ಕಾಯಿಲೆ ಹಾಗೂ ಇನ್ನಿತರ ರೋಗಗಳಿಗೆ ಒಳಗಾದವರನ್ನು ದೊಡ್ಡ ಮಟ್ಟದಲ್ಲಿ ಹೊಂದಿರುವ ಕೇರಳದಲ್ಲಿ ಕೊರೊನಾ ಸೋಂಕು ದೊಡ್ಡ ಮಟ್ಟದ ಹಾನಿಯನ್ನು ಉಂಟುಮಾಡುತ್ತಿದೆ.
ಜನಸಂದಣಿ ಕೇರಳದಲ್ಲಿ ಕೊರೊನಾ ಸೋಂಕು ವೇಗವಾಗಿ ಹರಡುವುದಕ್ಕೆ ಇನ್ನೊಂದು ಕಾರಣ ಜನಸಂದಣಿ. ಕಡಿಮೆ ಪ್ರದೇಶದಲ್ಲಿ ಹೆಚ್ಚು ಜನ ವಾಸಿಸುವ ಕಾರಣ ಸೋಂಕು ಒಬ್ಬರಿಂದ ಒಬ್ಬರಿಗೆ ಹರಡುವುದು ಸುಲಭವೂ, ವೇಗವೂ ಆಗಿದೆ.
ಹಿರಿಯ ನಾಗರೀಕರು ಜಾಸ್ತಿ ಇರುವುದು ಇಡೀ ದೇಶದ ಸರಾಸರಿ ಹಿರಿಯ ನಾಗರೀಕರ ಸಂಖ್ಯೆಗೂ, ಕೇರಳದಲ್ಲಿರುವ ಹಿರಿಯ ನಾಗರೀಕರ ಸರಾಸರಿ ಸಂಖ್ಯೆಗೂ ಅಂತರವಿದೆ. ಕೇರಳದಲ್ಲಿ ದೇಶದ ಸರಾಸರಿಗಿಂತಲೂ ಅಧಿಕ ಸಂಖ್ಯೆಯ ಹಿರಿಯ ನಾಗರೀಕರಿರುವುದರಿಂದ ಅದನ್ನೇ ಒಂದು ಕಾರಣವಾಗಿಸಿಕೊಂಡು ಕೇರಳ ಸರ್ಕಾರ ಕೊರೊನಾ ಲಸಿಕೆಯನ್ನು ಆದ್ಯತೆಯಲ್ಲಿ ನೀಡಬೇಕೆಂದು ಕೇಳಿಕೊಂಡಿದೆ.
ಇದೇನಾ ಕೇರಳ ಮಾದರಿ? ಎಂದು ಟೀಕಿಸಿದ ಬಿಜೆಪಿ ಕೇರಳ ಆರೋಗ್ಯ ಸಚಿವರು ನೀಡಿರುವ ಈ ಕಾರಣಗಳನ್ನಿಟ್ಟುಕೊಂಡು ಬಿಜೆಪಿ ಐಟಿ ವಿಭಾಗದ ಮುಖ್ಯಸ್ಥ ಅಮಿತ್ ಮಾಳವಿಯಾ ಕೇರಳ ಮಾದರಿ ಎಂದರೆ ಇದೇನಾ? ಎಂದು ತಿವಿದಿದ್ದಾರೆ. ಇಡೀ ವಿಶ್ವಕ್ಕೆ ಕೊರೊನಾ ವೈರಾಣು ನಿಯಂತ್ರಿಸುವುದು ಹೇಗೆ ಎಂದು ಹೇಳಿಕೊಟ್ಟ ಕೇರಳ ಇದೀಗ ಅತಿ ಹೆಚ್ಚು ಪ್ರಕರಣಗಳನ್ನು ಎದುರಿಸುತ್ತಿರುವುದು ವಿಪರ್ಯಾಸ ಎಂದು ಟ್ವೀಟ್ ಮಾಡಿದ್ದಾರೆ.
ಸದ್ಯ ಕೇರಳದಲ್ಲಿ ಸೋಮವಾರದಂದು 4,602 ಹೊಸ ಕೊವಿಡ್ ಪ್ರಕರಣಗಳು ದಾಖಲಾಗಿದ್ದು, ದೇಶದಲ್ಲಿ ಈಗ ದಾಖಲಾಗುತ್ತಿರುವ ನೂತನ ಪ್ರಕರಣಗಳಲ್ಲಿ ಶೇ.25ರಷ್ಟು ಪಾಲು ಕೇರಳದ್ದಾಗಿದೆ. ಆ ಮೂಲಕ ಕೇರಳದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 65,647ಕ್ಕೆ ಏರಿದೆ. ಇನ್ನೊಂದೆಡೆ, ಬ್ರಿಟನ್ನ ರೂಪಾಂತರಿ ಕೊರೊನಾ ಸೋಂಕು ಕೇರಳಕ್ಕೆ ಆಗಮಿಸಿದ 6 ಮಂದಿಯಲ್ಲಿ ಧೃಡಪಟ್ಟಿದ್ದು, ದೇಶಾದ್ಯಂತ ಒಟ್ಟು 38 ಮಂದಿಯಲ್ಲಿ ಹೊಸ ಬಗೆಯ ಸೋಂಕು ಪತ್ತೆಯಾಗಿದೆ.
ಅಭಿಮತ | ವೇಷ ತೊಟ್ಟ ದೇಶಭಕ್ತಿಗಿಂತ.. ತಪ್ಪು, ಒಪ್ಪುಗಳ ನಡುವೆ ಸಾಗುವ ಭಾರತೀಯರಾಗುವುದು ಮೇಲು